ಬಿಕ್ಕಳಿಕೆಯ ಕಾರಣಗಳು:

ಅತಿಯಾಗಿ ಅಥವಾ ಬೇಗನೆ ತಿನ್ನುವುದು

ಕಾರ್ಬೊನೇಟೆಡ್ ಪಾನೀಯಗಳು

ಮಸಾಲೆಯುಕ್ತ ಆಹಾರ

ಒತ್ತಡ ಮತ್ತು ಹರ್ಷ

ಆಲ್ಕೋಹಾಲ್ ಕುಡಿಯುವುದು

ತಾಪಮಾನ ಬದಲಾವಣೆ

ನಿರಂತರ ಬಿಕ್ಕಳಿಕೆಯನ್ನು ನಿಲ್ಲಿಸಲು ಪರಿಹಾರಗಳು:

ಉಸಿರಾಟದ ವ್ಯಾಯಾಮಗಳು:

5 ಎಣಿಕೆಗಳಿಗೆ ಉಸಿರನ್ನು ತೆಗೆದುಕೊಳ್ಳಿ, 5 ಎಣಿಕೆಗಳಿಗೆ ಬಿಡಿ

ಉಸಿರನ್ನು 10-20 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ

ಕಾಗದದ ಚೀಲದಲ್ಲಿ ಉಸಿರಾಡಿ

ಮೃದುವಾದ ಒತ್ತಡ:

ಮೂಗಿನ ಸೇತುವೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ

ಕೊರಳ ಹಾಗೂ ಭುಜದ ಬದಿಗಳಲ್ಲಿ ಮಸಾಜ್ ಮಾಡಿ

ಬೆನ್ನುಮೂಳೆ ಮೇಲೆ ಯಾರಾದರೂ ಸ್ವಲ್ಪ ಸಮಯ ತಟ್ಟಬೇಕು

ಕಿವಿಗಳನ್ನು ಪ್ಲಗ್ ಮಾಡುವುದು:

ಬೆರಳುಗಳಿಂದ ಕಿವಿ ಕಾಲುವೆಗಳನ್ನು ಪ್ಲಗ್ ಮಾಡಿ

ಜೇನುತುಪ್ಪ:

ಬಿಕ್ಕಳಿಕೆಯನ್ನು ಕಡಿಮೆ ಮಾಡಲು ಜೇನುತುಪ್ಪ ಉಪಯೋಗಿಸಬಹುದು.

ಜೇನುತುಪ್ಪವನ್ನು ನೇರವಾಗಿ ಬಾಯಿಗೆ ಹಾಕಿ ಸ್ವಲ್ಪ ಹೊತ್ತು ನಂತರ ನುಂಗಿ.ಇಲ್ಲವಾದರೆ, ಅರ್ಧ ಗ್ಲಾಸ್ ನೀರಿನಲ್ಲಿ ಜೇನುತುಪ್ಪವನ್ನು ಕರಗಿಸಿ ಕುಡಿಯಿರಿ.

ಜೇನುತುಪ್ಪವು ವಾಗಸ್ ನರವನ್ನು ಶಮನಗೊಳಿಸಿ ಬಿಕ್ಕಳಿಕೆಯನ್ನು ತಕ್ಷಣ ನಿವಾರಿಸುತ್ತದೆ.

ವಿನೆಗರ್:

ಬಿಕ್ಕಳಿಕೆ ನಿವಾರಿಸಲು ವಿನೆಗರ್ ಪರಿಣಾಮಕಾರಿಯಾಗಿದೆ.

ವಿನೆಗರ್ ಡ್ರಾಪ್‌ಗಳನ್ನು ನಾಲಿಗೆ ಮೇಲೆ ಹಾಕಿ.ಬಲವಾದ ಚವಿಯ ಕಾರಣ ನೇರವಾಗಿ ಸೇವಿಸಲು ಕಷ್ಟವಾದರೂ ಇದು ಪರಿಣಾಮಕಾರಿ ಪರಿಹಾರ.

ನಿಂಬೆಹಣ್ಣು:

ನಿಂಬೆಹಣ್ಣಿನ ಹುಳಿ ಅಂಶವು ಬಿಕ್ಕಳಿಕೆಯನ್ನು ತಕ್ಷಣ ಕಡಿಮೆ ಮಾಡುತ್ತದೆ.

ನಿಂಬೆಯನ್ನು ಕತ್ತರಿಸಿ ಸ್ವಲ್ಪ ಉಪ್ಪನ್ನು ಹಾಕಿ ಸೇವಿಸಬಹುದು.

ಐಸ್ ವಾಟರ್:

ಐಸ್ ವಾಟರ್ ಅನ್ನು ಸಿಪ್ ಮಾಡುವ ಮೂಲಕ ತಲೆಕೆಳಗಾಗಿ ಕುಡಿಯಿರಿ ಅಥವಾ ಗಾರ್ಗಲ್ ಮಾಡುವ ಮೂಲಕ ಬಿಕ್ಕಳಿಕೆಯನ್ನು ನಿಲ್ಲಿಸಬಹುದು.

ತಣ್ಣೀರು ಗಾರ್ಗಲ್ ಮಾಡುವುದರಿಂದ ಗಂಟಲು ಮತ್ತು ಡಯಾಫ್ರಾಮ್ ತಂಪಾಗುತ್ತದೆ.

ನಾಲಿಗೆಯನ್ನು ಎಳೆಯುವುದು:

ನಾಲಿಗೆಯನ್ನು ಮುಚ್ಚಿ ಹಿಡಿದಿಟ್ಟುಕೊಳ್ಳುವುದು ಬಿಕ್ಕಳಿಕೆಯನ್ನು ತಡೆಯಲು ಸಹಾಯಕವಾಗುತ್ತದೆ.

ಇದು ಗಂಟಲಿನ ಸ್ನಾಯು ಮತ್ತು ನರಗಳನ್ನು ಉತ್ತೇಜಿಸುತ್ತದೆ.

ಉಸಿರನ್ನು ಬಿಗಿ ಹಿಡಿಯುವುದು:

ಹತ್ತು ಸೆಕೆಂಡುಗಳ ಕಾಲ ಉಸಿರನ್ನು ಹಿಡಿದು, ನಂತರ ಬಿಡಿ.

ಈ ಪ್ರಕ್ರಿಯೆಯನ್ನು 3-4 ಬಾರಿ ಪುನರಾವರ್ತಿಸಿರಿ.

ಕೈಗಳಿಂದ ಮೂಗನ್ನು ಮುಚ್ಚುವುದು:

ಮೂಗನ್ನು ಕೈಗಳಿಂದ ಮುಚ್ಚಿ ಬಿಕ್ಕಳಿಕೆಯನ್ನು ತಡೆಯಬಹುದು.

ಇದು ಶ್ವಾಸಕೋಶದಲ್ಲಿ ಕಾರ್ಬನ್ ಡೈಆಕ್ಸೈಡ್ ಮಟ್ಟವನ್ನು ಹೆಚ್ಚಿಸಿ, ಬಿಕ್ಕಳಿಕೆಯನ್ನು ನಿಲ್ಲಿಸುತ್ತದೆ.

ಈ ಪರಿಹಾರಗಳು ನಿಮ್ಮ ಡಯಾಫ್ರಾಮ್ ಸ್ನಾಯುಗಳ ಒತ್ತಡವನ್ನು ಕಡಿಮೆ ಮಾಡಿ ಬಿಕ್ಕಳಿಕೆಯನ್ನು ತಕ್ಷಣವೇ ನಿಲ್ಲಿಸುತ್ತವೆ.

ರಾಗಿಯ ಔಷಧಿಯ ಗುಣಗಳು ಹಾಗೂ ಪ್ರಯೋಜನಗಳು

 

ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ  ರಾಗಿಯಿಂದ ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ, ರಾಗಿ ಅಂಬಲಿ ಹೀಗೆ ನಾನಾ ಬಗೆಯ ತಿಂಡಿ ತಿನಿಸುಗಳನ್ನು ತಯಾರಿಸಲಾಗುತ್ತದೆ.  ರಾಗಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ಲಾಭಗಳಿವೆ.  

ರಾಗಿಯಿಂದ ಆರೋಗ್ಯಕ್ಕಾಗುವ ಪ್ರಯೋಜನಗಳು


1.ಮಲಬದ್ಧತೆ ಹಾಗೂ ಜೀರ್ಣಕ್ರಿಯೆ ಸುಧಾರಣೆ :

ರಾಗಿಯು ಹಸಿರು ಧಾನ್ಯಗಳಿಗಿಂತ ಹೆಚ್ಚು ಫೈಬರ್ ಹೊಂದಿದ್ದು, ಮಲಬದ್ಧತೆ ತಡೆಯಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಸೊಪ್ಪಿನ ಜೊತೆಗೆ ರಾಗಿ ಮುದ್ದೆ ತಿನ್ನುವುದರಿಂದ ಮಲಬದ್ಧತೆ ಕಡಿಮೆಯಾಗುತ್ತದೆ.


2. ಶೀತದಿಂದ ಮುಕ್ತಿ :

ರಾಗಿ ಹಿಟ್ಟು ಅರಸಿನಹುಡಿ ನೀಲಗಿರಿಯಲೆ ರಕೆಂಡದ ಮೇಲೆ ಹಾಕಿ ಐದು 10 ನಿಮಿಷಗಳ ಕಾಲ ಅದರಿಂದ ಬರುವ ಹೊಗೆ ಸೇವಿಸುವುದರಿಂದ ಶೀತ ಹಾಗು ನೆಗಡಿ ನಿವಾರಣೆಯಾಗುತ್ತದೆ

 3.ಪಿತ್ತ ನಿವಾರಣೆ:

ರಾಗಿಯನ್ನು ನೆನೆಸಿಹಾಕಿ ಅದು ಮುದ್ದೆ ಇರುವಾಗಲೇ ಸ್ವಲ್ಪ ಸ್ವಲ್ಪ ಬಾಣಲೆಯಲ್ಲಿ ಹಾಕಿ ಹುರಿದರೆ ಅದು ಹರಳಾಗುತ್ತದೆ ಈ ಹರಳನ್ನು ಬಿಸಿ ಮಾಡಿಕೊಂಡು ಅದಕ್ಕೆ ತೆಂಗಿನಕಾಯಿ ಮತ್ತು ಬೆಲ್ಲ ಹಾಕಿ ತಿಂದರೆ ಪಿತ್ತ ನಿವಾರಣೆಯಾಗುತ್ತದೆ ಹಾಗೂ ದೇಹ ಬೇಗ ತಂಪಾಗುತ್ತದೆ

ಹುಣಸೆಹಣ್ಣು ಕಿವುಚಿದ ನೀರಿಗೆ ಬೆಲ್ಲದ ಪುಡಿ ಹುರಿದ ರಾಗಿ ಹಿಟ್ಟನ್ನು ಹಾಕಿ ಕಲಸಿ ಬೆಳಿಗ್ಗೆ ಹಸಿದ ಹೊಟ್ಟೆಯಲ್ಲಿ ತಿಂದರೆ ಪಿತ್ತ ಕಡಿಮೆಯಾಗುತ್ತದೆ 

4. ದೇಹದ ತಂಪಿಗೆ :

ರಾಗಿ ಅಂಬಲಿಯನ್ನು ಪ್ರತಿದಿನ ಕುಡಿಯುವುದರಿಂದ ದೇಹ ತಂಪಾಗುತ್ತದೆ ಮತ್ತು ಪೋಷಕಾಂಶಗಳು ಪೂರೈಸುತ್ತವೆ.

ರಾಗಿ ಹಿಟ್ಟಿನಿಂದ ದೋಸೆ ಅಥವಾ ಇಡ್ಲಿ ತಯಾರಿಸಿ ತಿಂದರೂ  ದೇಹ ತಂಪಾಗಿರುತ್ತದೆ.

5.ಎದೆ ಹಾಲು ಹೆಚ್ಚಾಗಲು :

 ಹಾಲು ಕಡಿಮೆಯಿರುವ ಮಹಿಳೆಯರು ರಾಗಿಯೊಂದಿಗೆ ಬೆಲ್ಲ ಮತ್ತು ಕೊಬ್ಬರಿ ಸೇರಿಸಿ ತಿಂದರೆ ಸಹಾಯಕವಾಗುತ್ತದೆ.

6. ಮಧುಮೇಹ ನಿಯಂತ್ರಣ:

ಹೈ ಫೈಬರ್ ಮತ್ತು ಪಾಲಿಫಿನಾಲ್ ಇರುವ ಕಾರಣ, ರಾಗಿ ಟೈಪ್ 2 ಡಯಾಬಿಟೀಸನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ರಾಗಿ ತೆನೆ ಹುರಿದು ತಿನ್ನುವುದರಿಂದಲೂ ಮಧುಮೇಹ ಮತ್ತು ಉಬ್ಬಸದ ತೊಂದರೆ ಕಡಿಮೆಯಾಗುತ್ತದೆ.


7. ಮೂಳೆ ಮತ್ತು ಹಲ್ಲುಗಳ ಸದೃಢತೆ:

ರಾಗಿಯಲ್ಲಿ ಹೆಚ್ಚು ಕ್ಯಾಲ್ಶಿಯಂ ಇರುವುದರಿಂದ ಮೂಳೆ ಮತ್ತು ಹಲ್ಲುಗಳ ಸದೃಢತೆಗೆ ನೆರವಾಗುತ್ತದೆ. 

ಮಕ್ಕಳಿಗೆ ರಾಗಿ ಮಾಲ್ಟ್ ಕೊಡುವುದರಿಂದಲೂ ಮೂಳೆಗಳು ಗಟ್ಟಿಯಾಗುತ್ತದೆ  

ರಾಗಿ ಹಿಟ್ಟಿನಲ್ಲಿ ಸ್ವಲ್ಪ ಉಪ್ಪು ಹಾಕಿ ಹಲ್ಲು ಉಜ್ಜಿದರೆ ಗಟ್ಟಿತನ ಹೆಚ್ಚುತ್ತದೆ ಮತ್ತು ಹಲ್ಲು ಆರೋಗ್ಯಕರವಾಗುತ್ತವೆ.

8.ತೂಕ ಇಳಿಕೆ:

ರಾಗಿಯಲ್ಲಿ ತೂಕ ಇಳಿಕೆಗೆ ನೆರವಾಗುವ ಅತಿ ಕಡಿಮೆ ಫ್ಯಾಟ್ ಮತ್ತು ಟ್ರಿಪ್ಟೋಫ್ಯಾನ್ ಎಂಬ ಅಮೈನೋ ಆ್ಯಸಿಡ್ ಇರುವುದರಿಂದ ಹಸಿವು ನಿಯಂತ್ರಿಸುತ್ತದೆ.

9.ನಿದ್ರಾಹೀನತೆ ಮತ್ತು ಖಿನ್ನತೆ ನಿವಾರಣೆ:

ರಾಗಿಯಲ್ಲಿರುವ ಅಮೈನೋ ಆ್ಯಸಿಡ್‌ಗಳು ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಆತಂಕ, ಖಿನ್ನತೆ, ಮತ್ತು ನಿದ್ರಾಹೀನತೆ ನಿವಾರಣೆ ಮಾಡುತ್ತವೆ.

10. ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ:

ರಾಗಿಯಲ್ಲಿರುವ ಪೋಷಕಾಂಶಗಳು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯಾಘಾತದ ಅಪಾಯ ತಡೆಯುತ್ತವೆ.

11.ಕ್ಯಾನ್ಸರ್ ತಡೆಗಟ್ಟಲು:

ಕರುಳು ಮತ್ತು ಸ್ತನ ಕ್ಯಾನ್ಸರ್ ಅಪಾಯವನ್ನು ರಾಗಿ ಸೇವನೆಯಿಂದ ತಡೆಯಬಹುದು.

ಕರಿಮೆಣಸು ಔಷಧೀಯ ಗುಣಗಳು ಹಾಗೂ ಉಪಯೋಗಗಳು

 

ಕರಿಮೆಣಸು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳಲ್ಲಿ ಅನೇಕ ಅದ್ಭುತ ಔಷಧೀಯ ಗುಣಗಳು ಅಡಗಿವೆ. ನಮ್ಮ ಅಡುಗೆ ಮನೆಯಲ್ಲಿ ಸಿಗುವ ಈ ಆಹಾರ ಪದಾರ್ಥದಿಂದ ಒಳ್ಳೆಯ ಆರೋಗ್ಯ ಪಡೆಯಬಹುದು ಎನ್ನುತ್ತಾರೆ ವೈದ್ಯರು.

ರೋಗಗಳ ನಿವಾರಣೆಗೆ ಕರಿಮೆಣಸನ್ನು ಬಳಸುವ ವಿಧಾನಗಳು:

ರೋಗನಿರೋಧಕ ಶಕ್ತಿ ಹೆಚ್ಚಿಸಲು:

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಕರಿಮೆಣಸನ್ನು ಜಗಿದು ಬೆಚ್ಚಗಿನ ನೀರಿನೊಂದಿಗೆ  ಸೇವಿಸಬಹುದು.

ಕೀಲು ನೋವು ಮತ್ತು ಸಂಧಿವಾತಕ್ಕೆ:

ಹಾಲಿನಲ್ಲಿ ಚಿಟಿಕೆ ಕರಿಮೆಣಸಿನ ಪುಡಿ ಮತ್ತು ಸ್ವಲ್ಪ ಒಣ ಶುಂಠಿ ಸೇರಿಸಿ ಮಲಗುವ ಮುನ್ನ ಕುಡಿಯಿರಿ. ಇದರಿಂದ ಉರಿಯೂತ ಕಡಿಮೆಯಾಗುತ್ತದೆ.

ಕೋಬ್ಬು ಕಡಿಮೆ ಮಾಡಲು:

ಪ್ರತಿದಿನ ಆಹಾರದೊಂದಿಗೆ ಅಥವಾ ಮುಂಜಾನೆಯ ಟೀ/ಕಾಫಿಯೊಡನೆ ಕಾಲು ಚಮಚ ಕರಿಮೆಣಸಿನ ಪುಡಿಯನ್ನು ಸೇರಿಸಿ ಸೇವನೆ ಮಾಡಬಹುದು.

ವಿಷನಾಶಕ ಗುಣ:

ಒಂದು ಚಮಚ ಕರಿಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಸೇವಿಸುವುದು ದೇಹದ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ.

ಕೂದಲ ಆರೋಗ್ಯಕ್ಕಾಗಿ:

ಕರಿಮೆಣಸಿನ ಪುಡಿಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಕಾಯಿಸಿ ತಲೆಗೆ ಹಚ್ಚಿ ಕೆಲ ಹೊತ್ತಿನ ನಂತರ ತೊಳೆದುಕೊಳ್ಳಿ.

ಕ್ಯಾನ್ಸರ್ ತಡೆಗಟ್ಟಲು:

ಅರಿಶಿನ ಮತ್ತು ಕರಿಮೆಣಸನ್ನು ಬೆರೆಸಿ ನಿತ್ಯ ಸೇವನೆ ಮಾಡುವುದು ಕ್ಯಾನ್ಸರ್ ವಿರುದ್ಧ ಹೋರಾಡಲು ಸಹಕಾರಿಯಾಗಿದೆ.

ಹಾರ್ಮೋನು ಸಮತೋಲನಕ್ಕೆ:

ಕರಿಮೆಣಸನ್ನು ನೀರಿನಲ್ಲಿ ಅಥವಾ ಜೇನಿನಲ್ಲಿ  ಸೇವಿಸುವುದರಿಂದ ಹಾರ್ಮೋನು ಸಮತೋಲನಕ್ಕೆ ಸಹಾಯ ಮಾಡುತ್ತದೆ.

ನಿದ್ರೆ ಸುಧಾರಿಸಲು:

ಚಿಟಿಕೆ ಕರಿಮೆಣಸು ಮತ್ತು ಶುಂಠಿಯನ್ನು ಹಾಲಿನಲ್ಲಿ ಸೇರಿಸಿ ರಾತ್ರಿ ಸೇವಿಸಿದರೆ ನಿದ್ರೆ ಸುಧಾರಿಸುತ್ತದೆ.

ಮಾನಸಿಕ ಒತ್ತಡ ಕಡಿಮೆ ಮಾಡಲು:

ಒಂದು ಚಮಚ ತುಪ್ಪದಲ್ಲಿ ಸ್ವಲ್ಪ ಕರಿಮೆಣಸ ಪುಡಿಯುನ್ನು ಬೆರೆಸಿ ತಿನ್ನುವ ಮೂಲಕ ಒತ್ತಡ ಕಡಿಮೆ ಮಾಡಬಹುದು.

ಶೀತ ಕೆಮ್ಮುಕಫ ಶಮನಕ್ಕೆ: 

ಶೀತ, ಕೆಮ್ಮು ಮತ್ತು ಕಫ ನಿವಾರಣೆ  ಹಾಗೂ ಉಸಿರಾಟ ತೊಂದರೆ ಶಮನಕ್ಕೆ ಕರಿಮೆಣಸಿನಿಂದ ತಯಾರಿಸಿದ ಕಷಾಯ ಬಳಸಬಹುದು.

ಹೊಟ್ಟೆಯ ಸಮಸ್ಯೆಗಳಿಗೆ: 

ಹೊಟ್ಟೆನೋವು, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು, ನಿಂಬೆರಸಕ್ಕೆ ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಕುಡಿದರೆ ಪರಿಹಾರ ಸಿಗುತ್ತದೆ.

ಬೆನ್ನು ನೋವಿನ ಸಮಸ್ಯೆಗಳಿಗೆ ರಾಮಬಾಣ:

ಒಂದು ಕಪ್ ಬಿಸಿ ನೀರಿನಲ್ಲಿ ಒಂದು ಚಿಟಿಕೆ ಕರಿ ಮೆಣಸಿನ ಪುಡಿ ಮತ್ತು ಒಂದು ಚಮಚ ಬೆಲ್ಲದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ ಚಹದಂತೆ ಕುಡಿಯಿರಿ. ಇದು ಬೆನ್ನು ನೋವಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.

ಜೀರ್ಣಕ್ರಿಯೆಯಲ್ಲಿ : ಒಂದು ಚಮಚ ಬೆಲ್ಲದ ಪುಡಿಗೆ ಅರ್ಧ ಚಮಚ ಕರಿಮೆಣಸಿನ ಪುಡಿ ಸೇರಿಸಿ ತಿನ್ನುವುದರಿಂದ ಜೀರ್ಣಕ್ರಿಯೆ ಸುಧಾರಿಸುತ್ತದೆ

ಗಮನವಿಡಿ: ಕರಿಮೆಣಸನ್ನು ನಿಯಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಅನಾವಶ್ಯಕವಾಗಿ ಹೆಚ್ಚು ಸೇವಿಸಿದರೆ ಹಾನಿಯುಂಟಾಗಬಹುದು.ಅತಿಯಾದರೆ ಅಮೃತವು ವಿಷವೇ ಎಂಬುದು ನೆನಪಿರಲಿ.ಇವುಗಳನ್ನು ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಯನ್ನು ಪಡೆದುಕೊಳ್ಳಿ

ಅಜೀರ್ಣ ಸಮಸ್ಯೆಗೆ ಪರಿಹಾರ

ಅಜೀರ್ಣ ಸಮಸ್ಯೆಗೆ ಪರಿಹಾರ

*ಅಜೀರ್ಣವಾದಾಗ ಏಲಕ್ಕಿ ಸೇವಿಸುವುದರಿಂದ ಆಹಾರವು 

ಜೀರ್ಣವಾಗಿ ಬಾಯಿ ರುಚಿ ಜಾಸ್ತಿ ಆಗುತ್ತದೆ.

*ಅಜೀರ್ಣಕ್ಕೆ ಅರ್ಧ ಲೋಟ ನೀರಿಗೆ ಎರಡು ಲವಂಗ ಅರ್ಧ ಚಮಚ
ಬೆಳ್ಳುಳ್ಳಿ ರಸ ಹಾಕಿ ಒಂದೆರಡು ಚಿಟಿಕೆ ಸೈಂಧವ ಲವಣ ಹಾಕಿ ಸೇರಿಸಿ
ಕುದಿಸಿ ಕುಡಿಯಬೇಕು

*ಸ್ವಲ್ಪ ಓಮದ ಕಾಳನ್ನು ಬಿಸಿ ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಿ

 ಒಂದು ಚಮಚ ಕಷಾಯಕ್ಕೆ ಒಂದು ಚಿಟಿಕೆ ಅಡಿಗೆ ಸೋಡಾ ಬೆರೆಸಿ

 ಮಕ್ಕಳಿಗೆ ನೀಡಿದರೆ ಅಜೀರ್ಣದಿಂದ ಉಂಟಾಗುವ ಹೊಟ್ಟೆ

 ಉಬ್ಬರಿಸುವಿಕೆಗೆ ಕಡಿಮೆಯಾಗುತ್ತದೆ.

*ಹಸಿ ಮೂಲಂಗಿ ಹೋಳುಗಳಿಗೆ ಕರಿಮೆಣಸು, ನಿಂಬೆರಸ ಉಪ್ಪು
ಸೇರಿಸಿ ದಿನಕ್ಕೆ ನಾಲ್ಕು ಸಲ ಸೇವಿಸುವುದರಿಂದ ಅಜೀರ್ಣದ
ಹೊಟ್ಟೆ ನೋವು ನಿವಾರಣೆಯಾಗುತ್ತದೆ

*ಹಸಿ ಶುಂಠಿಯೊಂದಿಗೆ ಜೇನುತುಪ್ಪ ನಿಂಬೆರಸ ಹಾಕಿ ಕುಡಿದರೆ
ಅಜೀರ್ಣ ಸಮಸ್ಯೆಗೆ ಪರಿಹಾರವಾಗುತ್ತದೆ .

*ಕರಿಮೆಣಸು, ಸೈಂದವ ಲವಣ ಮತ್ತು ಶುಂಠಿ ಇವುಗಳನ್ನು
ಸಮ ಪ್ರಮಾಣದಲ್ಲಿ ಸೇರಿಸಿ ಚೆನ್ನಾಗಿ  ಅರೆದು ಮಜ್ಜಿಗೆಗೆ
ಸೇರಿಸಿ ಕುಡಿಯುವುದರಿಂದ ಅಜೀರ್ಣ ಕಡಿಮೆಯಾಗುತ್ತದೆ

*ಅಜೀರ್ಣವಾದ ಸಮಯದಲ್ಲಿ ಮಜ್ಜಿಗೆ ಅಥವಾ ನೀರಿನೊಂದಿಗೆ
ಓಮದ ಚೂರ್ಣ ಮತ್ತು ಸೈಂದವ ಲವಣವನ್ನು ಸೇರಿಸಿ
ಸೇವಿಸಬಹುದು

*ಅಜೀರ್ಣದ ಹೊಟ್ಟೆ ನೋವಿಗೆ ಅರ್ಧ ಚಮಚ ಇಂಗನ್ನು ಹುರಿದು
ಪುಡಿ ಮಾಡಿ ಮಜ್ಜಿಗೆಯೊಂದಿಗೆ ಸೇರಿಸಿ  ಕುಡಿಯುವುದರಿಂದ
ಗುಣವಾಗುತ್ತದೆ

*ಒಣಶುಂಠಿ ಮತ್ತು ಕೊತ್ತಂಬರಿ ಬೀಜದ ಕಷಾಯ ತಯಾರಿಸಿ 

ಸೇವಿಸಿದರೆ ಅಜೀರ್ಣದಿಂದ ಹೊಟ್ಟೆ ಉಬ್ಬರಿಸಿದರೆ ಶೀಘ್ರ

 ಕಡಿಮೆಯಾಗುತ್ತದೆ.

*ಹಸಿ ಶುಂಠಿಯೊಂದಿಗೆ ಜೇನುತುಪ್ಪ ಹಾಗು ನಿಂಬೆರಸ ಹಾಕಿ
ಕುಡಿದರೆ ಅಜೀರ್ಣ ನಿವಾರಣೆಯಾಗುತ್ತದೆ

*ಒಂದು ಲೋಟ ಬಿಸಿ ನೀರಿಗೆ ಕಾಲು ಚಮಚ ಬೆಳ್ಳುಳ್ಳಿ ರಸ ಮತ್ತು
ಸೈಂಧವ ಲವಣವನ್ನು ಸೇರಿಸಿ ದಿನಕ್ಕೆರಡು ಹೊತ್ತು
ಕುಡಿಯುವುದರಿಂದ ಅಜೀರ್ಣದ ಹೊಟ್ಟೆ ನೋವು
ಗುಣವಾಗುತ್ತದೆ.

*ಅನ್ನದ ಗಂಜಿಗೆ ಸ್ವಲ್ಪ ಉಪ್ಪು ಬೆರೆಸಿ ಸೇವಿಸುವುದರಿಂದ

 ಅಜೀರ್ಣ ಸಮಸ್ಯೆ ದೂರವಾಗುತ್ತದೆ.

*ಮಾವಿನ ಕಾಯಿಗೆ ಸ್ವಲ್ಪ ಉಪ್ಪು ಬೆರೆಸಿ ಮತ್ತು ಜೇನುತುಪ್ಪ

 ಲೇಪಿಸಿ ಸೇವಿಸಿದರೆ ಅಜೀರ್ಣ ಸಮಸ್ಯೆ

 ಮಾಯವಾಗುತ್ತದೆ.

*ಒಂದು ಕಪ್ ಬಿಸಿ ನೀರಿಗೆ ಎರಡು ಹನಿ ಪುದೀನಾ ಎಣ್ಣೆ ಹಾಕಿ 

 ತಕ್ಷಣವೇ ಕುಡಿಯಿರಿ. ಇದರಿಂದ ವಾಯು ಮತ್ತು ತೇಗಿನ

 ಸಮಸ್ಯೆಯು ಕಡಿಮೆ ಆಗುವುದು.

*ಒಂದು ವಾರ ಕಾಲ ಕೊತ್ತಂಬರಿ ಬೀಜದ ನೀರು ಸೇವನೆ 

ಮಾಡುವುದರಿಂದ  ಒಳ್ಳೆಯ ಪರಿಣಾಮ ಸಿಗುವುದು.

*ಆಹಾರ ಸೇವನೆಯ ನಂತರ ಸೋಂಪು ಕಾಳುಗಳನ್ನು ಬಾಯಲ್ಲಿ

 ಜಗಿಯುವುದರಿಂದಲೂ ಅಜೀರ್ಣ ಸಮಸ್ಯೆಯನ್ನು ದೂರ

 ಮಾಡಬಹುದು.

*ಒಂದು ಪಿಂಗಾಣಿ ಮೊಸರಿಗೆ ಸ್ವಲ್ಪ ಜೀರಿಗೆ ಪುಡಿ  ಮತ್ತು 

ಉಪ್ಪು ಹಾಕಿಕೊಂಡು ಸೇವನೆ ಮಾಡಿದರೆ ಅದರಿಂದ 

ಅಜೀರ್ಣ ಸಮಸ್ಯೆಯು ದೂರವಾಗುತ್ತದೆ.


ನಿಂಬೆ ಹಣ್ಣು ಔಷಧಿಯ ಗುಣಗಳು ಹಾಗೂ ಉಪಯೋಗಗಳು

 

ನಿಂಬೆ ಹಣ್ಣು ಬಹುಪಯೋಗಿ ಹಣ್ಣು. ಇದರಲ್ಲಿ ಇರುವ ವಿಟಮಿನ್ ಸಿ, ಸಿಟ್ರಿಕ್ ಆಮ್ಲ ಮತ್ತು ಬೇರೆ ಪೋಷಕಾಂಶಗಳು ದೇಹದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. 

ನಿಂಬೆ ಹಣ್ಣಿನ ಉಪಯೋಗಗಳು 

1. ದೇಹದ  ಶಕ್ತಿ ಮತ್ತು ದಾಹ ತೀರಿಸುವ ಶರಬತ್ತು:

ಬಿಸಿಲಿನಲ್ಲಿ ದಣಿದವರಿಗೆ ನಿಂಬೆ ಪಾನಕ ದೇಹಕ್ಕೆ ತಕ್ಷಣ ಶಕ್ತಿ ನೀಡುತ್ತದೆ.

2. ಜೀರ್ಣಕ್ರಿಯೆ ಸುಧಾರಣೆಗೆ:

ನಿಂಬೆರಸವನ್ನು ಪ್ರತಿ ದಿನ ಆಹಾರದಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ.

3. ತಲೆನೋವಿಗೆ ಪರಿಹಾರ:

ನಿಂಬೆರಸ ಮತ್ತು ಜೇನುತುಪ್ಪವನ್ನು ಮಿಶ್ರಣ ಮಾಡಿ ಕುಡಿದರೆ ತಲೆನೋವು ಶಮನವಾಗುತ್ತದೆ.

4. ದಂತ ಆರೋಗ್ಯ:

ನಿಂಬೆರಸದಲ್ಲಿ ಉಪ್ಪು ಮತ್ತು ಅಡುಗೆ ಸೋಡಾ ಸೇರಿಸಿ ಹಲ್ಲುಜ್ಜುವುದರಿಂದ ಹಲ್ಲು ಮತ್ತು ಒಸಡುಗಳ ಆರೋಗ್ಯ ಉತ್ತಮವಾಗುತ್ತದೆ.

5. ಕಿಡ್ನಿ ಕಲ್ಲುಗಳ ನಿಯಂತ್ರಣ:

ನಿಂಬೆ ಹಣ್ಣಿನ ಪಾನಕ ಅಥವಾ ರಸ ಕುಡಿಯುವುದರಿಂದ ಮೂತ್ರದ ಸಿಟ್ರೇಟ್ ಮಟ್ಟ ಹೆಚ್ಚಾಗಿ ಕಿಡ್ನಿ ಕಲ್ಲುಗಳನ್ನು ತಡೆಯುತ್ತದೆ.

6. ಗಂಟಲಿನ ಸೋಂಕಿಗೆ:

ಗಂಟಲು ನೋವು ಅಥವಾ ಇನ್‌ಫೆಕ್ಷನ್ ಇರುವವರು ನಿಂಬೆರಸ ಬಿಸಿನೀರಿಗೆ ಮಿಶ್ರಣ ಮಾಡಿ ಕುಡಿಯಬೇಕು. ಇದರಿಂದ ಸೋಂಕು ನಿವಾರಣೆಯಾಗುತ್ತದೆ.

7. ಹೃದಯ ಆರೋಗ್ಯ:

ನಿಂಬೆ ಹಣ್ಣಿನಲ್ಲಿ ಇರುವ ವಿಟಮಿನ್ ಸಿ ಹೃದಯ ಕಾಯಿಲೆಗಳನ್ನು ತಡೆಯುತ್ತದೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

8. ಬಾಯಿಯ ಸಮಸ್ಯೆಗಳಿಗೆ:

ನಿಂಬೆರಸ ಹಲ್ಲು ಅಥವಾ ಒಸಡುಗಳ ಮೇಲೆ ಲೇಪಿಸಿದರೆ ಬಾಯಿಯ ಸಮಸ್ಯೆಗಳು ಕಡಿಮೆಯಾಗುತ್ತವೆ.

9. ಉರಿ ಮೂತ್ರ ಸಮಸ್ಯೆಗೆ :

1.ನಿಂಬೆರಸ ಮತ್ತು ಉಪ್ಪು:ಒಂದು ಲೋಟ ಬಿಸಿನೀರಿನಲ್ಲಿ ನಿಂಬೆರಸ ಮತ್ತು ಸ್ವಲ್ಪ ಉಪ್ಪನ್ನು ಮಿಶ್ರಣ ಮಾಡಿ ಕುಡಿಯಿರಿ.ಇದು ಉರಿ ಮೂತ್ರದ ಸಮಸ್ಯೆಯನ್ನು ಶಮನಗೊಳಿಸುತ್ತದೆ.

2 ನಿಂಬೆರಸ ಮತ್ತು ಜೇನುತುಪ್ಪ:ನಿಂಬೆರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿ ದಿನ ಸೇವನೆ ಮಾಡಿ.ಇದು ದೇಹದ ತಾಪಮಾನವನ್ನು ತಗ್ಗಿಸಲು ಮತ್ತು ಉರಿ ಮೂತ್ರದ ತೀವ್ರತೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

3.ಎಳನೀರು ಮತ್ತು ನಿಂಬೆರಸ:ಎಳನೀರಿಗೆ ನಿಂಬೆರಸವನ್ನು ಸೇರಿಸಿ ಕುಡಿಯುವುದರಿಂದ ದೇಹ ತಂಪಾಗುತ್ತದೆ ಮತ್ತು ಮೂತ್ರದ ಚಲನೆಯನ್ನು ಸರಾಗಗೊಳಿಸುತ್ತದೆ.

4. ಬಿಸಿನೀರಿನಲ್ಲಿ ನಿಂಬೆರಸ:ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರಿನಲ್ಲಿ ನಿಂಬೆರಸ ಕುಡಿಯುವುದು ಶರೀರದ ದ್ರವ ತೊಳಕಡಿತ ಮತ್ತು ಮೂತ್ರದ ಶುದ್ಧತೆಯನ್ನು ಉತ್ತೇಜಿಸುತ್ತದೆ.

10.ಮುಖದ ಕಾಂತಿ ಹೆಚ್ಚಿಸಲು :

  1. ನಿಂಬೆರಸ ಮತ್ತು ಅರಿಶಿಣ:ನಿಂಬೆರಸ, ಹಾಲಿನ ಕೆನೆ ಜೇನುತುಪ್ಪ ಮತ್ತು ಅರಿಶಿಣವನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ.15 ನಿಮಿಷಗಳ ನಂತರ ತಣ್ಣೀರು ಬಳಸಿ ತೊಳೆದು ಹಚ್ಚಿದರೆ ಚರ್ಮ ತಾಜಾ ಕಾಣುತ್ತದೆ.

  2. ನಿಂಬೆರಸ ಮತ್ತು ಜೇನುತುಪ್ಪ:ನಿಂಬೆರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ.ಇದು ಚರ್ಮವನ್ನು ತೇವಯುಕ್ತವಾಗಿಡುವುದಲ್ಲದೆ ಕಾಂತಿಯನ್ನೂ ಹೆಚ್ಚಿಸುತ್ತದೆ.

  3. ನಿಂಬೆರಸ ಮತ್ತು ಸೀಗೆ ಪುಡಿ:ನಿಂಬೆರಸ ಮತ್ತು ಸೀಗೆ ಪುಡಿಯನ್ನು ಮಿಶ್ರಣ ಮಾಡಿ ತಲೆಗೆ ಮತ್ತು ಮುಖಕ್ಕೆ ಹಚ್ಚಿ ಸ್ನಾನ ಮಾಡಿದರೆ ಹೊಟ್ಟು ಮತ್ತು ಚರ್ಮದ ಶುದ್ಧೀಕರಣದೊಂದಿಗೆ ಕಾಂತಿ ಹೆಚ್ಚುತ್ತದೆ.

  4. ನಿಂಬೆರಸ ಮತ್ತು ಮೊಸರಿನ ಮಾಸ್ಕ್:ನಿಂಬೆರಸ ಮತ್ತು ಮೊಸರನ್ನು ಮಿಶ್ರಣ ಮಾಡಿ ಮುಖಕ್ಕೆ ಹಚ್ಚಿ.ಇದು ಕಪ್ಪು ಮಚ್ಚೆಗಳನ್ನು ಕಡಿಮೆ ಮಾಡುತ್ತದೆ ಮತ್ತು ಚರ್ಮವನ್ನು ಮೃದುವಾಗಿಸುತ್ತೆ.

  5. ನಿಂಬೆರಸ ಮತ್ತು ಕೊಬ್ಬರಿ ಎಣ್ಣೆ:ನಿಂಬೆರಸ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ಹಚ್ಚಿದರೆ ಚರ್ಮದ ಆರ್ದ್ರತೆ ಹೆಚ್ಚಾಗಿ ಕಾಂತಿ ಬರುವಂತಾಗುತ್ತದೆ.

11. ನಿಶಕ್ತಿಗೆ :

  1. ನಿಂಬೆರಸ ಮತ್ತು ಬಿಸಿನೀರು:ಪ್ರತಿ ರಾತ್ರಿ ಒಂದು ಲೋಟ ಬಿಸಿನೀರಿನಲ್ಲಿ ಒಂದು ಚಮಚ ನಿಂಬೆರಸ ಬೆರೆಸಿ ಕುಡಿಯಿರಿ.ಇದು ದೇಹದ ಶಕ್ತಿಯನ್ನು ಪುನಃಸ್ಥಾಪಿಸುತ್ತದೆ ಮತ್ತು ನಿಶ್ಶಕ್ತಿಯನ್ನು ಕಡಿಮೆ ಮಾಡುತ್ತದೆ.

  2. ನಿಂಬೆರಸ ಮತ್ತು ಜೇನುತುಪ್ಪ:ನಿಂಬೆರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.ಇದು ದೇಹಕ್ಕೆ ತ್ವರಿತ ಶಕ್ತಿಯನ್ನು ಒದಗಿಸುತ್ತದೆ.

  3. ವಿಟಮಿನ್ ಸಿ ಇರುವ ನಿಂಬೆ ಪಾನಕ:ನಿಂಬೆರಸದಿಂದ ತಯಾರಿಸಿದ ಪಾನಕ ವಿಟಮಿನ್ ಸಿ-ಯನ್ನು ಒದಗಿಸುತ್ತದೆ, ಇದು ದೇಹದ ಸೋಂಕು ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಿಶ್ಶಕ್ತಿ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.

  4. ಆಹಾರದಲ್ಲಿ ನಿಂಬೆರಸ ಸೇರ್ಪಡೆ:ದಿನನಿತ್ಯದ ಆಹಾರಕ್ಕೆ ನಿಂಬೆರಸ ಸೇರಿಸುವುದು ದೇಹದ ಮೆಟಾಬಾಲಿಸಮ್‌ ಅನ್ನು ಸುಧಾರಿಸುತ್ತದೆ ಮತ್ತು ನಿಶ್ಶಕ್ತಿಯನ್ನು ದೂರ ಮಾಡುತ್ತದೆ.

12 .ಗ್ಯಾಸ್ಟ್ರಿಕ್ ಸಮಸ್ಯೆಗೆ :

ನಿಂಬೆರಸ ಮತ್ತು ಉಪ್ಪು: ಒಂದು ಲೋಟ ಬೆಚ್ಚಗಿನ ನೀರಿಗೆ ನಿಂಬೆರಸ ಮತ್ತು ಸ್ವಲ್ಪ ಉಪ್ಪು ಸೇರಿಸಿ ಕುಡಿಯಿರಿ.ಇದು ಹೊಟ್ಟೆಯಲ್ಲಿ ದ್ರವದ ಸಮತೋಲನವನ್ನು ಸ್ಥಿರಗೊಳಿಸಿ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಶಮನಗೊಳಿಸುತ್ತದೆ.

ನಿಂಬೆರಸ ಮತ್ತು ಜೀರಿಗೆ ಪುಡಿ:ನಿಂಬೆರಸದಲ್ಲಿ ಜೀರಿಗೆ ಪುಡಿಯನ್ನು ಬೆರೆಸಿ ಊಟದ ನಂತರ ಕುಡಿಯಿರಿ.ಇದರಿಂದ ಗ್ಯಾಸ್ಟ್ರಿಕ್ ತೊಂದರೆ ಕಡಿಮೆಯಾಗುತ್ತದೆ ಮತ್ತು ಜೀರ್ಣಕ್ರಿಯೆ ಸುಧಾರಿಸುತ್ತದೆ.

ನಿಂಬೆರಸ ಮತ್ತು ಎಳನೀರು:

ಎಳನೀರಿನಲ್ಲಿ ನಿಂಬೆರಸ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಜ್ವಾಲೆಯನ್ನು ಶಮನಗೊಳಿಸಿ ತೂಕದ  ಕಡಿಮೆ ಮಾಡುತ್ತದೆ.

ನಿಂಬೆರಸ ಮತ್ತು ಏಲಕ್ಕಿ ಪುಡಿ:

ನಿಂಬೆರಸಕ್ಕೆ ಸ್ವಲ್ಪ ಏಲಕ್ಕಿ ಪುಡಿ ಸೇರಿಸಿ ಸೇವನೆ ಮಾಡಿ.ಇದರಿಂದ ಹೊಟ್ಟೆಯ ಉಬ್ಬರ ಕಡಿಮೆಯಾಗುತ್ತದೆ.

ಬೆಚ್ಚಗಿನ ನೀರು ಮತ್ತು ನಿಂಬೆರಸ:

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನೊಂದಿಗೆ ನಿಂಬೆರಸ ಕುಡಿಯಿರಿ.ಇದು ಗ್ಯಾಸ್ಟ್ರಿಕ್ ಹೊಟ್ಟೆಯಲ್ಲಿನ ಆಮ್ಲವನ್ನು ಸಮತೋಲನಗೊಳಿಸುವಲ್ಲಿ ಸಹಾಯ ಮಾಡುತ್ತದೆ.


13. ತಲೆ ಹೊಟ್ಟು ನಿವಾರಣೆಗೆ ಹಾಗು ಕೂದಲು ಬೆಳವಣಿಗೆಗೆ:

1.ನಿಂಬೆರಸವನ್ನು ತಲೆ ತೊಳೆಯುವ ಮುನ್ನ  ಹಚ್ಚಿ 10-15 ನಿಮಿಷಗಳ ಬಳಿಕ  ತೊಳೆಯಿರಿ.ಇದು ತಲೆ ಹೊಟ್ಟು(ಡ್ಯಾಂಡ್ರಫ್) ನಿವಾರಣೆಗೆ ಸಹಾಯ ಮಾಡುತ್ತದೆ.

2.ನಿಂಬೆರಸ ಮತ್ತು ಕೊಬ್ಬರಿ ಎಣ್ಣೆಯನ್ನು ಮಿಶ್ರಣ ಮಾಡಿ ತಲೆಗೆ ಹಚ್ಚಿ 30 ನಿಮಿಷದ ನಂತರ ತೊಳೆಯಿರಿ.ಇದು ಕೂದಲನ್ನು ಸೊಂಪಾಗಿ ಮಾಡಿ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

3.ನಿಂಬೆರಸ ಮತ್ತು ಸೀಗೆ ಪುಡಿಯನ್ನು ಮಿಶ್ರಣ ಮಾಡಿ ತಲೆಗೆ ಮತ್ತು ಮುಖಕ್ಕೆ ಹಚ್ಚಿ ಸ್ನಾನ ಮಾಡಿದರೆ ಹೊಟ್ಟು ಮತ್ತು ಚರ್ಮದ ಶುದ್ಧೀಕರಣದೊಂದಿಗೆ ಕಾಂತಿ ಹೆಚ್ಚುತ್ತದೆ.

4. ನಿಂಬೆರಸ ಮತ್ತು ಮೊಸರನ್ನು ಮಿಶ್ರಣ ಮಾಡಿ ತಲೆಗೂದಲಿಗೆ ಹಚ್ಚಿ 20 ನಿಮಿಷಗಳ ನಂತರ ತೊಳೆದು ಕೊಳ್ಳಿ.ಇದು ಕೂದಲನ್ನು ಮೃದುವಾಗಿ  ಮಾಡುತ್ತದೆ.

14.ತೂಕ ನಿಯಂತ್ರಣಕ್ಕೆ 

1.ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲೋಟ ಬೆಚ್ಚಗಿನ ನೀರಿನಲ್ಲಿ ಒಂದು ಚಮಚ ನಿಂಬೆರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯಿರಿ.

ಇದು ಚಯಾಪಚಯ (ಮೆಟಾಬಾಲಿಸಮ್)ವನ್ನು ಹೆಚ್ಚಿಸಿ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2.ನಿಂಬೆರಸಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ತೂಕ  ಕಡಿಮೆಯಾಗುತ್ತದೆ.ಇದು ದೇಹದ ಅನಾರೋಗ್ಯಕರ ಕೊಬ್ಬನ್ನು ಕರಗಿಸುತ್ತದೆ.

 3.ದಿನನಿತ್ಯದ ಆಹಾರದಲ್ಲಿ ನಿಂಬೆರಸವನ್ನು ಸಾರು ಅಥವಾ ಬಿಸಿ ಆಹಾರದಲ್ಲಿ ಸೇರಿಸಿಕೊಳ್ಳಿ.ಈ ಸರಳ ಉಪಾಯಗಳನ್ನು ಅನುಸರಿಸುವ ಮೂಲಕ ತೂಕವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು.


 

ದಾಸವಾಳದ ಎಲೆಗಳ ಉಪಯೋಗಗಳು
1.ಚರ್ಮದ ಆರೈಕೆಗೆ :
ದಾಸವಾಳದ ಎಲೆಗಳನ್ನು ನುಣ್ಣಗೆ ಜಜ್ಜಿ, ಚರ್ಮದ ಕಪ್ಪು ಕಲೆಗಳ ಮೇಲೆ ಹಚ್ಚಿ,15-20 ನಿಮಿಷಗಳ ನಂತರ ತೊಳೆಯಬೇಕು .
ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡಲು ವಾರದಲ್ಲಿ ಮೂರು ಬಾರಿ ಬಳಸಬಹುದು.
2.ಮೊಡವೆ ನಿವಾರಣೆಗೆ:
ದಾಸವಾಳದ ಎಲೆಗಳ ರಸವನ್ನು ಮೊಡವೆಯ ಮೇಲಿಟ್ಟು, ರಾತ್ರಿ ಪೂರ್ತಿ ಬಿಟ್ಟು
ಬೆಳಗ್ಗೆ ತಣ್ಣೀರಿನಿಂದ ತೊಳೆಯಬೇಕು.
3.ಹಾರ್ಮೋನ್ ಸಮತೋಲನಕ್ಕಾಗಿ:
ದಾಸವಾಳದ 5 - 6 ಎಲೆಗಳನ್ನು
ಒಂದು ಲೋಟ ಬಿಸಿನೀರಿನಲ್ಲಿ  ಹಾಕಿ 10 ನಿಮಿಷ ಕುದಿಸಿ, ದಿನನಿತ್ಯ ಕುಡಿದರೆ ಹಾರ್ಮೋನ್ ಅಸಮತೋಲನ ಸರಿಪಡಿಸಲು ನೆರವಾಗುತ್ತದೆ.

ದೋಸೆ ಹಿಟ್ಟಿಗೆ ಬಿಳಿ ದಾಸವಾಳದ ಹೂವುಗಳನ್ನು ಹಾಕಿ ದೋಸೆ ಮಾಡಿ ತಿಂದರೆ ಹೆಂಗಸರಿಗಾಗುವ ಬಿಳಿ ಮುಟ್ಟು ನಿವಾರಣೆ ಆಗುತ್ತದೆ.
ಮಹಿಳೆಯರಲ್ಲಿ ಮುಟ್ಟಿನ  ತೊಂದರೆಗಳಿಗೆ ಇದು ವಿಶೇಷವಾಗಿ ಸಹಕಾರಿ.
4.ಕೂದಲ ಆರೈಕೆಗಾಗಿ:
ಮೆಂತ್ಯ ಮತ್ತು ಮೊಸರಿಗೆ ನುಣ್ಣಗೆ ಜಜ್ಜಿದ ದಾಸವಾಳದ ಎಲೆಗಳನ್ನು ಸೇರಿಸಿ ಕೂದಲಿಗೆ ಹಚ್ಚಿರಿ ನಂತರ
ಅರ್ಧ ಗಂಟೆ ಬಿಟ್ಟು ತೊಳೆಯಿರಿ.
ಇದರಿಂದ ಕೂದಲು ಉದುರುವಿಕೆಯನ್ನು ತಡೆದು ಹೊಳೆಯುವ ಮತ್ತು ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ.
5.ಗಾಯಗಳು ಗುಣವಾಗಲು :
ತಾಜಾ ಎಲೆಗಳನ್ನು ಜಜ್ಜಿ ಗಾಯದ ಮೇಲೆ ಹಚ್ಚಿ, ಬಟ್ಟೆಯಿಂದ ಮುಚ್ಚಿ ಬಿಡಿ.
ದಿನಕ್ಕೆ ಎರಡು ಬಾರಿ ಈ ವಿಧಾನವನ್ನು ಅನುಸರಿಸಿದರೆ ಗಾಯಗಳು ಕಡಿಮೆಯಾಗುತ್ತದೆ..
6.ಶೀತ ಮತ್ತು ತಲೆನೋವಿಗೆ:
 ತಾಜಾ ದಾಸವಾಳದ ಎಲೆಗಳ ಕಷಾಯ  ಸೇವಿಸಿದರೆ ತಲೆನೋವಿಗೆ ಮತ್ತು ಶೀತಕ್ಕೆ ಪರಿಹಾರ ದೊರೆಯುತ್ತದೆ.
ಈ ಕಷಾಯವನ್ನು ಕೆಮ್ಮು, ಕಫ ನಿವಾರಣೆಗೆ ಬಳಸಬಹುದು. ದಿನಕ್ಕೆ ಎರಡು ಬಾರಿ ಕುಡಿಯಿರಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .
7.ಮುಖ ಬ್ಲೀಚ್ ಮಾಡಲು:
ಬಿಳಿ ದಾಸವಾಳದ ಹೂವನ್ನು ಕಿವುಚಿ, ಅದರ ರಸವನ್ನು ಮುಖಕ್ಕೆ ಹಚ್ಚಿ,15-20 ನಿಮಿಷದ ನಂತರ ತೊಳೆಯಬೇಕು. ಇದರಿಂದ ಚರ್ಮದಲ್ಲಿ ನೈಸರ್ಗಿಕ ಹೊಳಪು ಕಾಣಿಸಿಕೊಳ್ಳುತ್ತದೆ.
8. ದೇಹದ ನಿರ್ಜಲೀಕರಣ ತಡೆಯಲು:
ದಾಸವಾಳದ ಎಲೆಗಳಿಂದ ತಯಾರಿಸಿದ ಕಷಾಯವು ದೇಹದ ನೀರಿನ  ಸಮತೋಲನವನ್ನು  ಕಾಪಾಡುತ್ತದೆ..

9.ಕ್ಯಾನ್ಸರ್ ತಡೆಗಟ್ಟುವಿಕೆ : ದಾಸವಾಳದಲ್ಲಿರುವ ಪಾಲಿಫಿನಾಲ್‌ಗಳ ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳಿಂದ, ಕೆಲವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯು ಕುಂಠಿತಗೊಳ್ಳುತ್ತದೆ.

10. ದಾಸವಾಳದ ಹೂ ,ಸ್ವಲ್ಪ ಸಕ್ಕರೆ ಬೆರೆಸಿ ತಿಂದರೆ ಅತಿಸಾರ ಕಡಿಮೆಯಾಗುತ್ತದೆ.


ಗಮನಿಸಿ:
ದಾಸವಾಳದ ಎಲೆ ಮತ್ತು ಹೂಗಳನ್ನು ಬಳಸುವ ಮೊದಲು ತ್ವಚೆಗೆ ಪರೀಕ್ಷೆ ಮಾಡಿ.
ಯಾವುದೇ ಅಲರ್ಜಿಯ ಲಕ್ಷಣಗಳು ಕಂಡುಬಂದರೆ ಬಳಸುವುದು ನಿಲ್ಲಿಸಿ ವೈದ್ಯರ ಸಲಹೆ ಪಡೆಯಿರಿ.

ಪೇರಳೆ (ಸೀಬೆ ಹಣ್ಣು)

ಪೇರಳೆ ಅಥವಾ ಸೀಬೆ ಹಣ್ಣು, ತನ್ನ ಅದ್ಭುತ ಔಷಧೀಯ ಗುಣಗಳಿಂದ "ಅಮೃತ ಫಲ" ಎಂಬ ಹೆಸರನ್ನು ಸಂಪಾದಿಸಿದೆ. ನಾರಿನಾಂಶ, ವಿಟಮಿನ್ C, ಆ್ಯಂಟಿ ಆಕ್ಸಿಡೆಂಟ್, ಮತ್ತು ಇನ್ನೂ ಅನೇಕ ಪೋಷಕಾಂಶಗಳಿಂದ ಸಮೃದ್ಧವಾದ ಈ ಹಣ್ಣು, ದೇಹದ ಆರೋಗ್ಯವನ್ನು ಕಾಪಾಡಲು ಬಹುಮುಖ್ಯವಾದ ಪಾತ್ರವಹಿಸುತ್ತದೆ.

ಪೇರಳೆ ಹಣ್ಣಿನ ಉಪಯೋಗಗಳು

  1. ಜೀರ್ಣಕ್ರಿಯೆ ಸುಧಾರಣೆ:
     ಪರಳೆ ಹಣ್ಣಿನ ಸೇವನೆಯಿಂದ  ಅತಿಸಾರ ಮತ್ತು   ಹೊಟ್ಟೆಯ ಹುಣ್ಣಿನ ಸಮಸ್ಯೆ  ದೂರವಾಗುತ್ತದೆ.ಜೀರ್ಣಕ್ರಿಯೆಯು ಸರಿಯಾಗಿ ನಡೆಯುತ್ತದೆ.
  2. ಹೃದಯದ ಆರೋಗ್ಯ:
    ಹಣ್ಣು ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆ ಮಾಡುವುದು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುವುದು, ಹೃದಯವನ್ನು ಬಲಪಡಿಸುವ ಪ್ರಮುಖ ಗುಣ ಈ ಹಣ್ಣಿಗಿದೆ.
  3. ರೋಗ ನಿರೋಧಕ ಶಕ್ತಿ:
    ವಿಟಮಿನ್ C ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿ ನೀಡುತ್ತದೆ. ಇದರಿಂದ ಸಾಮಾನ್ಯ ಜ್ವರ ಮತ್ತು ಸೋಂಕುಗಳಿಂದ ರಕ್ಷಣೆ ಸಿಗುತ್ತದೆ.
  4. ಮಲಬದ್ಧತೆ ನಿವಾರಣೆ:
    ಈ ಹಣ್ಣು ನಾರಿನಾಂಶದಿಂದ ಸಮೃದ್ಧವಾಗಿದ್ದು, ದೇಹದ ಪಚನ ಕ್ರಿಯೆಯನ್ನು ಸುಧಾರಿಸುತ್ತದೆ.

ಎಲೆಗಳ ಔಷಧೀಯ ಪ್ರಯೋಜನಗಳು

1. ಮಧುಮೇಹದ ನಿಯಂತ್ರಣ:
2-3 ಎಲೆಗಳನ್ನು 200ml ನೀರಿನಲ್ಲಿ ಕುದಿಸಿ, ಕಷಾಯ ರೂಪದಲ್ಲಿ ಸೇವಿಸಿದರೆ, ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ.
2. ಗ್ಯಾಸ್ಟ್ರಿಕ್ ತೊಂದರೆ ಮತ್ತು ಜೀರ್ಣಕ್ರಿಯೆ:
8 ಎಲೆಗಳನ್ನು 1 ಲೀಟರ್ ನೀರಿನಲ್ಲಿ ಕುದಿಸಿ ತಯಾರಿಸಿದ ಕಷಾಯವು ಅಜೀರ್ಣ, ಹೊಟ್ಟೆನೋವು, ಹಾಗೂ ಜಠರ ತೊಂದರೆ ನಿವಾರಣೆ ಮಾಡುತ್ತದೆ.
3. ವಾತಸಂಬಂಧಿ ತೊಂದರೆಗಳು:
ಎಲೆಗಳು ಉರಿಯೂತ ನಿವಾರಕ ಗುಣ ಹೊಂದಿದ್ದು, ಸಂಧಿವಾತ ಮತ್ತು ಗಂಟು ನೋವುಗಳಿಗೆ ಉತ್ತಮವಾದ ಪರಿಹಾರ ನೀಡುತ್ತದೆ.

ತೂಕ ಇಳಿಕೆ :ಪೇರಳೆ ಎಲೆ ಟೀ ಸೇವನೆಯು ದೇಹದ ತೂಕವನ್ನು ಸಮತೋಲನದಲ್ಲಿಡುತ್ತದೆ. 

ಚರ್ಮದ ಆರೋಗ್ಯ:
ಮೊಡವೆ, ಕಲೆ, ಮತ್ತು ಚರ್ಮದ ಸೂಕ್ಷ್ಮ ಸಮಸ್ಯೆಗಳಿಗೆ ಪೇರಳೆ ಎಲೆ ಪೇಸ್ಟ್ ಅನ್ನು ಹಚ್ಚಿ ಬಳಸಬಹುದು. ಇದರಿಂದ ಚರ್ಮದ ಹೊಳಪು ಹೆಚ್ಚುತ್ತದೆ.

 ಡೆಂಗ್ಯೂ ಜ್ವರ ಹಾಗೂ ರಕ್ತ ಶುದ್ದಿ : ಪೇರಳೆ ಎಲೆಗಳು ಡೆಂಗ್ಯೂ ಜ್ವರಕ್ಕೆ ಮನೆಯಲ್ಲಿಯೇ ರೋಗಶಮನ ತರುವ ಆಯುರ್ವೇದ ಚಿಕಿತ್ಸೆ. ಪ್ಲೇಟ್ಲೆಟ್ ಪ್ರಮಾಣವನ್ನು ಹತ್ತಿರದಿಂದ ಹೆಚ್ಚಿಸುವ ಈ ಎಲೆಗಳು, ರಕ್ತ ಶುದ್ಧಿಕರಣಕ್ಕೂ ಉಪಯುಕ್ತ.

  1. ಹಲ್ಲು ಮತ್ತು ಗಂಟಲು ಆರೋಗ್ಯ:
    ಎಲೆಗಳ ಕಷಾಯದ ಮೂಲಕ ಬಾಯಿಯ ಶೋಧನೆ ಮಾಡಿದರೆ ಹಲ್ಲಿನ ನೋವು ಮತ್ತು ವಸಡುಗಳ ರಕ್ತಸ್ರಾವ ಬಾಯಿ ಹುಣ್ಣು ಸಮಸ್ಯೆ ಗುಣವಾಗುತ್ತದೆ.
  2. ವೀರ್‍ಯೋತ್ಪಾದನೆ:
    ವೈಜ್ಞಾನಿಕವಾಗಿ ಪೇರಳೆ ಎಲೆಗಳು ಪುರುಷರ ವೀರ್ಯೋತ್ಪಾದನೆ ಬಲಪಡಿಸುವ ಗುಣವನ್ನು ಹೊಂದಿವೆ.
  3. ಚರ್ಮ ಮತ್ತು ಕೂದಲು:
    ಎಲೆಗಳನ್ನು ಕುದಿಸಿ ತಯಾರಿಸಿದ ನೀರನ್ನು ಕೂದಲಿಗೆ ಹಚ್ಚಿದರೆ ತಲೆಹೊಟ್ಟು ನಿವಾರಣೆಯಾಗಿ, ಕೂದಲು ಬಲವಾಗುತ್ತದೆ.

ಬಳಸುವ ವಿಧಾನ:

  1. ಎಲೆಗಳ ಕಷಾಯ:
    10 ಎಲೆಗಳನ್ನು 1½ ಲೋಟ ನೀರಿನಲ್ಲಿ ಕುದಿಸಿ ತಯಾರಿಸಿ. ಇದನ್ನು ದಿನಕ್ಕೆ 2-3 ಬಾರಿ ಸೇವಿಸಬಹುದು.

ನಿಮ್ಮ ಮನೆಯ ಅಂಗಳದಲ್ಲಿ ಪೇರಳೆ ಗಿಡವನ್ನು ನೆಟ್ಟು ಬೆಳೆಸಿರಿ.ಇದರ ಹಣ್ಣು, ಎಲೆ, ಹೂ, ಮತ್ತು ಬೇರು ಎಲ್ಲವೂ ಆರೋಗ್ಯಕ್ಕೆ ಅಮೂಲ್ಯ. ಈ ಪ್ರಾಕೃತಿಕ ಉಡುಗೊರೆಯನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡರೆ, ಬಹಳಷ್ಟು ಆರೋಗ್ಯ ಸಮಸ್ಯೆಗಳನ್ನು ದೂರ ಮಾಡಬಹುದು.

ಭಾರತದ ರತ್ನ ರತನ್ ಟಾಟಾ

 ಪೀಠಿಕೆ :

ರತನ್ ನವಲ್ ಟಾಟಾ ಅವರು ಒಬ್ಬ ಹೆಸರಾಂತ ಉದ್ಯಮಿ ಮತ್ತು ಸಮಾಜಮುಖಿ ನಾಯಕರಾಗಿದ್ದರು. ತಂತ್ರಜ್ಞಾನ ,ನಾವೀನ್ಯತೆ , ಮಾನವೀಯತೆ ಹೀಗೆ ಎಲ್ಲದರಲ್ಲೂ ಅವರದು ಎತ್ತಿದ ಕೈಯಾಗಿತ್ತು. ಅವರು ಟಾಟಾ ಸಂಸ್ಥೆಗಳ ಮುಖ್ಯಸ್ಥರಾಗಿ, ಉದ್ಯಮ ಕ್ಷೇತ್ರದಲ್ಲಿ ಅಮೋಘ ಯಶಸ್ಸನ್ನು ಸಾಧಿಸಿದವರು.  ಅವರ ಪ್ರತಿಭೆ ಮತ್ತು ಸಾಧನೆ ಕೇವಲ ಹಣಕಾಸು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ,   ಸಮಾಜ ಸೇವೆಗಾಗಿ  ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟರು .

ವಿಷಯ ವಿವರಣೆ :

1937ರಲ್ಲಿ ಮುಂಬೈಯಲ್ಲಿ ಜನಿಸಿದ ರತನ್ ಟಾಟಾ, ಟಾಟಾ ಸಮೂಹದ ಸ್ಥಾಪಕರಾದ ಜಮ್ಷೆಟ್‌ಜಿ ಟಾಟಾ ಅವರ ಕುಟುಂಬದಲ್ಲಿ ಜನಿಸಿದರು.  ಅವರು ಅಮೆರಿಕದ ಕಾರ್ಮೆಲ್ ವಿಶ್ವವಿದ್ಯಾನಿಲಯದಿಂದ ಆರ್ಕಿಟೆಕ್ಚರ್ ಪದವಿ ಪಡೆದರು , ನಂತರ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಪೂರೈಸಿದರು. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ ಐಬಿಎಂ ಸಂಸ್ಥೆ ತಮ್ಮ ಮುಂದಿರಿಸಿದ ದೊಡ್ಡ ಸಂಬಳದ ನೌಕರಿಯನ್ನು ವಿನಯದಿಂದ ತಿರಸ್ಕರಿಸಿ,1961 ರಲ್ಲಿ ಜಮ್ಶೆಡ್ಪುರ್   ಟಾಟಾ  ಸ್ಟೀಲಿನ ಮಳಿಗೆಯಲ್ಲಿ ಸಾಮಾನ್ಯ ಕೆಲಸಗಾರನಾಗಿ ಸೇರಿಕೊಂಡು ವ್ಯವಹಾರಗಳನ್ನು ಕಲಿತುಕೊಂಡರು. 

ರತನ್ ಟಾಟಾ ಅವರು ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ನಂತರ ಜಾಗ್ವಾರ್ ,ಲ್ಯಾಂಡ್, ರೋವರ್ , ಕೋರಸ್, ಟೆಟ್ಲಿ ಮುಂತಾದ ವಿದೇಶಿ ದಿಗ್ಗಜ ಸಂಸ್ಥೆಗಳ ಸ್ವಾಧೀನದಿಂದಾಗಿ ಟಾಟಾ ಸಮೂಹದ ಕೀರ್ತಿ ಜಾಗತಿಕ ಮಟ್ಟದಲ್ಲಿ ಉತ್ತುಂಗಕ್ಕೇರಿತು. ರತನ್ ಟಾಟಾ ಅವರು ಟಾಟಾ ಸಮೂಹವನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಗೊಳಿಸಿದರು. ಅವರು ಟಾಟಾ ಸಂಸ್ಥೆಗಳನ್ನು ವಿಶ್ವದ ಶ್ರೇಷ್ಠ ಸಂಸ್ಥೆಗಳಾಗಿ ರೂಪಿಸಿದರು, ಹಾಗೂ ದೇಶವನ್ನು ಆರ್ಥಿಕ ಕ್ಷೇತ್ರದಲ್ಲಿ ಉತ್ತೇಜಿಸಿದರು. 

ಮಧ್ಯಮ ವರ್ಗದವರ ಕನಸನ್ನು ನನಸು ಮಾಡಲು ಶ್ರೀಮಂತರಂತೆ ಸಾಮಾನ್ಯ ವರ್ಗದ ಜನರು ಕೂಡ ಕಾರಿನಲ್ಲಿ ಕುಟುಂಬ ಸಹಿತವಾಗಿ ಓಡಾಡಬೇಕು ಎಂಬ ರತನ್ ಟಾಟಾ ರ ಕನಸಿಗೆ ಒತ್ತಾಸೆಯಾಗಿ ನಿಲ್ಲಲೆಂದೇ ಟಾಟಾ ಮೋಟಾರ್ಸ್ 2008ರಲ್ಲಿ ನ್ಯಾನೋ ಕಾರನ್ನು ಪರಿಚಯಿಸಿತು.ಇದು ಜಗತ್ತಿನ ಹಗ್ಗದ ಕಾರು ಎಂಬ ಖ್ಯಾತಿಗೂ ಪಾತ್ರವಾಗಿದೆ . ಶ್ವಾನ ಪ್ರಿಯರಾಗಿದ್ದ ರತನ್ ಟಾಟಾ ಅವರು .2.2 ಎಕರೆ ಭೂಮಿಯಲ್ಲಿ ಪ್ರಾಣಿಗಳಿಗಾಗಿ ಆಸ್ಪತ್ರೆಯೊಂದನ್ನು ನಿರ್ಮಿಸಿದರು.ಮನುಷ್ಯರಿಗೆ ಎಲ್ಲಾ ಸಮಯದಲ್ಲೂ ವೈದ್ಯಕೀಯ ನೆರವು ಸಿಗುವಂತೆಯೇ ಪ್ರಾಣಿಗಳಿಗೂ ಸಿಗಬೇಕು ಎಂಬ ಉದ್ದೇಶದಿಂದ ದಿನದ 24 ಗಂಟೆಯೂ ಈ ಆಸ್ಪತ್ರೆಯು ಸೇವೆಗಳನ್ನು ಒದಗಿಸುತ್ತದೆ.

ರತನ್ ತಾತ ಅವರು ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೊಂದಿದ್ದ ಕಾಳಜಿಗೆ ಟಾಟಾ ಟ್ರಸ್ಟ್ ಹಾಗೂ ಟಾಟಾ ಮೆಮೋರಿಯಲ್ ಆಸ್ಪತ್ರೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಸಿಗಬೇಕು ಎಂದು ಬಯಸಿದ ರತನ್ ಕ್ಯಾನ್ಸರ್ ರೋಗಿಗಳ ನೆರವಿಗಾಗಿ ಟಾಟಾ ಟ್ರಸ್ಟ್ ಮೂಲಕ ಸಾವಿರ ಕೋಟಿ ರೂಪಾಯಿ ನೀಡಿದ್ದರು. ಇನ್ನೊಂದೆಡೆ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಹೋಗುವ ಬಡ ರೋಗಿಗಳಿಗೆ ಬಹುತೇಕ ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.

2001 ರ ಗುಜರಾತ್ ಭೂಕಂಪ, 2004ರ ಸುಂಟರಗಾಳಿ ಮತ್ತು ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ, ರತನ್ ಟಾಟಾ ಅವರು ತಮ್ಮ ಕಂಪನಿಯಿಂದ   ತಕ್ಷಣದ ಪರಿಹಾರಗಳನ್ನು ಘೋಷಿಸಿದರು.ಸಮಾಜದ ಪ್ರತೀ ಸಂಕಷ್ಟಕ್ಕೂ ಸ್ಪಂದಿಸಿರುವ  ಟಾಟಾ ಅವರು ಆರೋಗ್ಯ ,ಶಿಕ್ಷಣ ,ಪೌಷ್ಟಿಕ ಆಹಾರ ,ಬಡವರ ಜೀವನ ಮಟ್ಟ ಸುಧಾರಣೆ, ನೀರಿನ ಯೋಜನೆ  , ಡಿಜಿಟಲೀಕರಣ ಪ್ರಾಕೃತಿಕ ವಿಕೋಪದ ವೇಳೆ  ನೆರವಿನ ಹಸ್ತ ಚಾಚಿದ್ದಾರೆ. 2019-20 ರಲ್ಲಿ ದೇಶ ಕರೋನ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದಾಗ ಟಾಟಾ ಸಮೂಹ ಸಾವಿರ ಕೋಟಿ ರೂಪಾಯಿ ದೇಣಿಗೆ ನೀಡಿದರೆ ,ರತನ್ ಟಾಟಾ ವೈಯಕ್ತಿಕವಾಗಿ 500 ಕೋಟಿ ನೀಡಿದ್ದು ಅವರ ಉದಾರತನಕ್ಕೆ ಹಾಗೂ ಮಾನವೀಯತೆಗೆ ಸಾಕ್ಷಿಯಾಗಿದೆ.

ಟಾಟಾ ಕಂಪನಿಗಳು ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶಗಳನ್ನು ನೀಡುತ್ತವೆ.ಮಹಿಳೆಯರಿಗೆ ಸುರಕ್ಷಿತ, ಸಮಾನ ಮತ್ತು ಗೌರವಯುತ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.ಟಾಟಾ ಫೌಂಡೇಶನ್, ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸುವ ಹಲವಾರು ಚಟುವಟಿಕೆಗಳನ್ನು ನಡೆಸಿದೆ.ಸ್ವಾವಲಂಬನೆಗೆ ಉತ್ತೇಜನ ನೀಡಲು ಮತ್ತು ಸಣ್ಣ ಉದ್ಯಮ ಆರಂಭಿಸಲು ಬೇಕಾದ ಸಂಪನ್ಮೂಲ, ತರಬೇತಿ, ಮತ್ತು ಪ್ರೋತ್ಸಾಹವನ್ನು ಮಹಿಳೆಯರಿಗೆ ನೀಡಲಾಗುತ್ತದೆ.

ಸಮಾಜ ಸೇವೆ ,ಕರುಣೆ ಮತ್ತು ಉದಾರತೆ ಇವು ರತನ್ ಟಾಟಾ ಅವರಲ್ಲಿದ್ದ ಮೂರು ಮಹಾನ್ ಆದರ್ಶ ಗುಣಗಳು . ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಎಂದು ತಮ್ಮ ಹೆಸರನ್ನು ದಾಖಲಿಸಬಹುದಿತ್ತು. ಆದರೆ ತಾನೊಬ್ಬ ಅಗರ್ಭ ಶ್ರೀಮಂತನಾಗಿ ಹೊರಹೊಮ್ಮುವುದು ಅವರಿಗೆ ಬೇಕಿರಲಿಲ್ಲ. ಬದಲಿಗೆ ತಮ್ಮ ದುಡಿಮೆಯ ಹೆಚ್ಚಿನ ಪಾಲನ್ನು ಸಮಾಜಕ್ಕಾಗಿ ನೀಡುವುದು ಅವರ ಮನದಾಸೆಯಾಗಿತ್ತು. ಇವರು ಟಾಟಾ ಸಮೂಹ ಸಂಸ್ಥೆಗಳಿಂದ ನಿವೃತ್ತಿಯಾದ ಬಳಿಕ ತಮ್ಮ ದುಡಿಮೆಯ ಶೇಕಡ 60ರಷ್ಟು ಹಣವನ್ನು ಸಮಾಜಕ್ಕಾಗಿ ನೀಡಿದ್ದಾರೆ.ಒಟ್ಟಿನಲ್ಲಿ ದೇಶದ ಪ್ರಗತಿಗೆ ಹಾಗೂ ಏಳಿಗೆಗೆ ಅವರು ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಟಾಟಾ ಸಂಸ್ಥೆಗಳು ಭಾರತದಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಮೂಲಕ ದೇಶದ ಆರ್ಥಿಕತೆಗಾಗಿ ಮಹತ್ವಪೂರ್ಣ ಪಾತ್ರ ವಹಿಸಿದ್ದವು.ದೇಶದ ಹೆಮ್ಮೆಯ ಪುತ್ರರಾದ ಇವರು 2024 ರ  ಅಕ್ಟೋಬರ್ 9ರಂದು  ತಮ್ಮ 86ನೇ ವಯಸ್ಸಿನಲ್ಲಿ ನಿಧನ ಹೊಂದಿದರು.

ಉಪಸಂಹಾರ:

ಪದ್ಮವಿಭೂಷಣ ಪುರಸ್ಕೃತರಾದ ರತನ್ ಟಾಟಾ, ಅವರು ಉದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಪ್ರಸಿದ್ಧರಾಗಿದ್ದರೂ, ತಮ್ಮ ಸರಳತೆ ಮತ್ತು ಸಜ್ಜನಿಕತೆಯ ಜೀವನದ ಮೂಲಕ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ.ಅವರಿಂದ ನಾವು ಹಲವು ಮಹತ್ವದ ಪಾಠಗಳನ್ನು ಕಲಿಯಬಹುದು. ಅವರು ತೋರಿಸಿದ ನೈತಿಕತೆ, ಉದ್ಯಮದ ನವೀನ ದೃಷ್ಟಿಕೋನ ಮತ್ತು ಸಮಾಜ ಸೇವೆಯ ಮಹತ್ವವನ್ನು ನಾವು ಎಲ್ಲಾ ಸಮಯದಲ್ಲೂ ಅವಲಂಬಿಸಬಹುದು.ಒಬ್ಬ ವ್ಯಕ್ತಿ ಎಷ್ಟು ಕಾಲ ಬದುಕಿದ್ದ ಎನ್ನುವುದಕ್ಕಿಂತಲೂ ಹೆಚ್ಚಾಗಿ ಆತ ಮಾಡಿದ ಉತ್ತಮ ಕೆಲಸಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು ಆತನ ಹೆಸರನ್ನು ಅಜರಾಮರವಾಗಿಸುತ್ತವೆ. ಅಂತಹ ಅಜರಾಮರ ವ್ಯಕ್ತಿಯಾಗಿ ರತನ್ ಟಾಟಾ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.

ಆಧುನಿಕ ತಂತ್ರಜ್ಞಾನಗಳಿಂದ ಮಾನವೀಯ ಸಂಬಂಧಗಳ ಶಿಥಿಲತೆ

 ಪೀಠಿಕೆ:

ಇತಿಹಾಸದ ಪ್ರಾರಂಭದಿಂದಲೂ ಜನರು ಕೌಟುಂಬಿಕ, ಸಾಮಾಜಿಕ ಸಂಬಂಧಗಳ ಮೂಲಕ ಒಟ್ಟಾಗಿ ಬದುಕುತ್ತಿದ್ದರು. ಒಟ್ಟುಗೂಡಿದ ಬೃಹತ್ ಕುಟುಂಬಗಳು ಪರಸ್ಪರ ಕಾಳಜಿ, ಪ್ರೀತಿ,ವಿಶ್ವಾಸ ಮತ್ತು ಸಹಕಾರದ ಮೂಲಕ ಬದುಕು ನಡೆಸುತ್ತಿದ್ದವು.ಆದರೆ ಕಾಲಕಾಲಕ್ಕೆ ತಂತ್ರಜ್ಞಾನ, ಆಧುನಿಕ ಜೀವನಶೈಲಿಗಳು ನಮ್ಮ ಜೀವನ ರೀತಿಯನ್ನೇ ಬದಲಾಯಿಸಿದವು. ಸಂಬಂಧಗಳ ಮೌಲ್ಯದಲ್ಲಿ ಬದಲಾವಣೆ ಕಾಣಿಸಿಕೊಂಡವು. ಅದರಲ್ಲೂ ಮುಖ್ಯವಾಗಿ ಆಧುನಿಕ ತಂತ್ರಜ್ಞಾನಗಳಾದ ಟೆಲಿವಿಜನ್ ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್  ಮುಂತಾದವುಗಳು ಮಾನವೀಯ ಸಂಬಂಧಗಳ ಶಿಥಿಲತೆಗೆ ಪ್ರಮುಖ ಕಾರಣವಾಗಿದೆ

ವಿಷಯ ವಿವರಣೆ :

ಹಿಂದಿನ ಕಾಲದಲ್ಲಿ, ಮಾನವ ಸಂಬಂಧಗಳು ಬಹಳ ಗಟ್ಟಿಯಾಗಿತ್ತು. ದೊಡ್ಡ ಕುಟುಂಬಗಳು ಒಟ್ಟಾಗಿ ಒಂದೇ ಮನೆಯಲ್ಲಿದ್ದುಕೊಂಡು ಜೀವನ ನಡೆಸುತ್ತಿದ್ದರು.ಅವಿಭಕ್ತ ಕುಟುಂಬದಲ್ಲಿ ಮುತ್ತಜ್ಜ, ತಾತ, ಅಜ್ಜಿ, ಅಮ್ಮ, ಅಪ್ಪ, ಮಕ್ಕಳೆಲ್ಲರೂ ಒಟ್ಟಿಗೇ ವಾಸಿಸುತ್ತಿದ್ದರು. ಪ್ರತಿಯೊಬ್ಬರೂ ಪರಸ್ಪರ ಕಾಳಜಿ ಹಾಗೂ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದರು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು, ಮತ್ತು ಒಟ್ಟಾಗಿ ಸುಖ-ದುಃಖ ಹಂಚಿಕೊಳ್ಳುತ್ತಿದ್ದರು.

  ಮದುವೆ, ಹಬ್ಬಗಳು ಮತ್ತು ಇತರ ಸಮಾರಂಭಗಳಲ್ಲಿ ಜನರೆಲ್ಲಾ ಒಂದಾಗಿ ಸೇರಿ ಸಂಭ್ರಮಾಚರಣೆ ನಡೆಸುತ್ತಿದ್ದರು.ಮಕ್ಕಳ ಸದ್ದು ಗದ್ದಲ ಹೆಂಗಳೆಯರ ಗುಸು ಗುಸು ಪಿಸು ಪಿಸು ಮಾತುಕತೆ ಗಂಡಸರ ವಿಮರ್ಶೆಗಳು ಚರ್ಚೆಗಳು ಸಮಾರಂಭದ ಭಾಗವಾಗಿದ್ದವು.ಕಾರ್ಯಕ್ರಮದ ಕೆಲವು ದಿನಗಳ ಮೊದಲೇ ಮನೆ ಮಂದಿಯೆಲ್ಲ ಒಟ್ಟು ಸೇರುತ್ತಿದ್ದರು .ನೆರೆಕರೆಯವರ ಸಹಕಾರ, ಪ್ರೀತಿ, ಮತ್ತು ಆತ್ಮೀಯತೆಯಿಂದ ಸಮಾರಂಭಗಳನ್ನು ನಡೆಸುತ್ತಿದ್ದರು. ಸ್ನೇಹಿತರು, ಕುಟುಂಬದವರು, ದೂರದ ಸಂಬಂಧಿಕರು ಎಲ್ಲರೂ ಈ ಸಮಯದಲ್ಲಿ ಒಂದೇ ಮನೆಯವರಂತೆ ಪಾಲ್ಗೊಳ್ಳುತ್ತಿದ್ದರು.ಮನೆಯಲ್ಲಿ ಸಂತೋಷ ಸಡಗರ ಸಂಭ್ರಮದ ವಾತಾವರಣವಿರುತ್ತಿತ್ತು  . 

ಹಳ್ಳಿಯಲ್ಲಿ ಸ್ನೇಹಿತರೊಂದಿಗೆ ಆಟವಾಡುವುದು,ಹರಟೆ ಹೊಡೆಯುವುದು ಇವುಗಳೆಲ್ಲ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದ್ದವು.  ಊರಿನ ಜನರ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸಹಾಯ ಮಾಡುತ್ತಿದ್ದರು, ಮತ್ತು ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದರು. ಎಲ್ಲರಿಗೂ ಸಮಯ ಕಳೆಯಲು, ಒಬ್ಬರನ್ನೊಬ್ಬರು ಭೇಟಿ ಮಾಡಲು, ಮಾತನಾಡಲು  ಅವಕಾಶ ಹಾಗೂ ಸಮಯ ಸಿಗುತ್ತಿತ್ತು . ಈ ರೀತಿ ಉತ್ತಮ ಸಂಬಂಧಗಳನ್ನು ಹೊಂದಿದ್ದರು, ಸ್ನೇಹದ ಮತ್ತು ಬಾಂಧವ್ಯಗಳ ಬೆಸುಗೆ ತುಂಬಾ ಬಲವಾಗಿತ್ತು.

ಕಾಲಕಳೆದಂತೆ ಮಾನವೀಯ ಸಂಬಂಧಗಳ ಮೌಲ್ಯದಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬಂದವು. ತಂತ್ರಜ್ಞಾನ, ಆಧುನಿಕ ಜೀವನಶೈಲಿ, ನಗರೀಕರಣ, ಮತ್ತು ಪಾಶ್ಚತ್ಯ ಜೀವನ ಶೈಲಿಯಿಂದ ಮಾನವೀಯ ಸಂಬಂಧಗಳು ಶಿಥಿಲವಾಗಲು ಆರಂಭವಾದವು.

ಅವಿಭಕ್ತ ಕುಟುಂಬಗಳು ನಶಿಸುತ್ತಾ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಯಿತು.ಸ್ಪರ್ಧಾತ್ಮಕ ಜಗತ್ತು ಸೃಷ್ಟಿಯಾಯಿತು.ಎಲ್ಲರಿಗೂ ದುಡ್ಡೇ ದೊಡ್ಡಪ್ಪನಾಗಿ ಕಾಣಿಸಿತು.ಜೀವನ ಯಾಂತ್ರಿಕವಾಯಿತು. ಸಾಂಸಾರಿಕ  ಜೀವನದ ಒತ್ತಡ, ವೃತ್ತಿಜೀವನದ ತ್ವರಿತ ಬೆಳವಣಿಗೆ, ಮತ್ತು ವೈಯಕ್ತಿಕ ನಿರೀಕ್ಷೆಗಳ ಹೆಚ್ಚಳಗಳು ಮಾನವೀಯ ಸಂಬಂಧಗಳಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿತು.

ಪ್ರಪಂಚದ ಪ್ರತಿಯೊಂದು ದೇಶಗಳು ಅಭಿವೃದ್ಧಿ ಹೊಂದಿದವು.ಹೊಸ ಹೊಸ ಸಂಶೋಧನೆಗಳು ಆವಿಷ್ಕಾರಗಳು ಪ್ರಾರಂಭವಾದವು ತಂತ್ರಜ್ಞಾನಗಳ ಬೆಳವಣಿಗೆಯಾಯಿತು ಟೆಲಿವಿಜನ್ ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್  ಮುಂತಾದವುಗಳ ಬಳಕೆ ಪ್ರಾರಂಭವಾದವು .ಈಗ ಜಗತ್ತು ಕಿರಿದಾಯಿತು.ಇವುಗಳ ಬಳಕೆ ಹೆಚ್ಚಾದಂತೆ ಮಾನವೀಯ ಸಂಬಂಧಗಳು ದೂರವಾಗುತ್ತಾ ಬಂದವು.

ಮೊಬೈಲ್ ಫೋನ್, ಟ್ಯಾಬ್, ಕಮ್ಯೂಟರ್ ಗೇಮ್ಸ್, ಸಾಮಾಜಿಕ ಮಾಧ್ಯಮ, ಮತ್ತು ವೀಡಿಯೊ ಪ್ಲಾಟ್‌ಫಾರ್ಮ್‌ಗಳು ಮಕ್ಕಳ ದಿನಚರಿಯ ಪ್ರಮುಖ ಭಾಗವಾಗಿ ಹೋಯಿತು.ಮಕ್ಕಳೆಲ್ಲರೂ ಒಟ್ಟಾಗಿ ಬೆರೆತು ಅಂಗಳದಲ್ಲಿ ಎದ್ದು ಬಿದ್ದು ಆಟವಾಡಬೇಕಾಗಿದ್ದ  ಪ್ರಾಯದಲ್ಲಿ ಈ ತಂತ್ರಜ್ಞಾನಗಳಿಗೆ ಅಂಟಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದಿಟ್ಟಿದ್ದೇವೆ.ಹೆತ್ತವರು ತಮ್ಮ ಕೆಲಸಗಳ ಒತ್ತಡದಲ್ಲಿದ್ದರೆ ,ಮಗು ಒಂಟಿಯಾಗಿ ಇವುಗಳ ಜೊತೆ ಕಾಲ ಕಳೆಯುತ್ತದೆ. ಮನೆಯಲ್ಲಿ ಅಜ್ಜ- ಅಜ್ಜಿ ,ಅಪ್ಪ -ಅಮ್ಮ, ಅಕ್ಕಂದಿರು ಅಣ್ಣಂದಿರ ಜೊತೆ ಕಾಲ ಕಳೆಯಬೇಕಾದ ಮಗು ಕೈಯಲ್ಲಿ ಒಂದು ಮೊಬೈಲ್ ಹಿಡಿದುಕೊಂಡು ಏಕಾಂಗಿಯಾಗಿದೆ. ಆ ಮಗುವಿಗೆ ಮುಂದೆ ಸಮಾಜದೊಂದಿಗೆ  ಬೆರೆಯುವುದು ತುಂಬಾ ಕಷ್ಟವಾಗುತ್ತದೆ. ಇದರಿಂದಾಗಿ  ಮಗುವಿನ ಸರ್ವತೋಮುಖವಾದ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಇದು ಮಗುವಿನ   ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತೀವ್ರ ಹಾನಿ ಮಾಡುತ್ತಿದೆ.

  ಇಂದು ನಾವು ಸಾಮಾಜಿಕ ಮಾಧ್ಯಮಗಳಾದ   ವಾಟ್ಸಾಪ್, ಪೇಸ್‌ಬುಕ್, ಇನ್ಸ್ಟಾಗ್ರಾಮ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತೇವೆ.ಇವುಗಳು ನಮ್ಮನ್ನು ಇಂಚಿಂಚಾಗಿ ನಮ್ಮವರಿಂದ ದೂರ ಮಾಡುತ್ತಿದೆ. ನಮ್ಮ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ನಾವು ನೇರವಾಗಿ ಮಾತನಾಡಲು, ಒಟ್ಟಾಗಿ ಸೇರಲು ಹರಟೆ ಹೊಡೆಯಲು ಭಾವನೆಗಳನ್ನು ಹಂಚಿಕೊಳ್ಳಲು ಒಟ್ಟಾಗಿ ಕೂತು ಊಟ ಮಾಡಲು  ಸಮಯವಿರುವುದಿಲ್ಲ.ಇದರಿಂದ ಪರಸ್ಪರದ ನಡುವೆ ಇರಬೇಕಾಗಿದ್ದ ಆತ್ಮೀಯತೆ ಕಡಿಮೆಯಾಗುತ್ತಿದೆ.ಅವರ ವರ್ತನೆಗಳು ಅನುಮಾನಗಳಿಗೆ ಕಾರಣವಾಗಿ ನಂಬಿಕೆ ಹಾಳಾಗುತ್ತದೆ. ಅದೆಷ್ಟೋ ಅನ್ಯೋನ್ಯವಾಗಿದ್ದ ಸಂಬಂಧಗಳಲ್ಲಿ ವೈಮನಸು ಕಾಣಿಸಿಕೊಳ್ಳುತ್ತದೆ.ಸಂಸಾರಗಳಲ್ಲಿ ಬಿರುಕುಂಟಾಗುತ್ತದೆ.ಜಗಳ , ಮನಸ್ತಾಪ, ಅತ್ಯಚಾರ, ಕೊಲೆ , ಅತ್ಮಹತ್ಯೆಯಂತಹ ಕೃತ್ಯಗಳು ನಡೆಯುತ್ತದೆ.  ಈ ತಂತ್ರಜ್ಞಾನಗಳ ಅತಿಯಾದ ಬಳಕೆಯಿಂದ ಇಂದಿನ ಯುವ ಜನಾಂಗ ತಪ್ಪು ದಾರಿ ಹಿಡಿಯುತ್ತಿದೆ.  ನಾಪತ್ತೆ ಪ್ರಕರಣಗಳು ಜಾಸ್ತಿಯಾಗಿವೆ.ಕಣ್ಣ ಮುಂದೆ ಇರುವ ಸಂಬಂಧಕ್ಕಿಂತ ಪರದೆಯ ಹಿಂದೆ ಇರುವ ಆ ಕಾಣದ ಸ್ನೇಹ ಸಂಬಂಧಕ್ಕಾಗಿ  ಹಾತೊರೆಯುತ್ತಾರೆ.ಇದು ಕೂಡ ಮಾನವೀಯ ಸಂಬಂಧಗಳ ಕುಸಿತಕ್ಕೆ ಕಾರಣವಾಗಿದೆ.

ಉಪಸಂಹಾರ :

ಹೀಗಾಗಿ, ನಾವು ಆಧುನಿಕ ತಂತ್ರಜ್ಞಾನಗಳನ್ನು ಸರಿಯಾಗಿ ಬಳಸಿದರೆ ಮಾತ್ರ ಅದು ನಮಗೆ ಉಪಯುಕ್ತವಾಗುತ್ತವೆ.ಜೀವನದಲ್ಲಿ ಮಾನವೀಯ ಸಂಬಂಧಗಳೇ  ಇವೆಲ್ಲವುಗಳಿಗಿಂತ ಮುಖ್ಯ ಎಂಬುದನ್ನು ನಾವು ಅರಿತು ನಡೆಯಬೇಕು .ನಾವು ನಮ್ಮಜೀವನದಲ್ಲಿ ಚೆನ್ನಾಗಿರಬೇಕಾದರೆ ತಂದೆ-ತಾಯಿ,ಬಂಧು- ಬಾಂಧವರು , ಸ್ನೇಹಿತರು ಮತ್ತು ಇತರರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲೇಬೇಕು.

ವೀರ ಸಂಗೊಳ್ಳಿ ರಾಯಣ್ಣ

ಪೀಠಿಕೆ:

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಇವರು ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟರಾಗಿದ್ದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರು, ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡಿದರು.ಸಂಗೊಳ್ಳಿ ರಾಯಣ್ಣ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ, ಆಗಸ್ಟ್ 15, 1796(1798 ಎಂಬುದೂ ಚರ್ಚೆಯಲ್ಲಿದೆ)ರಲ್ಲಿ ಕುರುಬ ಗೌಡ ಸಮುದಾಯದಲ್ಲಿ ಜನಿಸಿದರು. ಅವರ ತಂದೆ ದಾಸಪ್ಪ ಹಾಗೂ ತಾಯಿ ಕೆಂಚಮ್ಮ.ರಾಯಣ್ಣನಿಗೆ ವೀರ ರಾಯಣ್ಣ,ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ, ಧೀರ ರಾಯಣ್ಣ, ಕ್ರಾಂತಿವೀರ  ರಾಯಣ್ಣ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ವಿಷಯ ವಿವರಣೆ:
1824ರಲ್ಲಿ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿ ಉತ್ತರಾಧಿಕಾರಿ ಇಲ್ಲದೆ ಮರಣ ಹೊಂದಿದಾಗ ಬ್ರಿಟೀಷರು ಈ ಸಂಸ್ಥಾನವನ್ನು ವಶಪಡಿಸಲು ಪ್ರಯತ್ನಿಸಿದರು.  .ಬ್ರಿಟಿಷರ' ದತ್ತು ಪುತ್ರನಿಗೆ ಹಕ್ಕಿಲ್ಲ ' ಕಾಯಿದೆಯಿಂದ ದತ್ತು ಪುತ್ರನನ್ನು ಸಂಸ್ಥಾನದ ಕಾನೂನು ಬದ್ಧ ಉತ್ತರಾಧಿಕಾರಿ ಎಂದು ಗುರುತಿಸಲು  ತೊಂದರೆಯಾಯಿತು. ಆದ್ದರಿಂದ ಕಿತ್ತೂರನ್ನು ಬ್ರಿಟೀಷರು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿದರು. ರಾಣಿ ಚೆನ್ನಮ್ಮ ಇದನ್ನು ವಿರೋಧಿಸಿ, ಬ್ರಿಟಿಷರ ಆದೇಶಗಳನ್ನು ಪಾಲಿಸಲು ನಿರಾಕರಿಸಿದರು. ಇದು  1824ರಲ್ಲಿ ಕಿತ್ತೂರಿನ ಮೊದಲ ಕದನಕ್ಕೆ ಕಾರಣವಾಯಿತು.1829ರಲ್ಲಿ ಚೆನ್ನಮ್ಮನನ್ನು ಸೆರೆಹಿಡಿಯಲಾಯಿತು. ಅವರು ಜೈಲಿನಲ್ಲಿ ನಿಧನರಾಗುವ ಕೊನೆಯವರೆಗೂ ಬ್ರಿಟಿಷರ ವಿರುದ್ಧ ವಿರಾವೇಶದ ಹೋರಾಟವನ್ನು ನಡೆಸಿದರು. 
ಕಿತ್ತೂರು ಪಡೆಗಳ ಔಪಚಾರಿಕ ಸೋಲು ಮತ್ತು ಬೈಲಹೊಂಗಲ ಜೈಲಿನಲ್ಲಿ ರಾಣಿ ಚೆನ್ನಮ್ಮನ ಬಂಧನದ ನಂತರ ರಾಯಣ್ಣ ಬ್ರಿಟಿಷರ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಿದನು. ಅವನು ರಾಣಿಯ ಹೆಸರಿನಲ್ಲಿ ಬೆಂಬಲವನ್ನು ಸಂಗ್ರಹಿಸಲು ಪ್ರಾರಂಭಿಸಿದನು ಮತ್ತು ಅವಳನ್ನು ಸೆರೆಮನೆಯಿಂದ ಬಿಡುಗಡೆ ಮಾಡಲು ಮತ್ತು ಅವಳ ದತ್ತು ಪುತ್ರನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಆಡಳಿತಗಾರನನ್ನಾಗಿ ಮಾಡುವ ವಾಗ್ದಾನ ಮಾಡಿದನು. ರಾಯಣ್ಣ ಕಿತ್ತೂರ  ಸುತ್ತಮುತ್ತದ ಪ್ರದೇಶಗಳಲ್ಲಿ ನಿರಂತರ ದಾಳಿಗಳನ್ನು ಮಾಡುತ್ತಾ, ಕಿರುಕುಳ ನೀಡುತ್ತಾ ಬ್ರಿಟಿಷರಿಗೆ ಕಂಠಕವಾಗಿ ಪರಿಣಮಿಸಿದನು.ಇದಕ್ಕೆ ಪ್ರತಿಯಾಗಿ ಬ್ರಿಟಿಷರು  ರಾಯಣ್ಣನ ಹಿಡಿತದಲ್ಲಿದ್ದ ಪ್ರದೇಶಗಳ ಮೇಲೆ ಭಾರಿ ತೆರಿಗೆಯನ್ನು ವಿಧಿಸುವ ಮೂಲಕ ಪ್ರತಿಕಾರ ತೀರಿಸಿಕೊಂಡರು.ರಾಯಣ್ಣ ಕಿತ್ತೂರಿನ ಜನರ ಅಗಾಧ ಬೆಂಬಲವನ್ನು ಪಡೆದನು. ಬ್ರಿಟಿಷರು  ಅವರ ಮೇಲೆ ಹೇರಿದ ಅತಿರೇಕದ ತೆರಿಗೆಗಳು ಸಾಮಾನ್ಯ ಜನಸಾಮಾನ್ಯರ ಅದರಲ್ಲೂ ವಿಶೇಷವಾಗಿ ರೈತರ ಜೀವನವನ್ನು ಹಾಳು ಮಾಡಿತು ಮತ್ತು ಇದು ರಾಯಣ್ಣನ ಹೋರಾಟಕ್ಕೆ ಗಣನೀಯವಾಗಿ ಸಹಾಯ ಮಾಡಿತು.ಗೆರಿಲ್ಲಾ ತಂತ್ರಗಳನ್ನು ಬಳಸಿದ ಆರಂಭಿಕ ಕ್ರಾಂತಿಕಾರಿಗಳಲ್ಲಿ ರಾಯಣ್ಣ ಒಬ್ಬರಾಗಿದ್ದರು.ಸ್ಥಳೀಯ ಪರಿಣತಿ ಹೊಂದಿದ ಯುವಕರು ಮತ್ತು ಸ್ಥಳೀಯ ನಿವಾಸಿಗಳನ್ನು ಅವರು ಸೈನ್ಯದಲ್ಲಿ ನೇಮಕ ಮಾಡಿಕೊಂಡರು. ರಾಯಣ್ಣ ಬ್ರಿಟಿಷರ ವಿರುದ್ಧ ತನ್ನ ಅಕ್ರಮಣವನ್ನು ಮುಂದುವರಿಸಿದರು. ಅವರು ಸರ್ಕಾರಿ ಕಚೇರಿಗಳನ್ನು ದ್ವಂಸ ಮಾಡಿದರು ಮತ್ತು  ಖಜಾನೆಗಳನ್ನು ಲೂಟಿ ಮಾಡಿದರು.  ಸ್ಥಳೀಯ ಭೂ ಮಾಲೀಕರು ಮತ್ತು ಶ್ರೀಮಂತ ಭಾರತೀಯರನ್ನು ಗುರಿಯಾಗಿಸಿಕೊಂಡರು. ಏಕೆಂದರೆ ಅವರು ಬಡವರನ್ನು ಶೋಷಿಸಲು ಬ್ರಿಟಿಷರನ್ನು ಬೆಂಬಲಿಸುತ್ತಿದ್ದರು. ರಾಯಣ್ಣ ಮತ್ತು ಸಹಚರರು ಭೂಮಿ ಮತ್ತು ಕಂದಾಯ ದಾಖಲೆಗಳನ್ನು ನಾಶಪಡಿಸಿದರು, ಇದರಿಂದ ಬ್ರಿಟಿಷರು ಭಾರಿ ಆದಾಯ ನಷ್ಟವನ್ನು ಅನುಭವಿಸುವಂತೆ ಮಾಡಿದರು. ಈ ಎಲ್ಲಾ ಸಾಹಸಗಳು ರಾಯಣ್ಣನಿಗೆ ಸಾಮಾನ್ಯ ಜನರ ಪ್ರೀತಿ ಮತ್ತು ಬೆಂಬಲವನ್ನು ಪಡೆಯಲು ಸಹಾಯಕವಾದವು.
ರಾಯಣ್ಣನನ್ನು ಸೆರೆಹಿಡಿಯಲು ಹೊಂಚು ಹಾಕಿದ ಬ್ರಿಟಿಷರು ಮತ್ತು ಅವರನ್ನು ಬೆಂಬಲಿಸುತ್ತಿದ್ದ ಸ್ಥಳೀಯ ಜಮೀನುದಾರರು  ಕುತಂತ್ರ ಮತ್ತು ದ್ರೋಹದ ಮೂಲಕ ರಾಯಣ್ಣನನ್ನು ಹಿಡಿಯಲು, ಕುತಂತ್ರದ ಯೋಜನೆಯನ್ನು ರೂಪಿಸಿದರು. ರಾಯಣ್ಣ ಮತ್ತು ಅವನ ಬೆಂಬಲಿಗರನ್ನು  ಹಿಡಿಯಲು  ಸಹಾಯ ಮಾಡುವಂತೆ ಅವರ ಚಿಕ್ಕಪ್ಪ ಲಕ್ಷ್ಮಣನನ್ನು ಮನವೊಲಿಸಿದರು. ದೋರಿ ಬೆಣಚಿ ಸಮೀಪದ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ರಾಯಣ್ಣನನ್ನು ಮೋಸದಿಂದ ಸೆರೆ ಹಿಡಿದರು . ಹೊಳೆಗೆ ಸ್ನಾನಕ್ಕೆ ಹೋಗುವ ಮೊದಲು ರಾಯಣ್ಣ ತನ್ನ ಚಿಕ್ಕಪ್ಪನ ಬಳಿ ತನ್ನ ಖಡ್ಗವನ್ನು ಬಿಟ್ಟನು ಮತ್ತು ಅವನು ಸ್ಥಾನದ ನಂತರ ಅದನ್ನು ತನ್ನ ಕೈಗೆ ಕೊಡಲು ತನ್ನ ಚಿಕ್ಕಪ್ಪನನ್ನು ಕೇಳಿದಾಗ ಕುಂತಂತ್ರಿ  ಲಕ್ಷ್ಮಣ ಅದನ್ನು ಹತ್ತಿರದಲ್ಲಿ ಇದಕ್ಕಾಗಿ ಹೊಂಚು ಹಾಕುತ್ತಿದ್ದ ಬ್ರಿಟಿಷ್ ಸೈನಿಕರಿಗೆ ಒಪ್ಪಿಸಿದನು.  ನಿರಾಯುಧನಾದ ರಾಯಣ್ಣನನ್ನು ಕೂಡಲೇ ಸೋಲಿಸಿ  ಬಂಧಿಸಲಾಯಿತು. ಬಳಿಕ ನಂದಗಡ ಗ್ರಾಮದ ಹೊರವಲಯದಲ್ಲಿರುವ ಆಲದ ಮರಕ್ಕೆ ನೇಣು ಹಾಕಲಾಯಿತು. ನಿರ್ಭಿತ ಮತ್ತು ಪರಾಕ್ರಮಿ ಯೋಧನು ನಡೆಸುತ್ತಿದ್ದ ಅಭಿಯಾನವು 1831ರ ಜನವರಿ 26 ರಲ್ಲಿ ಕೊನೆಗೊಂಡಿತು.
ಉಪಸಂಹಾರ:
ಇಂಗ್ಲಿಷರ ವಿರುದ್ಧದ ಹೋರಾಟದಲ್ಲಿ ಅವರು ತೋರಿಸಿದ ಸಮರ್ಥತೆ, ಸಾಮಾನ್ಯ ಪ್ರಜೆಗಳಲ್ಲಿ ಹುಟ್ಟಿಸಿದ ಜಾಗೃತಿ, ಮತ್ತು ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳು  ಎಲ್ಲರಿಗೂ ಮಾದರಿಯಾಗಿದೆ.ಅವರು ದೇಶದ ಹಕ್ಕುಗಳಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಅವರ ಧೈರ್ಯ, ನಿಷ್ಠೆ ಮತ್ತು ತ್ಯಾಗವನ್ನು ನಾವು ಸದಾ ಸ್ಮರಿಸಬೇಕಾಗಿದೆ.

ವಿದ್ಯಾರ್ಥಿ ಜೀವನ

 ಪೀಠಿಕೆ:

ವಿದ್ಯಾರ್ಥಿ ಜೀವನವು ಪ್ರತಿ ವ್ಯಕ್ತಿಯ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಇದು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಅವಧಿಯಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೃದ್ಧಿ ಪಡಿಸಿಕೊಳ್ಳಲು, ತಮ್ಮ ವ್ಯಕ್ತಿತ್ವವನ್ನು ಬೆಳಸಲು ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶ್ರಮಿಸುತ್ತಾರೆ. 

ವಿಷಯ ವಿವರಣೆ:

ಹೆತ್ತವರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಸ್ತು, ಪರಿಶ್ರಮ, ಮತ್ತು ಆತ್ಮವಿಶ್ವಾಸದಿಂದ ಓದುವಿಕೆ, ಆಳವಾದ ಕಲಿಕೆ, ಮತ್ತು ಸಂಸ್ಕಾರಗಳನ್ನು ಬೆಳೆಸುವುದು ವಿದ್ಯಾರ್ಥಿ ಜೀವನದ ನಿಜವಾದ ಉದ್ದೇಶ.

ವಿದ್ಯಾರ್ಥಿ ಜೀವನವು ಉತ್ತಮ ಸಂಸ್ಕಾರಗಳು ಮತ್ತು ಮೌಲ್ಯಗಳಿಗೆ ಪೂರಕವಾಗಿರಬೇಕು. ಆತ್ಮವಿಶ್ವಾಸ, ಪ್ರಾಮಾಣಿಕತೆ, ಗೌರವ ಮತ್ತು ಸಹಕಾರವೇ ಜೀವನದ  ತತ್ವಗಳಾಗಿವೆ. ಗುರುಗಳಿಗೆ ಮತ್ತು ಹಿರಿಯರಿಗೆ ಗೌರವ, ಸ್ನೇಹಿತರಿಗೆ ಸಹಕಾರ, ಮತ್ತು ಸಮಾಜಕ್ಕಾಗಿ ಸೇವಾ ಮನೋಭಾವನೆಯನ್ನು ಬೆಳಸುವುದು ವಿದ್ಯಾರ್ಥಿಯ ಮುಖ್ಯ ಕರ್ತವ್ಯವಾಗಿದೆ.ಮಾನವೀಯ ಮೌಲ್ಯಗಳು, ಗೌರವ, ಪ್ರಾಮಾಣಿಕತೆ, ಮತ್ತು ಸ್ನೇಹ ಇವು ವಿದ್ಯಾರ್ಥಿ ಜೀವನದ ಆಧಾರಸ್ತಂಭಗಳಾಗಿವೆ. 

ಶಿಸ್ತು ಇಲ್ಲದೆ ಯಾವುದೇ ಸಾಧನೆ ಅಸಾಧ್ಯ.ಶಿಸ್ತು ಇಲ್ಲದ ವಿದ್ಯಾರ್ಥಿ ಜೀವನವು ಗುರಿಯಿಲ್ಲದ ಹಡಗಿನಂತೆ.ಸಮಯದ ಮೌಲ್ಯವನ್ನು ಅರಿತು, ಪ್ರತಿ ಕಾರ್ಯವನ್ನು ಶಿಸ್ತಿನಿಂದ ಮಾಡುವುದು ವಿದ್ಯಾರ್ಥಿಗಳಿಗೆ ಅತ್ಯಗತ್ಯ.  ಅವಲೋಕನೆ, ಸಮಯಪಾಲನೆ, ನಿರಂತರ ಅಭ್ಯಾಸ ಇವು  ಶಿಸ್ತಿನ ಗುಣಗಳನ್ನು ಬೆಳೆಸುತ್ತವೆ.ಇದರಿಂದ ಗುರಿಯನ್ನು ಸಾಧಿಸುವ ದೃಢ ಮನೋಬಲ ಸಿದ್ಧಿಸುತ್ತದೆ. ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಅತ್ಯಗತ್ಯ.ಅನಗತ್ಯ ಯೋಚನೆ ಅಥವಾ ಆತಂಕಗಳಿಂದ ದೂರವಿರಬೇಕು. ಏನಾದರೂ ಹಿಡಿದ ಕಾರ್ಯ ವಿಫಲವಾದರೆ ಅದನ್ನು ಗುರಿಯಾಗಿಸಿ, ಮತ್ತೆ ಪ್ರಯತ್ನಿಸಬೇಕು.

ವಿದ್ಯಾರ್ಥಿ ಜೀವನದ ಮುಖ್ಯ ಉದ್ದೇಶವೇ ಜ್ಞಾನವನ್ನು ಸಂಪಾದಿಸುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನಹರಿಸಿ, ವಿವಿಧ ವಿಷಯಗಳನ್ನು ತಿಳಿದುಕೊಳ್ಳಲು ಸತತವಾಗಿ ಶ್ರಮಿಸಬೇಕು. ಈ ಹಂತವು ಕೇವಲ ಪುಸ್ತಕದ ಪಾಠಗಳನ್ನು ಮಾತ್ರವಲ್ಲ, ಜೀವನದ ಪಾಠಗಳನ್ನು ಕಲಿಯುವ ಅವಕಾಶಗಳನ್ನು ಒದಗಿಸುತ್ತದೆ. ವಿಭಿನ್ನ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಕಲೆ, ಕ್ರೀಡೆ, ಹಾಗೂ ಸೃಜನಾತ್ಮಕ ಪ್ರಪಂಚದಲ್ಲಿ ತೊಡಗಿಕೊಳ್ಳುವುದು ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಸಹಾಯಕವಾಗುತ್ತದೆ.

ವಿದ್ಯಾರ್ಥಿ ಜೀವನ ಮೋಜು-ಮಸ್ತಿಗಾಗಿ ಅಲ್ಲ, ಅದು ಜೀವನದ ಶ್ರೇಷ್ಠತೆಯನ್ನು ಸಾಧಿಸಲು, ಜ್ಞಾನವನ್ನು ಸಂಪಾದಿಸಲು, ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಇರುವ ಮಾರ್ಗವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಯು ಸರಿ ತಪ್ಪುಗಳನ್ನು ಅರ್ಥೈಸಿಕೊಳ್ಳಬೇಕು .ಒಳಿತು ಕೆಡುಕುಗಳ ಬಗ್ಗೆ ತಿಳುವಳಿಕೆ ಇರಬೇಕು .ಒಳ್ಳೆಯ ಅಭ್ಯಾಸಗಳನ್ನು ಹಾಗು ಹವ್ಯಾಸಗಳನ್ನು ಬೆಳೆಸಿಕೊಂಡು, ಉತ್ತಮ ಗುಣ ನಡತೆ ಹೊಂದಬೇಕು. ಒಳ್ಳೆಯವರ ಸಂಗವನ್ನು ಮಾಡಬೇಕು. ತಪ್ಪು ಹೆಜ್ಜೆ ಇಡದಂತೆ ಎಚ್ಚರಿಕೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಹೀಗೆ ವಿದ್ಯಾರ್ಜನೆಯೊಂದಿಗೆ ಜ್ಞಾನ ಸಂಪಾದನೆಯನ್ನು ಮಾಡುತ್ತಾ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು.

ಜೀವನದಲ್ಲಿ ಪ್ರತಿಯೊಂದು ಮೆಟ್ಟಲಲ್ಲೂ  ಸವಾಲುಗಳು ಇರುತ್ತವೆ. ವಿದ್ಯಾರ್ಥಿಗಳು ಧೈರ್ಯದಿಂದ ಈ ಇವೆಲ್ಲವನ್ನೂ ಎದುರಿಸಿ, ತಮ್ಮ ದಾರಿ ಹುಡುಕಬೇಕು. ಸೋಲುಗಳನ್ನು ಸಹ ಸಮಾನವಾಗಿ ಸ್ವೀಕರಿಸಿ, ಅವುಗಳಿಂದ ಪಾಠಗಳನ್ನು ಕಲಿಯುವುದು  ಬಹಳ ಮುಖ್ಯ.

ಉಪಸಂಹಾರ:

ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಶಿಸ್ತಿನ ಜೀವನಶೈಲಿ, ಆರೋಗ್ಯದ ಮೇಲೆ ಗಮನ, ಮತ್ತು ಸಕಾರಾತ್ಮಕ ಮನೋಭಾವನೆ ಇವುಗಳನ್ನು ಹೊಂದಿರುವುದು ಅಗತ್ಯ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ, ವ್ಯಕ್ತಿ ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸಿ, ಯಶಸ್ವಿ ಭವಿಷ್ಯವನ್ನು ಕಟ್ಟಿಕೊಳ್ಳಬಹುದು.ವಿದ್ಯಾಭ್ಯಾಸವು ಕೇವಲ ಒಂದು ಗುರಿ ಮಾತ್ರವಲ್ಲ , ಅದು ಸಾರ್ಥಕವಾದ ಮತ್ತು ಸಂತೋಷಕರ ಜೀವನವನ್ನು ಕಟ್ಟಲು ಅವಶ್ಯವಿರುವ ಮಾರ್ಗ.

ಸ್ತ್ರೀ ಸಬಲೀಕರಣ

ಪೀಠಿಕೆ :

ಸ್ತ್ರೀ ಸಬಲೀಕರಣ ಎಂದರೆ ಮಹಿಳೆಯರು ತಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಹಕ್ಕುಗಳನ್ನು ಪಡೆದು, ಸ್ವತಂತ್ರವಾಗಿ ನಿರ್ಧಾರಗಳನ್ನು ಕೈಗೊಳ್ಳುವುದು ಎಂದರ್ಥ. ಸ್ತ್ರೀಯರನ್ನು ಪ್ರಬಲಗೊಳಿಸುವ ಸಬಲೀಕರಣವು ಕೇವಲ ಮಹಿಳೆಯರ ಜೀವನದ ಗುಣಮಟ್ಟವನ್ನು ಸುಧಾರಿಸುವ ಪ್ರಕ್ರಿಯೆಯಷ್ಟೇ ಅಲ್ಲ; ಬದಲಾಗಿ ಇದು ಸಮಗ್ರ ಸಮಾಜದ ಸುಧಾರಣೆ ಮತ್ತು ಸಮಾನತೆಯ ಸಾಧನೆಗೆ ಇರುವ  ಒಂದು  ಹಾದಿಯಾಗಿದೆ. 

ವಿಷಯ ವಿವರಣೆ :

ಭಾರತೀಯ ಸಂಸ್ಕೃತಿಯ ಪ್ರಾಚೀನ ಗ್ರಂಥಗಳಲ್ಲಿ ಸ್ತ್ರೀಯರಿಗೆ ಮಹತ್ವದ ಸ್ಥಾನ ನೀಡಲಾಗಿದೆ. ವೇದಕಾಲದಲ್ಲಿ ಮಹಿಳೆಯರ ಸ್ಥಾನಮಾನವು ಅತ್ಯಂತ ಮಹತ್ವದಿಂದ ಕೂಡಿತ್ತು. ಅವರು ಕುಟುಂಬದಲ್ಲಿ ಮತ್ತು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗಿದ್ದರು.ಮಹಿಳೆಯರಿಗೆ ಶಿಕ್ಷಣದ ಜೊತೆಗೆ ವಿವಿಧ ಧಾರ್ಮಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುವ ಹಕ್ಕುಗಳು ಮತ್ತು ಸ್ವತಂತ್ರತೆಯೂ ಇದ್ದವು.ಮಾತ್ರವಲ್ಲದೆ ಮಹಿಳೆಯರು ವೇದಪಠಣ ಹಾಗೂ ಯಜ್ಞಗಳಲ್ಲೂ ಪಾಲ್ಗೊಳ್ಳುತ್ತಿದ್ದರು ಮತ್ತು ಕೆಲವರು ವಿದ್ವಾಂಸರು, ಋಷಿಗಳು ಕೂಡ ಆಗಿದ್ದರು. ಗಾರ್ಗಿ, ಮೈತ್ರೇಯಿ ಮುಂತಾದ  ಮಹಿಳೆಯರು ವೇದಶಾಸ್ತ್ರದಲ್ಲಿ ಗೌರವದ ಸ್ಥಾನವನ್ನು ಪಡೆದಿದ್ದರು.

ಆದರೆ ಕಾಲಕ್ರಮೇಣ,ಮಧ್ಯಕಾಲದಲ್ಲಿ ಪಿತೃತ್ವಾಧಿಪತ್ಯದ ಪ್ರಭಾವದಿಂದ ಮಹಿಳೆಯರ ಸ್ಥಾನವು ಕುಸಿಯತೊಡಗಿತು.  ಅನೇಕ ರೀತಿಯ  ಕಾನೂನುಗಳು ಜಾರಿಯಾಗುತ್ತಾ ಬಂದವು.ಮಧ್ಯಕಾಲದಲ್ಲಿ ಸ್ತ್ರೀಯರ ಜೀವನವು ಕುಟುಂಬ, ಧರ್ಮ, ಮತ್ತು ಸಾಮಾಜಿಕ ನಿಯಮಗಳ ನಿರ್ಬಂಧಗಳಲ್ಲಿ ಕಟ್ಟಿ ಹಾಕಲಾಗಿತ್ತು.

   ನಂತರ ಆಧುನಿಕ ಕಾಲದಲ್ಲಿ, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿಯೇ ಮಹಿಳಾ ಹಕ್ಕುಗಳ ವಿಷಯದಲ್ಲಿ ಜಾಗೃತಿ ಮೂಡಿತು, ಮುಂದೆ ಸ್ತ್ರೀ ಸಬಲೀಕರಣವು ಹಲವಾರು ಹಂತಗಳಲ್ಲಿ ಬೆಳವಣಿಗೆಯಾಯಿತು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ,

ಆಧುನಿಕ ಶಿಕ್ಷಣ: 19ನೇ ಶತಮಾನದಲ್ಲಿ ಬ್ರಿಟಿಷರು ಭಾರತದಲ್ಲಿ ಪಾಶ್ಚಾತ್ಯ ಶಿಕ್ಷಣವನ್ನು ಪರಿಚಯಿಸಿದ ನಂತರ, ಸ್ತ್ರೀಯರ ಶಿಕ್ಷಣದತ್ತ ಗಮನ ಹರಿಸಲಾಯಿತು.ಮಹಿಳೆಯರೂ ವಿದ್ಯಾವಂತರಾಗಿ ಸಮಾಜದಲ್ಲಿ ಉನ್ನತ ಸ್ಥಾನಮಾನವನ್ನು ಪಡೆಯಲು ಪ್ರಾರಂಭಿಸಿದರು.

ಸಮಾಜ ಸುಧಾರಣೆ ಹೋರಾಟಗಳು: ರಾಜರಾಮಮೋಹನ್ ರಾಯ್, ಈಶ್ವರಚಂದ್ರ ವಿದ್ಯಾಸಾಗರ ಮುಂತಾದ ಸಮಾಜ ಸುಧಾರಕರು ಸತಿಪದ್ಧತಿ, ಬಾಲವಿವಾಹ, ಮತ್ತು ವಿಧವೆ ಪುನರ್ವಿವಾಹದಂತಹ ಆಚಾರ-ವಿಚಾರಗಳ ವಿರುದ್ಧ ಹೋರಾಡಿದರು. 19ನೇ ಶತಮಾನದಲ್ಲಿ ಬಾಲವಿವಾಹ ನಿಷೇಧ, ವಿಧವೆ ಪುನರ್ವಿವಾಹದ ಅನುಮತಿ ಮುಂತಾದ ಸುಧಾರಣೆಗಳು ಮಹಿಳೆಯರಿಗೆ ಸ್ವಾತಂತ್ರ್ಯವನ್ನು ನೀಡುವಲ್ಲಿ ಸಹಾಯಕವಾದವು.

ಕಾನೂನುಗಳು: ಸ್ತ್ರೀ ಸಬಲೀಕರಣಕ್ಕಾಗಿ ನಮ್ಮ ದೇಶದಲ್ಲಿ ಹಲವು ಕಾನೂನುಗಳು ಜಾರಿಯಲ್ಲಿವೆ, ಅವುಗಳೆಲ್ಲವೂ ಮಹಿಳೆಯರ ಹಕ್ಕುಗಳನ್ನು ರಕ್ಷಿಸಲು ಮತ್ತು ಸಮಾನತೆ ತಂದೊಡ್ಡಲು ಸಹಕಾರಿಯಾಗಿವೆ. ಈ ಕಾನೂನುಗಳು ಮಹಿಳೆಯರ ಮೇಲೆ ನಡೆಯುವ ಬಲಾತ್ಕಾರ, ದೌರ್ಜನ್ಯ, ಲೈಂಗಿಕ ಹಲ್ಲೆ, ಕುಟುಂಬದಲ್ಲಿ ದೌರ್ಜನ್ಯ ಮುಂತಾದ ಸಮಸ್ಯೆಗಳನ್ನು ತಡೆಯಲು ಸಕ್ರಿಯವಾಗಿ ನೆರವಾಗುತ್ತವೆ.ಗೃಹ ಹಿಂಸೆ ತಡೆ ಕಾಯಿದೆ - 2005  ,ದಾಂಪತ್ಯ ಹಕ್ಕುಗಳ ಕಾಯಿದೆ-1986  ,ಮಹಿಳಾ ಪೌರತ್ವ (ಹಕ್ಕು) ಕಾಯಿದೆ ಇತ್ಯಾದಿಗಳು ಸ್ತ್ರೀ ಸಬಲೀಕರಣಕ್ಕೆ ಒತ್ತು ನೀಡಿದೆ.

ಆರ್ಥಿಕ ಸ್ವಾತಂತ್ರ್ಯ ಮತ್ತು ಉದ್ಯೋಗ ಅವಕಾಶಗಳು: ಕಾಲಕ್ರಮೇಣ ಮಹಿಳೆಯರು ಉದ್ಯೋಗ ಕ್ಷೇತ್ರಗಳಲ್ಲಿ ಪ್ರವೇಶಿಸಿದರು, ಮತ್ತು ತಮ್ಮ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸಿಕೊಂಡರು. ಇದರಿಂದಾಗಿ, ಅವರು ಕೌಟುಂಬಿಕ ವಿಷಯಗಳಲ್ಲಿ ಹೆಚ್ಚು ಪ್ರಭಾವಶಾಲಿಗಳಾದರು.

ರಾಜಕೀಯ ಭಾಗವಹಿಸುವಿಕೆ: ಮಹಿಳೆಯರಿಗೆ ಮತದಾನದ ಹಕ್ಕು, ಪ್ರಜಾಪ್ರಭುತ್ವದಲ್ಲಿ ತಮ್ಮ ಸ್ಥಾನಮಾನ ವೃದ್ಧಿಸುವಂತೆ ಮಾಡಿದ ಪ್ರಮುಖ ಹಂತ. ಅಷ್ಟೇ ಅಲ್ಲ, ಇಂದಿನ ಭಾರತದಲ್ಲಿ ಅನೇಕ ಪ್ರಮುಖ ಹುದ್ದೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ.

 ಉಪಸಂಹಾರ:

ಸ್ತ್ರೀ ಸಬಲೀಕರಣವು ಕೇವಲ ಮಹಿಳೆಯರ ಪ್ರಗತಿಗೆ ಮಾತ್ರವಲ್ಲದೇ, ಸಮಗ್ರ ಸಮಾಜದ ಏಳಿಗೆಗೆ ಅವಶ್ಯಕವಾಗಿದೆ. ಮಹಿಳೆಯರು ಆತ್ಮವಿಶ್ವಾಸದಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಲು ಆರಂಭಿಸಿದಾಗ, ಅದರ ಪ್ರತಿಫಲವು ಕುಟುಂಬ, ಸಮುದಾಯ, ಮತ್ತು ದೇಶದ ಬೆಳವಣಿಗೆಗೆ ದೊಡ್ಡ ಕೊಡುಗೆಯಾಗುತ್ತದೆ.ಇದು ಸಮಾನತೆ, ಪ್ರಗತಿ ಮತ್ತು ಸಮೃದ್ಧಿಯ ದಾರಿಯಲ್ಲಿ ಸಮಾಜದ ಎಲ್ಲಾ ವಲಯಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ.

                                              - ಉಷಾ ಪ್ರಸಾದ್