https://youtu.be/qgraIfanJqw?si=aoQ3yJ16f8UAPdQx
ಟಿಪ್ಪಣಿ:
ಸರಳ ಸಜ್ಜನಿಕೆಯ ಸಾಕಾರ ಮೂರ್ತಿಯಾಗಿದ್ದ ಯುವ ಜನಾಂಗದ ಕಣ್ಮಣಿಯಾಗಿ ಎಲ್ಲರಿಗೂ ಆದರ್ಶರಾಗಿದ್ದ ಅವುಲ್ ಪಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂರು ದಿನಾಂಕ 15- 10- 1931 ರಂದು ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು.ಬಡ ಮೀನುಗಾರ ಕುಟುಂಬದಲ್ಲಿ ತಂದೆ ಜೈನುಲಾಬ್ದೀನ್ ರು ದೋಣಿ ಚಲಾಯಿಸುವ ವೃತ್ತಿ ಮಾಡುತ್ತಿದ್ದರು. ತಾಯಿ ಆಶೀಯಮ್ಮಾ ಗೃಹಿಣಿಯಾಗಿದ್ದರು.ದಂಪತಿಯ ಐವರು ಮಕ್ಕಳಲ್ಲಿ ಕಲಾಂ ಅವರು ಕಿರಿಯರಾಗಿದ್ದರು.ಪ್ರಪಂಚದ ಬಗ್ಗೆ ಬಾಲ್ಯದಲ್ಲೇ ಕಲಾಂರಿಗೆ ಬಹಳಷ್ಟು ಕುತೂಹಲವಿತ್ತು. ಸಣ್ಣ ವಯಸ್ಸಿನಲ್ಲೇ ಪ್ರಕೃತಿಯ ರಹಸ್ಯಗಳನ್ನು ಅನ್ವೇಷಿಸಲು ಆರಂಭಿಸಿದರು.
ವಿಷಯ ವಿವರಣೆ:
ಅಬ್ದುಲ್ ಕಲಾಂ ರ ವಿದ್ಯಾರ್ಥಿ ಜೀವನವು ಹೋರಾಟ ಹಾಗು ಕಷ್ಟದಿಂದ ಕೂಡಿತ್ತು. ಪ್ರಾರಂಭದ ದಿನಗಳಲ್ಲಿ ಮನೆಮನೆಗಳಿಗೆ ತೆರಳಿ ಪೇಪರ್ ಹಾಕುತ್ತಿದ್ದರು. ಶಿಕ್ಷಣದ ಮೇಲಿನ ಅವರ ಅತಿಯಾದ ಪ್ರೀತಿ ಹಾಗು ಬದ್ಧತೆಯು ಕಷ್ಟಗಳನ್ನು ಎದುರಿಸಿ ನಿಲ್ಲುವಂತೆ ಮಾಡಿತು. ಮದ್ರಾಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಏರೋನಾಟಿಕ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದರು. ಇವರು ಸಮಾಜಕ್ಕೆ ಕೊಡುಗೆ ನೀಡಿದ ಅನೇಕ ಯೋಜನೆಗಳಲ್ಲಿ ನೇತೃತ್ವ ವಹಿಸಿದ್ದರು.ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ( ISRO) ಮತ್ತು ಭಾರತೀಯ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯಲ್ಲಿ ಸೇವೆ ಸಲ್ಲಿಸಿದರು. ಅಗ್ನಿ ಮತ್ತು ಪೃಥ್ವಿ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಸಹಾಯ ಮಾಡಿದರು. 1998ರ ಪೋಖ್ರಾನ್ ಪರಮಾಣು ಪರೀಕ್ಷೆಯಲ್ಲಿ ಭಾಗವಹಿಸಿದರು. ಮೊದಲ ಸ್ವದೇಶಿ ವಿಮಾನದ ನಿರ್ಮಾಣದಲ್ಲೂ ಭಾಗಿಯಾಗಿದ್ದರು. ಭಾರತದಲ್ಲಿ ಪರಮಾಣು ಶಕ್ತಿ ಯೋಜನೆಯಲ್ಲಿ ಕಲಾಂರು ತೊಡಗಿಸಿಕೊಂಡದ್ದಕ್ಕಾಗಿ ಅವರನ್ನು ಭಾರತದ'ಮಿಸೈಲ್ ಮ್ಯಾನ್' ಎಂದು ಕರೆಯುತ್ತಾರೆ.
ಕಲಾಂ ರು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮ್ಮ ಭಾರತದಲ್ಲಿ ಹನ್ನೊಂದನೇ ರಾಷ್ಟ್ರಪತಿಗಳಾಗಿ ಕ್ರಿ.ಶ.2002 ರಿಂದ 2007 ರ ವರೆಗೆ ಸೇವೆ ಸಲ್ಲಿಸಿದರು. 21 ನೇ ಶತಮಾನದ ಶ್ರೇಷ್ಟ ವಿಜ್ಞಾನಿಯೂ ಆಗಿದ್ದರು. 'ಜನರ ರಾಷ್ಟ್ರಪತಿ'ಗಳೆಂದೇ ಕರೆಯಲ್ಪಟ್ಟರು. ಮಕ್ಕಳು ಹಾಗು ಯುವ ಜನಾಂಗವೇ ದೇಶದ ಬೆನ್ನೆಲುಬು ಎಂದು ತಿಳಿದ ಕಲಾಂರು ಅವರಿಗಾಗಿ ಅಲ್ಲಲ್ಲಿ ಸಂವಾದ ಕಾರ್ಯಕ್ರಮಗಳನ್ನು ಏರ್ಪಡಿಸಿ ಮಾರ್ಗದರ್ಶನ ನೀಡಿದರು. ಅವರು ವೈವಿಧ್ಯಮಯ ವಿಷಯಗಳಲ್ಲಿ ಆಳವಾದ ಪಾಂಡಿತ್ಯ ಹೊಂದಿದ್ದರು. ಮಕ್ಕಳೊಂದಿಗೆ ಮಗುವಾಗಿ ಬೆರೆತು ಸಂವಾದ ನಡೆಸುತ್ತಿದ್ದರು.
ಅಬ್ದುಲ್ ಕಲಾಂರು ಅನೇಕ ಪುಸ್ತಕಗಳನ್ನು ಬರೆದರು. ಇದರಲ್ಲಿ ಅತ್ಯಂತ ಪ್ರಸಿದ್ಧ ಕೃತಿ 'ಇಂಡಿಯಾ 2020' ಹಾಗು ಇಂಡಿಯಾ ಮೈ ಡ್ರೀಮ್ .ಇದು ಭಾರತವನ್ನು ಸೂಪರ್ ಪವರ್ ಮಾಡುವ ಕ್ರಿಯಾ ಯೋಜನೆಯನ್ನು ಹೊಂದಿತ್ತು. ಮೈ ಜರ್ನಿ , ಟಾರ್ಗೆಟ್ ತ್ರಿ ಬಿಲಿಯನ್ ಎಂಬುದು ಪ್ರಸಿದ್ಧ ಕೃತಿಗಳು.'ವಿಂಗ್ಸ್ ಆಫ್ ಪೈರ್' ಎಂಬ ಅತ್ಯಚರಿತ್ರೆ ಯನ್ನು ಬರೆದರು.
ದೇಶಕ್ಕೆ ನೀಡಿದ ಕೊಡುಗೆಗಾಗಿ ಸರ್ಕಾರವು ಅವರಿಗೆ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತರತ್ನ ' ವನ್ನು1997 ರಲ್ಲಿ ನೀಡಿ ಗೌರವಿಸಿದೆ. ಪದ್ಮಭೂಷಣ, ಪದ್ಮವಿಭೂಷಣ, ವೀರ ಸಾವರ್ಕರ್ ಮುಂತಾದ ಪ್ರಶಸ್ತಿಗಳು ಲಭಿಸಿದೆ.
'ಜನರು ನನ್ನನ್ನು ಉತ್ತಮ ಶಿಕ್ಷಕ ಎಂದು ನೆನಪಿಸಿಕೊಂಡರೆ, ಅದುವೇ ನನಗೆ ದೊಡ್ಡ ಗೌರವವಾಗಿದೆ' ಎಂದು ಹೇಳುತ್ತಿದ್ದ ಕಲಾಂರನ್ನು ಭಾರತವು 'ಅತ್ಯುತ್ತಮ ಶಿಕ್ಷಕ ' ಎಂದು ಗೌರವಿಸುತ್ತಿದೆ. ಮಕ್ಕಳ ಪ್ರೀತಿಯ ಕಲಾಂರ 2015 ರಲ್ಲಿ ಶಿಲಾಂಗ್ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದ ಸಂದರ್ಭದಲ್ಲಿ ಹಠಾತ್ ಹೃದಯ ಸ್ತಂಭನದಿಂದ ನಿಧನರಾದರು.
ಉಪಸಂಹಾರ: ಅಬ್ದುಲ್ ಕಲಾಂರು ದೇಶ ಕಂಡ ಅತ್ಯಂತ ಅಪರೂಪದ ಸರಳ ಸಜ್ಜನಿಕೆಯ ಪ್ರಾಮಾಣಿಕ ಮೇಧಾವಿ ವ್ಯಕ್ತಿಯಾಗಿದ್ದರು. ಇಂಜಿನೀಯರಾಗಿ ,ವಿಜ್ಞಾನಿಯಾಗಿ , ರಾಷ್ಟ್ರಪತಿಗಳಾಗಿ , ಶಿಕ್ಷಕರಾಗಿ ಮುಂದೆ ನಮ್ಮ ಭಾರತವನ್ನು ಶ್ರೇಷ್ಟ ರಾಷ್ಟ್ರವಾಗಿಸುವ ಕನಸು ಕಂಡಿದ್ದರು. ಹಗಲು ಇರುಳು ದೇಶದ ಏಳಿಗೆಗಾಗಿ ಶ್ರಮಿಸಿದರು.ಯುವ ಪೀಳಿಗೆಗೆ ಸ್ಫೂರ್ತಿ ಹಾಗು ಆದರ್ಶರಾಗಿದ್ದರು.
ಧನ್ಯವಾದಗಳು...:)
- ಉಷಾ ಪ್ರಸಾದ