ಸ್ತ್ರೀ ಶೋಷಣೆ


ಟಿಪ್ಪಣಿ:

 ಸ್ತ್ರೀ ಶೋಷಣೆ ಎಂಬುದು ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯವಾಗಿದೆ.ಇದರಿಂದ ದೈಹಿಕ ಮಾನಸಿಕ ಹಾಗೂ ಆರ್ಥಿಕ ಹಿಂಸೆ, ಅನ್ಯಾಯ ಮತ್ತು ಶೋಷಣೆಗೆ ಮಹಿಳೆಯರು ಒಳಗಾಗುತ್ತಾರೆ.  ಈ ಶೋಷಣೆಯು ಮಹಿಳೆಯರ ಶಿಕ್ಷಣ, ಆರೋಗ್ಯ, ಆರ್ಥಿಕ ಸ್ವಾಯತ್ತತೆ, ಮತ್ತು ಸಾಮಾಜಿಕ ಹಕ್ಕುಗಳಿಗೆ ತೀವ್ರ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಮೂಲ ಕಾರಣ ಸಮಾಜದಲ್ಲಿನ ಗಂಡು ಮೇಲು ಹೆಣ್ಣು ಕೀಳು ಎಂಬ ಭಾವನೆ,ಪುರಾತನ ನಂಬಿಕೆಗಳು ಮತ್ತು ಪುರುಷಪ್ರಧಾನ ಸಮಾಜದ ವ್ಯವಸ್ಥೆಗಳೇ ಆಗಿದೆ.

ವಿಷಯ ವಿವರಣೆ:

 ಶಾರೀರಿಕ ಶೋಷಣೆಯಲ್ಲಿ, ಮಹಿಳೆಯರು ದೈಹಿಕ ಹಿಂಸೆ ಮತ್ತು ದೌರ್ಜನ್ಯಗಳು, ಅತ್ಯಾಚಾರ ,ಬಲತ್ಕಾರ ಹಾಗೂ ಲೈಂಗಿಕ ಕಿರುಕುಳಗಳನ್ನು ಅನುಭವಿಸುತ್ತಾರೆ . ಇದರಿಂದ ಮಹಿಳೆಯರು ತಮ್ಮ ಸುರಕ್ಷತೆಯನ್ನು ಕಳೆದುಕೊಳ್ಳುತ್ತಾರೆ . ಸಮಾಜದಲ್ಲಿ ಧೈರ್ಯವಾಗಿ ಬದುಕಲು ಕಷ್ಟವಾಗುತ್ತದೆ.

ಮಾನಸಿಕ ಶೋಷಣೆಯಲ್ಲಿ ಮಹಿಳೆಯನ್ನು ನಿಂದಿಸುವುದು, ಕೀಳಾಗಿ ಅವ್ಯಾಚ್ಯ ಶಬ್ದಗಳಿಂದ ಬೈಯ್ಯುವುದು,ನಿರ್ಲಕ್ಷಿಸುವುದು ಅವಮಾನಗೊಳಿಸುವುದನ್ನು ಮಾಡಲಾಗುತ್ತದೆ.ಇದು  ಮಹಿಳೆಯರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ, ಭಯವನ್ನು ಹೆಚ್ಚಿಸುತ್ತದೆ, ಕೀಳರಿಮೆಯನ್ನು ಉಂಟುಮಾಡುತ್ತದೆ ಹಾಗೆಯೇ ಅವರ ಮಾನಸಿಕ ಆರೋಗ್ಯವನ್ನು ಹಾನಿ ಮಾಡಿ ಮಾನಸಿಕ ಕಾಯಿಲೆಗಳಿಗೂ ನಾಂದಿ ಹಾಡುತ್ತದೆ.ಮಾನಸಿಕವಾಗಿ ಕುಗ್ಗುವಂತೆ ಮಾಡಲಾಗುತ್ತದೆ.ಆತ್ಮಹತ್ಯೆಯಂತಹ ಹೀನ ಕೃತ್ಯಗಳಿಗೂ ಇದು ಕಾರಣವಾಗುತ್ತದೆ .

ಆರ್ಥಿಕ ದುರ್ಬಲತೆಗೆ ಕಾರಣ ಮಹಿಳೆಯರನ್ನು ದುಬಾರಿ ಕೆಲಸಗಳಿಗೆ ಅಥವಾ ಸಮಾನ ಕೆಲಸಕ್ಕೆ ಸೇರಿಸಿ ಸಮಾನ ವೇತನ ನೀಡದಿರುವುದು. ಇದು ಆರ್ಥಿಕ ಶೋಷಣೆಯ ಭಾಗವಾಗಿದೆ. ಹೀಗೆ ಆತ್ಮವಿಶ್ವಾಸವು ಕಡಿಮೆಯಾಗುತ್ತದೆ. ಇದರಿಂದ ಅವರ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕುತ್ತದೆ, ಹೀಗಾಗಿ ಅವರು ಸ್ವಾಯತ್ತವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಇದು ಶೋಷಣೆಗೆ ದಾರಿ ಮಾಡುತ್ತದೆ.

ಹೆಣ್ಣು ಮಕ್ಕಳು  ಶಿಕ್ಷಣದಿಂದ ವಂಚಿತರಾಗುತ್ತಿರುವುದು ಕೂಡ ಸ್ತ್ರೀಶೋಷಣೆಗೆ ಮುಖ್ಯ ಕಾರಣವಾಗಿದೆ.ಹಲವು ಕಡೆಗಳಲ್ಲಿ ಹೆಣ್ಣು ಮಗುವಿನ ಶಿಕ್ಷಣವು ಅರ್ಧಕ್ಕೆ ಕುಂಠಿತಗೊಳ್ಳುತ್ತದೆ .ಇದರಿಂದಾಗಿ ತಮ್ಮ ಹಕ್ಕುಗಳನ್ನು ಅರಿಯಲು ಅವರು ಅಶಕ್ತರಾಗಿರುತ್ತಾರೆ ಮತ್ತು ಶೋಷಣೆಗೂ ಒಳಗಾಗುತ್ತಾರೆ.

ಒಟ್ಟಿನಲ್ಲಿ ಸ್ತ್ರೀ ಶೋಷಣೆಯಿಂದ ಮಹಿಳೆಯು ದೈಹಿಕವಾಗಿ ಮಾನಸಿಕವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಅನೇಕ ತೊಂದರೆಗಳನ್ನು, ಕಷ್ಟ ನಷ್ಟಗಳನ್ನು , ಹಿಂಸೆಗಳನ್ನು , ನೋವುಗಳನ್ನು ,ಅವಮಾನಗಳನ್ನು ಅನುಭವಿಸುತ್ತಾ ಬದುಕಬೇಕಾಗುತ್ತದೆ

ಮಹಿಳೆಯರಿಗೆ ಉತ್ತಮ ಶಿಕ್ಷಣವನ್ನು ಒದಗಿಸಬೇಕು.ಮಹಿಳೆಯರ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು.ಮಹಿಳೆಯರನ್ನು ಶೋಷಿಸುವ ಕೃತ್ಯಗಳಿಗೆ ಕಠಿಣ ಕಾನೂನುಗಳನ್ನು ಜಾರಿಗೆ ತರುವುದು ಇದಕ್ಕೆ ಇರುವ ಪರಿಹಾರಗಳು.

ಉಪಸಂಹಾರ

ಸ್ತ್ರೀ ಶೋಷಣೆ, ಇದು ಒಂದು ಜಟಿಲವಾದ ಸಮಸ್ಯೆಯಾಗಿದೆ.  ಇದನ್ನು ನಿಯಂತ್ರಿಸುವಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆ ಇದೆ. ಮಹಿಳೆಯರನ್ನು ಗೌರವಿಸುವ ಮೂಲಕ ಮತ್ತು ಅವರ ಹಕ್ಕುಗಳನ್ನು ಬೆಂಬಲಿಸುವ ಮೂಲಕ, ನಾವು ಉತ್ತಮ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ. 

  - ಉಷಾ ಪ್ರಸಾದ್

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು