ತಾಳಿದವನು ಬಾಳಿಯಾನು

https://youtu.be/DanB0Wrhcu4?si=AWJC-_PtMC90yu3V

 ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ನುಡಿಮುತ್ತುಗಳು.

ತಾಳಿದವನು ಬಾಳಿಯಾನು ಎಂಬುವುದು ಒಂದು ಅರ್ಥಪೂರ್ಣವಾದ ಗಾದೆಮಾತು. ಜೀವನದಲ್ಲಿ ತಾಳ್ಮೆ ಎಂಬುವುದು ಬಹಳ ಮುಖ್ಯ. ತಾಳ್ಮೆ ಇದ್ದರೆ ನೆಮ್ಮದಿಯನ್ನು ಪಡೆಯುಬಹುದು. ಬೀಜ ಮೊಳಕೆಯೊಡೆದ ಕೂಡಲೇ ಅದು ಫಸಲು ಬಿಡವುದಿಲ್ಲ. ಅದಕ್ಕೆ ಇಂತಿಷ್ಟು ಸಮಯ ಬೇಕಾಗುತ್ತದೆ. ಅದಕ್ಕಾಗಿ ತಾಳ್ಮೆಯಿಂದ ಕಾಯಬೇಕಾಗುತ್ತದೆ.  ಬೇಗ ಫಸಲು ಸಿಗಲೆಂದು ಅತಿಯಾದ ಗೊಬ್ಬರ ಹಾಕಿದರೆ ಆ ಗಿಡವೇ ಸತ್ತು ಹೋಗಬಹುದು.

 ಹಾಗೆಯೇ ಸಂಗೀತ, ನೃತ್ಯ, ಕರಾಟೆ, ಆಟೋಟ ತರಬೇತಿಗಳಿಗೆ ಸೇರಿದ ತಕ್ಷಣ ಮಕ್ಕಳಿಗೆ ಬಹುಮಾನ, ಹಣ, ಹೆಸರು ಬರಬೇಕೆಂದರೆ ಅದು ಅಸಾಧ್ಯ. ಅದಕ್ಕೂ ಪ್ರಯತ್ನ ಹಾಗೂ ಸಮಯ ಬೇಕಾಗುತ್ತದೆ. ಅದಕ್ಕಿಂತ ಮುಖ್ಯವಾಗಿ ತಾಳ್ಮೆ ಅತ್ಯಗತ್ಯ. ತಾಳ್ಮೆಯೊಂದಿದ್ದರೆ ಸಾಧಿಸುವುದು ಅಸಾಧ್ಯವಲ್ಲ. ಸಿಟ್ಟು ಎಂಬುದು ನಮ್ಮೆಲ್ಲರ ಶತ್ರು. ಇದು ನಮ್ಮನ್ನು ಅರಮನೆಯಿಂದ ಸೆರೆಮನೆಗೆ ಕೊಂಡೊಯ್ಯಬಹುದು. ತಾಳ್ಮೆ ಎಂಬುದೇ ಸಿಟ್ಟನ್ನು ಗೆಲ್ಲುವ ಬಹು ದೊಡ್ಡ ಅಸ್ತ್ರವಾಗಿದೆ .

ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳು, ನೋವು ಸಂಕಟಗಳು, ದುಃಖ ದುಮ್ಮಾನಗಳು ಎದುರಾಗುತ್ತದೆ. ಇವೆಲ್ಲವನ್ನೂ ನಾವು ತಾಳ್ಮೆಯಿಂದ ಎದುರಿಸಿ ಗೆಲ್ಲಬಹುದು. ಆದ್ದರಿಂದ ತಾಳ್ಮೆ ಪ್ರತಿಯೊಬ್ಬರಲ್ಲಿ ಇರಬೇಕಾದ ಅತ್ಯಮೂಲ್ಯವಾದ ಒಂದು ಗುಣವಾಗಿದೆ. ತಾಳ್ಮೆಯಿಂದ ನಾವು ಬದುಕಿನಲ್ಲಿ ಎಲ್ಲವನ್ನೂ ಜಯಿಸಬಹುದು ಎಂಬುದು ಈ ಗಾದೆ ಮಾತಿನ ಅರ್ಥ.

- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏

 


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

6 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು