ಉಪಾಯ ಬಲ್ಲವನಿಗೆ ಅಪಾಯವಿಲ್ಲ


 https://youtu.be/NR2Ffis7TdU?si=stsp0_anYm-5RuF8
If you like the content,
Please Like, Share, Comment and Subscribe my YouTube channel.

ಗಾದೆಗಳು ಹಿರಿಯರ ಜೀವನದ ಅನುಭವದ ನುಡಿಮುತ್ತುಗಳು. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಉಪಾಯ ಬಲ್ಲವನಿಗೆ ಅಪಾಯವಿಲ್ಲ ಎಂಬುದು ಪ್ರಸಿದ್ಧವಾದ ಗಾದೆಮಾತಾಗಿದೆ.

ಜೀವನದಲ್ಲಿ ಹಲವಾರು ಸಮಸ್ಯೆಗಳು, ಕಷ್ಟ ನಷ್ಟಗಳು ಅಪಾಯಗಳು ನಮ್ಮನ್ನು ಹುಡುಕಿಕೊಂಡು ಬರುತ್ತದೆ.ಆದರೆ ಎಲ್ಲವನ್ನು ಎದುರಿಸುತ್ತಾ ನಾವು ಜೀವನ ನಡೆಸಬೇಕಾಗುತ್ತದೆ. ಕೆಲವೊಂದು ಪರಿಸ್ಥಿತಿಗಳಲ್ಲಿ ಇವುಗಳನ್ನು ಎದುರಿಸಲಾಗದೆ ಕೆಲವರು ಕುಗ್ಗಿ ಹೋಗುತ್ತಾರೆ. ಇಂತಹ ಸಮಯದಲ್ಲಿ ಇದರಿಂದ ಪಾರಾಗುವ ದಾರಿ ಸಿಗುವುದಿಲ್ಲ. ಪರಿಹಾರ ಹುಡುಕುವ ಗೋಜಿಗೂ ಹೋಗದೆ ಜೀವನವನ್ನು ಹಾಳು ಮಾಡುತ್ತಾರೆ. ಇನ್ನು ಕೆಲವರು ಹೇಡಿಗಳಂತೆ ಜೀವವನ್ನು ಕಳೆದುಕೊಳ್ಳುತ್ತಾರೆ.ಬುದ್ಧಿವಂತರಾದ ನಾವು ಬಂದ ಅಪಾಯವನ್ನು ತಪ್ಪಿಸುವುದು ಹೇಗೆಂದು ಉಪಾಯವನ್ನು ಯೋಚಿಸಬೇಕು. ಕೆಟ್ಟದ್ದನ್ನೇ ಯೋಚಿಸುತ್ತ  ಕೊರಗುವ ಬದಲು ಉಪಾಯವನ್ನು ಹುಡುಕಿದರೆ ಅಪಾಯದಿಂದ ಖಂಡಿತವಾಗಿಯೂ ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌ಪಾರಾಗುತ್ತಾನೆ. ಬದುಕಲು ಕೇವಲ ಶಕ್ತಿವಂತರಾದರೆ ಸಾಲದು, ಬುದ್ಧಿವಂತರೂ ಆಗಿರಬೇಕು.

ಒಂದು ಕಾಡಿನಲ್ಲಿ ಮುದುಕನಾದ ಸಿಂಹವಿತ್ತು.ಆಹಾರವನ್ನು ಬೇಟೆಯಾಡುವ ಸಾಮರ್ಥ್ಯ ಕಳೆದುಕೊಂಡಿತ್ತು.ಹೀಗಾಗಿ ಪ್ರತಿದಿನವೂ ಕಾಡಿನ ಒಂದೊಂದು ಪ್ರಾಣಿಗಳು ಸಿಂಹಕ್ಕೆ ಆಹಾರವಾಗಿ ತಮ್ಮನ್ನು ಬಲಿಕೂಡಬೇಕಿತ್ತು.ಒಂದು ದಿನ ನರಿಯ ಸರದಿ ಬಂತು.ಅದು ಒಂದು ಉಪಾಯ ಮಾಡಿತು.ನರಿಯು ಸಿಂಹಕ್ಕೆ ಬಾವಿಯಲ್ಲಿ ನಿನ್ನಂತೆಯೇ ಇರುವ ಇನ್ನೊಂದು ಸಿಂಹವಿದೆ ಎಂದು ಹೇಳಿ ಬಾವಿಯ ಬಳಿ ಕರೆದುಕೊಂಡು ಹೋಯಿತು.ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ಕಂಡ ಸಿಂಹವು ನರಿಯ ಮಾತು ನಿಜವೆಂದು ನಂಬಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿತು.ನರಿಯು ಉಪಾಯದಿಂದ ಜೀವವನ್ನು ಉಳಿಸಿಕೊಂಡಿತು.ಈ ಕತೆಯು ಮೇಲಿನ  ಗಾದೆಮಾತಿಗೆ ಒಂದು ಉತ್ತಮ ಉದಾಹರಣೆಯಾಗಿದೆ.

ನಮ್ಮ ಜೀವನದಲ್ಲಿ ಏನೇ ಎಡರು ತೊಡರುಗಳು ಎದುರಾದರೂ ನಾವು ಉಪಾಯವನ್ನು ಹುಡುಕಿಕೊಂಡು ಮುನ್ನಡೆಯಬೇಕು ,ಬದುಕನ್ನು ಎದುರಿಸಬೇಕು. ಶಕ್ತಿ ಮಾತ್ರವಲ್ಲದೇ ಯುಕ್ತಿಯನ್ನೂ ಬಳಸಿಕೊಳ್ಳಬೇಕು ಎಂಬುದು ಈ ಗಾದೆಯ ಸಾರಾಂಶವಾಗಿದೆ.

- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏 


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

3 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು