ಪೀಠಿಕೆ:
ಭಗತ್ ಸಿಂಗ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಶ್ರೇಷ್ಠ ಕ್ರಾಂತಿಕಾರಿಗಳಲ್ಲಿ ಒಬ್ಬರು. ಬಾಲ್ಯದಲ್ಲಿಯೇ ದೇಶಭಕ್ತಿಯನ್ನು ಬೆಳೆಸಿಕೊಂಡು ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಹಚ್ಚಿದ್ದರು.ಭಗತ್ ಸಿಂಗ್ ಅವರು ಬ್ರಿಟಿಷ್ ಆಡಳಿತದ ವಿರುದ್ಧ ಸಶಸ್ತ್ರ ಹೋರಾಟದ ನಿಟ್ಟಿನಲ್ಲಿ ತೀವ್ರವಾಗಿ ಸಕ್ರಿಯರಾಗಿದ್ದರು. ಅವರ ಚಿರಸ್ಮರಣೀಯ ಕಾರ್ಯಗಳು, ಆದರ್ಶಗಳು, ಮತ್ತು ತ್ಯಾಗವು ಇಂದಿಗೂ ಭಾರತೀಯ ಯುವಕರಿಗೆ ಪ್ರೇರಣೆಯಾಗಿದೆ.
ವಿಷಯ ವಿವರಣೆ:
ಭಗತ್ ಸಿಂಗ್ 1907ರ ಸೆಪ್ಟೆಂಬರ್ 28ರಂದು ಪಂಜಾಬ್ ನ ಲೈಲ್‌ಪುರ ಜಿಲ್ಲೆಯ ಬಂಗಾ ಗ್ರಾಮದಲ್ಲಿ (ಇಂದಿನ ಪಾಕಿಸ್ತಾನದಲ್ಲಿ)ಸರ್ದಾರ್ ಕಿಶನ್ ಸಿಂಗ್ ಸಂಧು ಮತ್ತು ವಿದ್ಯಾವತಿ ದೇವಿ ದಂಪತಿಗಳ ಪುತ್ರನಾಗಿ ಜನಿಸಿದರು. ಅವರ ತಂದೆ ಮತ್ತು ಚಿಕ್ಕಪ್ಪ ಸ್ವರಣ್ ಸಿಂಗ್ ಇವರಿಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡಿದ್ದರು. ಮನೆಯ ವಾತಾವರಣವೇ ದೇಶಭಕ್ತಿಯಿಂದ ತುಂಬಿತ್ತು, ಅದೇ ವಾತಾವರಣದಲ್ಲೇ ಭಗತ್ ಸಿಂಗ್ ಬೆಳೆದರು.'ದಯಾನಂದ್ ಆಂಗ್ಲೋ ವೇದಿಕ್ ಸ್ಕೂಲ್' ಹಾಗೂ ' ಲಾಹೋರ್ ನ್ಯಾಷನಲ್ ಕಾಲೇಜ್' ನಲ್ಲಿ ವಿದ್ಯಾಭ್ಯಾಸ ಪೂರೈಸಿದರು.
1919 ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಘಟನೆ ಅವರನ್ನು ಬಾಲ್ಯದಲ್ಲೇ ತೀವ್ರವಾಗಿ ವಿಚಲಿತಗೊಳಿಸಿತು. 1922 ರಲ್ಲಿ ಗಾಂಧೀಜಿಯವರು ಉತ್ತರ ಪ್ರದೇಶದ ಚೌರಿ ಚೌರ ಎಂಬ ಊರಿನಲ್ಲಿ ಶಾಂತಿಯುತವಾಗಿ ಅಸಹಕಾರ ಚಳವಳಿಯನ್ನು ನಡೆಸುತ್ತಿದ್ದರು. ಆಗ ಪೊಲೀಸರು ಚಳವಳಿಕಾರರ ಮೇಲೆ ಗುಂಡು ಹಾರಿಸಿ ಅನೇಕರನ್ನು ಕೊಲೆಗೈದರು. ಇದರಿಂದ ರೊಚ್ಚಿಗೆದ್ದ ಜನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ 19 ಜನ ಪೊಲೀಸರನ್ನು ಕೊಂದು ಹಾಕಿದರು.ಈ ಘಟನೆಯಿಂದ ಸಿಟ್ಟುಗೊಂಡ ಗಾಂಧೀಜಿಯವರು ತಮ್ಮ ಅಸಹಕಾರ ಚಳವಳಿಯನ್ನು ಹಿಂಪಡೆದುಕೊಂಡರು.ಇದನ್ನು ಅನೇಕ ನಾಯಕರು ವಿರೋಧಿಸಿದರು.ಗಾಂಧೀಜಿಯವರ ಈ ನಿರ್ಧಾರದಿಂದ ಭ್ರಮನಿರಸನ ಗೊಂಡ ಭಗತ್ ಸಿಂಗ್ ಕ್ರಾಂತಿಕಾರಿ ಮಾರ್ಗವನ್ನು ಅನುಸರಿಸಲು ತೀರ್ಮಾನಿಸಿದನು.ಕೊನೆಗೆ ತನ್ನ ತಂದೆಗೆ ಪತ್ರ ಬರೆದು ಮನೆ ಬಿಟ್ಟು ಕ್ರಾಂತಿಕಾರಿ ಚಳವಳಿಗೆ ಧುಮುಕಿದರು
ಚಂದ್ರಶೇಖರ್ ಆಜಾದ್ ಅವರ 'ಆಜಾದ್ ಹಿಂದುಸ್ತಾನ ರಿಪಬ್ಲಿಕನ್ ಆರ್ಮಿ ' ಎಂಬ ಕ್ರಾಂತಿಕಾರಿ ಸಂಸ್ಥೆಯ ಸಕ್ರಿಯ ಕಾರ್ಯಕರ್ತರಾಗಿ ಕ್ರಾಂತಿಕಾರಿ ಜೀವನವನ್ನು ಆರಂಭಿಸಿದರು.
ಸೈಮನ್ ಸಮಿತಿಯ ವಿರುದ್ಧ (1928) ಲಾಹೋರ್ ನಲ್ಲಿ ಲಾಲಾ ಲಜಪತ್ ರಾಯ್ ರ ನೇತೃತ್ವದಲ್ಲಿ ಪ್ರತಿಭಟನಕಾರರು ಶಾಂತಿಯುತವಾಗಿ ಮೆರವಣಿಗೆ ನಡೆಸುತ್ತಿದ್ದರು.ಈ ಸಂದರ್ಭದಲ್ಲಿ ಪೊಲೀಸರು ಲಾಠಿಯಿಂದ ಮೆರವಣಿಗೆಕಾರಕ ಮೇಲೆ ಅಮಾನುಷವಾಗಿ ಹಿಂಸಾಚಾರ ಪ್ರಾರಂಭಿಸಿದರು.ಆಗ ಸ್ಯಾಂಡರ್ಸ್ ಎಂಬ ಪೊಲೀಸ್ ಅಧಿಕಾರಿಯ ತನ್ನ ಪಡೆಯೊಂದಿಗೆ ಲಾಲಾ ಲಜಪತ್ ರಾಯ್ ಮೇಲೆ ಭೀಕರವಾಗಿ ಲಾಠಿ ಬೀಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿತು.ಈ ಗಾಯಗಳ ಯಾತನೆಯಿಂದಾಗಿ ಚೇತರಿಸಿಕೊಳ್ಳಲು ಆಗದೆ , 1928 ನವೆಂಬರ್ 17 ರಂದು ಇಹಲೋಕ ಯಾತ್ರೆ ಮುಗಿಸಿದರು
ಲಾಲಾ ಲಜಪತ್ ರಾಯ್ ಅವರನ್ನು ಬ್ರಿಟಿಷ್ ಅಧಿಕಾರಿಗಳು ತುಂಬಾ ಅಮಾನುಷವಾಗಿ ಹಿಂಸಿಸಿದ ನಂತರ, ಇದಕ್ಕೆ ಪ್ರತೀಕಾರವಾಗಿ ಭಗತ್ ಸಿಂಗ್ ಹಾಗೂ ಅವರ ಸಂಗಡಿಗರು ಆ ಕ್ರೂರ ಬ್ರಿಟೀಷ್ ಪೊಲೀಸ್ ಅಧಿಕಾರಿ ಜೆ.ಪಿ.ಸ್ಯಾಂಡರ್ಸ್ ಅವನನ್ನು ಪೊಲೀಸ್ ಠಾಣೆ ಎದುರಲ್ಲೇ ಗುಂಡಿಟ್ಟು ಕೊಂದು ಸೇಡು ತೀರಿಸಿಕೊಂಡರು.
1929ಎಪ್ರಿಲ್ 8ರಂದು ಭಗತ್ ಸಿಂಗ್ ಮತ್ತು ಬಟುಕೇಶ್ವರ್ ದತ್ ಅವರು
ದೆಹಲಿಯ ಸೆಂಟ್ರಲ್ ಅಸೆಂಬ್ಲಿಯಲ್ಲಿ ಬಾಂಬ್ ಸ್ಫೋಟಿಸಿದರು. ಇದರ ಆಶಯ ಪ್ರಾಣ ಹಾನಿಯಾಗಿರಲಿಲ್ಲ, ಬದಲಾಗಿ ಬ್ರಿಟಿಷ್ ಆಡಳಿತದ ವಿರುದ್ಧ ತಮ್ಮ ಧ್ವನಿ ಹೊರಹಾಕುವ ಉದ್ದೇಶ ಮಾತ್ರವಾಗಿತ್ತು. ಇದು ಸರಕಾರ ಜಾರಿಗೆ ತರಲು ಉದ್ದೇಶಿಸಿದ ಕಾರ್ಮಿಕ ಕಾನೂನು ಹಾಗೂ ಇತರ ಜನವಿರೋಧಿ ಕಾನೂನುಗಳನ್ನು ವಿರೋಧಿಸುವುದಾಗಿತ್ತು.ಇವರಿಬ್ಬರೂ ಬಾಂಬ್ ಸ್ಪೋಟದ ನಂತರ ಸ್ಥಳದಲ್ಲಿಯೇ ಪೊಲೀಸರಿಗೆ ಶರಣಾದರು.
ಸ್ಯಾಂಡರ್ಸ್ ಹತ್ಯೆಗೆ ಸಂಬಂಧಿಸಿದಂತೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರನ್ನು ಬ್ರಿಟಿಷ್ ಸರ್ಕಾರವು ಗಲ್ಲಿಗೇರಿಸುವುದೆಂದು ನಿರ್ಧರಿಸಿತು.ನ್ಯಾಯಾಲಯದ ಈ ತೀರ್ಪನ್ನು ಭಗತ್ ಸಿಂಗ್ ಅವರು ಹಸನ್ಮುಖಿಯಾಗಿ ಸ್ವೀಕರಿಸಿದರು.ದೇಶಕ್ಕಾಗಿ ಬಲಿಯಾಗುವ ಭಾಗ್ಯ ನನ್ನದು ಎಂದು ಹೇಳುತ್ತಿದ್ದರು.1931ರ ಮಾರ್ಚ್ 23ರಂದು ಬಲಿಪೀಠ ಏರಿದಾಗ ಮೂವರು ಏಕಕಾಲದಲ್ಲಿ 'ಭಾರತ್ ಮಾತಾ ಕಿ ಜೈ ' ' ಇನ್‌ಕ್ವಿಲಾಬ್ ಜಿಂದಾಬಾದ್ ' 'ಡೌನ್ ಡೌನ್ ಇಂಪಿರಿಯಲಿಸಂ 'ಎಂಬ ಘೋಷಣೆಗಳನ್ನು ಕೂಗುತ್ತಾ ಗಲ್ಲಿಗೇರಿದರು. ಮರಣದಂಡನೆಗೆ ಮೊದಲು ಅವರು ತಮ್ಮ ಧೈರ್ಯ ಮತ್ತು ತಾತ್ವಿಕ ತ್ಯಾಗದಿಂದ ಎಲ್ಲರ ಮೆಚ್ಚುಗೆ ಗಳಿಸಿದರು.
ಭಗತ್ ಸಿಂಗ್ ರು ಕೇವಲ ಬ್ರಿಟಿಷರನ್ನು ಭಾರತದಿಂದ ಹೊರಹಾಕುವ ಹೋರಾಟವನ್ನು ಮಾತ್ರ ಮಾಡಲಿಲ್ಲ; ಬದಲಿಗೆ ಅವರು ಸ್ವಾತಂತ್ರ್ಯವು ಸಮಾನತೆ, ಶೋಷಣೆಗೆ ವಿರುದ್ಧ ಹೋರಾಟ, ಮತ್ತು ಬಡವರ ಅಭಿವೃದ್ಧಿಗೆ ಸಹಕಾರಿಯಾಗಬೇಕು ಎಂದು ನಂಬಿದ್ದರು.ಅವರು ಕಮ್ಯೂನಿಸ್ಟ್ ತತ್ವಗಳಲ್ಲಿ ನಂಬಿಕೆ ಹೊಂದಿದ್ದು, ಬಡವರ ಹಕ್ಕುಗಳನ್ನು, ಸಮಾನತೆಯನ್ನು, ಸಾಮಾಜಿಕ ನ್ಯಾಯವನ್ನು ಒತ್ತಿ ಹೇಳುತ್ತಿದ್ದರು
ಉಪಸಂಹಾರ:
ಭಗತ್ ಸಿಂಗ್ ಅವರ ತ್ಯಾಗವು ಭಾರತೀಯ ಸ್ವಾತಂತ್ರ್ಯ ಹೋರಾಟದ ಮುಖ್ಯ ಪ್ರೇರಣೆಯಾಗಿದೆ. "ಇನ್‌ಕ್ವಿಲಾಬ್ ಜಿಂದಾಬಾದ್" ಎಂಬ ಅವರ ಘೋಷಣೆ, ಇಂದಿಗೂ ಕ್ರಾಂತಿಕಾರಿಯ ಸ್ವರವನ್ನು ಪ್ರತಿನಿಧಿಸುತ್ತದೆ.ಇವರ ಆದರ್ಶ ತೋರಿಸಿಕೊಟ್ಟ ದಾರಿ ಇಂದಿಗೂ ಕೋಟ್ಯಾಂತರ ಭಾರತೀಯರಿಗೆ ದಾರಿದೀಪವಾಗಿದೆ.
- ಉಷಾ ಪ್ರಸಾದ್