ಅರಣ್ಯ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ



ಟಿಪ್ಪಣಿ :

ಅರಣ್ಯಗಳು ಪ್ರಕೃತಿಯ ಅವಿಭಾಜ್ಯ ಭಾಗವಾಗಿದೆ. ಇದು ಹಲವಾರು ಪ್ರಾಣಿಗಳಿಗೆ ವಾಸಸ್ಥಳವಾಗಿದೆ. ಮನುಷ್ಯನಿಗೆ ಉಸಿರಾಡಲು ಬೇಕಾದ ಆಮ್ಲಜನಕ ಅರಣ್ಯಗಳಿಂದಲೇ ಸಿಗುತ್ತದೆ. ಕಾಡುಗಳು ನಮ್ಮ ಪರಿಸರದ ಮೂಲಭೂತ ಭಾಗವಾಗಿದೆ. ಇವು  ಶುದ್ಧ ಹವೆಯನ್ನು ಒದಗಿಸುತ್ತವೆ, ಮಳೆಯನ್ನು ತರಿಸುತ್ತವೆ. ಆದರೆ ಇಂದು ಅರಣ್ಯಗಳ ನಾಶವೇ ದೊಡ್ಡ ಸಮಸ್ಯೆಯಾಗಿದ್ದು, ಪರಿಸರದ ಸಮತೋಲನವನ್ನು ಕದಡುತ್ತಿದೆ.

ವಿಷಯ ವಿವರಣೆ:

ಅರಣ್ಯ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳು ಪ್ರಮುಖ ಪಾತ್ರವಹಿಸಬಹುದು. ಪ್ರತಿ ವಿದ್ಯಾರ್ಥಿಯು ಅರಣ್ಯಗಳ ಮಹತ್ವವನ್ನು ಮತ್ತು ಅವುಗಳನ್ನು ಉಳಿಸುವ ಅಗತ್ಯತೆಯನ್ನು ಅರ್ಥಮಾಡಿಕೊಂಡಾಗ, ಸಂರಕ್ಷಣೆಯತ್ತ ಒಲವು ಹೆಚ್ಚಾಗುತ್ತದೆ.ದಿನದಿಂದ ದಿನಕ್ಕೆ ಮಾನವನ ತಾಂತ್ರಿಕ ಅಭಿವೃದ್ಧಿ, ನಗರೀಕರಣ ಹಾಗೂ ಜನಸಂಖ್ಯಾ ಸ್ಫೋಟದಿಂದ ಅರಣ್ಯಗಳು ಕಡಿಮೆಯಾಗುತ್ತಿವೆ.ಅರಣ್ಯ ನಾಶವು ಮಳೆ ಪ್ರಮಾಣ ತಗ್ಗಿಸುವುದು, ಭೂಮಿ ಶೂನ್ಯಗೊಳ್ಳುವುದು, ವಾತಾವರಣದ ತಾಪಮಾನ ಏರಿಕೆ, ಪ್ರಕೃತಿಯಲ್ಲಿ ಅಸ್ಥಿರತೆಯಂತಹ ಅನೇಕ ಸಮಸ್ಯೆಗಳಿಗೆ ಕಾರಣವಾಗಿದೆ. ಈ ಸಮಸ್ಯೆಗಳನ್ನು ತಡೆಯಲು ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮುಖ್ಯವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಎಲ್ಲರಿಗೂ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ದೊಡ್ಡ ಹೊಣೆಕಾರಿಕೆ ಇದೆ. ಅರಣ್ಯಗಳ ಸಂರಕ್ಷಣೆಗಾಗಿ ವಿದ್ಯಾರ್ಥಿಗಳು ಮಾಡಬಹುದಾದ 

ಕೆಲವು ಪ್ರಮುಖ ಕಾರ್ಯಯೋಜನೆಗಳು ಇವು -


1. ಗಿಡಗಳನ್ನು ನೆಡುವುದು:

 ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತ ಗಿಡಗಳನ್ನು ನೆಡುವ ಕಾರ್ಯಗಳಲ್ಲಿ ಭಾಗವಹಿಸಬಹುದು. ತಮ್ಮ ಮನೆ ಶಾಲೆ, ಕಾಲೇಜು ಪರಿಸರಗಳಲ್ಲಿ ಹಾಗು ತಮ್ಮ ಗ್ರಾಮ, ನಗರ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಗಿಡಗಳನ್ನು ನೀಡುವ ಮೂಲಕ ಪರಿಸರದ ಹಸಿರನ್ನು ಕಾಪಾಡಬಹುದು. ಒಬ್ಬ ವ್ಯಕ್ತಿಯು ನೆಡುವ ಒಂದು ಮರವೂ ಮುಂದಿನ ಪೀಳಿಗೆಗೆ ಅತ್ಯಂತ ಮಹತ್ವದ ಕೊಡುಗೆಯಾಗಿರುತ್ತದೆ.

2. ಅರಿವು ಮೂಡಿಸುವುದು: ವಿದ್ಯಾರ್ಥಿಗಳು ಸ್ಥಳೀಯ ಸಮುದಾಯಗಳಲ್ಲಿ, ಶಾಲೆಗಳಲ್ಲಿ ಮತ್ತು ಕುಟುಂಬಗಳಲ್ಲಿ ಅರಣ್ಯಗಳ ಪ್ರಾಮುಖ್ಯತೆಯನ್ನು ಕುರಿತು ಜಾಗೃತಿ ಮೂಡಿಸಬಹುದು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣಗಳ ಮೂಲಕ ಹಾಗು ಸ್ಥಳೀಯ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲೂ ಅರಣ್ಯಗಳ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬಹುದು..

3. ಅರಣ್ಯ ನಾಶ ತಡೆಯುವ ಅಭಿಯಾನಗಳಲ್ಲಿ ಭಾಗವಹಿಸುವುದು:ಸರ್ಕಾರ ಮತ್ತು ಹಸಿರು ಸಂಘಟನೆಗಳು ಆಯೋಜಿಸುವ ಪರಿಸರ ಸಂರಕ್ಷಣಾ ಅಭಿಯಾನಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬಹುದು. ಇದೇ ವೇಳೆ, ಅರಣ್ಯಗಳ ಕಾನೂನಿನ ಉಲ್ಲಂಘನೆಗಳನ್ನು ತಡೆಯಲು ಸಹಾಯ ಮಾಡಬಹುದು. 

4. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು: ಪ್ಲಾಸ್ಟಿಕ್ ಗಳು ಅರಣ್ಯ ನಾಶಕ್ಕೆ ಕಾರಣವಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ, ಅರಣ್ಯ ಪರಿಸರವನ್ನು ನಾವು ಕಾಪಾಡಬಹುದು. ವಿದ್ಯಾರ್ಥಿಗಳು ಇದನ್ನು ತಮ್ಮ ಜೀವನದಲ್ಲಿ ಪಾಲಿಸುತ್ತಾ, ತಮ್ಮ ಮನೆಯವರು ಮತ್ತು ಸ್ನೇಹಿತರಲ್ಲೂ ಜಾಗೃತಿ ಮೂಡಿಸಬಹುದು.

5.ಶಿಕ್ಷಣ: ಅರಣ್ಯ ಸಂರಕ್ಷಣೆಗಾಗಿ ಅಧ್ಯಯನ ಮತ್ತು ಸಂಶೋಧನೆಯ ಮೂಲಕ ತಿಳಿವಳಿಕೆ ಹೆಚ್ಚಿಸುವುದು.

6. ನಾವೀನ್ಯತೆ:  ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಅರಣ್ಯ ಪರಿಸರದ ಸಂರಕ್ಷಣೆಗೆ  ಬೇರೆ ಬೇರೆ ಪರಿಹಾರಗಳನ್ನು ಕಂಡುಹಿಡಿಯುವುದು.

ಉಪಸಂಹಾರ::

ಅರಣ್ಯಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ವಿದ್ಯಾರ್ಥಿಗಳಾಗಿ, ಗಿಡಗಳನ್ನು ನೆಟ್ಟು ಬೆಳೆಸುವುದು ಮತ್ತು ಅರಣ್ಯ ನಾಶವನ್ನು ತಡೆಯುವುದು ಹಾಗು ನಮ್ಮ ಮುಂದಿನ ಪೀಳಿಗೆಗೆ ಹಸಿರು ತುಂಬಿದ ಭೂಮಿಯನ್ನು ನೀಡುವುದು ನಾವು ಕೊಡುವ ಕೊಡುಗೆಯಾಗಿದೆ.  

                                   - ಉಷಾ ಪ್ರಸಾದ್

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು