ಟಿಪ್ಪಣಿ :
'ಕರ್ನಾಟಕ ರಾಜ್ಯೋತ್ಸವ 'ಎಂಬುದು ಕನ್ನಡಿಗರಿಗೆ ಅತ್ಯಂತ ಮಹತ್ವದ ಹಬ್ಬವಾಗಿದೆ. 1956 ರ ನವೆಂಬರ್ 1 ರಂದು ಕನ್ನಡಿಗರ ವಿವಿಧ ಪ್ರದೇಶಗಳನ್ನು ಒಂದೇ ರಾಜ್ಯದ ಅಡಿಯಲ್ಲಿ ಬೆಸೆಯುವ ಉದ್ದೇಶದಿಂದ “ಮೈಸೂರು ರಾಜ್ಯ” ಅಸ್ತಿತ್ವಕ್ಕೆ ಬಂತು; ನಂತರ ಇದನ್ನು ಕರ್ನಾಟಕ ಎಂದು1973ರಲ್ಲಿ ಮರುನಾಮಕರಣ ಮಾಡಲಾಯಿತು.
ವಿಷಯ ವಿವರಣೆ:
ಮೈಸೂರು ರಾಜ್ಯದ ಉದಯವಾಗಿರುವುದು ಭಾರತದ ಸ್ವಾತಂತ್ರ್ಯ ಸಿಕ್ಕ ನಂತರದ ಒಂದು ಮಹತ್ವದ ಪ್ರಕ್ರಿಯೆಯ ಫಲವಾಗಿದೆ.ಇದಕ್ಕೆ ಮುನ್ನುಡಿಯಾಗಿ ಕನ್ನಡ ಕುಲ ಪುರೋಹಿತರಾದ ಆಲೂರು ವೆಂಕಟರಾಯರು ಕರ್ನಾಟಕ ಏಕೀಕರಣ ಚಳವಳಿಯನ್ನು 1905ರಲ್ಲಿ ಆರಂಭಿಸಿದರು.ಆದರೆ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ, ದೇಶವನ್ನು ಭಾಷಾ ಆಧಾರಿತ ರಾಜ್ಯಗಳನ್ನಾಗಿ ವಿಂಗಡಿಸುವ ಅಗತ್ಯತೆ ಹೆಚ್ಚಾಯಿತು. ಅಂದು ಭಾರತದಲ್ಲಿದ್ದ ವಿವಿಧ ಭಾಷೆ ಮಾತನಾಡುವ ಪ್ರದೇಶಗಳನ್ನು ಭೌಗೋಳಿಕ, ಸಾಂಸ್ಕೃತಿಕ, ಮತ್ತು ಭಾಷಾ ಆಧಾರಿತವಾಗಿ ಹೊಸ ರಾಜ್ಯಗಳ ರಚನೆ ಮಾಡುವ ಕಾರ್ಯ ಪ್ರಾರಂಭವಾಯಿತು.
ಈ ಹಿನ್ನಲೆಯಲ್ಲಿ, ಕನ್ನಡ ಮಾತನಾಡುವ ಜನರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಮೈಸೂರು ಸಂಸ್ಥಾನವನ್ನು, ಅದರ ಸುತ್ತಮುತ್ತಲಿನ ಕನ್ನಡ ಭಾಷಾ ಪ್ರದೇಶಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಧಾರವಾಡ, ಬೆಂಗಳೂರು, ಹಾಗೂ ಮತ್ತಿತರ ಪ್ರದೇಶಗಳನ್ನು ಸೇರಿಸಿ “ಮೈಸೂರು ರಾಜ್ಯ” ಎಂದು ರೂಪಿಸಲಾಯಿತು. ಇದು 1956 ರ ನವೆಂಬರ್ 1ರಂದು ಪೂರ್ಣಗೊಂಡಿತು,
1973ರಲ್ಲಿ ಉತ್ತರ ಕರ್ನಾಟಕ ಜನರ ಒತ್ತಾಯಕ್ಕೆ ಮಣಿದು ಮುಖ್ಯಮಂತ್ರಿ ಆಗಿದ್ದ ದೇವರಾಜ್ ಅರಸ್ ಅವರ ಸರಕಾರ 'ಮೈಸೂರು'ರಾಜ್ಯ'ದ ಹೆಸರನ್ನು ಅಧಿಕೃತವಾಗಿ “ಕರ್ನಾಟಕ”ವೆಂದು ಮರು ನಾಮಕರಣ ಮಾಡಿದರು.
"ಕರ್ನಾಟಕ" ಎಂಬುದು ಮೂಲತಃ ಸಂಸ್ಕೃತ ಪದವಾಗಿದೆ. ಈ ಪದವು ಪ್ರಾಚೀನ ಸಾಹಿತ್ಯದಲ್ಲಿ, ವಿಶೇಷವಾಗಿ ಸಂಸ್ಕೃತ ಗ್ರಂಥಗಳಲ್ಲಿ ಮತ್ತು ಪುರಾಣಗಳಲ್ಲಿ ಉಲ್ಲೇಖವಾಗಿರುವುದನ್ನು ನೋಡಬಹುದು. "ಕರ್ನಾಟಕ" ಎಂಬ ಶಬ್ದವು "ಕರು" ಅಥವಾ "ಕರ" (ಅಂದರೆ ಎತ್ತರವಾದ) ಮತ್ತು "ನಾಡು" (ಅಂದರೆ ಸ್ಥಳ ಅಥವಾ ಭೂಮಿ) ಎಂಬ ಶಬ್ದಗಳಿಂದ ಬಂದಿದೆ ಎಂದು ವಿದ್ವಾಂಸರು ಹೇಳುತ್ತಾರೆ.
ಈ ರೀತಿಯಾಗಿ “ಕರ್ನಾಟಕ” ಎಂದರೆ “ಎತ್ತರದ ನಾಡು” ಅಥವಾ “ಉನ್ನತ ಪ್ರದೇಶ” ಎಂಬ ಅರ್ಥವನ್ನೂ ಹೊಂದಿದೆ,
ಇನ್ನು ಕೆಲವು ಪುರಾಣಗಳ ಪ್ರಕಾರ “ಕರುನಾಡ” ಅಂದರೆ ಶ್ರೇಷ್ಠ ಸಂಗೀತ ಮತ್ತು ವಾದ್ಯಗಳಿಗೆ ಪ್ರಸಿದ್ಧವಾದ ಪ್ರದೇಶ ಎಂಬ ಅರ್ಥವೂ ಇದೆ. ಕನ್ನಡದ ಸಾಹಿತ್ಯ ಮತ್ತು ಸಂಗೀತದ ಕ್ಷೇತ್ರದಲ್ಲಿ ಕರ್ನಾಟಕವು ಮಹತ್ತರ ಕೊಡುಗೆ ನೀಡಿರುವುದರಿಂದ, “ಕರ್ನಾಟಕ” ಎಂಬ ಹೆಸರು ಮಹತ್ವದ್ದಾಗಿದೆ.
1956ರ ನಂತರ ವರ್ಷಂಪ್ರತಿ ನವೆಂಬರ್ 1 ನ್ನು “ಕನ್ನಡ ರಾಜ್ಯೋತ್ಸವ” ಎಂದು ಆಚರಿಸಲಾಗುತ್ತದೆ.ರಾಜ್ಯೋತ್ಸವ ದಿನದ ಮತ್ತೊಂದು ಮುಖ್ಯ ಅಂಶವೆಂದರೆ “ರಾಜ್ಯೋತ್ಸವ ಪ್ರಶಸ್ತಿ” ಪ್ರದಾನ. ಕನ್ನಡ ಮತ್ತು ಕರ್ನಾಟಕ ರಾಜ್ಯದ ಅಭಿವೃದ್ಧಿಗೆ, ಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಗಣ್ಯರಿಗೆ ರಾಜ್ಯೋತ್ಸವದಂದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ
ಹೀಗೆ ಈ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕದ ಶಾಲಾ-ಕಾಲೇಜುಗಳಿಂದ ಹಿಡಿದು ಸರ್ಕಾರಿ ಕಚೇರಿಗಳು, ಸಾಂಸ್ಕೃತಿಕ ಸಂಘಟನೆಗಳು ಮುಂತಾದವು ಕನ್ನಡ ಸಾಹಿತ್ಯ, ಕಲೆ, ಇತಿಹಾಸ ಮತ್ತು ಸಂಸ್ಕೃತಿಯನ್ನು ಗುರುತಿಸುವ ಹಲವಾರು ಕಾರ್ಯಕ್ರಮಗಳು ನಡೆಸುತ್ತವೆ. ಶಾಲಾ ಮಕ್ಕಳಿಂದ ಹಿಡಿದು ಹಿರಿಯರ ತನಕ ಕನ್ನಡ ಭಾಷೆಯ ಮೇಲೆ ಪ್ರೀತಿ ಹಾಗೂ ಅಭಿಮಾನವನ್ನು ಹೆಚ್ಚಿಸಲು ಕವನ ಸ್ಪರ್ಧೆಗಳು, ನಾಟಕಗಳು, ಮೆರವಣಿಗೆಗಳು, ಭಾಷಣ ಕಾರ್ಯಕ್ರಮಗಳು ಏರ್ಪಡುತ್ತವೆ. ಕೆಂಪು ಮತ್ತು ಹಳದಿ ಬಣ್ಣದ ನಮ್ಮ ಬಾವುಟ ಎಲ್ಲೆಡೆ ರಾರಾಜಿಸುತ್ತಿರುತ್ತದೆ.ಈ ದಿನವನ್ನು ಸರಕಾರಿ ರಜಾ ದಿನವನ್ನಾಗಿಯೂ ಘೋಷಿಸಲಾಗಿದೆ.
ಉಪಸಂಹಾರ
ಕನ್ನಡಿಗರ ಒಗ್ಗಟ್ಟನ್ನು ಬಿಂಬಿಸುವ ಈ ಹಬ್ಬವು ನಮ್ಮ ರಾಜ್ಯದ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸುತ್ತದೆ. ನಮ್ಮ ರಾಜ್ಯದ ಇತಿಹಾಸ, ಪರಂಪರೆ, ಮತ್ತು ಸಾಂಸ್ಕೃತಿಕ ವೈಭವ ಹೆಚ್ಚಿಸುವ ಮತ್ತು ಮುಂದುವರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೂ ಇದೆ.
- ಉಷಾ ಪ್ರಸಾದ್