ನನ್ನ ಕನಸಿನ ಭಾರತ

 


https://youtu.be/ovtxfQ760A4?si=5K2jUYY_3n5-NvPk

If you like the content,
Please Like, Share, Comment and Subscribe my YouTube channel.


ಟಿಪ್ಪಣಿ :ನನ್ನ ಭಾರತವು ಬೇರೆಲ್ಲಾ ದೇಶಗಳಿಗಿಂತಲೂ ತುಂಬಾ ಚೆನ್ನಾಗಿರಬೇಕೆಂಬ ಕನಸು ನನ್ನದು . ನಾವು ಭಾರತೀಯರೆಂದು ಎಲ್ಲೆಡೆ ಎದೆ ತಟ್ಟಿ ಹೆಮ್ಮೆಯಿಂದ ಹೇಳುವ ದೇಶ ನಮ್ಮದಾಗಬೇಕು. ಎಲ್ಲಾ ದೇಶಗಳು ಭಾರತವನ್ನು ಹೊಗಳುವಂತೆ ಮಾಡಬೇಕು. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತವು ಮೊದಲ ಸ್ಥಾನದಲ್ಲೇ ಇರಬೇಕು. ವಿಶ್ವದಲ್ಲಿ ಅತ್ಯುನ್ನತವಾದ ಸ್ಥಾನದಲ್ಲಿ ಭಾರತವನ್ನು ನೋಡಲು ನಾನು ಇಷ್ಟಪಡುತ್ತೇನೆ.

ವಿಷಯ ವಿವರಣೆ : ನಮ್ಮದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ, ಹಣದುಬ್ಬರ, ಆರ್ಥಿಕ ಅಭದ್ರತೆ ಕೊನೆಯಾಗಬೇಕು. ನಿರುದ್ಯೋಗ, ಬಡತನ ,  ಅತ್ಯಾಚಾರ ಮುಕ್ತ ಸಮಾಜ ನಮ್ಮದಾಗಬೇಕು. 

ನಮ್ಮನ್ನಾಳುವ ಅಧಿಕಾರಿಗಳು ಮತ್ತು ರಾಜಕಾರಣಿಗಳು ನಮ್ಮದೇಶದ ಬೆಳವಣಿಗೆಗಾಗಿ ಸೇವೆ ಸಲ್ಲಿಸುವ ಬದಲು ಭ್ರಷ್ಟಾಚಾರಿಗಳಾಗಿ ತಮ್ಮ ಜೇಬು ತುಂಬಿಸಿಕೊಳ್ಳುವುದರಲ್ಲೇ ನಿರತರಾಗಿದ್ದಾರೆ. ಹಾಗಾಗಿ ಸಚಿವರು ಮತ್ತು ಅಧಿಕಾರಿಗಳು ದೇಶದ ಹಿತಕೋಸ್ಕರವೇ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಭ್ರಷ್ಟರನ್ನು ಕಿತ್ತೆಸೆದು ಕಠಿಣ ಶಿಕ್ಷೆ ವಿಧಿಸಬೇಕು. ಭ್ರಷ್ಟಾಚಾರಿಗಳ ಹಿಡಿತದಿಂದ ಭಾರತವನ್ನು ಬಿಡಿಸಿ ಸುಭದ್ರ ಭಾರತವನ್ನು ಕಟ್ಟಬೇಕು. ಇದಕ್ಕಾಗಿ ಮೊದಲು ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೆಸೆಯವ ಪ್ರಯತ್ನ ನಮ್ಮೆಲ್ಲರಿಂದ ಆಗಬೇಕು.

ನನ್ನ ಕನಸಿನ ಭಾರತವು ಮಹಿಳೆಯರು  ರಸ್ತೆಯಲ್ಲಿ ನಡುರಾತ್ರಿಯಾದರೂ ಮುಕ್ತವಾಗಿ ಹಾಗು ಸುರಕ್ಷಿತವಾಗಿ ನಡೆಯುವ ದೇಶವಾಗಿರಬೇಕು. ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು. ಮಹಿಳೆಯರೆಲ್ಲಾ ಶಿಕ್ಷಿತರಾಗಿ ಸ್ವಾವಲಂಬಿಗಳಾಗಬೇಕು.

 ಬಡಜನರ ಸಬಲೀಕರಣಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತರಬೇಕು. ಮೀಸಲಾತಿ ರದ್ದಾಗಬೇಕು.ಎಲ್ಲದಕ್ಕೂ ಮಾನದಂಡ ಕೇವಲ ಪ್ರತಿಭೆಯೊಂದೇ ಆಗಿರಬೇಕು. ಅರ್ಹ ಅಭ್ಯರ್ಥಿಗೆ ಅವನ ಪ್ರತಿಭೆಗೆ ಸರಿಯಾದ ಉದ್ಯೋಗ ಸಿಗುವ ಸ್ಥಳ ನನ್ನ ಕನಸಿನ ಭಾರತವೇ ಆಗಿರಬೇಕು.ಭಾರತದಲ್ಲಿ ಸಾಕಷ್ಟು ವಿದ್ಯಾವಂತರಿದ್ದರೂ ಭ್ರಷ್ಟಾಚಾರ ಮತ್ತು ಮೀಸಲಾತಿ ಮುಂತಾದ  ಹಲವು ಕಾರಣಗಳಿಂದ ಪ್ರತಿಭಾ ಪಲಾಯನ ನಡೆಯುತ್ತಿದೆ. ಅವರು ಯೋಗ್ಯವಾದ ಉದ್ಯೋಗವನ್ನು ಇಲ್ಲಿ ಪಡೆಯಲು ಸಾಧ್ಯವಾಗುತ್ತಿಲ್ಲ.ಅರ್ಹ ಪ್ರತಿಭಾವಂತರು ಉದ್ಯೋಗವನ್ನು ಅರಸಿಕೊಂಡು  ವಿದೇಶಕ್ಕೆ ಹೋಗುತ್ತಾರೆ ಮತ್ತು ಇತರ ದೇಶಗಳ ಆರ್ಥಿಕ ಬೆಳವಣಿಗೆಗಾಗಿ ಅಲ್ಲೇ ಕೆಲಸ ಮಾಡುತ್ತಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ದೇಶದಲ್ಲಿರುವ ಮೀಸಲಾತಿ . ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು.

ಪ್ರತಿಯೊಂದು  ಜಾತಿಗಳಲ್ಲೂ ಬಡವರಿದ್ದಾರೆ. ಅವರೆಲ್ಲರಿಗೂ ಸಮಾನವಾದ ಪರಿಹಾರಗಳು, ಸೌಲಭ್ಯಗಳು ಮತ್ತು ಉದ್ಯೋಗಗಳು ನಮ್ಮಲ್ಲಿ ಸಿಗುವಂತಾಗಬೇಕು

ಉಪಸಂಹಾರ: ನನ್ನ ಕನಸಿನ ಭಾರತವು ಯಾವುದೇ ರೀತಿಯ ಭಯ ,ತಾರತಮ್ಯವಿಲ್ಲದೆ ಒಗ್ಗಟ್ಟಿನಿಂದ ,  ಶಾಂತಿ, ನೆಮ್ಮದಿ , ಸಹಬಾಳ್ವೆ ,ಸಮಾನತೆಯಿಂದ ಬದುಕುವ ಆದರ್ಶ ದೇಶವಾಗಿರುತ್ತದೆ. ನಾನು ಹೆಮ್ಮೆಪಡುವಂತಹ ಮತ್ತು  ಆತ್ಮವಿಶ್ವಾಸದಿಂದ ಬದುಕುವಂತಹ ದೇಶ ನನ್ನದಾಗಬೇಕು. ಮುಂದಿನ ಪೀಳಿಗೆಯ ಜನರು ಸುಖ ಶಾಂತಿ ನೆಮ್ಮದಿ ಅನ್ಯೋನ್ಯವಾಗಿ ಸಂತೋಷದಿಂದ ಈ ದೇಶದಲ್ಲಿ ವಾಸಿಸಬೇಕು. ಪ್ರಪಂಚದ ಎಲ್ಲಾ ದೇಶಗಳಿಗೂ ಭಾರತವೇ ಮಾದರಿಯಾಗಿ ಆದರ್ಶವಾಗಿ ಇರಲಿ ಎಂಬುದೇ ನನ್ನ ಕನಸು.

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು