ಜಲ ಸ್ವಚ್ಛತಾ ಅಭಿಯಾನ


 ಪೀಠಿಕೆ: 'ಜಲ'ಎಂಬ ಎರಡಕ್ಷರದ ಪದ ಕೇವಲ ನೀರಲ್ಲ, ಅದು ಜೀವ ಕೊಡುವ ಶಕ್ತಿ. ಆ ಕಾರಣಕ್ಕೆ ಅದಕ್ಕೆ ಜೀವಜಲ ಎಂದು ಹೆಸರು. ನೀರಿಲ್ಲದೆ ಈ ಜಗತ್ತಿನಲ್ಲಿ ಪ್ರಾಣಿ-ಪಕ್ಷಿ, ಜೀವಸಂಕುಲಗಳು ಬದುಕಲು ಸಾಧ್ಯವೇ ಇಲ್ಲ. ನೀರು ಜೀವಿಗಳಿಗೆ ಅತ್ಯಗತ್ಯ ಹಾಗೂ ಅನಿವಾರ್ಯ:

ವಿಷಯ ವಿವರಣೆ: ಮಾನವನ ಅತಿ ಬುದ್ಧಿವಂತಿಕೆಯಿಂದ ಪರಿಸರ ಮಾಲಿನ್ಯ ಮತ್ತು ಪರಿಸರ ನಾಶವು ನಡೆಯುತ್ತಿದೆ. ಕಾಲಕ್ಕೆ ಸರಿಯಾಗಿ ಮಳೆಯು ಬರುತ್ತಿಲ್ಲ. ಕುಡಿಯುವ ನೀರಿಗೆ ಅಭಾವ ಉಂಟಾಗಿದೆ.ಅನೇಕ ಕಾರಣಗಳಿಂದ ಜಲಮಾಲಿನ್ಯವಾಗಿದೆ.  ಮಲಿನ ನೀರಿನ ಬಳಕೆಯಿಂದ ಜನರು ಅನೇಕ ಬಗೆಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಜಲಚರಗಳು ನಾಶವಾಗುತ್ತಿದೆ.

ನಾವು ಜಲ ಸ್ವಚ್ಛತೆಗೆ ಆದ್ಯತೆ ಕೊಡಬೇಕಾಗಿದೆ. ಅದೆಷ್ಟು ಜನರು ಕಸಕಡ್ಡಿಗಳನ್ನು , ಕೊಳೆತ ವಸ್ತುಗಳನ್ನು, ತರಕಾರಿಗಳನ್ನು, ಪ್ಲಾಸ್ಟಿಕ್ ಚೀಲಗಳನ್ನು ,ಬಾವಿಗೋ ಕೆರೆಗೋ ಚರಂಡಿಗೋ ಎಲ್ಲೆಂದರಲ್ಲಿ ಎಸೆಯುತ್ತಾರೆ. ಇಂಥವರಿಗೆ ತಿಳುವಳಿಕೆ ನೀಡಿ ಸ್ವಚ್ಛತೆಯ ಅರಿವು ಅವರಲ್ಲಿ ಮೂಡಿಸಬೇಕಿದೆ. ತ್ಯಾಜ್ಯ ವಸ್ತುಗಳನ್ನು ಕಸದ ತೊಟ್ಟಿಗೆ ಹಾಕುವಂತೆ ಪ್ರೇರೇಪಿಸಬೇಕಿದೆ. ಕಲುಷಿತಗೊಂಡ ಕೆರೆ ಬಾವಿಗಳನ್ನು ಸ್ವಚ್ಛಗೊಳಿಸಿ ನೀರನ್ನು ಉಪಯೋಗಕ್ಕೆ ಬಳಸುವಂತೆ ಮಾಡಬಹುದು.  ಚರಂಡಿಗಳನ್ನು ಪ್ರತಿವರ್ಷವೂ ಸ್ವಚ್ಛಗೊಳಿಸಬೇಕು. ಕೆರೆಗಳ ಹೂಳೆತ್ತುವ ಕೆಲಸವನ್ನು ವರ್ಷಂಪ್ರತಿ ಮಾಡಬೇಕು. ನೀರಿನ ಸ್ವಚ್ಛತೆಗಾಗಿ ಕೆರೆ ಬಾವಿಗಳ ಸುತ್ತ ಗಿಡಮರಗಳು ಇರದಂತೆ ನೋಡಿಕೊಳ್ಳಬೇಕು. ಅವುಗಳ ಎಲೆಗಳು ನೀರಿಗೆ ಬಿದ್ದು ಮಲಿನ ವಾಗುವ ಸಾಧ್ಯತೆಗಳಿವೆ. ಇಲ್ಲವಾದರೆ ಬಾವಿಯ ಸುತ್ತ ಬಲೆಯನ್ನು ಹಾಕಬೇಕು. ಸೂರ್ಯನ ಬೆಳಕು ನೀರಿಗೆ ಬಿಡುವಂತೆ ಎಚ್ಚರವಹಿಸಬೇಕು. ಮೀನುಗಳನ್ನು ನೀರಿನಲ್ಲಿ ಹಾಕಬೇಕು. ಚರಂಡಿಯಿಂದ ಹರಿದು ಬರುವ ನೀರು ಕೆರೆ ಬಾವಿಗಳನ್ನು ಸೇರಿದಂತೆ ಒಡ್ಡುಗಳನ್ನು ನಿರ್ಮಿಸಬೇಕು.

ಗೃಹಬಳಕೆಯ ನೀರನ್ನು ಸಂಗ್ರಹಿಸುವ ತೊಟ್ಟಿಗಳನ್ನು ಟ್ಯಾಂಕಿಗಳನ್ನು ತಿಂಗಳಿಗೊಮ್ಮೆಯಾದರೂ ತೊಳೆದು ಸ್ವಚ್ಛಗೊಳಿಸಬೇಕು. ಕುಡಿಯುವ ನೀರನ್ನು ಶುದ್ಧೀಕರಿಸಬೇಕು. ನೀರಿನ ತಾಣಗಳ ನೈರ್ಮಲ್ಯತೆಗೆ ಹೆಚ್ಚು ಗಮನಹರಿಸಬೇಕು. ಕೈಗಾರಿಕೆ ಹಾಗೂ ಕೊಳಚೆ ನೀರಿನ ಸಂಸ್ಕರಣೆ ನಡೆಸಬೇಕು. ಕೆರೆ ಬಾವಿಗಳ ಪಕ್ಕದಲ್ಲಿ  ಮಲಮೂತ್ರ ವಿಸರ್ಜಿಸುವುದಾಗಲಿ ಶೌಚಾಲಯಗಳನ್ನು ಕಟ್ಟುವುದಾಗಲಿ ಮಾಡಬಾರದು.

ಉಪಸಂಹಾರ: ಆರೋಗ್ಯವಂತರಾಗಿ ಬಾಳಬೇಕಾದರೆ ಮುಂದಿನ ಜನಾಂಗ ನೆಮ್ಮದಿಯಿಂದ ಬದುಕಬೇಕಾದರೆ ಪರಿಸರ ರಕ್ಷಣೆಯೊಂದಿಗೆ ಜಲ ಸ್ವಚ್ಛತಾ ಅಭಿಯಾನವು ಮುಖ್ಯವಾಗಿದೆ. ನೀರಿನ ಹಿತಮಿತವಾದ ಬಳಕೆಯು ಅನಿವಾರ್ಯವಾಗಿದೆ.

-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.


     🙏ಧನ್ಯವಾದಗಳು 🙏


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು