ಭಾರತ ಎದುರಿಸುತ್ತಿರುವ ಗಡಿ ಸಮಸ್ಯೆಗಳು



ಪೀಠಿಕೆ :ಭಾರತವು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಹೊಂದಿ ಸುಮಾರು ವರ್ಷಗಳೇ ಸಂದವು. ಕ್ರಿಸ್ತಶಕ 1947 ರ ಅಗಸ್ಟ್ 15ರಂದು ಭಾರತವು ಸ್ವತಂತ್ರಗೊಂಡಿತು. ಇದೇ ದಿನದಂದು ಭಾರತದಿಂದ ಬೇರ್ಪಟ್ಟು ಪಾಕಿಸ್ತಾನ ಎಂಬ ಹೊಸ ರಾಷ್ಟ್ರ ಹುಟ್ಟಿಕೊಂಡಿತು. ಈ ಸಮಯದಲ್ಲಿ ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿ ರೇಖೆಯನ್ನು ನಿರ್ಣಯಿಸಲಾಯಿತು. ದೇಶ ವಿಭಜನೆಯಿಂದಾಗಿ ಭಾರತದ ಭವ್ಯ ರಾಷ್ಟ್ರದ ಕನಸಿಗೆ ಕೊಳ್ಳಿ ಬಿತ್ತು.
ವಿಷಯ ವಿವರಣೆ:ಭಾರತವು ಇಂದು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅವುಗಳಲ್ಲಿ ಮುಖ್ಯವಾದ ಸಮಸ್ಯೆ ಎಂದರೆ ಗಡಿಸಮಸ್ಯೆ.  ನೆರೆ ರಾಷ್ಟ್ರಗಳಾಗಿರುವ ಚೀನಾ, ಪಾಕಿಸ್ತಾನ, ಬಾಂಗ್ಲಾ, ನೇಪಾಳ, ಶ್ರೀಲಂಕಾ ದೇಶಗಳು ಭಾರತದೊಂದಿಗೆ ಗಡಿರೇಖೆಯಲ್ಲಿ ಹಂಚಿಕೊಂಡಿದೆ. ಆದರೆ ಪಾಕಿಸ್ತಾನ ಮತ್ತು ಚೀನಾ ಭಾರತದ ಕೆಲವು ಭಾಗವನ್ನು ಕಬಳಿಸುತ್ತಿದೆ. ಭಾರತಕ್ಕೆ ಸೇರಿರುವ ಪ್ರದೇಶದ ಜನರ ಮನಸ್ಸಿನಲ್ಲಿ ಈ ದೇಶಗಳು ವಿಷ ಬೀಜವನ್ನು ಬಿತ್ತಿದೆ.ಪಾಕಿಸ್ತಾನವು ಜಮ್ಮು-ಕಾಶ್ಮೀರದ ಗಡಿ ಭಾಗಗಳಲ್ಲಿ ದಿನಾ ನಮ್ಮ ಸೈನಿಕರ ಮೇಲೆ, ಸೇನಾ ಶಿಬಿರಗಳ ಮೇಲೆ ದಾಳಿ ನಡೆಸುತ್ತಲೇ ಬಂದಿದೆ. ಪಾಕಿಸ್ತಾನವು 'ಜಿಹಾದ್' ಹೆಸರಿನಲ್ಲಿ ಭಯೋತ್ಪಾದಕರನ್ನು ಸೃಷ್ಟಿಸಿ ಅವರಿಗೆ ಯುದ್ಧಾಭ್ಯಾಸಗಳನ್ನು ಮಾಡಿಸಿ ಶಸ್ತ್ರಾಸ್ತ್ರಗಳನ್ನು ಒದಗಿಸಿ ಭಾರತದ ಗಡಿಯೊಳಗೆ ಕಳುಹಿಸುತ್ತಾರೆ. ಪಾಕಿಸ್ತಾನದ ಮೂಲಕ ಭಾರತಕ್ಕೆ ನುಸುಳುವ ಭಯೋತ್ಪಾದಕರು ಇಲ್ಲಿ ಆತ್ಮಹತ್ಯಾಬಾಂಬರ್ ಗಳಾಗಿ ಗಲಭೆ, ಬಾಂಬ್ ಸ್ಫೋಟದಂತಹ ವಿಧ್ವಂಸಕ ಕೃತ್ಯಗಳನ್ನು ಎಸಗುತ್ತಾರೆ. 2019ರ ಫೆಬ್ರವರಿ 14ರಂದು ಪುಲ್ವಾಮಾದಲ್ಲಿ ಭಾರತದ ಭದ್ರತಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಾಹನದ ಮೇಲೆ ಪಾಕಿಸ್ತಾನವು ತನ್ನ ಉಗ್ರರಿಂದ ದಾಳಿ ನಡೆಸಿತು. ನಮ್ಮ ಕೆಲವು ವೀರ ಸೈನಿಕರು ಹುತಾತ್ಮರಾದರು. ಆದರೆ ಈ ದಾಳಿಗೆ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದ ಉಗ್ರ ನೆಲೆಯ ಮೇಲೆ ದಾಳಿ ನಡೆಸಿ ತಕ್ಕಶಾಸ್ತಿ ಮಾಡಿತು. ಭಾರತ-ಪಾಕಿಸ್ತಾನವು ಗಡಿ ವಿವಾದದ ವಿಷಯವಾಗಿ ಮೂರು ಸಲ ಪರಸ್ಪರ ಸೆಣಸಾಡಿದವು. ಕ್ರಿ.ಶ 1948, ಕ್ರಿ.ಶ 1965 ಹಾಗೂ ಕ್ರಿ.ಶ 1999 ರಂದು ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದವು.ಭಾರತ-ಚೀನಾ ಗಡಿ ಸಮಸ್ಯೆಯೂ ಕೂಡ ಜಟಿಲವಾದ ಸಮಸ್ಯೆಯಾಗಿದೆ ಚೀನಾ ದೇಶವು ಭಾರತದ ಭೂಭಾಗವನ್ನು ಸ್ವಲ್ಪ ಸ್ವಲ್ಪವೇ ಕಬಳಿಸುತ್ತಿದೆ ಹಾಗೂ ಇಲ್ಲಿ ತನ್ನ ಸೇನಾ ಶಿಬಿರಗಳನ್ನು ನಿರ್ಮಿಸುತ್ತಿದೆ.ಕ್ರಿಸ್ತಶಕ 1962 ರಲ್ಲಿ ಭಾರತ ಚೀನಾ ಯುದ್ಧ ನಡೆಯಿತು. ಬಾಂಗ್ಲಾದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ನಿರಾಶ್ರಿತರು ಭಾರತದ ಗಡಿ ದಾಟಿ ನುಸುಳಿ ಒಳಬರುತ್ತಿದ್ದಾರೆ.ಇದು ನಮ್ಮನ್ನು ಸಂಕಷ್ಟಕ್ಕೀಡು ಮಾಡಿದೆ. ಹಲವಾರು ಸಮಸ್ಯೆಗಳು ಹುಟ್ಟಿಕೊಳ್ಳಲು ನಿರಾಶ್ರಿತರ ಸಮಸ್ಯೆ ಒಂದು ಪ್ರಮುಖ ಕಾರಣವಾಗಿದೆ.
ಗಡಿಯಲ್ಲಿ ಯೋಧರು  ನೂರಾರು ಕಷ್ಟಗಳನ್ನು ಸಮಸ್ಯೆಗಳನ್ನು ಎದುರಿಸಿ ದೇಶವನ್ನು ರಕ್ಷಿಸುತ್ತಾರೆ. ಜೀವವನ್ನು ಪಣಕ್ಕಿಟ್ಟು ಗಡಿಯನ್ನು ಕಾಯುತ್ತಿದ್ದಾರೆ. ಭದ್ರತಾ ಸಮಸ್ಯೆ, ಆರೋಗ್ಯ ಸಮಸ್ಯೆ, ಆಹಾರ ಸಮಸ್ಯೆ, ಪ್ರತಿಕೂಲ ಹವಾಮಾನ ಸಮಸ್ಯೆ, ಆರ್ಥಿಕ ಸಮಸ್ಯೆ, ವಸತಿ ಸಮಸ್ಯೆ ಮುಂತಾದ ಸಮಸ್ಯೆಗಳ ಸರಮಾಲೆಯಲ್ಲಿ ಸಿಲುಕಿದ್ದಾರೆ. ಗಡಿ ಭಾಗದ ಜನರು ಉಗ್ರರ ಉಪಟಳದಿಂದ ಕಂಗಾಲಾಗಿದ್ದಾರೆ. ಭಯದ ವಾತಾವರಣದಲ್ಲಿ ಜೀವಿಸುತ್ತಾರೆ.
ಗಡಿ ಸಮಸ್ಯೆಯು ಭಾರತ ದೇಶವನ್ನು ಅಪಾಯದ ಅಂಚಿಗೆ ದೂಡಿದೆ. ದೇಶದ ಬೊಕ್ಕಸಕ್ಕೆ ಹೊಡೆತ ನೀಡಿದೆ. ರಕ್ಷಣಾ ಸಾಮರ್ಥ್ಯಕ್ಕೆ ಧಕ್ಕೆಯಾಗುತ್ತಿದೆ. ದೇಶದೊಳಗೆ ವಿದ್ವಂಸಕ ಕೃತ್ಯಗಳು ಜಾಸ್ತಿಯಾಗಿ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿದೆ. ವೈ ಮನಸ್ಸುಗಳು ಜಾಸ್ತಿಯಾಗಿ ದೇಶದ ಹಿತಕ್ಕೆ ಮಾರಕವಾಗುತ್ತಿದೆ.
ಉಪಸಂಹಾರ: ದೇಶವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು . ನಮ್ಮ ಪ್ರಧಾನಿಯಾದ ನರೇಂದ್ರಮೋದಿಯವರು ಗಡಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ದೇಶದ ಸೈನಿಕರ ಭದ್ರತೆಯ ಹಾಗೂ ರಕ್ಷಣೆಯ ಕಡೆಗೆ ಗಮನಹರಿಸಿದ್ದಾರೆ .ಇನ್ನು ಕೆಲವೇ ವರ್ಷಗಳಲ್ಲಿ ಗಡಿ ಸಮಸ್ಯೆಯು ಸ್ವಲ್ಪ ಮಟ್ಟಿಗಾದರೂ ಪರಿಹಾರವಾದೀತೆಂಬ ಆಶಾಭಾವನೆ ನಮ್ಮೆಲ್ಲರದು. 

-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.


    🙏ಧನ್ಯವಾದಗಳು 🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು