ನಿರುದ್ಯೋಗ ಸಮಸ್ಯೆ

ನಿರುದ್ಯೋಗವು ಇಂದಿನ ಜಗತ್ತಿನಲ್ಲಿ ಒಂದು ಗಂಭೀರ ಸಮಸ್ಯೆಯಾಗಿದೆ. ಇದು ಕೇವಲ ವ್ಯಕ್ತಿಗಳ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲದೆ  ದೇಶದ ಆರ್ಥಿಕತೆ ಮತ್ತು ಸಾಮಾಜಿಕ ಸ್ಥಿರತೆಯ ಮೇಲೂ ಪರಿಣಾಮ ಬೀರುತ್ತದೆ. ನಿರುದ್ಯೋಗವು ಬಡತನ, ಹಸಿವು ಮತ್ತು ಅಪರಾಧದಂತಹ ಸಮಸ್ಯೆಗಳಿಗೂ ಕಾರಣವಾಗಬಹುದು.

​ನಿರುದ್ಯೋಗಕ್ಕೆ ಹಲವಾರು ಕಾರಣಗಳಿವೆ. ಅವುಗಳಲ್ಲಿ ಕೆಲವು ಮುಖ್ಯವಾದವುಗಳೆಂದರೆ:

​1.ಜನಸಂಖ್ಯೆಯ ಹೆಚ್ಚಳ: ಜನಸಂಖ್ಯೆ ಹೆಚ್ಚಾದಂತೆ, ಉದ್ಯೋಗಾವಕಾಶಗಳ ಕೊರತೆಯಿಂದ ನಿರುದ್ಯೋಗ ಹೆಚ್ಚಾಗುತ್ತದೆ.

2.ಶಿಕ್ಷಣದ ಕೊರತೆ: ಸರಿಯಾದ ಶಿಕ್ಷಣ ಮತ್ತು ಕೌಶಲ್ಯಗಳಿಲ್ಲದ ಜನರು ಉದ್ಯೋಗ ಪಡೆಯಲು ಕಷ್ಟಪಡುತ್ತಾರೆ.

3.​ಆರ್ಥಿಕ ಕುಸಿತ: ಆರ್ಥಿಕ ಕುಸಿತದ ಸಮಯದಲ್ಲಿ, ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡುತ್ತವೆ, ಇದು ನಿರುದ್ಯೋಗವನ್ನು ಹೆಚ್ಚಿಸುತ್ತದೆ.

​4.ತಂತ್ರಜ್ಞಾನದ ಬೆಳವಣಿಗೆ: ತಂತ್ರಜ್ಞಾನದ ಬೆಳವಣಿಗೆಯಿಂದ ಕೆಲವು ಉದ್ಯೋಗಗಳು ಕಣ್ಮರೆಯಾಗುತ್ತಿವೆ, ಇದು ನಿರುದ್ಯೋಗಕ್ಕೆ ಕಾರಣವಾಗುತ್ತದೆ.

 ನಿರುದ್ಯೋಗವು ಒಂದು ಜಾಗತಿಕ ಸಮಸ್ಯೆಯಾಗಿದ್ದು, ಇದು ವ್ಯಕ್ತಿಗಳು, ಕುಟುಂಬಗಳು ಮತ್ತು ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ನಿರುದ್ಯೋಗವು ಬಡತನ, ಹಸಿವು, ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಸಾಮಾಜಿಕ ಅಸ್ಥಿರತೆಗೆ ಕಾರಣವಾಗಬಹುದು. .

 ಕೆಲವರಿಗೆ ಸರಿಯಾದ ಶಿಕ್ಷಣ ಮತ್ತು ಕೌಶಲ್ಯ ಇಲ್ಲದಿದ್ದರೆ, ಅವರಿಗೆ ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದಾಗ, ಕಂಪನಿಗಳು ಜನರನ್ನು ಕೆಲಸದಿಂದ ತೆಗೆಯುತ್ತವೆ. ಹೊಸ ತಂತ್ರಜ್ಞಾನಗಳು ಬಂದಾಗ, ಕೆಲವು ರೀತಿಯ ಕೆಲಸಗಳು ಬೇಕಾಗುವುದಿಲ್ಲ.ಕೆಲಸ ಇಲ್ಲದಿದ್ದರೆ ಬಡತನ ಹೆಚ್ಚಾಗುತ್ತದೆ, ಜನರು ಹಸಿವಿನಿಂದ ಬಳಲುತ್ತಾರೆ ಮತ್ತು ಮಾನಸಿಕ ಆರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸಮಾಜದಲ್ಲಿ ಕಳ್ಳತನ, ಜಗಳಗಳು ಮತ್ತು ಅಶಾಂತಿ ಉಂಟಾಗುತ್ತದೆ. ನಿರುದ್ಯೋಗವನ್ನು ಕಡಿಮೆ ಮಾಡಲು, ಸರ್ಕಾರವು ಹೊಸ ಕಾರ್ಖಾನೆಗಳು ಮತ್ತು ಕಚೇರಿಗಳನ್ನು ತೆರೆಯಬೇಕು, ಜನರಿಗೆ ತರಬೇತಿ ನೀಡಬೇಕು ಮತ್ತು ಸಣ್ಣ ಉದ್ಯಮಗಳಿಗೆ ಸಹಾಯ ಮಾಡಬೇಕು. ತಂತ್ರಜ್ಞಾನವನ್ನು ಬಳಸಿ ಆನ್‌ಲೈನ್‌ನಲ್ಲಿ ಉದ್ಯೋಗಗಳನ್ನು ಹುಡುಕಲು ಜನರಿಗೆ ಸಹಾಯ ಮಾಡಬೇಕು. ನಿರುದ್ಯೋಗಿಗಳಿಗೆ ಹಣಕಾಸಿನ ಸಹಾಯ ಮತ್ತು ಇತರ ಸೌಲಭ್ಯಗಳನ್ನು ನೀಡುವ ಯೋಜನೆಗಳನ್ನು ಸಹ ಮಾಡಬೇಕು.

ನಿರುದ್ಯೋಗವನ್ನು ಕಡಿಮೆ ಮಾಡಲು ಸರ್ಕಾರ ಮತ್ತು ಸಮಾಜ ಒಟ್ಟಾಗಿ ಕೆಲಸ ಮಾಡಬೇಕು. ಸರ್ಕಾರವು ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಮಾಜವು ಯುವಜನರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಮತ್ತು ಅವರಿಗೆ ಉದ್ಯೋಗ ಪಡೆಯಲು ಸಹಾಯ ಮಾಡಬೇಕು.


ಮೊಬೈಲಿನ ಅನಿಯಂತ್ರಿತ ಬಳಕೆ

ಮೊಬೈಲಿನ ಅನಿಯಂತ್ರಿತ ಬಳಕೆ

ಇಂದು ಬಡವ-ಬಲ್ಲಿದ, ಹಿರಿಯ -ಕಿರಿಯ ಎನ್ನದೆ ಎಲ್ಲರ ಕೈಯಲ್ಲೂ ಮೊಬೈಲ್ ರಾರಾಜಿಸುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕವೂ ಎಲ್ಲರೂ ಇದರ ದಾಸಾನುದಾಸರಾಗಿದ್ದಾರೆ.ಮೊಬೈಲ್ ಅಡಿಕ್ಷನ್ ಎಂಬ ಮನೋವಿಕೃತಿಗೆ ಪ್ರತಿಯೊಬ್ಬರೂ ಬಲಿಯಾಗುತ್ತಿರುವುದು ದುರಂತವೇ ಸರಿ. ಅದರಲ್ಲೂ ಬೆಳೆಯುತ್ತಿರುವ ಮಕ್ಕಳು ಇದರಿಂದಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದು ತುಂಬಾ ಗಂಭೀರವಾದ ಸಂಗತಿಯಾಗಿದೆ.


ಮೊಬೈಲ್ ಕೊಡಿಸಿಲ್ಲ ಎಂದರೆ ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೂ ತಲುಪಿರುವುದು ಆತಂಕಕಾರಿ ವಿಷಯವಾಗಿದೆ. ಸ್ವರ್ಧಾತ್ಮಕ ಜಗತ್ತಿನಲ್ಲಿ ಇಂದು ಹೆತ್ತವರಿಗೆ ತಮ್ಮ ಮಕ್ಕಳಿಗೆ ಪ್ರೀತಿ ಕೊಡಲು ಸಮಯವಾಗಲಿ ಅಥವಾ ಸಂಯಮವಾಗಲಿ ಇರುವುದಿಲ್ಲ.ಮಕ್ಕಳು ಅತ್ತಾಗ ,ಊಟ ಮಾಡದಿದ್ದಾಗ, ಹಠ ಮಾಡಿದಾಗ ಅವರನ್ನು ಸಮಾಧಾನ ಮಾಡವ ಸಲುವಾಗಿ  ಮಕ್ಕಳ ಕೈಗೆ ಹೆತ್ತವರು ಮೊಬೈಲನ್ನು ನೀಡುತ್ತಾರೆ. ಆದರೆ ನಂತರ ಇದನ್ನು ಬಿಡಲೊಪ್ಪದ ಮಕ್ಕಳು  ಮೊಬೈಲ್ ಗೆ ಅಂಟಿಕೊಳ್ಳುತ್ತವೆ.  ಇದುವೇ ಒಂದು ಗೀಳಾಗಿ ಅದಲ್ಲಿರುವ ಒಂದೊಂದೇ ವಿಷಯಗಳನ್ನು ಕಲಿಯತೊಡಗುತ್ತವೆ . ಕೈಯಲ್ಲಿ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎಂಬ ಪರಿಸ್ಥಿತಿಗೆ ಇದು ಎಲ್ಲರನ್ನೂ ತಂದಿಡುತ್ತದೆ.

ಮೊಬೈಲ್ ಎಂಬ ಮಾಯಜಾಲದೊಳಗೆ ಒಮ್ಮೆ ಹೊಕ್ಕರೆ ಹೊರಬರುವುದು ತುಂಬಾ ಕಷ್ಟ.ಅಲ್ಲಿ ಮನರಂಜನೆಗೆ ಹಾಗೂ ಕಾಲಹರಣಕ್ಕೆ ಬೇಕಾದ ಎಲ್ಲವೂ ಇದೆ .ಯೂಟ್ಯೂಬ್, ಇನ್ಸ್ಟಾಗ್ರಾಮ್ ಗಳಲ್ಲಿ ನಾನಾ ರೀತಿಯ ವೀಡಿಯೋಗಳು, ರೀಲ್ಸ್ ಗಳು ನೋಡಿ ಮುಗಿಯದಷ್ಟು ತುಂಬಿಕೊಂಡಿದೆ. ರೀಲ್ಸ್ ಹುಚ್ಚಿಗೆ ಅದೆಷ್ಟೋ ಜೀವಗಳು ಬಲಿಯಾಗುತ್ತಿವೆ. ಫೇಸ್ಬುಕ್ ,ವಾಟ್ಸಾಪ್ ,ಸ್ನಾಪ್ ಚಾಟ್  ಗಳಲ್ಲಿ ಹೊಸ ಹೊಸ ಅಪರಿಚಿತ ಗೆಳೆಯರು ದೊರಕುತ್ತಾರೆ. ಅಲ್ಲಿ ಅವರೊಂದಿಗೆ ಮನಸೋ ಇಚ್ಛೆ ಚಾಟಿಂಗ್  ಮಾತುಕತೆ ನಡೆಸಬಹುದಾದ ಅವಕಾಶವನ್ನು ಮೊಬೈಲ್ ನೀಡಿದೆ.ಆದರೆ ಇದರಿಂದಾಗುವ ಪರಿಣಾಮದ  ಅರಿವು ಗೊತ್ತಾದಾಗ ಹೊತ್ತಾಗಿರುತ್ತದೆ. ಇನ್ನು ಗೇಮಿಂಗ್ ಗಳು ಒಂದು ರೀತಿಯ ಮಜಾವನ್ನು ಹಾಗು ಖುಷಿಯನ್ನು ನೀಡಬಹುದು. ಆದರೆ ಈ ಆಟಗಳೂ ಕೂಡಾ ತುಂಬಾ ಅಪಾಯಕಾರಿ ಎಂಬುದರ ಪ್ರಜ್ಞೆಯಿರಲಿ.ಇದಲ್ಲದೆ ನಾನಾ ರೀತಿಯ ಆಪ್ ಗಳ ಭಂಡಾರವೇ ಮೊಬೈಲ್ನಲ್ಲಿದೆ. ಮಕ್ಕಳಿಗೆ ಒಳ್ಳೆಯದು ಹಾಗೂ ಕೆಟ್ಟದು ಯಾವುದೆಂದು ಗೊತ್ತಿಲ್ಲದೆ ,ಬೇಗ ಕೆಟ್ಟದರ ಕಡೆಗೆ ಆಕರ್ಷಿತರಾಗುತ್ತಾರೆ.

ಇಂದು ಎಲ್ಲರ ಮನೆಯಲ್ಲೂ ಸ್ಮಶಾನ ಮೌನ ಆವರಿಸಿದೆ.  ಎಲ್ಲರೂ ಕೈಯಲ್ಲೊಂದು ಮೊಬೈಲ್ ಹಿಡಿದುಕೊಂಡು ಕೂತರೆ ಸಮಯದ ಅರಿವೇ ಇಲ್ಲದೆ ಸಂಬಂಧಗಳಿಗೆ ಬೆಲೆಯೇ ಇಲ್ಲವೇನೋ ಎಂಬಂತೆ ತಮ್ಮನ್ನೇ ಮರೆತು ಅದರೊಳಗೆ ಮುಳುಗಿರುತ್ತಾರೆ.ಮನೆಯಲ್ಲಿ ಮಾತಿಲ್ಲ ಕತೆಯಿಲ್ಲ. ಬುದ್ಧಿ ಹೇಳಬೇಕಾದ ಹಿರಿಯರ ಕತೆಯೂ ಇದೇ ಆಗಿರುವಾಗ ಕಿರಿಯರನ್ನು ಹೇಳುವವರು ಕೇಳುವವರು ಯಾರೂ ಇರುವುದಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಾ ಮನೆಗಳ ಪರಿಸ್ಥಿತಿಯು ಇದೇ ಆಗಿರುವಾಗ ಸಂಬಂಧಗಳ ಮೌಲ್ಯ ದಿನೇ ದಿನೇ ಶಿಥಿಲವಾಗುತ್ತಿದೆ.ಅತಿಯಾದ ಮೊಬೈಲ್ ಬಳಕೆಯಿಂದ ಕಿವುಡುತನ ,ಕುರುಡುತನ ,ನರಗಳ ದೌರ್ಬಲ್ಯ ಏಕಾಗ್ರತೆಯ ಕೊರತೆ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು, ಸೋಮಾರಿತನ ಮತ್ತು ಅದರೊಂದಿಗೆ ಈಗ ಹೆಚ್ಚಾಗಿ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಕಾಡುವ ಹೃದಯಾಘಾತ  ಕೂಡ ಸಂಭವಿಸುತ್ತಿದೆ. ಕೊಲೆ ,ದರೋಡೆ ,ಮತೀಯ ಘರ್ಷಣೆಗಳು, ಅತ್ಯಾಚಾರ ,ಆತ್ಮಹತ್ಯೆ ಇತ್ಯಾದಿಗಳಿಗೆ ಮೊಬೈಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.

ಇಂದು ಈ ಚಕ್ರವ್ಯೂಹದೊಳಗೆ ಸಿಲುಕಿ ಒದ್ದಾಡುತ್ತಿರುವ ನಮಗೆ ಹೊರಬರಲಾಗುತ್ತಿಲ್ಲ. ನಮ್ಮ ಸಾವಿಗೆ ನಾವೇ ಕಾರಣಕರ್ತರಾಗುವ ಮೊದಲು ಮೊಬೈಲನ್ನು ದೂರವಿಟ್ಟರೆ ಒಳ್ಳೆಯದು. ಅದಕ್ಕೊಂದು ಸಮಯ ಮೀಸಲಿರಲಿ. ಮೊಬೈಲ್ ಮಲಗುವ ಹಾಗು ಓದುವ ಕೋಣೆಯಿಂದ ದೂರವಿರಲಿ. ಹೆಚ್ಚಾಗಿ ಒಳ್ಳೆಯ ಪುಸ್ತಕಗಳನ್ನು ಓದಿ. ಓದಿನ ಕಡೆಗೆ ಹಾಗೂ ಕೆಲಸದ ಕಡೆಗೆ ಗಮನ ಕೊಡಿ. ಜೀವನದಲ್ಲೊಂದು ಗುರಿಯನ್ನಿಟ್ಟು ಕೊಂಡು ಅದರ ಕಡೆ ಗಮನವಿರಲಿ. ವ್ಯಾಯಾಮ, ಯೋಗ ,ಕ್ರೀಡೆ ,ಸಂಗೀತ ,ಚಿತ್ರಕಲೆ ,ಭರತ ನಾಟ್ಯ ಹೀಗೆ ನಿಮ್ಮಿಷ್ಟದ ಕ್ಷೇತ್ರದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಮೊಬೈಲನ್ನು ನಮ್ಮ ಅಗತ್ಯತೆಗೆ ಮಾತ್ರ ಉಪಯೋಗಿಸಿದರೆ ಜೀವನವು ಸುಂದರವಾಗಿ ಸಾಗಬಹುದು.


ಸ್ವಾತಂತ್ರ್ಯ ನಂತರದ ಭಾರತ

 

ಸ್ವಾತಂತ್ರ್ಯ ನಂತರದ ಭಾರತ...

ಭಾರತವು 1947 ಆಗಸ್ಟ್ 15ರಂದು  ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಿತು. ಆದರೆ ನಿಜವಾದ ಸ್ವಾತಂತ್ರ್ಯವು ಪ್ರಜಾಪ್ರಭುತ್ವ, ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ತಂತ್ರಜ್ಞಾನ, ಹಾಗೂ ಸಾಂಸ್ಕೃತಿಕ ಒಗ್ಗಟ್ಟಿನಲ್ಲಿ ಅಡಗಿತ್ತು. ಆದ್ದರಿಂದ ಈ ದಿಕ್ಕಿನಲ್ಲಿ ಭಾರತ ಹಲವು ಹಂತಗಳಲ್ಲಿ ಪ್ರಯತ್ನಿಸಿತು.   ಸ್ವಾತಂತ್ರ್ಯ ನಂತರದ ಭಾರತದ ಅಭಿವೃದ್ಧಿಯ ಪಯಣವನ್ನು ವಿವಿಧ ಅಂಶಗಳಲ್ಲಿ ನೋಡಿ ತಿಳಿಯೋಣ.


1. ಸಂವಿಧಾನ ರಚನೆ ಮತ್ತು ಗಣರಾಜ್ಯ ಭಾರತ

ಸ್ವಾತಂತ್ರ್ಯದ ನಂತರ ಭಾರತ ತನ್ನದೇ ಆದ ಶಾಶ್ವತ ಸಂವಿಧಾನವನ್ನು ರಚಿಸಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ 1950 ಜನವರಿ 26ರಂದು ಭಾರತೀಯ ಸಂವಿಧಾನ ಜಾರಿಗೆ ಬಂತು. ಇದರಿಂದ ಭಾರತ ಗಣರಾಜ್ಯವಾಯಿತು. ಜನರಿಗೆ ಹಕ್ಕುಗಳು, ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಲಭಿಸಿದವು.


2. ಪ್ರಜಾಪ್ರಭುತ್ವದ ಸ್ಥಾಪನೆ

ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಚುನಾವಣೆಗಳು ನಿರಂತರ ನಡೆಯುತ್ತಿವೆ. ಜನತೆ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸರ್ಕಾರಗಳು ಜನಸೇವೆಗೆ ಕಟ್ಟಬದ್ಧವಾಗಿವೆ.


3. ಕೃಷಿ ಮತ್ತು ಹಸಿರು ಕ್ರಾಂತಿ

ಪ್ರಾರಂಭದಲ್ಲಿ ಭಾರತದಲ್ಲಿ ಆಹಾರದ ಕೊರತೆ ಇತ್ತು. 1960ರ ದಶಕದಲ್ಲಿ “ಹಸಿರು ಕ್ರಾಂತಿ”ಯನ್ನು ನೇರವೇರಿಸಲಾಯಿತು. ಇವು ಕೃಷಿಯಲ್ಲಿ ಹೊಸ ತಂತ್ರಜ್ಞಾನ, ರಾಸಾಯನಿಕ ರಸಗೊಬ್ಬರ, ಮತ್ತು ಬಿತ್ತನೆ ಬೀಜಗಳ ಮೂಲಕ ಉತ್ಪಾದನೆ ಹೆಚ್ಚಿಸಲಾಯಿತು. ಇದರಿಂದ ಆಹಾರದ ತೊಂದರೆ ಕಡಿಮೆಯಾಯಿತು.


4. ಕೈಗಾರಿಕ ಕ್ರಾಂತಿ ಮತ್ತು ಆರ್ಥಿಕ ಅಭಿವೃದ್ಧಿ

ಭಾರತದಲ್ಲಿ ನೀರಾವರಿ ಯೋಜನೆಗಳು, ಡ್ಯಾಮುಗಳು, ವಿದ್ಯುತ್ ಉತ್ಪಾದನೆ, ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳು ಆರಂಭವಾಗಿ ಉದ್ಯೋಗ ಸೃಷ್ಟಿಯಾಗಿದೆ. 1991ರಲ್ಲಿ ಹೊಸ ಆರ್ಥಿಕ ನೀತಿಗಳನ್ನು (ಲಿಬರಲೈಸೇಶನ್, ಪ್ರೈವೇಟೈಜೇಶನ್, ಗ್ಲೋಬಲೈಸೇಶನ್) ಅಳವಡಿಸಿ ಭಾರತೀಯ ಆರ್ಥಿಕತೆಯನ್ನು ಜಾಗತೀಕರಣದತ್ತ ಕರೆದೊಯ್ಯಲಾಯಿತು.


5. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ

ಭಾರತವು ಬಾಹ್ಯಾಕಾಶ ಕ್ಷೇತ್ರದಲ್ಲಿ ಮುನ್ನಡೆಸಿದೆ. ಇಸ್ರೋ ಸಂಸ್ಥೆಯ ಮೂಲಕ ಚಂದ್ರಯಾನ, ಮಂಗಳಯಾನ, ಉಪಗ್ರಹ ಸಂವಹನ ಮುಂತಾದ ಯೋಜನೆಗಳು ಯಶಸ್ವಿಯಾಗಿ ನಡೆಯಿವೆ. ಭಾರತ ವೈದ್ಯಕೀಯ, ಐಟಿ ಕ್ಷೇತ್ರ, ರಸಾಯನಶಾಸ್ತ್ರ, ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಅಭಿವೃದ್ಧಿಯಲ್ಲಿದೆ.


6. ಶಿಕ್ಷಣ ಮತ್ತು ಶೈಕ್ಷಣಿಕ ಸುಧಾರಣೆಗಳು

ಸರ್ವಶಿಕ್ಷಾ ಅಭಿಯಾನ, ಮಧ್ಯಾಹ್ನದ ಊಟ ಯೋಜನೆ, ಉಚಿತ ಶಿಕ್ಷಣ ಹಕ್ಕು, ಮತ್ತು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಇವು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ಸಹಾಯಮಾಡಿವೆ.


7. ಆರೋಗ್ಯ ಸೇವೆಗಳ ಅಭಿವೃದ್ಧಿ

ಆರೋಗ್ಯ ಇಲಾಖೆಯ ಮೂಲಕ ಸರ್ಕಾರ ಸಾರ್ವಜನಿಕ ಆಸ್ಪತ್ರೆಗಳನ್ನು ಸ್ಥಾಪಿಸಿದ್ದು, ಕೊರೋನಾ ಸಂದರ್ಭದಲ್ಲಿ ಭಾರತದ “ಕೋವ್ಯಾಕ್ಸಿನ್” ಲಸಿಕೆ ಯಶಸ್ಸು ಸಾಧಿಸಿತು. ಆಯುಷ್ಮಾನ್ ಭಾರತ ಯೋಜನೆಯ ಮೂಲಕ ಬಡವರಿಗೆ ಉಚಿತ ಚಿಕಿತ್ಸೆಯ ಅವಕಾಶ ದೊರಕುತ್ತಿದೆ.


8. ಮಹಿಳಾ ಸಬಲತೆ ಮತ್ತು ಸಾಮಾಜಿಕ ಸುಧಾರಣೆಗಳು

ಮಹಿಳಾ ಶಿಕ್ಷಣ, ಸ್ವಾಭಿಮಾನ ಯೋಜನೆ, ಸ್ವಸಹಾಯ ಸಂಘಗಳು, ಇತರೆ ಸೇವಾ ಯೋಜನೆಗಳ ಮೂಲಕ ಮಹಿಳೆಯರು ರಾಜಕಾರಣ, ವಿಜ್ಞಾನ, ಕ್ರೀಡೆ, ಉದ್ಯಮಗಳಲ್ಲಿ ಮುನ್ನಡೆಯುತ್ತಿದ್ದಾರೆ. ದಲಿತರು, ಪರಿಶಿಷ್ಟ ಜಾತಿ/ಜನಜಾತಿಗಳಿಗೆ ಮೀಸಲಾತಿ ಹಕ್ಕುಗಳು ಹಾಗೂ ಪ್ರೋತ್ಸಾಹ ಲಭಿಸಿದೆ.


9. ಡಿಜಿಟಲ್ ಭಾರತ ಮತ್ತು ಸಂವಹನ ಕ್ರಾಂತಿ

ಇತ್ತೀಚಿನ ದಶಕದಲ್ಲಿ ಡಿಜಿಟಲ್ ಭಾರತ ಯೋಜನೆಯ ಮೂಲಕ ಇಂಟರ್ನೆಟ್, ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಶಿಕ್ಷಣ, ಮತ್ತು ಸರ್ಕಾರಿ ಸೇವೆಗಳ ಡಿಜಿಟಲೀಕರಣ ನಡೆಯುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನತೆಗೆ ಸಹ ಸೌಲಭ್ಯಗಳು ತಲುಪುತ್ತಿವೆ.


10. ಸಾಂಸ್ಕೃತಿಕ ಒಗ್ಗಟ್ಟು ಮತ್ತು ರಾಷ್ಟ್ರೀಯತೆ

ಭಾರತದಲ್ಲಿ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳು ಇವೆ. ಸ್ವಾತಂತ್ರ್ಯ ನಂತರವೂ ರಾಷ್ಟ್ರದ ಏಕತೆ ಮತ್ತು ಅಖಂಡತೆ ಕಾಪಾಡಲಾಗಿದೆ. 'ವಿವಿಧತೆಯಲ್ಲಿಯ ಏಕತೆ' ಎಂಬ ನಾರೆಯಡಿಯಲ್ಲಿ ನಾವೆಲ್ಲ ಭಾರತೀಯರೆಂಬ ಭಾವನೆ ಬೆಳೆದು ಬಂದಿದೆ.


ಉಪಸಂಹಾರ

ಸ್ವಾತಂತ್ರ್ಯ ಪಡೆದ ನಂತರ ಭಾರತದ ಅಭಿವೃದ್ಧಿಯ ಕಡೆಗೆ ಪಯಣ ಸುಲಭವಾಗಿರಲಿಲ್ಲ. ಅನೇಕ ಸವಾಲುಗಳನ್ನು ಎದುರಿಸಿ ದೇಶವು ಬೆಳವಣಿಗೆಯ ಕಡೆಗೆ ಹೆಜ್ಜೆಹಾಕಿದೆ. ಶಕ್ತಿ, ಶಾಂತಿ, ಪ್ರಗತಿ, ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಭಾರತವಷ್ಟೇ ಮುಂದಾಗಬೇಕಲ್ಲ; ನಾವು ಕೂಡ ಉತ್ತಮ ನಾಗರಿಕರಾಗಿ ರಾಷ್ಟ್ರದ ಪ್ರಗತಿಗೆ ಹೆಂಚು ಹಾಕಬೇಕು. ಸ್ವಾತಂತ್ರ್ಯವನ್ನು ಮಾತ್ರ ಯೋಗ್ಯವಾಗಿ ಉಪಯೋಗಿಸಿದರೆ, ನಿಜವಾದ ಭಾರತ ನಿರ್ಮಾಣವಾಗುವುದು.

ಮಾತೇ ಮುತ್ತು, ಮಾತೇ ಮೃತ್ಯು

 ಗಾದೆಗಳು ವೇದಗಳಿಗೆ ಸಮಾನ ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ.ಗಾದೆಗಳು ನಮ್ಮ ಹಿರಿಯರ ಜೀವನದ ಅನುಭವದ ನುಡಿಮುತ್ತುಗಳಾಗಿವೆ.' ಮಾತೇ ಮುತ್ತು, ಮಾತೆ ಮೃತ್ಯು ' ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ.ಈ ಗಾದೆಯು ಮಾತಿನ ಮಹತ್ವವನ್ನು ತಿಳಿಯಪಡಿಸುತ್ತದೆ.ಮಾತಿನಿಂದ ಒಳ್ಳೆಯದು ಹಾಗೂ ಕೆಟ್ಟದು ಎರಡು ಸಂಭವಿಸುತ್ತದೆ ಎಂಬುದು ಈ ಗಾದೆಯ ಅರ್ಥವಾಗಿದೆ.

ನಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಮಾತಿಗೆ ಪ್ರಮುಖ ಸ್ಥಾನವಿದೆ.ನಾವು ಮಾತಾನಾಡುವಾಗ ನಮ್ಮ ನಾಲಿಗೆಯ ಮೇಲೆ ಹಿಡಿತ ಇರಬೇಕು‌. ಏಕೆಂದರೆ  ಎಚ್ಚರ ತಪ್ಪಿ ಆಡುವ ಮಾತು ಇನ್ನೊಬ್ಬರ ಮನಸ್ಸಿಗೆ ನೋವು ತರಬಹುದು, ಕಿರಿಕಿರಿ ಉಂಟುಮಾಡಬಹುದು‌,ಬೇಸರ ಉಂಟು ಮಾಡಿ ಕೋಪವನ್ನೂ ತರಿಸಬಹುದು. ಕೆಲವೊಮ್ಮೆ ಸಿಟ್ಟು ಅತಿರೇಕಕ್ಕೆ ಹೋಗಿ ಹಿಡಿತ ತಪ್ಪಿದರೆ ಇಬ್ಬರ ನಡುವೆ ಜಗಳವಾಗಿ ದುರಂತಗಳು ಸಂಭವಿಸಬಹುದು. ಮಾತಿನ ಮಹತ್ವ ಬಲ್ಲ ಕೆಲವರು ತಮ್ಮಮಾತಿನಿಂದಲೇ ಇಡೀ ಜಗತ್ತನ್ನೇ ಗೆಲ್ಲುತ್ತಾರೆ. ಇನ್ನು ಕೆಲವರು ಮಾತಿನಿಂದಲೇ ಅವನತಿಯನ್ನು ಹೊಂದುತ್ತಾರೆ.ಒಳ್ಳೆಯ ಮಾತು  ಸಂಬಂಧವನ್ನು ಗಟ್ಟಿ ಮಾಡಬಹುದು , ಕೆಟ್ಟ ಮಾತು ಸಂಬಂಧವನ್ನು ಬೇರ್ಪಡಿಸಿ ಹಾಳು ಮಾಡಬಹುದು.ಆದ್ದರಿಂದ ನಾವಾಡುವ ಮಾತಿನ ಮೇಲೆ  ಹತೋಟಿ ಇರುವುದು ಒಳ್ಳೆಯದು.

ನುಡಿದರೆ ಮುತ್ತಿನ ಹಾರದಂತಿರಬೇಕು

ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು

ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು

ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು

 ಬಸವಣ್ಣನವರ ಈ ವಚನದಲ್ಲಿ ದಿವ್ಯ ಸಂದೇಶವೇ ಅಡಗಿದೆ. ಅಂದರೆ ನಮ್ಮ ಮಾತು ಇತರರಿಗೆ ನೋವುಂಟು ಮಾಡದಂತೆ ಹಿತ-ಮಿತವಾಗಿ ಮೃದುವಾಗಿರಬೇಕು. ನಮ್ಮ ನುಡಿಗಳು ಸುಂದರವಾಗಿ, ಸರಳವಾಗಿದ್ದು ಮತ್ತೊಬ್ಬರ ಮನನೋಯಿಸದಂತಿರಬೇಕು ಎಂದಿದ್ದಾರೆ.

ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬ ನುಡಿಮುತ್ತು  ಮಾತಿನ ಮಹತ್ವವನ್ನು ತಿಳಿಸುತ್ತದೆ. ನಮ್ಮ ಮಾತಿನ ಬಗ್ಗೆ ನಮಗಿರಬೇಕಾದ ವಿವೇಚನೆಯನ್ನು ಕುರಿತು ಹೇಳುತ್ತದೆ.ಮಾತಿಗೆ  ಮನಸ್ಸುಗಳನ್ನು ಬೆಸೆಯುವ ಮತ್ತು ಒಡೆಯುವ ಎರಡೂ ಸಾಮರ್ಥ್ಯವಿದೆ.ಮಾತು ನಮ್ಮ ಭಾವನೆಗಳ ಪ್ರತಿಬಿಂಬವಾಗಿದೆ.ಉತ್ತಮ ಮಾತುಗಾರರು ಜೀವನದ ಹಲವು ಸಮಸ್ಯೆಗಳನ್ನು ಎದುರಿಸುವಲ್ಲಿ ಯಶಸ್ವಿಗಳಾಗುತ್ತಾರೆ.

ಊಟ ಬಲ್ಲವನಿಗೆ ರೋಗವಿಲ್ಲ;ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ಗಾದೆಮಾತು ಕೂಡಾ ಮಾತಿನ ಬೆಲೆಯನ್ನು ತಿಳಿಸುತ್ತದೆ ಎಲ್ಲಿ ,ಯಾವಾಗ,ಹೇಗೆ ಮಾತನಾಡಿದರೆ ಮಾತಿಗೆ ಮಹತ್ವ ಬರುತ್ತದೆ ಎಂಬುದನ್ನು ತಿಳಿಸುತ್ತದೆ.ಇಬ್ಬರು ವ್ಯಕ್ತಿಗಳು ಜಗಳವಾಡುತ್ತಿರುವಾಗ ಪ್ರಚೋದನಕಾರಿ ಮಾತನಾಡಿದರೆ ಪರಿಣಾಮ ಕ್ರೂರವಾಗಬಹುದು.ಅದೇ ಸ್ವಲ್ಪ ಸಂಯಮದಿಂದ ಮಾತನಾಡಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆತರಬಹುದು.ನಾವಾಡುವ ಮಾತು ಇತರರ ಮನಸ್ಸನ್ನು ಹಾಳುಮಾಡುವುದಲ್ಲದೆ ಕೆಲವೊಮ್ಮೆ ಕುಟುಂಬ-ಊರು-ದೇಶಗಳ ನಡುವಿನ ಹೋರಾಟಕ್ಕೆ ಕಾರಣವಾಗುತ್ತದೆ.

“ಮಾತೆಂಬ ಜ್ಯೋತಿ ಈ ಜಗತ್ತಿನಲ್ಲಿ ಬೆಳಗದೇ ಇದ್ದರೆ ಇಡೀ ಜಗತ್ತು ಅಂಧಕಾರದಲ್ಲಿ ಮುಳುಗುತ್ತಿತ್ತು”ಎಂಬ ಕವಿವಾಣಿ ನಿಜಕ್ಕೂ ಸತ್ಯ.  ನಮ್ಮ ಬದುಕಿನ ದಿನನಿತ್ಯದ ಎಲ್ಲಾ ವ್ಯವಹಾರಗಳಿಗೂ ಮಾತೇ ಪ್ರಧಾನ.ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಅದರ ಅರ್ಥಹಾಗೂ ಭಾವನೆ ಒಂದೇ ಆಗಿರುತ್ತದೆ.ಮಾನವನು ಮಾತನಾಡುವ ಮತ್ತು ಆಲೋಚನಾ ಶಕ್ತಿಯಿಂದಲೇ ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ. ಮಾತಿಲ್ಲದ ಪ್ರಪಂಚವನ್ನು ಊಹಿಸಲೂ ಸಾಧ್ಯವಿಲ್ಲ.ಆಡಿದ ಮಾತು, ಒಡೆದ ಮುತ್ತು ಎಂದೂ ಹಿಂದಿರುಗಿ ಬರುವುದಿಲ್ಲ. ನಾಲಿಗೆ ಎಲ್ಲಾ ಕಡೆ ಹರಿಯ ಬಿಟ್ಟರೆ ’ಬಾಯಿ ಬಿಟ್ಟರೆ ಬಣ್ಣಗೇಡು’ ಎಂಬಂತಾಗುತ್ತದೆ.

ಇಡೀ ಜೀವಜಗತ್ತಿನಲ್ಲಿ ಮಾತನಾಡುವ ಶಕ್ತಿಯಿರುವ ಏಕೈಕ ಪ್ರಾಣಿ ಮಾನವ.ನಮಗೆ ದೇವರು ಕರುಣಿಸಿರುವ ಮಾತೆಂಬ ವರವನ್ನು ಸದ್ಬಳಕೆ ಮಾಡಿಕೊಳ್ಳಬೇಕು.ನಮ್ಮ ಮಾತು ಅನ್ಯರಮನವನ್ನು ಕೆರಳಿಸುವಂತಿರದೆ ಅರಳಿಸುವಂತಿರಲಿ.ನಮ್ಮ ಮಾತು ನಮಗೆ ಶತ್ರುವಾಗದೆ ಮಿತ್ರನಾಗಲಿ ಎಂದುಮಾತೆ ಮುತ್ತು ಮಾತೇ ಮೃತ್ಯುಎಂಬ ಗಾದೆ ಮಾತಿನ ಆಶಯವಾಗಿದೆ



ಬೆಳ್ಳಗಿರುವುದೆಲ್ಲಾ ಹಾಲಲ್ಲ

ಗಾದೆಗಳು ವೇದಗಳಿಗೆ ಸಮಾನ. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿದೆ ಗಾದೆಯು ನಮ್ಮ ಹಿರಿಯರ ಜೀವನದ ಅನುಭವದ ನುಡಿಮುತ್ತುಗಳಾಗಿದೆ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ

ಹಾಲು ಎಂಬುದು ಅಮೃತಕ್ಕೆ ಸಮಾನವಾದ ಪೌಷ್ಟಿಕ ಆಹಾರವಾಗಿದೆ.ಹಾಲು ಸಂಪೂರ್ಣ ಆಹಾರವಾಗಿದ್ದು, ಇದರಲ್ಲಿ ಕಂಡುಬರುವ ಜೀವಸತ್ವಗಳು ಮತ್ತು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.ಹಾಲಿನ ಬಣ್ಣ ಬಿಳಿ. ಆದರೆ ಬಿಳಿ ಬಣ್ಣದ ಪದಾರ್ಥಗಳೆಲ್ಲ ಹಾಲಲ್ಲ,ಸುಣ್ಣದ ತಿಳಿ ನೀರಾಗಲೀ ಕಳ್ಳಿಯ ಹಾಲಾಗಲೀ ಬಿಳಿ ಬಣ್ಣವನ್ನೇ ಹೊಂದಿದೆ.ಆದರೆ ಇವುಗಳ ಗುಣ ಧರ್ಮಗಳೇ ಬೇರೆ ಬೇರೆಯಾಗಿದೆ.ಇವುಗಳನ್ನು ಹಾಲೆಂದು ಕುಡಿದರೆ ಜೀವಕ್ಕೆ ಮಾರಕ.ಆದ್ದರಿಂದ ಕಣ್ಣಾರೆ ಕಂಡರೂ ಪರಾಂಬರಿಸಿ ನೋಡು ಎಂದು ನಮ್ಮ ಹಿರಿಯರು ಹೇಳಿದಂತೆ ಬಣ್ಣವೊಂದೇ ಇದ್ದರೂ ಅವುಗಳ ನಡುವಿನ ವ್ಯತ್ಯಾಸಗಳನ್ನು ಕಂಡುಕೊಳ್ಳಬೇಕು.ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕು ಎಂಬುದು ಈ ಗಾದೆ ಮಾತಿನ ತಾತ್ಪರ್ಯವಾಗಿದೆ.

ಜೀವನದಲ್ಲಿ ಅನೇಕ ವ್ಯಕ್ತಿಗಳನ್ನು ನಾವು ಭೇಟಿಯಾಗುತ್ತೇವೆ.ವ್ಯಕ್ತಿಯ ಹೊರಬಣ್ಣವನ್ನು ನೋಡಿ ನಾವು ಅವರನ್ನು ಒಳ್ಳೆಯವರು ಎಂದು  ನಂಬಿದರೆ ಮೋಸ ಹೋಗಬಹುದು ಎಂಬುದು ಈ ಗಾದೆಯ ಅರ್ಥವಾಗಿದೆ.ಬಣ್ಣದ ತಳುಕು ಬಳುಕಿಗೆ ಮರುಳಾಗದೆ ಅವರ ಗುಣ ವರ್ತನೆ ಸ್ವಭಾವ ವ್ಯಕ್ತಿತ್ವ ಎಲ್ಲವನ್ನು ತಿಳಿದುಕೊಂಡು ಮುನ್ನಡೆಯಬೇಕು.ಚಂದದ ಮಾತು ,ಸ್ನೇಹದ ಮುಖವಾಡ ,ಪ್ರೀತಿಯ ನಾಟಕ ಇವುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.ತಮ್ಮ ಸ್ವಾರ್ಥ ಸಾಧನೆಗಾಗಿ ಒಳ್ಳೆಯವರೆಂದು ನಾಟಕವಾಡುವ   ತುಂಬಾ ಜನರಿದ್ದಾರೆ .ಅದೆಷ್ಟೋ ಯುವಕ ಯುವತಿಯರು ಬೆಳ್ಳಗಿರುವುದೆಲ್ಲಾ ಹಾಲೆಂದು ನಂಬಿ ಪ್ರೀತಿಯ ನಾಟಕದ ಬಲೆಗೆ ಬಿದ್ದು ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ.ಇನ್ನು ಕೆಲವರು ಜನರನ್ನು ಅರ್ಥಮಾಡಿಕೊಳ್ಳದೆ ಒಳ್ಳೆಯವರೆಂದು ನಂಬಿ ಹಣ ಒಡವೆ ಆಸ್ತಿಯನ್ನು ಕಳೆದುಕೊಂಡಿದ್ದಾರೆ.

ಒಟ್ಟಿನಲ್ಲಿ ಯಾರನ್ನೇ ಆಗಲಿ ಪೂರ್ತಿಯಾಗಿ ನಂಬುವ ಮೊದಲು ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು.ಕೆಟ್ಟ ಮೇಲೆ ಬುದ್ಧಿ ಬಂತು ಎನ್ನುವುದಕ್ಕಿಂತ ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬುದನ್ನು ಮೊದಲೇ ಅರಿತರೆ ಒಳ್ಳೆಯದು.ಬಣ್ಣಕ್ಕಿಂತ ಗುಣ ಮುಖ್ಯ ಎಂಬುದನ್ನು ನಾವು ಅರ್ಥೈಸಬೇಕು ಎಂಬುದು ಈ ಗಾದೆ ಮಾತಿನ ಸಾರಾಂಶವಾಗಿದೆ


ಹಿತ್ತಿಲ ಗಿಡ ಮದ್ದಲ್ಲ

 ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದಅನುಭವದ ಸಾರವಾಗಿದೆ. ಕನ್ನಡದಲ್ಲಿ ಅನೇಕ ಗಾದೆಗಳಿವೆ .ಅದರಲ್ಲಿ ಹಿತ್ತಿಲ ಗಿಡ ಮದ್ದಲ್ಲ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ. 

 ನಮ್ಮಮನೆಯ ಹಿತ್ತಿಲಲ್ಲಿ ಅನೇಕ ಔಷಧೀಯ ಸಸ್ಯಗಳು ಬೆಳೆದಿರುತ್ತವೆ. ಅವುಗಳ ಬಗ್ಗೆ ನಮಗೆ ಮಾಹಿತಿಯಾಗಲಿ ವಿಶೇಷವಾದ ಆಸಕ್ತಿಯಾಗಲೀ, ತಿಳಿದುಕೊಳ್ಳುವ ಉತ್ಸಾಹವಾಗಲೀ ಇರುವುದಿಲ್ಲ .ಅವುಗಳೆಲ್ಲ ಕಳೆ ಗಿಡಗಳೆಂಬ ತಾತ್ಸಾರ ಮನೋಭಾವನೆನಮ್ಮಲ್ಲಿ ಇರುತ್ತದೆ.ಅದೇ  ಔಷದಿಯ ಸಸ್ಯ ಇನ್ನೊಬ್ಬರ ಹಿತ್ತಿಲಲ್ಲಿ ಬೆಳೆದಿದ್ದು ಅದನ್ನು ಇನ್ನಾರೋ ಒಬ್ಬ ವ್ಯಕ್ತಿ ಔಷಧಕ್ಕಾಗಿ ಬಳಸಿದಾಗ ಅಥವಾ ಪಂಡಿತರೋ, ಹಳ್ಳಿ ವೈದ್ಯರೋ ತಿಳಿಸಿದಾಗ ನಮಗೆ ಅದರ ಮಹತ್ವದ ಅರಿವಾಗುತ್ತದೆ.

ಇದು ನಮ್ಮ ಸುತ್ತಲಿನ ಜನರಿಗೂ ಅನ್ವಯಿಸುತ್ತದೆ. ನಮ್ಮ ಕುಟುಂಬದವರು, ಸ್ನೇಹಿತರು ಅಥವಾ ಹತ್ತಿರದ ವ್ಯಕ್ತಿಗಳಿಗೆ ಹೆಚ್ಚಿನವರು ಅಷ್ಟೊಂದು ಬೆಲೆ ಕೊಡುವುದಿಲ್ಲ.ಅವರ ಸಾಧನೆ, ಪ್ರತಿಭೆ, ಕೌಶಲ್ಯ, ಅವರೊಂದಿಗೆ ಇರುವ ಒಳ್ಳೆಯ ಸಂಬಂಧಗಳನ್ನೂ ಕಡೆಗಣಿಸುತ್ತಾರೆ.ತಮ್ಮ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹುಡುಕುವುದಾಗಲಿ ಅದಕ್ಕೆ ಪ್ರೋತ್ಸಾಹಿಸುವುದಾಗಲಿ  ಹೆಚ್ಚಿನ ಹೆತ್ತವರು ಕೂಡ ಮಾಡುವುದಿಲ್ಲ .ಆದರೆ ಬೇರೆಯವರು ಸಾಧನೆ ಮಾಡಿದಾಗ ಹೊಗಳುತ್ತಾರೆ ಹಾಗು ಮೆಚ್ಚಿಕೊಳ್ಳುತ್ತಾರೆ.

ನಮ್ಮ ಸುತ್ತಲಿನ ವ್ಯಕ್ತಿಗಳು ಯಾವುದೇ ಹೊಸ ಸಾಧನೆ ಮಾಡಿದರೂ, ನಾವು ಅದನ್ನು ಅಷ್ಟಾಗಿ ಗಮನಿಸುವುದಿಲ್ಲ. ಆದರೆ, ಅದೇ ಸಾಧನೆಯನ್ನು ವಿದೇಶಿ ವ್ಯಕ್ತಿಯೋ, ಪ್ರಸಿದ್ಧ ವ್ಯಕ್ತಿಯೋ ಮಾಡಿದರೆ, ನಾವು ಅದನ್ನು ಉತ್ಕೃಷ್ಟವೆಂದು ಒಪ್ಪಿಕೊಳ್ಳುತ್ತೇವೆ.

ನಮ್ಮ ಹತ್ತಿರದ ಶಿಕ್ಷಣ ಸಂಸ್ಥೆಗಳನ್ನು ಕಡೆಗಣಿಸಿ ದೂರದ ಅಥವಾ ವಿದೇಶಿ ವಿದ್ಯಾಸಂಸ್ಥೆಗಳನ್ನು ಮೆಚ್ಚಿಕೊಳ್ಳುವ ಪ್ರವೃತ್ತಿಯು ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆಗೆ ಒತ್ತು ನೀಡುತ್ತದೆ.

ನಮ್ಮ ಹಿತ್ತಲಲ್ಲಿಯೇ ಬೆಳೆಯುವ ಔಷಧೀಯ ಗಿಡಗಳನ್ನು ಕಡೆಗಣಿಸಿ ನಾವು ಪಾಶ್ಚಾತ್ಯ ವೈದ್ಯಕೀಯ ಪದ್ಧತಿಯನ್ನು  ಅನುಸರಿಸುತ್ತೇವೆ. ಆದರೆ ಈಗ ಪಾಶ್ಚಾತ್ಯ ದೇಶಗಳು ನಮ್ಮ ಆಯುರ್ವೇದ ಪದ್ಧತಿಯನ್ನು , ಧ್ಯಾನ-ಯೋಗವನ್ನು ತಮ್ಮ ದೇಶದಲ್ಲಿ  ಖ್ಯಾತಿಗೆ ತರುತ್ತಿವೆ.ಅದೇ ರೀತಿ ನಾವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮನಸೋತರೆ ಪಾಶ್ಚಿಮಾತ್ಯರು ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿದ್ದಾರೆ.

ಒಟ್ಟಿನಲ್ಲಿ ಈ ಗಾದೆಯ ನಿಜವಾದ ತಾತ್ಪರ್ಯ ಏನಂದರೆ, ನಮ್ಮ ಬಳಿ ಇರುವುದರ ಮಹತ್ವವನ್ನು ನಾವು ಮೊದಲು ಅರಿಯಬೇಕು. ಅದು ಸಂಬಂಧವೋ, ಪ್ರತಿಭೆಯೋ, ಸಂಪತ್ತೋ ಸಂಸ್ಕೃತಿಯೋ ಏನೇ ಆಗಿರಬಹುದು.ನಶಿಸುವ ಮೊದಲು ಪೋಷಿಸಿ ಬೆಳೆಸಬೇಕು ಎಂಬುದು ಈ ಗಾದೆ ಮಾತಿನ ಸಾರಾಂಶವಾಗಿದೆ.


ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

 ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ಸಾರವಾಗಿದೆ. ಕನ್ನಡದಲ್ಲಿ ಅನೇಕ ಗಾದೆಗಳಿವೆ .ಅದರಲ್ಲಿ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ. 


ದೂರದಿಂದ ನೋಡಿದಾಗ ಯಾವುದೇ ವಸ್ತುವಿನ ಅಥವ ವ್ಯಕ್ತಿಯ ಗುಣದೋಷಗಳು ಅರ್ಥವಾಗುವುದಿಲ್ಲ. ದೂರದಿಂದ ನೋಡಿದರೆ ಒಂದು ಬೆಟ್ಟ ನುಣ್ಣಗೆ , ಸಮತಟ್ಟಾಗಿರುವಂತೆ ಕಾಣುತ್ತದೆ. ದೂರದಿಂದ ಅದನ್ನು ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನು ನೀಡುತ್ತದೆ. ನಿಜದ ಅರಿವು ಆಗಬೇಕೆಂದರೆ ಅದರ ಹತ್ತಿರ ಹೋಗಬೇಕು. ಹತ್ತಿರ ಹೋಗಿ ನೋಡಿದಾಗಲೆ ಅದರಲ್ಲಿರುವ ಗುಡ್ಡಗಳು, ಮರಗಿಡಗಳು, ಮುಳ್ಳುಗಳು ಎಲ್ಲ ಕಣ್ಣಿಗೆ ಕಾಣುವುದು  ಕಲ್ಲುಮುಳ್ಳುಗಳಿಂದ ಕೂಡಿದ ದುರ್ಗಮ ರಸ್ತೆ ಕಾಣಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ. ಅಂದರೆ ದೂರದಿಂದ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಕಂಡ ಬೆಟ್ಟವನ್ನು ಹತ್ತುವುದು ಕಂಡಷ್ಟು ಸುಲಭವಲ್ಲ ಎನ್ನುವುದು ಹತ್ತಿರ ಹೋಗಿ ನೋಡಿದ ಗೊತ್ತಾಗುತ್ತದೆ .

ಹಾಗೇ ಸಮಾಜದಲ್ಲಿರುವ ಜನರನ್ನು ದೂರದಿಂದ ನೋಡುವಾಗ ಅವರು ಸುಖವಾಗಿ ಜೀವನ ಸಾಗಿಸುತ್ತಾರೆಂದು ಕಾಣಿಸುತ್ತದೆ .ಸದಾ ನಮ್ಮ ಕಷ್ಟ ಹಾಗೂ ನೋವುಗಳ ಬಗ್ಗೆ ಕೊರಗುತ್ತಾ ಇರುತ್ತೇವೆ.ಕಷ್ಟಗಳು ಹಾಗೂ ನೋವುಗಳು ಪ್ರತಿಯೊಬ್ಬ ಮನುಷ್ಯನಿಗೂ ಇದ್ದೇ ಇರುತ್ತವೆ.ಆದ್ದರಿಂದ  ದೇವರು ತನಗೇ ಎಲ್ಲ ಕಷ್ಟಗಳನ್ನು ಕೊಟ್ಟಿದ್ದಾನೆ ಎಂದು ಯೋಚಿಸುವುದು ತಪ್ಪು ಎಂದು ಈ ಗಾದೆ ಹೇಳುತ್ತದೆ
ಇದನ್ನು ನಮ್ಮ ಹಿರಿಯರು ಆಡು ಭಾಷೆಯಲ್ಲಿ ‘ದೂರವಿದ್ದರೆ ಪರಿಮಳ, ಹತ್ತಿರ ಬಂದರೆ ವಾಸನೆ’ ಎಂದು ಕೂಡ ಕರೆಯುತ್ತಾರೆ. ಅರ್ಥ ಬಹಳ ಸರಳ. ಯಾವುದು ದೂರದಿಂದ ಸುಂದರವಾಗಿಯೂ, ಎಲ್ಲವೂ ಸರಿಯಾಗಿದೆ ಎನ್ನುವಂತೆ ಕಾಣುತ್ತದೆಯೋ, ಅದು ಹತ್ತಿರದಿಂದ ಬೇರೆಯದೇ ರೀತಿಯ ನೋಟವನ್ನ ಒದಗಿಸುತ್ತದೆ ನಾವು ದೂರದಲ್ಲಿರುವ ಸಂಬಂಧಗಳನ್ನು ಪ್ರೀತಿಯಿಂದ ನೋಡುತ್ತೇವೆ. ದೂರದ ಸ್ನೇಹಿತರು, ಬಂಧುಗಳು ನಮಗೆ ಹಿತಚಿಂತಕರಾಗಿ ಕಾಣಬಹುದು. ಆದರೆ ಅವರೊಂದಿಗೆ ಹೆಚ್ಚು ಕಾಲ ಕಳೆದರೆ ಅವರ ನಿಜವಾದ ಸ್ವಭಾವ, ದೋಷಗಳು, ಅಹಂಕಾರ ಹಾಗೂ ಸ್ವಾರ್ಥದ ನಿಜ ಸ್ವರೂಪ ಸ್ಪಷ್ಟವಾಗುತ್ತದೆ. ಹೀಗಾಗಿ, ದೂರವಿರುವಾಗ ಸೌಹಾರ್ದತೆಯು ಹೆಚ್ಚಿರಬಹುದು, ಆದರೆ ಹತ್ತಿರವಾದಾಗ ಸಣ್ಣ ವಿಚಾರಗಳೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.ಅಂತೆಯೇ ಹೊಸ ಸಂಬಂಧಗಳು ದೂರದಿಂದ ಬಹಳ ಆಕರ್ಷಕವಾಗಿ ತೋರುತ್ತವೆ, ಆದರೆ ಹತ್ತಿರ ಬಂದಾಗ ಅವರ ನಿಜ ಸ್ವರೂಪ ಬೆಳಕಿಗೆ ಬರುತ್ತದೆ ಎನ್ನುವುದು ಗಾದೆ ಮಾತಿನ ಗುಟ್ಟು.

ವಿದೇಶಗಳು ಬಹಳ ಸುಂದರ, ಆಕರ್ಷಕ ಎಂದುಕೊಳ್ಳುವವರೂ ಇದ್ದಾರೆ.ಅದೇ ರೀತಿ ಹಳ್ಳಿಯಲ್ಲಿ ಇರುವವರು ಪಟ್ಟಣವನ್ನು, ಪಟ್ಟಣದಲ್ಲಿ ನೆಲೆಸಿರುವವರು  ಹಳ್ಳಿಯನ್ನುಇಷ್ಟಪಡುತ್ತಾರೆ.ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಒಳ್ಳೆಯ ಕಾಲೇಜುಗಳನ್ನು ಅರಸುತ್ತ ದೂರದ ಊರುಗಳಿಗೆ ಹೋಗುತ್ತಾರೆ .ಆದರೆ ಅಲ್ಲಿ ಬಂದು ನೆಲೆಸಿ ಬದುಕಿದಾಗಲಷ್ಟೇ ಸ್ಥಳೀಯ ಸವಾಲುಗಳ ಅರಿವಾಗುತ್ತದೆ. 

ದೂರದಿಂದ ನೋಡಿದಾಗ ಎಲ್ಲಾ ಸಂಬಂಧಗಳು ,ವಸ್ತುಗಳು , ಸೇವಾ ಸಂಸ್ಥೆಗಳು ,ನಗರ -ಪಟ್ಟಣ ಇತ್ಯಾದಿಗಳು ಸುಂದರವಾಗಿಯೇ ಕಾಣಿಸುತ್ತದೆ.ಆದರೆ ಹತ್ತಿರ ಹೋಗಿ ನೋಡಿದಾಗ ನಿಜವಾದ ತಿಳಿವಳಿಕೆ ಬಂದಾಗ ಮಾತ್ರ, ಎಲ್ಲವೂ ಕಾಣುವ ಹಾಗೆ ಇರುವುದಿಲ್ಲ ಎಂಬ ಸತ್ಯ ಅರಿವಾಗುತ್ತದೆ ಎಂಬುದು ಈ ಗಾದೆ ಮಾತಿನ ಸಾರಾಂಶವಾಗಿದೆ.

.




ರಾಷ್ಟ್ರಧ್ವಜದ ವೈಶಿಷ್ಟ್ಯತೆಗಳು

 ಪೀಠಿಕೆ:

ರಾಷ್ಟ್ರಧ್ವಜವು ಪ್ರತಿಯೊಂದು ದೇಶದ ಸ್ವತಂತ್ರತೆ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕತೆ ಮತ್ತು ಆತ್ಮಗೌರವದ ಸಂಕೇತವಾಗಿದೆ. ಈ ಧ್ವಜವು ಭಾರತ ದೇಶದ ಸಮಗ್ರತೆ ಮತ್ತು ಪರಂಪರೆಯ ಪ್ರತೀಕವಾಗಿದೆ.ಭಾರತದ ನಮ್ಮ ಈ ರಾಷ್ಟ್ರಧ್ವಜವನ್ನು ಪಿಂಗಳಿ ವೆಂಕಯ್ಯ ಅವರು ವಿನ್ಯಾಸಗೊಳಿಸಿದರು. 1947ರ ಜುಲೈ 22ರಂದು ಭಾರತೀಯ ಸಂವಿಧಾನ ಸಭೆಯು ಈ ತ್ರಿವರ್ಣ ಧ್ವಜವನ್ನು ಅಧಿಕೃತವಾಗಿ ಅಂಗೀಕರಿಸಿತು.ಧ್ವಜವು ಆಯತಾಕಾರದ ಆಕಾರವನ್ನು ಹೊಂದಿರುತ್ತದೆ. ಇದು ಮೂರು ಬಣ್ಣಗಳಿಂದ ಕೂಡಿದೆ. ಕೇಸರಿ, ಬಿಳಿ ಮತ್ತು ಹಸಿರು ಹಾಗೂ ಮಧ್ಯದಲ್ಲಿ 24 ಗೆರೆಗಳಿರುವ ನೇರಳೆ ಬಣ್ಣದ ಅಶೋಕ ಚಕ್ರವಿದೆ.

ವಿಷಯ ವಿವರಣೆ:

ಭಾರತದ ತ್ರಿವರ್ಣ ಧ್ವಜ ನಮ್ಮ ದೇಶದ ಅಸ್ತಿತ್ವ, ಸಂಸ್ಕೃತಿ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾಗಿದೆ. ಕಯ್ಯಾರ ಕಿಂಞ್ಞಣ್ಣ ರೈ ಅವರು "ಏರುತಿಹುದು ಹಾರುತಿಹುದು ನೋಡು ನಮ್ಮ ಬಾವುಟ..." ಎಂಬ ದೇಶಭಕ್ತಿಗೀತೆಯ ಕೇವಲ ನಾಲ್ಕು ಸಾಲುಗಳಲ್ಲಿ ರಾಷ್ಟ್ರಧ್ವಜದ ಮಹತ್ವವನ್ನು ಅರ್ಥಗರ್ಭಿತವಾಗಿ ವಿವರಿಸಿದ್ದಾರೆ.

ಭಾರತದ ರಾಷ್ಟ್ರಧ್ವಜದಲ್ಲಿ ಮೂರುಹಸಿರು ಬಣ್ಣಗಳಿವೆ:ಧ್ವಜದ ಮೇಲ್ಭಾಗದಲ್ಲಿರುವ ಕೇಸರಿ ಬಣ್ಣವು ಧೈರ್ಯ, ಪರೋಪಕಾರ ಮತ್ತು ತ್ಯಾಗದ ಸಂಕೇತವಾಗಿದೆ.ದೇಶಕ್ಕಾಗಿ ಬಲಿದಾನ ಮಾಡಿದ ವೀರಯೋಧರ ಪರಂಪರೆಯನ್ನು ಸ್ಮರಿಸಲು ಈ ಬಣ್ಣ ಅಳವಡಿಸಲಾಗಿದೆ.

 ಮಧ್ಯಭಾಗದಲ್ಲಿರುವ ಬಿಳಿ ಬಣ್ಣವು ಶಾಂತಿ, ಸತ್ಯ ಮತ್ತು ಶುದ್ಧತೆಯನ್ನು ಪ್ರತಿನಿಧಿಸುತ್ತದೆ.ಇದು ಸತ್ಯ ಮತ್ತು ಶಾಂತಿಯ ಮಾರ್ಗದಲ್ಲಿ ಸಾಗುವ ನಡವಳಿಕೆಗೆ ಶಕ್ತಿ ನೀಡುತ್ತದೆ.

ಕೆಳಭಾಗದಲ್ಲಿರುವ ಹಸಿರು ಬಣ್ಣವು ಕೃಷಿ, ಸಮೃದ್ಧಿ ಮತ್ತು ಪರಿಸರ ಸ್ನೇಹೀ ಬದುಕಿನ ಸಂಕೇತವಾಗಿದೆ.ಇದು ಮನುಷ್ಯ ಮತ್ತು ಪ್ರಕೃತಿಯ ಅವಿನಾಭಾವ ಸಂಬಂಧವನ್ನು ನೆನಪಿಸುತ್ತದೆ.

ಧ್ವಜದ ಮಧ್ಯಭಾಗದಲ್ಲಿ ನೀಲಿ ಬಣ್ಣದ ಅಶೋಕ ಚಕ್ರವನ್ನು ಅಳವಡಿಸಲಾಗಿದೆ. ಇದನ್ನು ಸಾರಾನಾಥ್ ದ ಅಶೋಕ ಸ್ತಂಭದ ಧರ್ಮಚಕ್ರದಿಂದ ತೆಗೆದುಕೊಳ್ಳಲಾಗಿದೆ.

ಚಕ್ರವು ನೈತಿಕತೆ, ಧರ್ಮ, ನ್ಯಾಯ ಮತ್ತು ಪ್ರಗತಿಯನ್ನು ಪ್ರತಿನಿಧಿಸುತ್ತದೆ.

24 ಗೆರೆಗಳು ಜೀವನದ ವಿವಿಧ ಆಯಾಮಗಳನ್ನು ಸೂಚಿಸುತ್ತವೆ. ಹಾಗೆಯೇ ದೈನಂದಿನ 24 ಗಂಟೆಗಳ ನಿರಂತರ ಕರ್ಮವನ್ನೂ ಪ್ರತಿನಿಧಿಸುತ್ತದೆ.

ಇದು ಪ್ರಗತಿ ಮತ್ತು ಚೇತರಿಕೆಯ ಸಂಕೇತವೂ ಆಗಿದೆ. ಜೀವನವು ನಿರಂತರ ಚಲನೆಯಲ್ಲಿರಬೇಕು ಎಂಬ ಸಂದೇಶವನ್ನು ಕೂಡ ನೀಡುತ್ತದೆ

ಭಾರತ ಸರ್ಕಾರ "ಧ್ವಜ ಸಂಹಿತೆ - 2002" ಅನ್ನು ಜಾರಿಗೆ ತಂದಿದೆ. ಇದರ ಪ್ರಕಾರವಾಗಿ ರಾಷ್ಟ್ರಧ್ವಜವನ್ನು ಯಾವಾಗಲೂ ಗೌರವದಿಂದ ನೋಡಬೇಕು.ಧ್ವಜವು ಯಾವಾಗಲೂ ಗಾಳಿಯ ಕಡೆ ಸರಿಯಾಗಿ ಹಾರಿರಬೇಕು.ಭೂಮಿಗೆ ಮುಟ್ಟಿಸಬಾರದು,  .ಧ್ವಜವನ್ನು  ಸುಡುವುದು, ಹರಿದು ಹಾಕುವುದು ಅಪರಾಧ.ಗಣರಾಜ್ಯೋತ್ಸವ (ಜನವರಿ 26) ಮತ್ತು ಸ್ವಾತಂತ್ರ್ಯ ದಿನ (ಆಗಸ್ಟ್ 15) ದಿನಗಳಲ್ಲಿ ಧ್ವಜಾರೋಹಣ ಅತ್ಯಂತ ಗೌರವದಿಂದ ನಡೆಯಬೇಕು.ರಾಷ್ಟ್ರಧ್ವಜವನ್ನು ಧೂಳಿನಲ್ಲಿಡುವುದು.ಧ್ವಜವನ್ನು ಉಡುಪಿನಲ್ಲಿ ಬಳಸುವುದು.ಇತರ ದೇಶಗಳ ಧ್ವಜಗಳಿಗಿಂತ ಕೆಳಗೆ ಹಾಕುವುದು ಅಪರಾಧ ಎನಿಸುವುದು.

ಭಾರತದ ರಾಷ್ಟ್ರಧ್ವಜವು ನಮ್ಮ ಸ್ವಾತಂತ್ರ್ಯ ಹೋರಾಟದ ಸಂಕೇತ, ರಾಷ್ಟ್ರಪ್ರೇಮದ ಚಿಹ್ನೆ ಮತ್ತು ದೇಶದ ಏಕತೆ, ಭಿನ್ನತೆ, ಸಾಮರಸ್ಯವನ್ನು ಪ್ರತಿಬಿಂಬಿಸುವ ಪ್ರಕಾರವಾಗಿದೆ

ಉಪಸಂಹಾರ:
ಭಾರತದ ತ್ರಿವರ್ಣ ಧ್ವಜವು ಭಾರತೀಯರ ಗೌರವ, ಶ್ರದ್ಧೆ ಮತ್ತು ರಾಷ್ಟ್ರಭಕ್ತಿಯ ಪ್ರತೀಕವಾಗಿದೆ. ಪ್ರತಿಯೊಬ್ಬ ನಾಗರಿಕನು ಧ್ವಜವನ್ನು ಗೌರವಪೂರ್ವಕವಾಗಿ ನೋಡಬೇಕು ಮತ್ತು ಅದರ ಗೌರವವನ್ನು ಕಾಪಾಡಬೇಕು. ರಾಷ್ಟ್ರಧ್ವಜವನ್ನು ನೋಡಿದಾಗ ನಮ್ಮೆಲ್ಲರ ಮನಸ್ಸಿನಲ್ಲಿ ದೇಶಪ್ರೇಮದ ಭಾವನೆ ತುಂಬಬೇಕು

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು

       

ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಕನ್ನಡದಲ್ಲಿ ಅನೇಕ ಗಾದೆಗಳಿವೆ .ಅದರಲ್ಲಿ "ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು " ಎಂಬುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ.

 ನಮ್ಮ ಹಿರಿಯರು ಜೀವನದಲ್ಲಿ ಅನುಭವಿಸಿದ ತತ್ವಗಳನ್ನು ಗಾದೆಗಳ ಮೂಲಕ ನಮಗೆ ಬೋಧಿಸಿದ್ದಾರೆ. ಅವು ಕೇವಲ ಗಾದೆ ಮಾತುಗಳಷ್ಟೇ ಅಲ್ಲ, ನಾವು ಜೀವನದಲ್ಲಿ ಅನುಸರಿಸಬೇಕಾದ ಅಮೂಲ್ಯ ಪಾಠಗಳಾಗಿವೆ. "ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು" ಎಂಬ ಗಾದೆಯು ನಮ್ಮ ಕರ್ಮಫಲ ಸಿದ್ಧಾಂತವನ್ನು ಪ್ರತಿಪಾದಿಸುತ್ತದೆ. ಈ ಗಾದೆಯ ಮೂಲ ಅರ್ಥವೇನೆಂದರೆ, ನಾವು ಮಾಡಿದ ಕಾರ್ಯದ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ ಎಂದು. ಒಬ್ಬ ವ್ಯಕ್ತಿ ತನ್ನ ವ್ಯಕ್ತಿತ್ವ, ವರ್ತನೆ, ಮತ್ತು ನಿರ್ಧಾರಗಳಿಂದ ಉತ್ತಮ ಅಥವಾ ಕೆಟ್ಟ ಫಲಗಳನ್ನು ಪಡೆಯುತ್ತಾನೆ.

ಜೀವನದಲ್ಲಿ ನಾವು ಯಾವ ಕಾರ್ಯ ಮಾಡಿದರೂ, ಅದಕ್ಕೆ ಸರಿಯಾದ ಪ್ರತಿಫಲ ದೊರಕುತ್ತದೆ. ಒಳ್ಳೆಯ ಕೆಲಸ ಮಾಡಿದವರಿಗೆ ಉತ್ತಮ ಫಲ, ಕೆಟ್ಟ ಕೆಲಸ ಮಾಡಿದವರಿಗೆ ಅನಿಷ್ಟ ಫಲ ದೊರೆಯುತ್ತದೆ. ಜೀವನಪೂರ್ತಿ ಕೊರಗುತ್ತಾ ಕಷ್ಟಗಳನ್ನು ಎದುರಿಸುತ್ತಾ ನೋವುಗಳನ್ನುಅನುಭವಿಸುತ್ತಾ ಕಳೆಯಬೇಕಾಗುತ್ತದೆ'ಮಾಡಿದ್ದುಣ್ಣೋ ಮಾರಾಯ 'ಎಂಬಂತೆ ನಮ್ಮ ಕರ್ಮಫಲಗಳನ್ನುಜೀವನದುದ್ದಕ್ಕೂ ನಾವೇ.ಅನುಭವಿಸಬೇಕಾಗುತ್ತದೆ . 

ಉದಾಹರಣೆಗೆ ಹೇಳುವುದಾದರೆ, ಒಬ್ಬ ವಿದ್ಯಾರ್ಥಿ ದಿನವೂ ಕಷ್ಟಪಟ್ಟು  ಓದುತ್ತಾನೆ. ಹೀಗಾಗಿ, ಅವನು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಾನೆ. ಇನ್ನೊಬ್ಬ ವಿದ್ಯಾರ್ಥಿ ಸೋಮಾರಿಯಾಗಿದ್ದು, ಓದದೆ ಕೇವಲ ಮೋಜುಮಸ್ತಿಯಲ್ಲೇ ತೊಡಗುತ್ತಾನೆ .ಅವನು ಪರೀಕ್ಷೆಯಲ್ಲಿ ಫೇಲ್ ಆಗುತ್ತಾನೆ .ಅದೇ ರೀತಿ ಒಬ್ಬ ವ್ಯಕ್ತಿ ಎಲ್ಲರಿಗೂ ಮೋಸ ವಂಚನೆ ಮಾಡುತ್ತಾ ಹಣ ಸಂಪಾದಿಸುತ್ತಾನೆ. ಆದರೆ ಒಂದು ದಿನ ಅವನ ವಂಚನೆ ಬಹಿರಂಗವಾಗುತ್ತದೆ ಮತ್ತು ಸಮಾಜದಲ್ಲಿ ಅವನ ಮಾನ-ಮರ್ಯಾದೆ ಹಾಳಾಗುತ್ತದೆ. ಒಬ್ಬ ರೈತ ಬೆಳೆ ಬೆಳೆಯಲು ಪರಿಶ್ರಮ ಪಡುತ್ತಾನೆ, ಅವನಿಗೆ ಉತ್ತಮ ಫಸಲು ಬರುತ್ತದೆ.ಹೀಗೆ ಇಲ್ಲಿ ಅವರವರು ಮಾಡಿದ ಕರ್ಮದ ಫಲವನ್ನು ಅವರವರೇ ಅನುಭವಿಸುತ್ತಾರೆ ಎಂಬುದನ್ನೇ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂದು ಗಾದೆ ಮಾತಿನಲ್ಲಿ ನಮ್ಮ ಹಿರಿಯರು ಹೇಳಿದ್ದಾರೆ.

ನಾವು ಮಾಡುತ್ತಿರುವ ಕೆಲಸದ ಪರಿಣಾಮ ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು, ಅದರ ಸಕಾರಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಯೋಚಿಸುವುದು ಅತ್ಯವಶ್ಯಕ. ನಾವು ಶ್ರಮವಿಲ್ಲದೆ ಯಶಸ್ಸನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಒಂದು ಬೀಜ ನಾಟಿ ಮಾಡಿದರೆ ಮಾತ್ರ ಅದು ಗಿಡವಾಗಿ ಬೆಳೆದು ದೊಡ್ಡ ಮರವಾಗುತ್ತದೆ.

"ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು" ಎಂಬ ಗಾದೆಯು ನಾವು ಮಾಡಿದ ಕರ್ಮದ ಪ್ರಕಾರ ಫಲ  ಲಭಿಸುತ್ತದೆ ಎಂದು ತಿಳಿಸುತ್ತದೆ. ನಾವು ಕೆಟ್ಟ ಕೆಲಸ ಮಾಡಿದರೆ, ಅದರಿಂದ ಕಷ್ಟ ಎದುರಿಸಬೇಕು. ಒಳ್ಳೆಯ ಕೆಲಸ ಮಾಡಿದರೆ, ಅದರಿಂದ ಸಮಾಧಾನ, ಶ್ರೇಯಸ್ಸು, ಮತ್ತು ಸಂತೋಷ ಸಿಗುತ್ತದೆ.  ಆದ್ದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಅದರ ಪರಿಣಾಮಗಳ ಬಗ್ಗೆ ಯೋಚಿಸಬೇಕು ಎಂಬುದು ಇದರ ಸಾರಾಂಶವಾಗಿದೆ

 - ಉಷಾ ಪ್ರಸಾದ್


ಪುಸ್ತಕಗಳ ಮಹತ್ವ

ಟಿಪ್ಪಣಿ :

ಪುಸ್ತಕಗಳು ಮಾನವನ ಬುದ್ಧಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಇವು ಜ್ಞಾನ, ಮನರಂಜನೆ ಮತ್ತು ಪ್ರೇರಣೆಯ ಮೂಲಗಳಾಗಿವೆ. ಪುರಾತನ ಕಾಲದಿಂದಲೂ ಗ್ರಂಥಾಲಯಗಳು ಸಂಸ್ಕೃತಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.ಪುಸ್ತಕಗಳು ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿವೆ. ಅವು ನಮಗೆ ಜ್ಞಾನ ನೀಡುತ್ತವೆ, ಹೊಸ ವಿಚಾರಗಳನ್ನು ಕಲಿಸುತ್ತವೆ, ಮತ್ತು ನಮ್ಮ ಭಾವನೆಗಳನ್ನು ಆಳವಾಗಿ ಆಲೋಚಿಸಲು ಸಹಾಯ ಮಾಡುತ್ತವೆ.

ವಿಷಯ ವಿವರಣೆ:

ಪುಸ್ತಕಗಳು ನಮ್ಮ ಜ್ಞಾನವನ್ನು ವಿಸ್ತರಿಸಿ, ಬುದ್ಧಿಮಟ್ಟವನ್ನು ಹೆಚ್ಚಿಸುತ್ತದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಇವುಗಳು ಮುಖ್ಯ ಪಾತ್ರ ವಹಿಸುತ್ತವೆ. ಪಠ್ಯಪುಸ್ತಕಗಳು ಹೊಸ ವಿಷಯಗಳನ್ನು ಪರಿಚಯಿಸಿ, ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಲು ಸಹಾಯ ಮಾಡುತ್ತವೆ.

ನಾವು ಓದುವ ಅಭ್ಯಾಸ ಬೆಳೆಸಿದರೆ, ನಮ್ಮಭಾಷಾ ಜ್ಞಾನ ಹೆಚ್ಚುತ್ತದೆ. ಹೊಸ ಶಬ್ದಗಳ ಪರಿಚಯ, ಸುಂದರ ಬರಹ, ಮತ್ತು ಸರಿಯಾದ ವಾಕ್ಯ ರಚನೆ ಕಲಿಯಲು ಪುಸ್ತಕಗಳು ಸಹಾಯಕವಾಗುತ್ತವೆ.

ನಾವು ಹೆಚ್ಚು ಓದಿದರೆ, ವಿಚಾರಶಕ್ತಿ ವೃದ್ಧಿಯಾಗುತ್ತದೆ. ಹೊಸ ಕಲ್ಪನೆಗಳು, ತತ್ವಗಳು, ಮತ್ತು ಸಂಶೋಧನೆಗಳ ಬಗ್ಗೆ ತಿಳಿಯಲು ಅವಕಾಶ ಸಿಗುತ್ತದೆ. ಇದು ವಿಷಯಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಸ್ಪಷ್ಟವಾಗಿ ಮನನ ಮಾಡಲು ಸಹಾಯ ಮಾಡುತ್ತದೆ.

ಒಬ್ಬ ವ್ಯಕ್ತಿ ಓದುತ್ತಾ ಹೋದಂತೆ ಅವನ ಭಾಷಾ ಕೌಶಲ್ಯ, ಬರಹ ಶೈಲಿ, ಮತ್ತು ಅರ್ಥಗ್ರಹಣ ಶಕ್ತಿ ಬೆಳೆ ಬೆಳೆಯುತ್ತದೆ. ಒಟ್ಟಾರೆಯಾಗಿ, ಪುಸ್ತಕಗಳು ವ್ಯಕ್ತಿತ್ವ ವೃದ್ಧಿಗೆ ಸಹಾಯ ಮಾಡುತ್ತದೆ.

ಪುಸ್ತಕಗಳು ಮನರಂಜನೆ ನೀಡುವುದರೊಂದಿಗೆ ಜ್ಞಾನವನ್ನು ಹೆಚ್ಚಿಸುವ ಮಹತ್ತರ ಸಾಧನ. ಧಾರಾವಾಹಿಗಳು ಮತ್ತು ಸಿನಿಮಾಗಳಂತೆ, ಕಾದಂಬರಿಗಳು, ಹಾಸ್ಯ ಕಥೆಗಳು, ಸಾಹಸಮಯ ಕೃತಿಗಳು, ಕವನಗಳು, ಮತ್ತು ನಾಟಕಗಳು ಓದುಗರಿಗೆ ಆನಂದವನ್ನು ನೀಡುತ್ತವೆ. ಅವು ಮಾನವನ ಕಲ್ಪನಾಶಕ್ತಿ  ವೃದ್ಧಿಸಿ, ಆಳವಾದ ಚಿಂತನೆಗೆ ಉತ್ತೇಜನ ನೀಡುತ್ತವೆ.

ವೈಜ್ಞಾನಿಕ ಮತ್ತು ತಂತ್ರಜ್ಞಾನ ಸಂಬಂಧಿತ ಪುಸ್ತಕಗಳು ಹೊಸ ಆವಿಷ್ಕಾರಗಳು, ಸಂಶೋಧನೆಗಳು, ಮತ್ತು ಅಭಿವೃದ್ಧಿಗಳ ಬಗ್ಗೆ ಮಾಹಿತಿ ನೀಡಿ, ಓದುಗರಿಗೆ ಆಧುನಿಕ ಜ್ಞಾನವನ್ನು ಹೊಂದಲು ಸಹಾಯ ಮಾಡುತ್ತವೆ.

ಮಹಾನ್ ವ್ಯಕ್ತಿಗಳ ಜೀವನಚರಿತ್ರೆ ಓದಿದರೆ, ಅವರ ಸಾಧನೆಗಳು,  ಹೋರಾಟ ಮತ್ತು ತತ್ವಗಳು ನಮಗೆ ಪ್ರೇರಣೆ ನೀಡುತ್ತವೆ. ಧಾರ್ಮಿಕ ಗ್ರಂಥಗಳು, ನೀತಿ ಕಥೆಗಳು, ಮತ್ತು ಪೌರಾಣಿಕ ಕೃತಿಗಳು ಉತ್ತಮ ಜೀವನ ನಡೆಸಲು ಪಾಠ ಕಲಿಸುತ್ತವೆ. ಅವು ಸನ್ಮಾರ್ಗದಲ್ಲಿ ನಡೆಯಲು ಪ್ರೇರೇಪಿಸುವುದರ ಜೊತೆಗೆ, ವ್ಯಕ್ತಿತ್ವದ ನಿರ್ಮಾಣಕ್ಕೂ ಸಹಕಾರಿಯಾಗುತ್ತವೆ. ಒಳ್ಳೆಯ ಪುಸ್ತಕಗಳು ಜೀವನದ ಸತ್ಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ.

ಇತ್ತೀಚಿನ ಕಾಲದಲ್ಲಿ ಡಿಜಿಟಲ್ ಪುಸ್ತಕಗಳು ಮತ್ತು ಆಡಿಯೋಬುಕ್ಸ್‌ಗಳು ಓದುಗರಿಗೆ ಹೊಸ ಆಯ್ಕೆಗಳನ್ನು ನೀಡಿವೆ. ಆದರೆ ಮುದ್ರಿತ ಪುಸ್ತಕಗಳ ಸ್ಪರ್ಶ ಮತ್ತು ಅನುಭವವು ಖುಷಿಯನ್ನು ನೀಡುತ್ತದೆ .

ಏಕಾಂಗಿಯಾಗಿ ಇರುವವರಿಗೆ, ಒತ್ತಡದಿಂದ ಬಳಲುವವರಿಗೆ, ಅಥವಾ ಖಿನ್ನತೆಯ ಸಮಸ್ಯೆ ಎದುರಿಸುತ್ತಿರುವವರಿಗೆ ಓದು ಉತ್ತಮ ಪರಿಹಾರವಾಗಿದೆ. ಮನಸ್ಸು ಹಗುರವಾಗಲು ಪುಸ್ತಕಗಳು ಸಹಾಯ ಮಾಡುತ್ತವೆ. ಒಬ್ಬ ವ್ಯಕ್ತಿ ಓದುತ್ತಿದ್ದರೆ, ಅವನು ಆ ವಿಷಯದಲ್ಲಿ ಲೀನನಾಗಿ, ತನ್ನ ತೊಂದರೆಗಳನ್ನು ತಾತ್ಕಾಲಿಕವಾಗಿ ಮರೆತುಬಿಡುತ್ತಾನೆ. ಸುಂದರವಾದ ಪುಸ್ತಕಗಳು ಮನಸ್ಸಿಗೆ ಶಾಂತಿ ನೀಡುವ ಶಕ್ತಿ ಹೊಂದಿವೆ. ಓದು ಹೊಸ ಹೊಸ ಆಲೋಚನೆಗಳನ್ನು ಮೂಡಿಸಿ, ಚಿಂತನೆಗೆ ಹೊಸ ದಿಕ್ಕು ನೀಡುತ್ತದೆ. ನಾವೇನಾದರೂ ಹೊಸದನ್ನು ಕಲ್ಪಿಸಲು, ರಚಿಸಲು ಅಥವಾ ಸುಧಾರಿಸಲು ಪುಸ್ತಕಗಳು ದೊಡ್ಡ ಪ್ರೇರಣೆ ಆಗುತ್ತವೆ.

ಉಪಸಂಹಾರ:
ಪುಸ್ತಕಗಳು ನಮಗೆ ಬದುಕನ್ನು ಅರ್ಥಮಾಡಿಕೊಳ್ಳಲು ನೆರವಾಗುವ ದಿವ್ಯ ದೀಪಗಳಾಗಿವೆ. ಅವುಗಳನ್ನು ಓದುವುದರಿಂದ ಬುದ್ಧಿಮಟ್ಟ ಹೆಚ್ಚಾಗುತ್ತದೆ, ಜ್ಞಾನ ವೃದ್ಧಿಸುತ್ತದೆ, ಮತ್ತು ಉತ್ತಮ ವ್ಯಕ್ತಿತ್ವವನ್ನು ಬೆಳಸಲು ಸಹಾಯ ಮಾಡುತ್ತದೆ. ಅರ್ಥಪೂರ್ಣ ಜೀವನಕ್ಕಾಗಿ ಪ್ರತಿಯೊಬ್ಬರೂ ಪುಸ್ತಕಗಳನ್ನು ಓದಬೇಕು, ಪುಸ್ತಕ ಪ್ರೇಮಿಗಳಾಗಬೇಕು.

ವಿದ್ಯಾರ್ಥಿ ಜೀವನದ ಮಹತ್ವ

ಪೀಠಿಕೆ:

ವಿದ್ಯಾರ್ಥಿ ಜೀವನವು ಜ್ಞಾನಾರ್ಜನೆ, ಶಿಸ್ತು, ಪರಿಶ್ರಮ ಮತ್ತು ಒಳ್ಳೆಯ ಗುಣಗಳ ಬೆಳವಣಿಗೆಯ ಹಂತವಾಗಿದೆ. ಈ ಹಂತದಲ್ಲಿ ಹೊಂದುವ ನಡವಳಿಕೆ ಭವಿಷ್ಯದ ಯಶಸ್ಸಿಗೆ ಮಾರ್ಗದರ್ಶಿಯಾಗುತ್ತದೆ. ಒಬ್ಬ ವಿದ್ಯಾರ್ಥಿ ಶ್ರದ್ಧೆಯಿಂದ ಓದುವುದು, ಶಿಸ್ತಿನಿಂದ ನಡೆದುಕೊಳ್ಳುವುದು, ಮತ್ತು ಸಜ್ಜನ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಅಗತ್ಯ.

ವಿಷಯ ವಿವರಣೆ:

ವಿದ್ಯಾರ್ಥಿ ಜೀವನದಲ್ಲಿ ಅಧ್ಯಯನವೇ ವಿದ್ಯಾರ್ಥಿಯ ಪ್ರಾಥಮಿಕ ಕರ್ತವ್ಯವಾಗಿದೆ . ಕೇವಲ ಪಾಠಶಾಲೆಯ ಪಾಠ ಮಾತ್ರವಲ್ಲದೆ ಹೊಸ ವಿಷಯಗಳನ್ನು ತಿಳಿಯುವ ಆಸಕ್ತಿ, ಪ್ರಶ್ನಿಸುವ ಮನೋಭಾವ, ಮತ್ತು ವಿಚಾರಶೀಲತೆಯನ್ನು ಬೆಳೆಸಿಕೊಳ್ಳಬೇಕು. ನಿರಂತರ ಓದು ಮತ್ತು ಪರಿಶ್ರಮ ಯಶಸ್ಸಿನ ದಾರಿ ತೋರುತ್ತವೆ.ಈ ಹಂತದಲ್ಲಿ ಕಲಿತ ಪಾಠಗಳು ಮುಂದಿನ ಜೀವನಕ್ಕೆ ಪೂರಕವಾಗಿದೆ.

ಜೀವನದಲ್ಲಿ ಶಿಸ್ತು ಕೂಡಾ ಬಹಳ ಮುಖ್ಯವಾದುದು.ಶಿಸ್ತು ಇಲ್ಲದ ವಿದ್ಯಾರ್ಥಿ ಯಶಸ್ಸಿನ ಹಾದಿಯಲ್ಲಿ ಸಾಗಲು ಅಸಾಧ್ಯ. ಸಮಯಪಾಲನೆ, ಕರ್ತವ್ಯನಿಷ್ಠೆ, ಮತ್ತು ಶಿಸ್ತು ಬದ್ಧ ಜೀವನವು ವಿದ್ಯಾರ್ಥಿ ಜೀವನದಲ್ಲಿ ಅತ್ಯಗತ್ಯ. ಇದು ಮುಂದೆ ಉತ್ಕೃಷ್ಟ ಸಾಧನೆಗೆ ದಾರಿ ಮಾಡಿಕೊಡುತ್ತದೆ.

ನೈತಿಕ ಮೌಲ್ಯಗಳು ಮತ್ತು ಒಳ್ಳೆಯ ಸಂಸ್ಕಾರವು ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ವಿದ್ಯಾರ್ಥಿಯು ಪ್ರಾಮಾಣಿಕತೆ, ಶ್ರದ್ಧೆ, ಗೌರವ, ಸಹಾನುಭೂತಿ, ಮತ್ತು ಪರಿಶ್ರಮದಂತಹ ಮೌಲ್ಯಗಳನ್ನು ಬಾಲ್ಯದಲ್ಲೇ ಅಳವಡಿಸಿಕೊಳ್ಳಬೇಕು. ಈ ಗುಣಗಳು ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡುತ್ತದೆ. 

ಶಾರೀರಿಕ ಮತ್ತು ಮಾನಸಿಕ ಆರೋಗ್ಯವೂ ವಿದ್ಯಾರ್ಥಿ ಜೀವನದ ಯಶಸ್ವಿಗೆ ಅತ್ಯಗತ್ಯ.ಆರೋಗ್ಯವಿಲ್ಲದೆ ಯಾವುದೇ ಸಾಧನೆಯೂ ಸಾಧ್ಯವಿಲ್ಲ. ಸಮತೋಲನಯುತವಾದ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಕ್ರೀಡೆ, ಮತ್ತು ಧ್ಯಾನ ವಿದ್ಯಾರ್ಥಿಯು ಒಳ್ಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.ಒಳ್ಳೆಯ ಆಲೋಚನೆಗಳು ವಿದ್ಯಾರ್ಥಿಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ.

ಒಬ್ಬ ವಿದ್ಯಾರ್ಥಿಯು ಆತ್ಮವಿಶ್ವಾಸ ಹೊಂದಿರಬೇಕು ಹಾಗೂ ನಿರ್ದಿಷ್ಟವಾದ ಗುರಿಯನ್ನೂ ಸ್ಪಷ್ಟವಾಗಿ ತಿಳಿದಿರಬೇಕು. ಇದು ವಿದ್ಯಾರ್ಥಿಯ ಯಶಸ್ಸಿಗೆ ದಾರಿಯಾಗಿರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಗುರಿಯನ್ನು ಹೊಂದಿ ಅದನ್ನು ಸಾಧಿಸಲು ಶ್ರಮಿಸಿದಾಗ ಕನಸು ನನಸಾಗುತ್ತದೆ.

ವಿದ್ಯಾರ್ಥಿಯು ಒಳ್ಳೆಯ ಸ್ನೇಹಿತರನ್ನು ಆರಿಸಿಕೊಳ್ಳಬೇಕು. ನಕಾರಾತ್ಮಕವಾದ ಚಟುವಟಿಕೆಗಳಿಂದ ದೂರವಿದ್ದು, ಒಳ್ಳೆಯ ಸ್ನೇಹಿತರೊಂದಿಗೆ ಗೆಳತನವನ್ನು ಬೆಳೆಸುವುದು ಈ ಸಮಯದಲ್ಲಿ ಅತ್ಯವಶ್ಯಕ. 

ಉಪಸಂಹಾರ:

ವಿದ್ಯಾರ್ಥಿ ಜೀವನವು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣ ಹಂತ. ಈ ಹಂತದಲ್ಲಿ ವ್ಯಕ್ತಿ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾನೆ, ಶಿಸ್ತನ್ನು ಅಳವಡಿಸಿಕೊಳ್ಳುತ್ತಾನೆ. ಭವಿಷ್ಯಕ್ಕೆ ಬಲವಾದ ಅಡಿಪಾಯುವನ್ನು ಹಾಕಿಕೊಳ್ಳುತ್ತಾನೆ. ವಿದ್ಯಾರ್ಥಿ ದಿನಗಳು ಸರಿಯಾದ ಮಾರ್ಗದಲ್ಲಿ ಸಾಗಿದರೆ,ಮುಂದಿನ ಜೀವನದಲ್ಲಿ ಯಶಸ್ಸು ಖಂಡಿತವಾಗಿಯೂ ದೊರಕುತ್ತದೆ.


ನಾಚಿಕೆ ಮುಳ್ಳು

 ಮುಟ್ಟಿದರೆ ಮುನಿ ಸಸ್ಯದ ಎಲ್ಲಾ ಭಾಗವೂ ಮನೆ ಔಷಧಿ ತಯಾರಿಕೆಗೆ ಬಹಳ ಉಪಯುಕ್ತವಾದುದು.ಆಂಗ್ಲ ಭಾಷೆಯಲ್ಲಿ “ಟಚ್‌ ಮಿ ನಾಟ್‌- ಶೇಮ್‌ ಪ್ಲಾಂಟ್‌’ ಎಂದು ಕರೆಯುತ್ತಾರೆ.


  1. ಅಧಿಕ ರಕ್ತಸ್ರಾವ:

    • ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವವಾಗುತ್ತಿದ್ದರೆ, ನಾಚಿಕೆಮುಳ್ಳಿನ  ಗಿಡ ,ಎಲೆ ಹಾಗೂ ಬೇರುಗಳನ್ನು ಜಜ್ಜಿ ಕಷಾಯ ಮಾಡಿ  ಬಳಸಬಹುದು.
  2. ಅನಿಯಮಿತ ಮುಟ್ಟಿನ ಸಮಸ್ಯೆ:

    • ಈ ಗಿಡದ ಕಷಾಯವನ್ನು ಸೇವನೆ ಮಾಡುವುದು ಅನಿಯಮಿತ ಮುಟ್ಟಿನ ಸಮಸ್ಯೆಯನ್ನು ಹತೋಟಿ ಮಾಡುತ್ತದೆ.
  3. ಬಾವುಗಳಿಗೆ:

    • ಮಂಗನ ಬಾವು ಮತ್ತುದೇಹದ ಯಾವುದೇ ಭಾಗದಲ್ಲಿ ಇತರ ಬಾವುಗಳಾಗಿದ್ದರೆ, ನಾಚಿಕೆಮುಳ್ಳಿನ ಎಲೆಗಳನ್ನು ಅರೆದು ರಸವನ್ನು ಹಚ್ಚುವುದು ಪರಿಣಾಮಕಾರಿ.
    • ನಾಚಿಕೆಮುಳ್ಳಿನ ಎಲೆಗಳನ್ನು ಅರೆದು ಚೇಳು ಚುಚ್ಚಿದ ಸ್ಥಳಕ್ಕೆ ಲೇಪಿಸುತ್ತಾ, ಅದರ ಬೇರನ್ನು ಜಗಿದು ನುಂಗುವುದರಿಂದ ನೋವು ಮತ್ತು ಬಾವು ತ್ವರಿತವಾಗಿ ಕಡಿಮೆಯಾಗುತ್ತದೆ.
  4. ಗಾಯಗಳಿಗೆ:

    • ಗಾಯಗಳ ಮೇಲೆ ರಕ್ತಸ್ರಾವವಾಗುತ್ತಿದ್ದರೆ, ಎಲೆಗಳನ್ನು ಜಜ್ಜಿ ರಸ ಅಥವಾ ಪೇಸ್ಟ್ ಮಾಡಿ ಹಚ್ಚಿದರೆ ಗಾಯಗಳು ಬೇಗ ಗುಣವಾಗುತ್ತವೆ.
  5. ಕಜ್ಜಿ ಮತ್ತು ತುರಿಕೆಗಳಿಗೆ:

    • ತುರಿಕೆ ಮತ್ತು ಕಜ್ಜಿಗೆ ನಾಚಿಕೆಮುಳ್ಳಿನ ಎಲೆಗಳ ರಸ ಅಥವಾ ಎಣ್ಣೆ ಹಚ್ಚುವುದು ತ್ವರಿತ ಪರಿಹಾರ ಒದಗಿಸುತ್ತದೆ.
  6. ಬಾಯಿ ದುರ್ಗಂಧ ಮತ್ತು ಹಲ್ಲು ನೋವಿಗೆ:

    • ನಾಚಿಕೆಮುಳ್ಳಿನ ಗಿಡದಿಂದ ಕಷಾಯ ತಯಾರಿಸಿ ಬಾಯಿಯಲ್ಲಿ ಮುಕ್ಕಳಿಸಿದರೆ, ದುರ್ಗಂಧ ಮತ್ತು ಹಲ್ಲು ನೋವು ಕಡಿಮೆಯಾಗುತ್ತದೆ.
    • ಒಂದು ಒಳ ಮುಷ್ಠಿ ಯಷ್ಟು ಮುಟ್ಟಿದರೆ ಮುನಿ ಎಲೆ ನಾಲ್ಕು ಕಾಳುಮೆಣಸು ಚಿಟಿಕೆಯಷ್ಟು ಉಪ್ಪು ಸೇರಿಸಿ ಚೆನ್ನಾಗಿ ಅರೆಯಬೇಕು.ಉಂಡೆ ಮಾಡಿ ನೋವು ಇರುವ ಹಲ್ಲಿಗೆ ಇಟ್ಟು ಗಟ್ಟಿಯಾಗಿ ಕಚ್ಚಿ ಜೊಲ್ಲು ರಸ ಹೊರ ಹಾಕುತ್ತಾ ಇರಿ. ಅರ್ಧ ಗಂಟೆಗೆ ಗುಣವಾಗುತ್ತದೆ.ಹಲ್ಲು ಹುಳುಕು ಇದ್ದರೂ ನೋವು ಕಡಿಮೆಯಾಗುತ್ತದೆ.. 
  7. ಮೂಲವ್ಯಾಧಿಗೆ:

    • ನಾಚಿಕೆಮುಳ್ಳಿನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ, ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ನೀರಿಗೆ ಬೆರೆಸಿ ಕುಡಿದರೆ ಅಥವಾ ಗಿಡದ ಕಷಾಯ ಮಾಡಿ ಕುಡಿದರೆ ಮೂಲವ್ಯಾಧಿ ಸಮಸ್ಯೆ ನಿಯಂತ್ರಣಗೊಳ್ಳುತ್ತದೆ.
    • ತಲೆಯ ನೋವು ಮತ್ತು ಒತ್ತಡ ನಿರ್ವಹಣೆ:

      • ನಾಚಿಕೆಮುಳ್ಳಿನ ಎಲೆಗಳ ಚೂರ್ಣ ಅಥವಾ ಕಷಾಯ ಮಿತ ಪ್ರಮಾಣದಲ್ಲಿ ಸೇವಿಸಿದರೆ ತಲೆಯ ನೋವು ಮತ್ತು ಒತ್ತಡವನ್ನು ಕಡಿಮೆ ಮಾಡುತ್ತದೆ.
      • ಎಲುಬುಗಳ ನೋವು ಪರಿಹಾರಕ್ಕೆ:
      • ಬಿದ್ದು ಕೈಕಾಲುಗಳ ಎಲುಬುಗಳಿಗೆ ಘಾಸಿಯಾಗಿದ್ದರೆ ಸಮೂಲಾಗ್ರ ನಾಚಿಕೆ ಗಿಡ ಮತ್ತು ಸಾಸಿವೆ ಸೇರಿಸಿ ತೈಲ ತಯಾರಿಸಿ ಹಚ್ಚುವುದರಿಂದ ಶೀಘ್ರ ಗುಣವಾಗುತ್ತದೆ.
      • ನಾಚಿಕೆ ಮುಳ್ಳಿನ  ಭಾಗಗಳನ್ನು ನಿಂಬೆರಸದಲ್ಲಿ ಅರೆದು ಬಿಸಿಮಾಡಿ ಲೇಪಿಸಬೇಕು.
      • ಬಹುಮೂತ್ರ ಮತ್ತು ಉರಿಮೂತ್ರ ಸಮಸ್ಯೆಗೆ :
      • ಪದೇ ಪದೇ ಮೂತ್ರ ವಿಸರ್ಜನೆ  ಹಾಗೂ ಉರಿಮೂತ್ರ  ಸಮಸ್ಯೆ ಇದ್ದರೆ ಅಂಥವರು  ಇದರ ಕಷಾಯ ಸೇವಿಸಬಹುದು.

ಕಷಾಯ ಮಾಡುವ ವಿಧಾನ :

ನಾಚಿಕೆ ಮುಳ್ಳಿನ 2 ಗಿಡಗಳನ್ನು ತಂದು ಕಾಂಡ ,ಎಲೆ ಹಾಗೂ ಬೇರನ್ನು ಚೆನ್ನಾಗಿ ತೊಳೆದು ಹೂಗಳನ್ನು ತೆಗೆದು ಹಾಕಿ ಜಜ್ಜಿ    ಎರಡು ಗ್ಲಾಸ್ ಕುದಿಯುವ ನೀರಿಗೆ ಹಾಕಿ ಅರ್ಧ ಚಮಚ ಜೀರಿಗೆಯನ್ನು ಸೇರಿಸಿ ಕುದಿಸಿ ಅದು ಒಂದು ಗ್ಲಾಸಿಗೆ ಬತ್ತಿದಾಗ ಅದನ್ನು ಶೋಧಿಸಿ  ದಿನಕ್ಕೆ ಎರಡು ಸಲ ಅರ್ಧರ್ಧ ಗ್ಲಾಸಿನಂತೆ ಕುಡಿಯಿರಿ

ವಿಸೂ : ಈ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.ಇವುಗಳು ಶರೀರ ಪ್ರಕೃತಿ ,ವಯಸ್ಸು ಹಾಗೂ ಆರೋಗ್ಯಕ್ಕೆ ಸಂಬಂಧಪಟ್ಟಿರುತ್ತದೆ.

ಉರಿ ಮೂತ್ರದ ಲಕ್ಷಣಗಳು ಹಾಗೂ ಪರಿಹಾರಗಳು

ಉರಿ ಮೂತ್ರದ ಲಕ್ಷಣಗಳು:

ಪದೇ ಪದೇ ಮೂತ್ರ ವಿಸರ್ಜನೆ

ಮೂತ್ರ ವಿಸರ್ಜನೆಯಲ್ಲಿ  ಉರಿ ಮತ್ತು ನೋವು

ಕಿಬ್ಬೊಟ್ಟೆಯಲ್ಲಿ ನೋವು

ಜ್ವರ

ಮೂತ್ರ ವಿಸರ್ಜನೆಯಲ್ಲಿ ರಕ್ತ ಹೋಗುವ ಸಾಧ್ಯತೆ.

 ಮನೆ ಮದ್ದುಗಳಿಂದ ಪರಿಹಾರಗಳು:

1/2 ಲೀ ಬೆಚ್ಚಗಿನ ನೀರಿಗೆ 1/2 ಹೋಳು ಲಿಂಬು ರಸ ಸೇರಿಸಿ  ದಿನಕ್ಕೆ 2 ಸಲ ನಿಧಾನವಾಗಿ ಕುಡಿಯಿರಿ  ,  2--3 ದಿವಸದ ಸೇವನೆಯಿಂದ ಪರಿಹಾರವಾಗುತ್ತದೆ,

ಪ್ರತಿದಿನ ಒಂದರಿಂದ ಎರಡು ಲೀಟರ್ ನಷ್ಟು ಬಾರ್ಲಿ ನೀರು ಕುಡಿಯುವುದರಿಂದ ಕಡಿಮೆಯಾಗುತ್ತದೆ

ಪ್ರತಿ ದಿನ ಒಂದು ಬೌಲ್ ಪ್ರಮಾಣದಲ್ಲಿ ಅನಾನಸು ಹಣ್ಣನ್ನು ಸೇವಿಸುವುದರಿಂದ ಉರಿ ಮೂತ್ರ ಮಾಯವಾಗುತ್ತದೆ

ಅಲೋವೇರ ಜಲ್ ಮತ್ತು ಕಲ್ಲು ಸಕ್ಕರೆ ಮಿಕ್ಸ್ ಮಾಡಿ ತಿನ್ನಬೇಕು

ಕೊನೆಯ ಸಲ ಅಕ್ಕಿತೊಳೆದ ನೀರಿಗೆ ಸ್ವಲ್ಪ ಕಲ್ಲುಸಕ್ಕರೆಪುಡಿ ಹಾಕಿ ಒಂದು ಲೋಟದಷ್ಟು ಕುಡಿದರೆ ವಾಸಿ ಆಗುತ್ತದೆ.

ಬೂದು ಕುಂಬಳಕಾಯಿ ಜ್ಯೂಸ್. ಬೆಳಿಗ್ಗೆ ಖಾಲಿ ಹೊಟ್ಟೆಗೆ  ಕುಡಿಯಿರಿ

ಜೀರಿಗೆ ಹಾಗೂ ಕೊತ್ತಂಬರಿ ಹುರಿದು ಪುಡಿ ಮಾಡಿ ಕಷಾಯವನ್ನು ಮಾಡಿ  ಸ್ವಲ್ಪ ಬೆಲ್ಲ ಹಾಕಿ ಸೇವಿಸಿದರೆ ಒಳ್ಳೆಯದು

ಒಂದು ಚಮಚ ಕೊತ್ತಂಬರಿ ಮತ್ತು ಒಂದು ಚಮಚ ಜೀರಿಗೆಯನ್ನು ಹಾಗೆಯೇ ಪುಡಿ ಮಾಡಿ ಒಂದು ಗ್ಲಾಸ್ ನೀರಿಗೆ ಹಾಕಿ,ನಂತರ ಕೆಂಪು ಕಲ್ಲು ಸಕ್ಕರೆಯನ್ನು ಸೇರಿಸಿ . ಇದನ್ನು ಒಂದು ಗಂಟೆಯ ನಂತರ ಸೋಸಿ ಕುಡಿಯಿರಿ.

ಒಂದು ಚಮಚದಷ್ಟು ಕೊತ್ತಂಬರಿ ಬೀಜದ ಪುಡಿಯನ್ನು ಒಂದು ಗ್ಲಾಸ್ ತಣ್ಣಗಿನ ನೀರಿಗೆ ಹಾಕಿ ರಾತ್ರಿ ಇಡಿ ಇಟ್ಟು ,ಬೆಳಿಗ್ಗೆ ಸಣ್ಣ ತುಂಡು ಶುಂಠಿಯನ್ನು ಜಜ್ಜಿ ಸೇರಿಸಿ ಸೋಸಿ ಕುಡಿಯುವುದರಿಂದ ಉರಿಮೂತ್ರ ಸಮಸ್ಯೆಯು ವಾಸಿಯಾಗುತ್ತದೆ

ಬಾಳೆದಿಂಡಿನ ತಿರುಳಿನ ರಸ ತೆಗೆದು ಜ್ಯೂಸ್ ಮಾಡಿಕೊಂಡು ಕುಡಿಯುವುದರಿಂದಲೂ ಪರಿಹಾರವಾಗುತ್ತದೆ.ಇದು ಕಿಡ್ನಿ ಕಲ್ಲುಗಳು ಹಾಗೂ ಮೂತ್ರನಾಳದ ಸೋಂಕುಗಳಿಗೂ ಔಷಧಿಯಾಗಿದೆ

ದಿನಾ ಒಂದು ಎಳೆನೀರು ಕುಡಿದರೂ ಪರಿಹಾರವಾಗುತ್ತದೆ

ನೆಗ್ಗಿನ ಮುಳ್ಳನ್ನು ಕುಟ್ಟಿ ಪುಡಿ ಮಾಡಿ ಬಿಸಿ ನೀರಿಗೆ ಹಾಕಿ ಬೆಳಿಗ್ಗೆ ಕಲ್ಲು ಸಕ್ಕರೆ ಸೇರಿಸಿ ಕುಡಿದರೆ ನಿವಾರಣೆಯಾಗುತ್ತದೆ

ಒಂದು ಲೋಟ ಎಳೆನೀರಿಗೆ ಸ್ವಲ್ಪ ಬೆಲ್ಲ ಮತ್ತು ಸ್ವಲ್ಪ ಕೊತ್ತಂಬರಿ ಬೀಜದ ಚೂರ್ಣವನ್ನು ಸೇರಿಸಿ ದಿನಕ್ಕೆ ಎರಡು ಸಲ ಸೇವಿಸಿದರೆ ಉರಿ ಮೂತ್ರ ಕಡಿಮೆಯಾಗುತ್ತದೆ

ಅತ್ತಿ ಮರದ ಕೆತ್ತೆಯನ್ನು ಕಷಾಯ ಮಾಡಿ ಕುಡಿದರೂ ಉರಿ ಮೂತ್ರ ವಾಸಿಯಾಗುತ್ತದೆ.

ಕೊತ್ತಂಬರಿ ಸೊಪ್ಪಿನ ರಸಕ್ಕೆ ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಉರಿಮೂತ್ರ ಗುಣವಾಗುವುದು.

 ಗಮನಿಸಿ:ಶರೀರ ಪ್ರಕೃತಿಯನ್ನು ನೋಡಿಕೊಂಡು ವೈದ್ಯರ ಸಲಹೆ ಮೇರೆಗೆ ಸೇವನೆ ಮಾಡಿರಿ.