ಟಿಪ್ಪಣಿ :
ಪ್ರತಿ ವ್ಯಕ್ತಿಯ ಬದುಕಿನ ದೀಪವಾಗಿರುವ ಶಿಕ್ಷಕರಿಗೂ ಸಹ ಒಂದು ದಿನವನ್ನು ಮೀಸಲಿಡಲಾಗಿದೆ.ಇದು ಶಿಕ್ಷಕರಿಗೆ ಗೌರವ, ಅಭಿನಂದನೆ, ಶುಭಹಾರೈಕೆ ಹೇಳುವ ದಿನ.ಭಾರತದಲ್ಲಿ ಸರ್ವೆಪಲ್ಲಿ ರಾಧಾಕೃಷ್ಣನ್ರ ಗೌರವಾರ್ಥವಾಗಿ ಅವರ ಜನ್ಮದಿನವಾದ ಸೆಪ್ಟೆಂಬರ್ ೫ ರಂದು ಶಿಕ್ಷಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ.
ವಿಷಯ ವಿವರಣೆ :ಸರ್ವೆಪಲ್ಲಿ ರಾಧಾಕೃಷ್ಣನ್ ರವರು ಭಾರತದ ೨ನೆಯ ರಾಷ್ಟ್ರಪತಿಗಳಾಗಿದ್ದರು ಹಾಗೂ ಒಬ್ಬ ಹೆಸರಾಂತ ಶಿಕ್ಷಣತಜ್ಞರಾಗಿದ್ದರು.1962ರಲ್ಲಿ ರಾಷ್ಟ್ರಪತಿ ಹುದ್ದೆಗೆ ಏರಿದ ಡಾ, ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಆಚರಿಸಲು ಅನುಮತಿ ನೀಡುವಂತೆ ಅವರ ವಿದ್ಯಾರ್ಥಿಗಳು ಕೋರಿದ್ದರು. ಆಗ ಅವರು ತಮ್ಮ ಜನ್ಮದಿನದ ಬದಲು ಅಂದು ಶಿಕ್ಷಕರ ದಿನ ಎಂದು ಆಚರಣೆ ಮಾಡುವಂತೆ ಸಲಹೆ ನೀಡಿದ್ದರು. ಹೀಗೆ 1962ರಲ್ಲಿ ಮೊದಲ ಸಲ ಶಿಕ್ಷಕರ ದಿನವನ್ನು ಆಚರಿಸಲಾಯಿತು. ಅಲ್ಲಿಂದ ಪ್ರತಿ ವರ್ಷ ರಾಧಾಕೃಷ್ಣನ್ ಅವರ ಜನ್ಮದಿನ 'ಶಿಕ್ಷಕರ ದಿನ'ವಾಗಿ ಆಚರಣೆಯಾಗುತ್ತಿದೆ.
ಪ್ರತಿ ವ್ಯಕ್ತಿಯು ತಮ್ಮ ಜೀವನದಲ್ಲಿ ತಂದೆ ತಾಯಿಯ ನಂತರದ ಸ್ಥಾನವನ್ನು ಗುರುವಿಗೆ ನೀಡುತ್ತಾರೆ.ಮಕ್ಕಳ ಭವಿಷ್ಯವನ್ನು ರೂಪಿಸುವ, ಪಠ್ಯಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳಲ್ಲಿ ವಿವೇಕ, ತಾಳ್ಮೆ, ದೂರದೃಷ್ಟಿ, ಮಾನವತೆಯನ್ನು ಬೋಧಿಸುವ, ತನ್ಮೂಲಕ ವಿದ್ಯಾರ್ಥಿಗಳನ್ನು ಭವ್ಯ ದೇಶದ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತಿ ಮಹತ್ವದ್ದಾಗಿದೆ.ಓರ್ವ ಉತ್ತಮ ಶಿಕ್ಷಕನಾಗಲು ಕೇವಲ ಪುಸ್ತಕದ ಬದನೇಕಾಯಿ ಮಾತ್ರ ಗೊತ್ತಿದ್ದರೆ ಸಾಲದು. ಬದಲಿಗೆ ಪಠ್ಯದ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ವಿವರಿಸಿ ಪಠ್ಯ ನೆನಪಿನಲ್ಲಿ ಉಳಿಯುವಂತೆ ಮಾಡಬೇಕು.ಒಟ್ಟಾರೆ ಶಿಕ್ಷಕರ ದಿನಾಚರಣೆಯು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವಣ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುತ್ತದೆ.ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವುದರ ಜತೆಗೆ ಸರಿ ತಪ್ಪುಗಳನ್ನು ತಿದ್ದುವ, ಅವರಲ್ಲಿನ ಆಸಕ್ತಿಗಳನ್ನು ವೃದ್ಧಿಸುವ ಮತ್ತು ಅವರ ಬದುಕಿಗೆ ಗುರಿ ರೂಪಿಸುವುದರಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.
ಶಿಕ್ಷಕರ ದಿನಕ್ಕೆ ವಿಶೇಷ ಗೌರವ ಇದೆ. ಶಿಕ್ಷಕರ ದಿನದಂದು ಆಯ್ದ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ರಾಷ್ಟ್ರಪತಿಗಳು ಪ್ರಧಾನ ಮಾಡುತ್ತಾರೆ.ಶಾಲೆಗಳಲ್ಲಿ ಸಾಂಸ್ಕೃತಿಕ ಕಾಯ೯ಕ್ರಮಗಳನ್ನು ಏರ್ಪಡಿಸುತ್ತಾರೆ. ಶಿಕ್ಷಕರಿಗಾಗಿ ಹಲವಾರು ಸ್ಪರ್ಧೆಗಳನ್ನು ನಡೆಸುತ್ತಾರೆ. ಶಿಕ್ಷಕರ ದಿನದಂದು ತಮ್ಮ ನೆಚ್ಚಿನ ಗುರುಗಳಿಗೆ ವಿದ್ಯಾರ್ಥಿಗಳು ಪೆನ್, ಗುಲಾಬಿ, ಹೂಗುಚ್ಛ ಇತ್ಯಾದಿಗಳನ್ನು ನೀಡಿ ಶುಭ ಹಾರೈಸಿ, ಆಶೀರ್ವಾದವನ್ನು ಪಡೆದುಕೊಳ್ಳುತ್ತಾರೆ.
ಉಪಸಂಹಾರ: ಒಟ್ಟಾರೆ ಪ್ರತಿವರ್ಷವೂ ಶಿಕ್ಷಕರ ದಿನಾಚರಣೆಯನ್ನು ಮಕ್ಕಳು ಹಾಗೂ ಶಿಕ್ಷಕರು ಸೇರಿ ವಿಜೃಂಭಣೆಯಿಂದ ಆಚರಿಸುತ್ತಾರೆ. ಶಿಕ್ಷಕ ವೃತ್ತಿ ಎಂಬುದು ಸಮಾಜದಲ್ಲಿ ಅತೀ ದೊಡ್ಡ ಗೌರವದ ಪವಿತ್ರವಾದ ಕೆಲಸ.ಶಿಕ್ಷಕರೇ ದೇಶದ ಬೆನ್ನೆಲುಬು ಹಾಗೂ ವಿದ್ಯಾರ್ಥಿಗಳ ಏಳಿಗೆಯ ರೂವಾರಿಗಳು,