https://youtu.be/GzE5zeJ8U9U?si=iib1qX8p5067XJMA
ಟಿಪ್ಪಣಿ:ನಮ್ಮ ಸುತ್ತಮುತ್ತಲಿರುವ ಬೆಟ್ಟ-ಗುಡ್ಡಗಳು, ನದಿ ಸರೋವರಗಳು ,ಪರ್ವತಗಳು, ಪಶು ಪಕ್ಷಿಗಳು ,ಗಿಡ ಮರಗಳಿಂದ ಕೂಡಿದ ಕಾಡುಗಳು ಇವೆಲ್ಲವನ್ನೂ ಒಟ್ಟಾಗಿ ಪರಿಸರ ಎನ್ನುತ್ತೇವೆ. ಈ ಪರಿಸರವನ್ನೇ ಪ್ರಕೃತಿ ಅಥವಾ ನಿಸರ್ಗ ಎಂದು ಕರೆಯುತ್ತೇವೆ. ಪರಿಸರವನ್ನು ನೈಸರ್ಗಿಕ ಪರಿಸರ ಹಾಗೂ ಮಾನವ ನಿರ್ಮಿತ ಪರಿಸರವೆಂದು ಎರಡು ಭಾಗಗಳಾಗಿ ವಿಂಗಡಿಸಬಹುದು. ನದಿ ಬೆಟ್ಟಗುಡ್ಡಗಳು ಪರ್ವತ ಕಾಡು ಇವುಗಳೆಲ್ಲವೂ ನೈಸರ್ಗಿಕ ಪರಿಸರವಾದರೆ , ಕೈಗಾರಿಕೆ , ಕಾಲುವೆಗಳು , ಕೃಷಿ ಭೂಮಿ, ಅಣೆಕಟ್ಟುಗಳು ಇವೆಲ್ಲವೂ ಮಾನವ ನಿರ್ಮಿತ ಪರಿಸರ ಎನ್ನಬಹುದು . ಪರಿಸರದಲ್ಲಿ ಸಂಭವಿಸುವ ಆಕಸ್ಮಿಕ ಅವಘಡಗಳು ಹಾಗೂ ಘಟನೆಗಳನ್ನು ಪ್ರಕೃತಿ ವಿಕೋಪ ಎಂದು ಕರೆಯುತ್ತಾರೆ .
ವಿಷಯ ವಿವರಣೆ:ಮಾನವನು ತನ್ನ ಸ್ವಾರ್ಥ ಸಾಧನೆಗಾಗಿ , ದುರಾಸೆಗಾಗಿ ಹಾಗೂ ಸುಖಕ್ಕಾಗಿ ಪರಿಸರವನ್ನು ದುರ್ಬಳಕೆ .ಮಾಡುತ್ತಿದ್ದಾನೆ . ಪ್ರಕೃತಿಯನ್ನು ವಿಕೃತಿಗೊಳಿಸಿ ಅಹಂಕಾರದಿಂದ ಮೆರೆಯುತ್ತಿದ್ದಾನೆ. ಆದರೆ ಇದರಿಂದಾಗಿ ಮುನಿದ ಪ್ರಕೃತಿಯು ವಿಕೋಪಗಳ ಮೂಲಕ ಮಾನವನಿಗೆ ತಕ್ಕ ಪಾಠವನ್ನು ಕಲಿಸುತ್ತಿದೆ. ಅತಿವೃಷ್ಟಿ , ಅನಾವೃಷ್ಟಿ ,ಅಕಾಲ ವೃಷ್ಟಿ ,ಸುನಾಮಿ , ಪ್ರವಾಹ , ಚಂಡಮಾರುತ ,ಭೂಕಂಪ ,ಜ್ವಾಲಾಮುಖಿ ಮುಂತಾದ ಪ್ರಕೃತಿ ವಿಕೋಪಗಳು ಅಲ್ಲಲ್ಲಿ ಸಂಭವಿಸುತ್ತಿದೆ. ವೈಜ್ಞಾನಿಕವಾಗಿ ನಾವು ಎಷ್ಟೇ ಮುಂದುವರಿದರೂ ಪ್ರಕೃತಿಯ ಮುಂದೆ ನಮ್ಮ ಯಾವ ಆಟವೂ ನಡೆಯುವುದಿಲ್ಲ .
ಪ್ರಕೃತಿ ವಿಕೋಪಗಳಿಗೆ ಕಾರಣಗಳನ್ನು ನೋಡುವುದಾದರೆ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಕಾರಣಗಳೇ ಮುಖ್ಯವಾಗಿದೆ. ನೈಸರ್ಗಿಕ ಕಾರಣಗಳು - ನಿರಂತರವಾಗಿ ದೀರ್ಘಕಾಲ ಮಳೆಯಾಗುವುದು , ಮಣ್ಣಿನ ಸವಕಳಿ , ನದಿಗಳ ಹರಿವಿಕೆಯ ಪಥಗಳ ಬದಲಾವಣೆ ,ಭೂಕುಸಿತಗಳು , ಚಂಡಮಾರುತಗಳು , ಕಾಡ್ಗಿಚ್ಚು , ಹವಾಮಾನದಲ್ಲಿ ಬದಲಾವಣೆ , ಭೂಕಂಪ , ಸುನಾಮಿ ಮುಂತಾದ ಕಾರಣಗಳು ಪ್ರಕೃತಿಯ ವಿಕೋಪಕ್ಕೆ ಕಾರಣವಾಗಿದೆ.
ಮಾನವನೇ ಪರಿಸರ ನಾಶಕ್ಕೆ ಪ್ರಕೃತಿಯ ವಿಕೋಪಕ್ಕೆಮುಖ್ಯ ಹೊಣೆಯಾಗಿದ್ದಾನೆ .ಮಾನವ ನಿರ್ಮಿತ ಕಾರಣಗಳು - ಅರಣ್ಯ ನಾಶ ,ನಗರೀಕರಣ ,ಜನಸಂಖ್ಯಾ ಹೆಚ್ಚಳ ,ಆಪರ್ಯಾಯ ಇಂಧನಗಳ ಅತಿಯಾದ ಬಳಕೆ ,ಗಣಿಗಾರಿಕೆ ,ನೈಸರ್ಗಿಕ ಸಂಪನ್ಮೂಲಗಳ ತೀವ್ರ ಬಳಕೆ ,ಅಕ್ರಮ ಮರಳುಗಾರಿಕೆ ,ಆಧುನಿಕತೆ, ,ಕೈಗಾರಿಕರಣ ಹಾಗೂ ನಗರೀಕರಣ ,ಅರಣ್ಯ ಭೂಮಿಗಳ ಒತ್ತುವರಿ ,ಕೃಷಿ ಭೂಮಿಗಳನ್ನು ವಾಣಿಜ್ಯಉದ್ದೇಶಗಳಿಗಾಗಿ ಬಳಸಿಕೊಳ್ಳುವುದರಿಂದಲೂ ನಿಸರ್ಗವು ವಿಕೋಪಕ್ಕೆ ತುತ್ತಾಗುತ್ತದೆ.
ಪ್ರಕೃತಿ ವಿಕೋಪದ ಪರಿಣಾಮಗಳು ತುಂಬಾ ಗಂಭೀರವಾಗಿರುತ್ತದೆ. ಸಾವು ನೋವುಗಳು ,ಕಷ್ಟ ನಷ್ಟಗಳು ,ಆರೋಗ್ಯ ಸಮಸ್ಯೆಗಳು , ಪಶು ಪಕ್ಷಿಗಳು ಹಾಗು ಪ್ರಾಣಿ ಸಂಪತ್ತುಗಳ ನಾಶ ,ಅರಣ್ಯ ನಾಶ , ನೈಸರ್ಗಿಕ ಸಂಪನ್ಮೂಲಗಳ ನಾಶ ,ಜೀವಸಂಕುಲದ ಅಸಮತೋಲನ ,ಮಣ್ಣಿನ ಸವಕಳಿ, ಫಲವತ್ತಾದ ಕೃಷಿ ಭೂಮಿ ನಾಶ ಇತ್ಯಾದಿಗಳಿಗೆ ಕಾರಣವಾಗುತ್ತದೆ . ದೇಶದ ಆರ್ಥಿಕ ಪರಿಸ್ಥಿತಿ ನಷ್ಟವಾಗುತ್ತದೆ ಹಾಗೂ ಆರ್ಥಿಕಾಭಿವೃದ್ಧಿಯು ಮೇಲೆ ಹೊಡೆತ ಬೀಳುತ್ತದೆ
ಪ್ರಕೃತಿ ವಿಕೋಪದ ನಿರ್ವಹಣೆಗಾಗಿ ನೈಸರ್ಗಿಕ ಸಂಪನ್ಮೂಲಗಳ ಸರಿಯಾದ ಬಳಕೆ ,ಮಾನವನ ಪ್ರಕೃತಿ ವಿರೋಧಿ ಚಟುವಟಿಕೆಗಳ ನಿಯಂತ್ರಣ ,ಅರಣ್ಯೀಕರಣಕ್ಕೆ ಒತ್ತು ,ಕಾಡು ಮರಗಳನ್ನು ಬೆಳೆಸುವುದು ಅತಿ ಮುಖ್ಯವಾಗಿದೆ .ಭಾರತದ 12.5% ಪ್ರದೇಶ ಗಳು ನೈಸರ್ಗಿಕ ವಿಪತ್ತು ಪೀಡಿತ ಪ್ರದೇಶಗಳಾಗಿವೆ .ಪ್ರಕೃತಿ ನಿರ್ವಹಣೆಗಾಗಿ ಸರಕಾರವು ಕೂಡ ಹಲವಾರು ಕ್ರಮಗಳನ್ನು ಕೈಗೊಂಡಿದೆ .ವಿಪತ್ತು ನಿರ್ವಹಣಾ ಕಾಯ್ದೆ 2005 , ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ,ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮುಂತಾದವುಗಳು ಕಾರ್ಯನಿರ್ವಹಿಸುತ್ತಿದೆ
ಉಪಸಂಹಾರ :ಪ್ರಕೃತಿಯನ್ನು ನಾವು ಚೆನ್ನಾಗಿ ನೋಡಿಕೊಂಡರೆ ಅದು ನಮ್ಮನ್ನು ರಕ್ಷಿಸುತ್ತದೆ.ಹಿಂದೆ ನಮ್ಮ ಹಿರಿಯರು ಪ್ರಕೃತಿಯನ್ನು ಆರಾಧಿಸುತ್ತಿದ್ದರು.ಆದರೆ ಇಂದು ನಾವು ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಇದರಿಂದ ಆಗುವ ಅನಾಹುತಗಳನ್ನು ಮನಗಂಡು ನಮ್ಮ ತಪ್ಪುಗಳನ್ನು ತಿದ್ದಿಕೊಂಡರೆ ಪ್ರಕೃತಿ ವಿಕೋಪ ದಂತಹ ಸಮಸ್ಯೆಗಳಿಂದ ಪಾರಾಗಬಹುದು
- ಉಷಾ ಪ್ರಸಾದ್
🙏 ಧನ್ಯವಾದಗಳು🙏