ಟಿಪ್ಪಣಿ
ಸ್ತ್ರೀ ಭ್ರೂಣ ಹತ್ಯೆ ಒಂದು ಗಂಭೀರವಾದ ಸಮಸ್ಯೆಯಾಗಿದೆ. ಇದು ಆಧುನಿಕ ತಂತ್ರಜ್ಞಾನಗಳ ಅಕ್ರಮ ಬಳಕೆಯಿಂದ ಹೆಣ್ಣುಮಗುವನ್ನು ತಾಯಿಯ ಗರ್ಭದಲ್ಲೇ ಕೊಲ್ಲುವ ಕ್ರೂರ ಕೃತ್ಯವಾಗಿದೆ.ಹೆಣ್ಣು ಮಕ್ಕಳ ಹಕ್ಕುಗಳನ್ನು ನಿರ್ಲಕ್ಷಿಸುವ ಈ ಕೃತ್ಯ ಅತ್ಯಂತ ಭೀಕರವಾದದು.ಇದರಿಂದಾಗಿ ಲಿಂಗಾನುಪಾತದಲ್ಲಿ ಭಾರಿ ಅಸಮತೋಲನವಾಗಿ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ವಿಷಯ ವಿವರಣೆ :
ಪ್ರಕೃತಿಯ ದೃಷ್ಟಿಯಲ್ಲಿ ಗಂಡು-ಹೆಣ್ಣಿನ ನಡುವೆ ಯಾವುದೇ ಭೇದಭಾವವಿಲ್ಲ ,ಎಲ್ಲರೂ ಸಮಾನರು. ಆದರೆ ಭಾರತೀಯ ಸಮಾಜದಲ್ಲಿ ಗಂಡು ಶ್ರೇಷ್ಠ ಹೆಣ್ಣು ಕನಿಷ್ಠ ಎಂಬ ಭಾವನೆ ಬಲವಾಗಿ ಬೇರೂರಿದೆ.ಸ್ತ್ರೀ ಭ್ರೂಣ ಹತ್ಯೆ ಎಂಬುದು ಒಂದು ಹೇಯವಾದ ಹಾಗೂ ಖಂಡನೀಯವಾದ ಕೃತ್ಯವಾಗಿದೆ.ಸ್ಕ್ಯಾನಿಂಗ್ ತಂತ್ರಜ್ಞಾನವು ಮುಂದುವರಿದಾಗ ಗರ್ಭದಲ್ಲಿರುವಾಗಲೇ ಮಗು ಗಂಡೋ ಹೆಣ್ಣೋ ಎಂದು ಗುರುತಿಸಲು ಪ್ರಾರಂಭವಾಯಿತು ಹೆಣ್ಣು ಮಗು ಎಂದು ತಿಳಿದು ಕೂಡಲೇ ಗರ್ಭದಲ್ಲಿರುವ ಭ್ರೂಣವನ್ನು ಕೊಂದು ಹಾಕುವ ಪೈಶಾಚಿಕ ಕೃತ್ಯವು ಆರಂಭವಾಯಿತು.. ಇದು ವ್ಯಕ್ತಿಯ ಅಥವಾ ಕುಟುಂಬದ ಸಮಸ್ಯೆ ಮಾತ್ರವಲ್ಲ,ಇದರಿಂದ ಇಡೀ ಸಮಾಜದ ಅಭಿವೃದ್ಧಿಯ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.ಲಿಂಗಾನುಪಾತ ಅಸಮತೋಲನವಾಗಿ ಲಿಂಗ ಸಮತೋಲನ ಕಳೆದುಕೊಂಡು ಹೆಣ್ಣು ಮಕ್ಕಳ ಕೊರತೆ ಸಾಮಾಜಿಕ ಹಾಗೂ ಮಾನಸಿಕ ಸಮಸ್ಯೆಗಳಿಗೂ ಕಾರಣವಾಗುತ್ತದೆ . ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುವುದರಿಂದ ಗಂಡು ಮಕ್ಕಳ ಸಂಖ್ಯೆ ಜಾಸ್ತಿಯಾಗಿ ವಿವಾಹದಲ್ಲಿ ತೊಂದರೆಗಳು ಕಾಣಿಸುತ್ತವೆ ಹಾಗೂ ಮಹಿಳಾ ಕಿರುಕುಳಗಳು, ದೌರ್ಜನ್ಯಗಳು ,ಶೋಷಣೆ ,ಅತ್ಯಾಚಾರ , ಮಾನವ ಕಳ್ಳ ಸಾಗಣೆ , ಬಲವಂತದ ಮದುವೆಗಳಿಗೂ ಕಾರಣವಾಗಿ ಸಮಾಜದ ಸ್ವಾಸ್ಥ್ಯ ಹಾಳಾಗುತ್ತದೆ .ಅನೈತಿಕ ಸಂಬಂಧಗಳು ಹೆಚ್ಚಾಗುತ್ತದೆ.ಮಹಿಳೆಯರು ಸಮಾಜದಲ್ಲಿ ಧೈರ್ಯವಾಗಿ ಬದುಕಲು ಕಷ್ಟವಾಗುತ್ತದೆ .
ಗಂಡು ಮಗು ಇದ್ದರೆ ತಮ್ಮ ಜೀವನ ಸಾರ್ಥಕವೆಂದು , ಅವರು ವಂಶೋದ್ಧಾರಕರೆಂದು , ಕೊನೆ ಕಾಲದಲ್ಲಿ ತಮ್ಮನ್ನು ನೋಡಿಕೊಳ್ಳುವರೆಂದು ,ತಮ್ಮೆಲ್ಲಾ ಆಸ್ತಿಪಾಸ್ತಿಗಳಿಗೆ ಅವರೇ ಉತ್ತರಾಧಿಕಾರಿಗಳೆಂದು ಹಾಗು ಗಂಡು ಮಕ್ಕಳಿದ್ದರೆ ಸತ್ತ ಮೇಲೆ ಮೋಕ್ಷ ಸಿಗುವುದೆಂದು ಅವರಿಗೆ ಜಾಸ್ತಿ ಪ್ರಾಮುಖ್ಯತೆಯನ್ನು ನೀಡಲಾಗುವುದು, ಹೆಣ್ಣು ಹೇಗಿದ್ದರೂ ಮದುವೆಯಾಗಿ ಇನ್ನೊಂದು ಮನೆಗೆ ಹೋಗುವಳು 'ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ' ಎಂದು ಅವಗಣಿಸುವುದು, ಕೀಳಾಗಿ ನೋಡುವುದು , ಹೆಣ್ಣು ಶಾರೀರಿಕವಾಗಿ ಪುರುಷರಷ್ಟು ಪ್ರಬಲವಲ್ಲದ ಕಾರಣ ಅಬಲೆ ಎಂಬ ಕಾರಣಕ್ಕಾಗಿ ಹಾಗೂ ಹೆಣ್ಣು ಹುಟ್ಟಿದರೆ ಅವರ ವಿದ್ಯಾಭ್ಯಾಸ ಮತ್ತು ಮದುವೆ ಖರ್ಚುಗಳು ತಮಗೆ ಆರ್ಥಿಕ ಭಾರ ಎಂದು ತಿಳಿದುಕೊಳ್ಳುವುದು ಈ ದುರಂತಕ್ಕೆ ಮೂಲ ಕಾರಣವಾಗಿದೆ.
ಸ್ತ್ರೀ ಭ್ರೂಣ ಹತ್ಕೆಯನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸುವುದು, ಕಾನೂನುಗಳನ್ನು ಬಲಪಡಿಸುವುದು ಮತ್ತು ಸಾಮಾಜಿಕ ಸಮಾನತೆಗೆ ಒತ್ತು ನೀಡುವಂತಹ ಕ್ರಮಗಳನ್ನು ಕೈಗೊಳ್ಳಬಹುದು. ಯುವ ಪೀಳಿಗೆಗೆ ಮಹಿಳೆಯರ ಪ್ರಾಮುಖ್ಯತೆಯನ್ನು ತಿಳಿಸುವ ಮೂಲಕ, ಉತ್ತಮ ಸಮಾಜವನ್ನು ನಿರ್ಮಿಸಬಹುದು. ಹೆಣ್ಣು ಮಕ್ಕಳ ಜೀವನ ಮತ್ತು ವಿದ್ಯಾಭ್ಯಾಸವನ್ನು ಬೆಂಬಲಿಸುವ ಯೋಜನೆಗಳು ಮಹಿಳಾ ಸಬಲೀಕರಣ ಯೋಜನೆಗಳು ಮುಖ್ಯವಾಗಿದೆ. PCPNDT ಕಾಯ್ದೆಯನ್ನು ನಿರ್ದಿಷ್ಟವಾಗಿ ಅನುಸರಿಸಬೇಕು .ಕಾನೂನು ದುರ್ಬಳಕೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಅವಶ್ಯಕ ವೈದ್ಯಕೀಯ ತಂತ್ರಜ್ಞಾನದ ದುರುಪಯೋಗವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು .
ಉಪಸಂಹಾರ
ಸ್ತ್ರೀ ಭ್ರೂಣ ಹತ್ಯೆಯು ನಮ್ಮ ಮುಂದಿನ ಪೀಳಿಗೆಗಳ ಮಕ್ಕಳ ಭವಿಷ್ಯವನ್ನೇ ನಾಶ ಮಾಡುವಂತಹ ಕೃತ್ಯವಾಗಿದೆ. ಆದ್ದರಿಂದ ಕೂಡಲೇ ಎಚ್ಚೆತ್ತುಕೊಂಡು ಈ ಅನಿಷ್ಟದ ವಿರುದ್ಧ ಹೋರಾಡಬೇಕು ಹಾಗೂ ಹೆಣ್ಣು ಮಕ್ಕಳ ಹಕ್ಕುಗಳನ್ನು ರಕ್ಷಿಸಬೇಕು .ಸ್ತ್ರೀಗೆ ಸಮಾಜದಲ್ಲಿ ಗೌರವಯುತ ಸ್ಥಾನಮಾನ ದೊರೆತರೆ ಸುಸ್ಥಿರ ಸಮಾಜದ ನಿರ್ಮಾಣ ಸಾಧ್ಯ .
- ಉಷಾ ಪ್ರಸಾದ್