ಪೀಠಿಕೆ : ಒಂದು ಕಾಲದಲ್ಲಿ ಭಾರತವು ಹೇರಳವಾದ ಅರಣ್ಯ ಸಂಪತ್ತನ್ನು ಹೊಂದಿತ್ತು. ನಮ್ಮ ಹಿರಿಯರು ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಿ ಪೂಜಿಸುತ್ತಿದ್ದರು. ಪರಿಸರವನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಇದರಿಂದಾಗಿ ಮಳೆ-ಬೆಳೆ ಕಾಲಕಾಲಕ್ಕೆ ಸರಿಯಾಗಿ ಆಗುತ್ತಿತ್ತು. ಕಾಲಕಳೆದಂತೆ ಅರಣ್ಯ ಸಂಪತ್ತು ನಶಿಸತೊಡಗಿತು.
ವಿಷಯ ವಿವರಣೆ: ನಾವು ಇಂದು ಆಧುನೀಕರಣ, ಯಂತ್ರೀಕರಣ, ಕೈಗಾರಿಕೀಕರಣದ ಮೂಲಕ ಪ್ರಗತಿಯ ಪಥದಲ್ಲಿದ್ದೇವೆ. ಆದರೆ ಇವುಗಳೇ ನಮ್ಮನ್ನು ವಿನಾಶದಂಚಿಗೆ ದೂಡುತ್ತಿದೆ ಎಂಬ ಅರಿವು ನಮಗಿಲ್ಲ. ನಮ್ಮ ಸ್ವಾರ್ಥ ಸಾಧನೆ ಗೋಸ್ಕರ ಅರಣ್ಯಗಳನ್ನು ಕಡಿಯುತ್ತಿದ್ದೇವೆ. ಪರಿಸರ ನಾಶವಾಗುತ್ತಿದೆ. ವ್ಯವಸಾಯ ,ನೀರಾವರಿ, ಮನೆ, ಜಲಾಶಯಗಳ ನಿರ್ಮಾಣಕ್ಕಾಗಿ ಕಾಡುಗಳನ್ನು ಕಡಿಯುತ್ತಿದ್ದಾರೆ.ಹಸಿರೇ ಉಸಿರು ಎಂಬುದನ್ನು ನಾವು ಮರೆತಿದ್ದೇವೆ. ದೊಡ್ಡ ದೊಡ್ಡ ಮರಗಳು ಪೀಠೋಪಕರಣ ಗಳಿಗಾಗಿ ಹಾಗೂ ಅದರಿಂದ ಸಿಗುವ ಹಣಕ್ಕಾಗಿ ಕಾಡುಗಳ್ಳರ ಪಾಲಾಗುತ್ತಿದೆ. ಔಷಧೀಯ ಗಿಡಗಳು ಮರೆಯಾಗುತ್ತಿದೆ. ಕಾಡಿನಲ್ಲಿ ದೊರಕುತ್ತಿದ್ದ ಜೇನು ಇಲ್ಲವಾಗಿದೆ. ಅದೆಷ್ಟೋ ಕಡೆಗಳಲ್ಲಿ ಕಾಡು ಕಡಿದು ನಾಡು ನಿರ್ಮಾಣವಾಗಿ ಕಾಡುಪ್ರಾಣಿಗಳ ವಾಸಸ್ಥಳ ನಾಶವಾಗಿ ಅವುಗಳು ನಾಡಿಗೆ ಬಂದು ಆಹಾರವನ್ನು ಹುಡುಕಲು ಪ್ರಾರಂಭಿಸಿದೆ. ಅರಣ್ಯನಾಶದಿಂದ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಕೆರೆ ಬಾವಿಗಳು ನೀರಿಲ್ಲದೆ ಬೇಸಿಗೆಯಲ್ಲಿ ಬತ್ತಿ ಹೋಗುತ್ತಿದೆ. ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಆಹಾರ ಧಾನ್ಯಗಳ ಉತ್ಪಾದನೆ ಕಡಿಮೆಯಾಗಿದೆ. ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ನ ಪ್ರಮಾಣ ಹೆಚ್ಚಳವಾಗಿ ನಮ್ಮ ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತದೆ. ಅರಣ್ಯನಾಶದಿಂದ ಫಲವತ್ತಾದ ಮಣ್ಣು ಮಳೆಯ ನೀರಿಗೆ ಕೊಚ್ಚಿಹೋಗಿ ಮಣ್ಣಿನ ಸವಕಳಿಯಾಗಿ ಬಂಜರು ಭೂಮಿಯಾಗುತ್ತಿದೆ.
ಅರಣ್ಯನಾಶವು ಮನು ಕುಲದ ವಿನಾಶಕ್ಕೆ ಕಾರಣವಾಗಿರುವ ಈ ಸಂದರ್ಭದಲ್ಲಿ ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಿ ಅರಣ್ಯಗಳ ಪುನರ್ ನಿರ್ಮಾಣ ಮಾಡಬೇಕು. ಕಾಡು ಬೆಳೆಸಿ ನಾಡು ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಜನಸಾಮಾನ್ಯರಿಗೆ ಅರಣ್ಯನಾಶದ ದುಷ್ಪರಿಣಾಮಗಳನ್ನು ತಿಳಿಸಿ ಕೊಟ್ಟು ಆ ಮೂಲಕ ಅವರು ಕೂಡ ಅರಣ್ಯ ರಕ್ಷಣೆಯಲ್ಲಿ ತೊಡಗುವಂತೆ ಮಾಡಬೇಕು. ಈ ಕಾರಣಕ್ಕಾಗಿಯೇ ವನಮಹೋತ್ಸವವನ್ನು ಪ್ರತಿವರ್ಷವೂ ಆಚರಿಸುತ್ತೇವೆ.
ಉಪಸಂಹಾರ:ಸಾಲುಮರದ ತಿಮ್ಮಕ್ಕನಂತೆ ನಾವು ಕೂಡ ಗಿಡಮರಗಳನ್ನು ನೆಟ್ಟು ಪರಿಸರ ರಕ್ಷಣೆಯಲ್ಲಿ ಭಾಗವಹಿಸಬೇಕು. ಮರಗಳನ್ನು ಕಡಿಯದಂತೆ ಎಚ್ಚರವಹಿಸಬೇಕು.ಬಂಜರು ಭೂಮಿಗಳಲ್ಲಿ ಮರಗಳಿಲ್ಲದೆ ಒಣಗಿನಿಂತ ಅರಣ್ಯ ಭೂಮಿಯಲ್ಲಿ ಮತ್ತೆ ಹಸಿರು ಕಂಗೊಳಿಸವಂತೆ ಮಾಡಬೇಕು.
ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ
🙏ಧನ್ಯವಾದಗಳು 🙏