ದೇಶಕ್ಕಾಗಿ ನಮ್ಮ ಕರ್ತವ್ಯಗಳು


ಪೀಠಿಕೆ :
'
ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಸಿ' ಎಂದರೆ ಹೆತ್ತ ತಾಯಿ ಹೊತ್ತ ನಾಡು ಸ್ವರ್ಗಕ್ಕಿಂತ ಮಿಗಿಲು ಎಂದರ್ಥ. ದೇಶ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ.  ದೇಶದ ಹಿತ ರಕ್ಷಣೆಗಾಗಿ ನಾವು ಮಾಡಬೇಕಾದ ಹಲವು ಕರ್ತವ್ಯಗಳಿವೆ.
ವಿಷಯ ವಿವರಣೆ: ದೇಶದ ಅಭಿವೃದ್ಧಿ ಹಾಗೂ ಪ್ರಗತಿಯ ದೃಷ್ಟಿಯಿಂದ ನಾವೆಲ್ಲರೂ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು. ಸಾಮಾಜಿಕ ತಾರತಮ್ಯಗಳ ನಿವಾರಣೆ, ತೆರಿಗೆ ವಂಚನೆ ನಿರ್ಮೂಲನೆ, ಲಂಚ ಹಾಗೂ ಭ್ರಷ್ಟಾಚಾರ ತಡೆಗಟ್ಟುವುದು, ಅನ್ಯಾಯದ ವಿರುದ್ಧ ಧ್ವನಿಯೆತ್ತುವುದು, ಭಯೋತ್ಪಾದನೆ ವಿರುದ್ಧ ಹೋರಾಡುವುದು, ಚುನಾವಣೆಯ ಸಂದರ್ಭದಲ್ಲಿ ತಪ್ಪದೆ ಮತ ಚಲಾಯಿಸಿ ಯೋಗ್ಯ ಅಭ್ಯರ್ಥಿಯನ್ನು ಆರಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವು ನಮ್ಮ ದೇಶಕ್ಕೆ ನಿಷ್ಠವಾಗಿರಬೇಕು. ದೇಶಭಕ್ತಿ ಹಾಗೂ ದೇಶಪ್ರೇಮವನ್ನು ಮೈಗೂಡಿಸಿಕೊಳ್ಳಬೇಕು.  ರಾಷ್ಟ್ರಗೀತೆಯನ್ನು ಗೌರವಿಸಬೇಕು. ಸ್ವಚ್ಛ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು. ಎಲ್ಲರೊಂದಿಗೂ ಸಾಮರಸ್ಯದಿಂದ ಬಾಳಬೇಕು. ದೇಶಕ್ಕಾಗಿ ದುಡಿಯುವ ಪ್ರತಿಯೊಬ್ಬರನ್ನು ನಾವು ಗೌರವಿಸಬೇಕು. ಪ್ರಾಮಾಣಿಕರಾಗಿ ಬದುಕಬೇಕು. ದೇಶದ ಸಮಸ್ಯೆಗಳನ್ನು ಆಗು-ಹೋಗುಗಳನ್ನು ನಾವು ತಿಳಿದುಕೊಂಡಿರಬೇಕು. ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸವನ್ನು ಮಾಡಬೇಕು. ಅಶಕ್ತರಿಗೆ, ಅನಾಥರಿಗೆ, ಬಡವರಿಗೆ ನಮ್ಮಿಂದಾದ ಸಹಾಯವನ್ನು ನೀಡಬೇಕು. ನಮ್ಮ ದೇಶ, ನಮ್ಮ ಸಂವಿಧಾನ ಹಾಗೂ ನಮ್ಮ ಕಾನೂನನ್ನು ನಾವು ಗೌರವಿಸಬೇಕು. ದೇಶದ ಏಳಿಗೆಗೆ ನಮ್ಮ ಅಳಿಲ ಸೇವೆಯನ್ನು ಸಲ್ಲಿಸಿ, ನಮ್ಮ ಕರ್ತವ್ಯಗಳನ್ನು ಪಾಲಿಸಬೇಕು.

ಬ್ರಿಟಿಷರ ಕಪಿಮುಷ್ಟಿಯಲ್ಲಿದ್ದ ನಮ್ಮ ಭಾರತ ದೇಶಕ್ಕೆ ಅದೆಷ್ಟೋ ಸ್ವಾತಂತ್ರ ಹೋರಾಟಗಾರರು ತ್ಯಾಗ ಬಲಿದಾನದ ಮೂಲಕ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ನಮಗೆ ಸಿಕ್ಕಿದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಬಹುಮುಖ್ಯವಾದ ಕರ್ತವ್ಯವಾಗಿದೆ.ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕರ್ತವ್ಯಗಳನ್ನು ಸ್ವಯಂಪ್ರೇರಣೆಯಿಂದ ಮಾಡಿದಾಗ ಮಾತ್ರ ದೇಶ ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆಯಾಗಿ ಶಾಂತಿ, ನೆಮ್ಮದಿ ಹಾಗೂ ಸೌಹಾರ್ದತೆಯ ಜೀವನ ನಮ್ಮದಾಗುತ್ತದೆ. 
ಉಪಸಂಹಾರ: ಈ ದೇಶ ನನಗೇನು ಮಾಡಿದೆ ಎಂದು ಚಿಂತಿಸಬೇಡಿ ದೇಶಕ್ಕಾಗಿ ನಾನು ಏನು ಮಾಡಿದೆ ಎಂದು ಯೋಚಿಸಬೇಕು. ನಾವೆಲ್ಲರೂ ದೇಶಸೇವೆಯೇ ಈಶಸೇವೆ ಎಂದು ತಿಳಿದು ನಮ್ಮ ಕರ್ತವ್ಯಗಳನ್ನು ಪಾಲಿಸಿ ದೇಶದ ಉನ್ನತಿಗೆ ಶ್ರಮಿಸಬೇಕು.
-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

  

     🙏ಧನ್ಯವಾದಗಳು 🙏


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು