ವಿದ್ಯಾರ್ಥಿಗಳಲ್ಲಿ ಶಿಸ್ತು

 


ಟಿಪ್ಪಣಿ :ವಿದ್ಯಾರ್ಜನೆಯೇ ವಿದ್ಯಾರ್ಥಿ ಜೀವನದ ಮುಖ್ಯ ಗುರಿಯಾಗಿದೆ.ವಿದ್ಯಾರ್ಥಿ ತನ್ನ ಜೀವನದಲ್ಲಿ ಈ ಗುರಿಯನ್ನು ಸಾಧಿಸುವುದು ಸುಲಭವಲ್ಲ. ಅದಕ್ಕಾಗಿ ಕೆಲವೊಂದು ನೀತಿ  ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಶಿಸ್ತಿನ ಪಾಲನೆ ವಿದ್ಯಾರ್ಥಿಯು ತನ್ನ ಜೀವನದಲ್ಲಿ ಪಾಲಿಸಲೇಬೇಕಾದ ಅತೀ ಮುಖ್ಯವಾದ ನಿಯಮವಾಗಿದೆ.

ಜೀವನದಲ್ಲಿ ಶಿಸ್ತು ಮತ್ತು ಸಂಯಮವನ್ನು ಅಳವಡಿಸಿ ಕೊಂಡರೆ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬಹುದು.

ವಿಷಯ ವಿವರಣೆ :ಮುಂಜಾನೆ ಒಂದು ನಿರ್ದಿಷ್ಠ ಸಮಯದಲ್ಲಿ ಏಳುವುದನ್ನು ರೂಢಿಸಿಕೊಳ್ಳಬೇಕು .ತನ್ನ ಕೆಲಸ ಕಾರ್ಯಗಳನ್ನು ಆದಷ್ಟೂ ತಾನೇ ನಿಭಾಯಿಸುವುದನ್ನು ಕಲಿತುಕೊಳ್ಳಬೇಕು. ತಾನು ಬಳಸಿದ ವಸ್ತುಗಳನ್ನು ಯಾವ ಜಾಗದಿಂದ ತೆಗೆದುಕೊಂಡಿದ್ದನೋ ಅಲ್ಲಿಯೇ ಮತ್ತೆ ಮೊದಲಿನ ಹಾಗೆ ಜೋಡಿಸಿಡುವುದನ್ನು ಅಭ್ಯಸಿಸಬೇಕು ಮನೆಯಲ್ಲಿ ಆಟವಾಡಲು ಬಳಸಿದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ. ದೇಹದ ಸ್ವಚ್ಛತೆಯನ್ನು ಕಾಪಾಡಬೇಕು. ಶಾಲೆಯಿಂದ ಮರಳಿದಾಗ  ಬ್ಯಾಗ್, ಪುಸ್ತಕಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು. ಗುರುಹಿರಿಯರಿಗೆ ಗೌರವ ಕೊಟ್ಟು ಅವರೊಂದಿಗೆ ಪ್ರೀತಿಯಿಂದ ಮಾತನಾಡಬೇಕು. ಎಲ್ಲಾ ಕೆಲಸಗಳಿಗೂ ಒಂದು ನಿಗದಿತ ಸಮಯವನ್ನು ಇಟ್ಟುಕೊಳ್ಳಬೇಕು. ಇದನ್ನೆಲ್ಲಾ ವಿದ್ಯಾರ್ಥಿಯ ಪಾಲಿಸಿಕೊಂಡು ಹೋದಾಗ ಜೀವನದಲ್ಲಿ ಶಿಸ್ತು ತನ್ನಿಂದ ತಾನೇ ಬರುತ್ತದೆ. ಎಲ್ಲಾ ವಿದ್ಯಾರ್ಥಿ ಗಳೂ ಒಂದೇ ರೀತಿಯಾಗಿ ಇರುವದಿಲ್ಲ.ಮಕ್ಕಳನ್ನು ಹೊಡೆದು ಬಡಿದು ಶಿಸ್ತನ್ನು ಕಲಿಸಲು ಸಾಧ್ಯವೇ ಇಲ್ಲ. ಶಾಲಾ ಪ್ರಾರಂಭದ ದಿನಗಳಿಂದಲೂ ಶಿಕ್ಷಕರು ಕೂಡ ವಿದ್ಯಾರ್ಥಿಯ ಅಶಿಸ್ತಿನ ನಡುವಳಿಕೆಯನ್ನು ಸಾಧ್ಯವಾದಷ್ಟು ತಿದ್ದುತ್ತಾ ಇರಬೇಕು. ಶಿಸ್ತಿನ ನಡುವಳಿಕೆಯ ಹೆಜ್ಜೆ ಬದುಕಿನ ಪಥದಲ್ಲಿ ಗೆಲುವಿನ ನಗುವಿಗೆ ಕಾರಣವಾಗುವ ಬಗೆಯನ್ನು ವಿವರಿಸಬೇಕು.

ಮಕ್ಕಳನ್ನು ಗೌರವಿಸುವುದನ್ನು, ಅವರ ಭಾವನೆಗಳಿಗೆ ಬೆಲೆ ಕೊಡುವುದನ್ನು, ನಿಷ್ಕಳಂಕವಾಗಿ ಪ್ರೀತಿಸುವುದನ್ನು ಮೊದಲು ನಾವು ಕಲಿಯಬೇಕು. ತಪ್ಪುಗಳನ್ನು ಎಲ್ಲರೂ ಮಾಡುತ್ತಾರೆ. ಆದರೆ ಆ ತಪ್ಪುಗಳನ್ನು ತಿದ್ದಿಕೊಳ್ಳುವ ಮುಕ್ತ ಅವಕಾಶವನ್ನು ನಾವು ಮಕ್ಕಳಿಗೆ ಕೊಡಬೇಕು, ಆ ತಪ್ಪು ಮರುಕಳಿಸದಂತೆ ಜಾಗರೂಕರಾಗಿರುವಂತೆ ತಿಳುವಳಿಕೆ ಕೊಡಬೇಕು.

 ಮಕ್ಕಳಲ್ಲಿ ಶಿಸ್ತನ್ನು ಕಲಿಸಲು ಮೊದಲು ನಾವು ಶಿಸ್ತು, ಸಂಯಮ ಮತ್ತು ತಾಳ್ಮೆಯಿಂದ ನಡೆದುಕೊಳ್ಳಬೇಕು. ರೇಗುವುದು, ಶಿಕ್ಷಿಸುವುದು ನಮ್ಮ ಬಹು ದೊಡ್ಡ ತಪ್ಪುಗಳು. ಪ್ರೀತಿಯಿಂದ ಮನ ಗೆಲ್ಲಬೇಕೆ ವಿನಹ ಅಧಿಕಾರದಿಂದಲ್ಲ.ತಿಳಿಹೇಳಿ ಶಿಸ್ತನ್ನು ಮಾಡಿಸುವುದು ಪಾಲಕರ ಹಾಗು ಶಿಕ್ಷಕರ ಕರ್ತವ್ಯವಾಗಿರುತ್ತದೆ.ಆಗ ವಿದ್ಯಾರ್ಥಿಯಾದವನು ಶಿಸ್ತನ್ನು ಸ್ವಯಂಅಳವಡಿಸಿಕೊಳ್ಳುತ್ತಾನೆ. 

ಹೇಳಿಕೊಟ್ಟ ಮಾತು,ಕಟ್ಟಿಕೊಟ್ಟ ಬುತ್ತಿ ಬಹಳ ದಿನ ಉಳಿಯಲಾರದು ಎಂಬ ಮಾತಿದೆ. ಆದ್ದರಿಂದ ಶಿಸ್ತು ಎಂಬುದು ನಮ್ಮ ಜೀವನದ ಒಂದು ಭಾಗವಾಗಿರಬೇಕು. ಅದು ಕೇವಲ ಕಲಿಯುವಿಕೆಯಿಂದ ಮಾತ್ರ ಬರುವುದಲ್ಲ. ಈ ಪ್ರಕೃತಿ ನಮಗೆ ಪ್ರತಿಯೊಂದನ್ನೂ ತಿಳಿಸುತ್ತದೆ. ಶಿಸ್ತು ಎಂಬುದು ಕೇವಲ ಮನುಷ್ಯರಲ್ಲಿ ಮಾತ್ರ ಇರುವುದಲ್ಲ , ಪ್ರತಿಯೊಂದು ಜೀವಿಗಳೂ ಶಿಸ್ತನ್ನು ಪಾಲಿಸುತ್ತದೆ. ಇದಕ್ಕೆ ಉತ್ತಮ ಉದಾಹರಣೆಯಾಗಿ ಇರುವೆಯನ್ನೇ ಹೆಸರಿಸಬಹುದು.

ಉಪಸಂಹಾರ:ಶಿಸ್ತು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ನಿಯಂತ್ರಣದಲ್ಲಿಡುತ್ತದೆ.ಶಿಸ್ತು ಜೀವನದಲ್ಲಿ ಯಶಸ್ಸಿನ ಕೀಲಿಯಾಗಿದೆ

 ವಿದ್ಯಾರ್ಥಿಗಳಿಗೆ ಶಿಸ್ತು ಯಶಸ್ಸಿನ ಪ್ರಮುಖ ಭಾಗವಾಗಿದೆ, ವಿದ್ಯಾರ್ಥಿಯು ಶಿಸ್ತಿನ ದಿನಚರಿಯನ್ನು ಅನುಸರಿಸಿ ತನ್ನ ಅಧ್ಯಯನವನ್ನು ಮಾಡಿದರೆ, ಅವನು ಖಂಡಿತವಾಗಿಯೂ ಯಶಸ್ಸನ್ನು ಪಡೆಯುತ್ತಾನೆ.

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು