ಮೊಬೈಲಿನ ಅನಿಯಂತ್ರಿತ ಬಳಕೆ

ಮೊಬೈಲಿನ ಅನಿಯಂತ್ರಿತ ಬಳಕೆ

ಇಂದು ಬಡವ-ಬಲ್ಲಿದ, ಹಿರಿಯ -ಕಿರಿಯ ಎನ್ನದೆ ಎಲ್ಲರ ಕೈಯಲ್ಲೂ ಮೊಬೈಲ್ ರಾರಾಜಿಸುತ್ತಿದೆ. ಮಕ್ಕಳಿಂದ ಹಿಡಿದು ಹಿರಿಯರ ತನಕವೂ ಎಲ್ಲರೂ ಇದರ ದಾಸಾನುದಾಸರಾಗಿದ್ದಾರೆ.ಮೊಬೈಲ್ ಅಡಿಕ್ಷನ್ ಎಂಬ ಮನೋವಿಕೃತಿಗೆ ಪ್ರತಿಯೊಬ್ಬರೂ ಬಲಿಯಾಗುತ್ತಿರುವುದು ದುರಂತವೇ ಸರಿ. ಅದರಲ್ಲೂ ಬೆಳೆಯುತ್ತಿರುವ ಮಕ್ಕಳು ಇದರಿಂದಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದು ತುಂಬಾ ಗಂಭೀರವಾದ ಸಂಗತಿಯಾಗಿದೆ.


ಮೊಬೈಲ್ ಕೊಡಿಸಿಲ್ಲ ಎಂದರೆ ಕೆಲವು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೂ ತಲುಪಿರುವುದು ಆತಂಕಕಾರಿ ವಿಷಯವಾಗಿದೆ. ಸ್ವರ್ಧಾತ್ಮಕ ಜಗತ್ತಿನಲ್ಲಿ ಇಂದು ಹೆತ್ತವರಿಗೆ ತಮ್ಮ ಮಕ್ಕಳಿಗೆ ಪ್ರೀತಿ ಕೊಡಲು ಸಮಯವಾಗಲಿ ಅಥವಾ ಸಂಯಮವಾಗಲಿ ಇರುವುದಿಲ್ಲ.ಮಕ್ಕಳು ಅತ್ತಾಗ ,ಊಟ ಮಾಡದಿದ್ದಾಗ, ಹಠ ಮಾಡಿದಾಗ ಅವರನ್ನು ಸಮಾಧಾನ ಮಾಡವ ಸಲುವಾಗಿ  ಮಕ್ಕಳ ಕೈಗೆ ಹೆತ್ತವರು ಮೊಬೈಲನ್ನು ನೀಡುತ್ತಾರೆ. ಆದರೆ ನಂತರ ಇದನ್ನು ಬಿಡಲೊಪ್ಪದ ಮಕ್ಕಳು  ಮೊಬೈಲ್ ಗೆ ಅಂಟಿಕೊಳ್ಳುತ್ತವೆ.  ಇದುವೇ ಒಂದು ಗೀಳಾಗಿ ಅದಲ್ಲಿರುವ ಒಂದೊಂದೇ ವಿಷಯಗಳನ್ನು ಕಲಿಯತೊಡಗುತ್ತವೆ . ಕೈಯಲ್ಲಿ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎಂಬ ಪರಿಸ್ಥಿತಿಗೆ ಇದು ಎಲ್ಲರನ್ನೂ ತಂದಿಡುತ್ತದೆ.

ಮೊಬೈಲ್ ಎಂಬ ಮಾಯಜಾಲದೊಳಗೆ ಒಮ್ಮೆ ಹೊಕ್ಕರೆ ಹೊರಬರುವುದು ತುಂಬಾ ಕಷ್ಟ.ಅಲ್ಲಿ ಮನರಂಜನೆಗೆ ಹಾಗೂ ಕಾಲಹರಣಕ್ಕೆ ಬೇಕಾದ ಎಲ್ಲವೂ ಇದೆ .ಯೂಟ್ಯೂಬ್, ಇನ್ಸ್ಟಾಗ್ರಾಮ್ ಗಳಲ್ಲಿ ನಾನಾ ರೀತಿಯ ವೀಡಿಯೋಗಳು, ರೀಲ್ಸ್ ಗಳು ನೋಡಿ ಮುಗಿಯದಷ್ಟು ತುಂಬಿಕೊಂಡಿದೆ. ರೀಲ್ಸ್ ಹುಚ್ಚಿಗೆ ಅದೆಷ್ಟೋ ಜೀವಗಳು ಬಲಿಯಾಗುತ್ತಿವೆ. ಫೇಸ್ಬುಕ್ ,ವಾಟ್ಸಾಪ್ ,ಸ್ನಾಪ್ ಚಾಟ್  ಗಳಲ್ಲಿ ಹೊಸ ಹೊಸ ಅಪರಿಚಿತ ಗೆಳೆಯರು ದೊರಕುತ್ತಾರೆ. ಅಲ್ಲಿ ಅವರೊಂದಿಗೆ ಮನಸೋ ಇಚ್ಛೆ ಚಾಟಿಂಗ್  ಮಾತುಕತೆ ನಡೆಸಬಹುದಾದ ಅವಕಾಶವನ್ನು ಮೊಬೈಲ್ ನೀಡಿದೆ.ಆದರೆ ಇದರಿಂದಾಗುವ ಪರಿಣಾಮದ  ಅರಿವು ಗೊತ್ತಾದಾಗ ಹೊತ್ತಾಗಿರುತ್ತದೆ. ಇನ್ನು ಗೇಮಿಂಗ್ ಗಳು ಒಂದು ರೀತಿಯ ಮಜಾವನ್ನು ಹಾಗು ಖುಷಿಯನ್ನು ನೀಡಬಹುದು. ಆದರೆ ಈ ಆಟಗಳೂ ಕೂಡಾ ತುಂಬಾ ಅಪಾಯಕಾರಿ ಎಂಬುದರ ಪ್ರಜ್ಞೆಯಿರಲಿ.ಇದಲ್ಲದೆ ನಾನಾ ರೀತಿಯ ಆಪ್ ಗಳ ಭಂಡಾರವೇ ಮೊಬೈಲ್ನಲ್ಲಿದೆ. ಮಕ್ಕಳಿಗೆ ಒಳ್ಳೆಯದು ಹಾಗೂ ಕೆಟ್ಟದು ಯಾವುದೆಂದು ಗೊತ್ತಿಲ್ಲದೆ ,ಬೇಗ ಕೆಟ್ಟದರ ಕಡೆಗೆ ಆಕರ್ಷಿತರಾಗುತ್ತಾರೆ.

ಇಂದು ಎಲ್ಲರ ಮನೆಯಲ್ಲೂ ಸ್ಮಶಾನ ಮೌನ ಆವರಿಸಿದೆ.  ಎಲ್ಲರೂ ಕೈಯಲ್ಲೊಂದು ಮೊಬೈಲ್ ಹಿಡಿದುಕೊಂಡು ಕೂತರೆ ಸಮಯದ ಅರಿವೇ ಇಲ್ಲದೆ ಸಂಬಂಧಗಳಿಗೆ ಬೆಲೆಯೇ ಇಲ್ಲವೇನೋ ಎಂಬಂತೆ ತಮ್ಮನ್ನೇ ಮರೆತು ಅದರೊಳಗೆ ಮುಳುಗಿರುತ್ತಾರೆ.ಮನೆಯಲ್ಲಿ ಮಾತಿಲ್ಲ ಕತೆಯಿಲ್ಲ. ಬುದ್ಧಿ ಹೇಳಬೇಕಾದ ಹಿರಿಯರ ಕತೆಯೂ ಇದೇ ಆಗಿರುವಾಗ ಕಿರಿಯರನ್ನು ಹೇಳುವವರು ಕೇಳುವವರು ಯಾರೂ ಇರುವುದಿಲ್ಲ ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಾ ಮನೆಗಳ ಪರಿಸ್ಥಿತಿಯು ಇದೇ ಆಗಿರುವಾಗ ಸಂಬಂಧಗಳ ಮೌಲ್ಯ ದಿನೇ ದಿನೇ ಶಿಥಿಲವಾಗುತ್ತಿದೆ.ಅತಿಯಾದ ಮೊಬೈಲ್ ಬಳಕೆಯಿಂದ ಕಿವುಡುತನ ,ಕುರುಡುತನ ,ನರಗಳ ದೌರ್ಬಲ್ಯ ಏಕಾಗ್ರತೆಯ ಕೊರತೆ ದೈಹಿಕ ಹಾಗೂ ಮಾನಸಿಕ ಕಾಯಿಲೆಗಳು, ಸೋಮಾರಿತನ ಮತ್ತು ಅದರೊಂದಿಗೆ ಈಗ ಹೆಚ್ಚಾಗಿ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಕಾಡುವ ಹೃದಯಾಘಾತ  ಕೂಡ ಸಂಭವಿಸುತ್ತಿದೆ. ಕೊಲೆ ,ದರೋಡೆ ,ಮತೀಯ ಘರ್ಷಣೆಗಳು, ಅತ್ಯಾಚಾರ ,ಆತ್ಮಹತ್ಯೆ ಇತ್ಯಾದಿಗಳಿಗೆ ಮೊಬೈಲು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಸಹಕಾರಿಯಾಗಿ ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದೆ.

ಇಂದು ಈ ಚಕ್ರವ್ಯೂಹದೊಳಗೆ ಸಿಲುಕಿ ಒದ್ದಾಡುತ್ತಿರುವ ನಮಗೆ ಹೊರಬರಲಾಗುತ್ತಿಲ್ಲ. ನಮ್ಮ ಸಾವಿಗೆ ನಾವೇ ಕಾರಣಕರ್ತರಾಗುವ ಮೊದಲು ಮೊಬೈಲನ್ನು ದೂರವಿಟ್ಟರೆ ಒಳ್ಳೆಯದು. ಅದಕ್ಕೊಂದು ಸಮಯ ಮೀಸಲಿರಲಿ. ಮೊಬೈಲ್ ಮಲಗುವ ಹಾಗು ಓದುವ ಕೋಣೆಯಿಂದ ದೂರವಿರಲಿ. ಹೆಚ್ಚಾಗಿ ಒಳ್ಳೆಯ ಪುಸ್ತಕಗಳನ್ನು ಓದಿ. ಓದಿನ ಕಡೆಗೆ ಹಾಗೂ ಕೆಲಸದ ಕಡೆಗೆ ಗಮನ ಕೊಡಿ. ಜೀವನದಲ್ಲೊಂದು ಗುರಿಯನ್ನಿಟ್ಟು ಕೊಂಡು ಅದರ ಕಡೆ ಗಮನವಿರಲಿ. ವ್ಯಾಯಾಮ, ಯೋಗ ,ಕ್ರೀಡೆ ,ಸಂಗೀತ ,ಚಿತ್ರಕಲೆ ,ಭರತ ನಾಟ್ಯ ಹೀಗೆ ನಿಮ್ಮಿಷ್ಟದ ಕ್ಷೇತ್ರದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಮೊಬೈಲನ್ನು ನಮ್ಮ ಅಗತ್ಯತೆಗೆ ಮಾತ್ರ ಉಪಯೋಗಿಸಿದರೆ ಜೀವನವು ಸುಂದರವಾಗಿ ಸಾಗಬಹುದು.


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು