ಪೀಠಿಕೆ :
ಜಲಿಯನ್ ವಾಲಾಬಾಗ್ ದುರಂತವು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಅತೀವ ಹೃದಯವಿದ್ರಾವಕ ಮತ್ತು ಮಹತ್ವದ ಘಟನೆಯಾಗಿದ್ದು, ಬ್ರಿಟಿಷ್ ಸಾಮ್ರಾಜ್ಯದ ದೌರ್ಜನ್ಯವನ್ನು ಎತ್ತಿ ತೋರಿಸುವ ಭೀಕರ ಹತ್ಯಾಕಾಂಡವಾಗಿ ಇತಿಹಾಸದಲ್ಲಿ ಅಚ್ಚೊತ್ತಾಯಿತು. 1919ರ ಏಪ್ರಿಲ್ 13ರಂದು ನಡೆದ ಈ ದುರಂತ ನೂರಾರು ಅಮಾಯಕ ಭಾರತೀಯರ ಜೀವವನ್ನು ಕಸಿದುಕೊಂಡಿತು ಮತ್ತು ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಮತ್ತಷ್ಟು ಭಾರೀ ಬೆಂಬಲವನ್ನು ಹುಟ್ಟುಹಾಕಿತು.ವಿಷಯ ವಿವರಣೆ:
1919ರಲ್ಲಿ ಬ್ರಿಟಿಷ್ ಸರ್ಕಾರವು ರಾವ್ಲಾಟ್ ಆಕ್ಟ್ ಹೆಸರಿನ ಕಾನೂನನ್ನು ಜಾರಿಗೆ ತಂದಿತು.ಈ ಕಾನೂನಿನ ವಿರುದ್ಧ ದೇಶಾದ್ಯಾಂತ ವ್ಯಾಪಕ ವಿರೋಧವು ವ್ಯಕ್ತವಾಯಿತು. ಪಂಜಾಬ್‌ನ ಜನರು ಕೂಡ ಈ ಕಾನೂನಿಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಆ ಹಿನ್ನಲೆಯಲ್ಲಿ, ಜನರು ಅಮೃತಸರದ ಜಲಿಯನ್ ವಾಲಾಬಾಗ್‌ನಲ್ಲಿ ಏಪ್ರಿಲ್ 13ರಂದು ಶಾಂತಿಪೂರ್ಣ ಸಭೆಯನ್ನು ಏರ್ಪಡಿಸಿದ್ದರು.ರೌಲತ್ ಶಾಸನದ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ್ರೋಹಿಗಳೆಂದು ಹೆಸರಿಸಿ ಬಂಧಿಸಿ ಉಗ್ರವಾದ ಶಿಕ್ಷೆಗೆ ಗುರಿ ಮಾಡುತ್ತಿದ್ದ ಸರಕಾರದ ನಡವಳಿಕೆಯನ್ನು ಈ ಸಭೆ ಪ್ರತಿಭಟಿಸಿತ್ತು.
ಜಲಿಯನ್ ವಾಲಾ ಬಾಗ್ ಪ್ರದೇಶದಲ್ಲಿ ನಾಲ್ಕು ದಿಕ್ಕಿನಿಂದಲೂ ಎತ್ತರವಾದ ಗೋಡೆಗಳಿಂದ ಆವೃತವಾಗಿ ಒಂದೇ ಬಾಗಿಲನ್ನು ಹೊಂದಿದ್ದ ದೊಡ್ಡ ಬಯಲಿನಲ್ಲಿ ಸಭೆ ಸೇರಿತು ಸಭೆಯಲ್ಲಿ ಸಣ್ಣಪುಟ್ಟ ಕೂಸುಗಳಿಂದ ಹಿಡಿದು ವಯೋವೃದ್ಧರವರೆಗೆ ಪುರುಷರು ಮಹಿಳೆಯರು ಸೇರಿ ಎಲ್ಲ ವರ್ಗದ ಜನತೆ ತಮ್ಮ ಸ್ಥಳೀಯ ನಾಯಕರುಗಳ ಭಾಷಣವನ್ನು ಆಲಿಸುತ್ತಿತ್ತು ಜನರಲ್ ಡೈಯರ್ ಎಂಬ ಅಧಿಕಾರಿಯ ನಿಯಂತ್ರಣಕ್ಕೆ ಅಮೃತಸರವನ್ನು ನೀಡಿದ್ದರು. ಡಯರ್ ಗೆ ಆಂಗ್ಲೋ ಸರಕಾರದ ವಿರುದ್ಧ ಜನತೆ ಸಭೆ ಸೇರಿರುವುದು ತಿಳಿದುಬಂತು
ಬ್ರಿಟಿಷ್ ಸೇನೆಯ ಬ್ರಿಗೇಡಿಯರ್ ಜನರಲ್ ರೆಜಿನಾಲ್ಡ್ ಡಯರ್ ಈ ಸಭೆಯನ್ನು ತಡೆ ಹಿಡಿಯಲು ಬಂದಾಗ, ಇದು ಬಂಡಾಯವೆಂದು ತಿಳಿದನು.ಇದರಿಂದ ಕುಪಿತನಾಗಿ ಯಾವುದೇ ಎಚ್ಚರಿಕೆಯಿಲ್ಲದೆ, ಡಯರ್ ತನ್ನ ಸೈನಿಕರನ್ನು ಕರೆತಂದು ಜನರ ಮೇಲೆ ಗುಂಡು ಹಾರಿಸಲು ಆದೇಶಿಸಿದನು.ಅಲ್ಲಿನ ಪರಿಸ್ಥಿತಿ ಏನು ಏನಾಗುತ್ತಿದೆ ಎಂದು ತಿಳಿಯುವ ವ್ಯವಧಾನವು ಇಲ್ಲದೆ ಸಭೆಯಲ್ಲಿದ್ದ ಸುಮಾರು 20 ಸಾವಿರ ನಿರಾಯುಧ ಜನತೆಯ ಮೇಲೆ ಗುಂಡಿನ ಸುರಿಮಳೆಗೈದನು . ತನ್ನ ದುಷ್ಟಬುದ್ಧಿಯ ಅಟ್ಟಹಾಸದಿಂದ ಆ ಅಮಾಯಕ ಜನರ ರಕ್ತದ ಒಕುಳಿಯಟ ಆಡಿದ. ಆ ಮೈದಾನಕ್ಕೆ ಇದ್ದ ಒಂದೇ ಒಂದು ಚಿಕ್ಕ ಬಾಗಿಲಿನ ಮೂಲಕ ಯಾರು ಹೊರಗೆ ಹೋಗದಂತೆ ಅವನ ಪಡೆ ಸುತ್ತುವರೆದು ನಿಂತು ಗುಂಡು ಹಾರಿಸುತ್ತಿತ್ತು. ಬಹಳಷ್ಟು ಜನರು ಪ್ರಾಣ ಭಯದಿಂದ ದಿಕ್ಕೆಟ್ಟು ಓಡಾಡಿ ಗುಂಡಿಗೆ ಬಲಿಯಾದರು, ಹಲವರು ಅಲ್ಲಿನ ಪಾಳು ಬಾವಿಯೊಂದರಲ್ಲಿ ಬಿದ್ದು ಪ್ರಾಣ ತೆತ್ತರು. ಈ ಮಾರಣ ಹೋಮದಲ್ಲಿ 379 ಅಮಾಯಕ ವ್ಯಕ್ತಿಗಳು ಬಲಿಯಾಗಿ 1137 ಮಂದಿ ಗಾಯಗೊಂಡರು. ಒಟ್ಟು630 ಸುತ್ತು ಗುಂಡುಗಳನ್ನು ಹಾರಿಸಲಾಗಿತ್ತು ಈ ಘಟನೆ ನಡೆದ ತಕ್ಷಣವೇ ಡಯರ್ ನಗರದಲ್ಲಿ ಕರ್ಫ್ಯೂ ವಿಧಿಸಿದನು. ಇದರಿಂದ ಗಾಯಾಳುಗಳಿಗೆ ಯಾವುದೇ ವೈದ್ಯಕೀಯ ನೆರವು ಕೂಡ ದೊರೆಯದಂತಾಯಿತು. ಈ ಘಟನೆ ಭಾರತದ ಇತಿಹಾಸದಲ್ಲಿಯೇ ಹೃದಯವಿದ್ರಾವಕ ಹಾಗೂ ಕರಾಳಘಟನೆ ಎನಿಸಿತು ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ತಿರುವು ನೀಡಿತ್ತು .
ಜಲಿಯನ್ ವಾಲಾ ಬಾಗ್ ದುರಂತವು ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು. ಭಾರತದಲ್ಲಿರುವ ಜನರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ದುರಂತ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸದೊಂದು ತಿರುವು ನೀಡಿತು. ಈ ದುರಂತದಿಂದ ಅಸಂಖ್ಯಾತ ಭಾರತೀಯರು ಬ್ರಿಟಿಷರ ವಿರುದ್ಧ ತಮ್ಮ ಹೋರಾಟದಲ್ಲಿ ಶಕ್ತಿ ಹಾಗೂ ಸ್ಫೂರ್ತಿಯನ್ನು ಪಡೆದರು.
ಇಂದಿನ ಅಮೃತಸರದಲ್ಲಿರುವ ಜಲಿಯನ್ ವಾಲಾ ಬಾಗ್, ಈ ದುರಂತವನ್ನು ನೆನೆಸುವ ಸ್ಮಾರಕವಾಗಿ ಉಳಿಸಲಾಗಿದೆ. ಇಲ್ಲಿ ಗುಂಡು ಹಾರಿಸಿದ ಚಿಹ್ನೆಗಳು, ಬಾವಿ ಮತ್ತು ದುರಂತದ ಸ್ಮಾರಕಗಳು ಇದನ್ನು ಮರೆಯದಂತೆ ಜನರಿಗೆ ನೆನಪಿಸುತ್ತವೆ.
ಉಪಸಂಹಾರ:
ಜಲಿಯನ್ ವಾಲಾಬಾಗ್ ದುರಂತವು ಬ್ರಿಟಿಷ್ ಸಾಮ್ರಾಜ್ಯದ ಕ್ರೂರತೆಗೆ ಕನ್ನಡಿ ಹಿಡಿದಂತಾಯಿತು ಮತ್ತು ಭಾರತದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ತೀವ್ರತೆಗೆ ಮತ್ತಷ್ಟು ಪುಷ್ಠಿ ನೀಡಿತು. ಈ ದುರಂತವು ಭಾರತೀಯರಲ್ಲಿ ಇನ್ನೂ ದೊಡ್ಡ ಉತ್ಸಾಹವನ್ನು ಹುಟ್ಟಿಸಿತು.ಅನೇಕ ಯುವಕರು ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು ಹಾಗೂ ದೇಶಭಕ್ತಿ ಯು ಭಾರತೀಯರ ರಕ್ತದ ಕಣಕಣದಲ್ಲಿ ಶಕ್ತಿಯಾಗಿ ಪರಿವರ್ತನೆಯಾಯಿತು