https://youtu.be/rOE0UkWkdM4?si=Lt9nVxpQrr17PRYi
ಪೀಠಿಕೆ :ಇಂದು ವಿಶ್ವವು ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯೆಂದರೆ ಅದು ಜಾಗತಿಕ ತಾಪಮಾನ ಸಮಸ್ಯೆ. ಭೂಮಿಯು ಒಂದು ಸಾಮಾನ್ಯ ತಾಪಮಾನವನ್ನು ಹೊಂದಿರುತ್ತದೆ. ಆದರೆ ನೈಸರ್ಗಿಕ ಹಾಗೂ ಮಾನವ ನಿರ್ಮಿತ ಕಾರಣಗಳಿಂದ ಭೂಮಿಯ ವಾತಾವರಣದಲ್ಲಿನ ತಾಪಮಾನವು ಕ್ರಮೇಣ ಹೆಚ್ಚಾಗುವ ವಿದ್ಯಮಾನವೇ ಜಾಗತಿಕ ತಾಪಮಾನದ ಏರಿಕೆಯಾಗಿದೆ.
ವಿಷಯ ವಿವರಣೆ: ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ನಮ್ಮೆಲ್ಲರ ಗಮನಕ್ಕೆ ಬಂದಿದೆ. ತಾಪಮಾನದ ಹೆಚ್ಚಳದಿಂದ ವಾತಾವರಣ ಬಿಸಿಯಾಗುತ್ತಿದೆ. ಮಳೆ ಕಡಿಮೆಯಾದೊಡನೆ ಸೆಖೆ ಜಾಸ್ತಿಯಾಗುತ್ತಿದೆ. ಕೆರೆ ಬಾವಿಗಳ ನೀರು ವರ್ಷದಿಂದ ವರ್ಷಕ್ಕೆ ಕಡಿಮೆಯಾಗತೊಡಗಿದೆ. ಕುಡಿಯುವ ನೀರಿನ ಅಭಾವ ಎದುರಾಗಿದೆ. ಭೂಮಿಯು ಬರಡಾಗುತ್ತಿದೆ. ಗಿಡಮರಗಳು ಅಧಿಕ ತಾಪಮಾನದಿಂದ ನೀರಿಲ್ಲದೆ ಸಾಯುತ್ತಿದೆ. ಧ್ರುವಪ್ರದೇಶಗಳಲ್ಲಿ ಉಷ್ಣತೆ ಜಾಸ್ತಿಯಾಗಿ ಹಿಮ ಕರಗಿ ನೀರು ಸಮುದ್ರವನ್ನು ಸೇರಿ ಸಮುದ್ರ ಮಟ್ಟ ಜಾಸ್ತಿಯಾಗಿ ಪ್ರವಾಹ ಬರಬಹುದಾದ ಸಾಧ್ಯತೆಯಿದೆ. ಇದರಿಂದಾಗಿ ಕಡಲ ಬಳಿಯ ವಸತಿ ಪ್ರದೇಶಗಳು ಮುಳುಗುವ ಅಪಾಯವೂ ಇದೆ. ಜಾಗತಿಕ ತಾಪಮಾನದ ಹೆಚ್ಚಳದಿಂದ ಆಹಾರ ಉತ್ಪಾದನೆ ಕುಸಿಯಬಹುದು. ಹವಾಗುಣದಲ್ಲೂ ಬದಲಾವಣೆಗಳಾಗುತ್ತದೆ. ಕಾಡಿನ ಬೆಂಕಿ, ಚಂಡಮಾರುತಗಳು, ಪ್ರವಾಹಗಳು ಅಪ್ಪಳಿಸಬಹುದು. ರೋಗರುಜಿನಗಳು ಎಲ್ಲೆಂದರಲ್ಲಿ ಹರಡಬಹುದು. ಪ್ರಾಣಿ, ಪಕ್ಷಿ ,ಮನುಷ್ಯರು ನೀರು ಹಾಗು ಆಹಾರವಿಲ್ಲದೆ ಉಷ್ಣತೆ ತಡೆಯಲಾರದೆ ಸಾಯಬಹುದು. ಜೀವ ಸಂತತಿ ನಾಶವಾಗಬಹುದು.
ಜಾಗತಿಕ ತಾಪಮಾನದ ಹೆಚ್ಚಳಕ್ಕೆ ಅನೇಕ ಅಂಶಗಳು ಕಾರಣವಾಗಿದೆ. ಇದು ಕಂಪ್ಯೂಟರ್ ಯುಗ. ನಾವು ಎಲ್ಲ ಕ್ಷೇತ್ರಗಳಲ್ಲೂ ಮುಂದುವರೆದಿದ್ದೇವೆ .ಆಧುನೀಕರಣ, ಯಾಂತ್ರಿಕರಣ, ಕೈಗಾರಿಕೀಕರಣದ ಮೂಲಕ ಪ್ರಗತಿಯನ್ನು ಕಾಣುತ್ತಿದ್ದೇವೆ. ಆದರೆ ನಮ್ಮ ನಾಶಕ್ಕೆ, ತಾಪಮಾನದ ಏರಿಕೆಗೆ ನಮ್ಮ ಈ ಏಳಿಗೆಯು ಕೂಡ ಕಾರಣ ಎನ್ನಬಹುದು. ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್ ನ ಪ್ರಮಾಣ ಜಾಸ್ತಿಯಾಗಿದೆ. ಇದನ್ನು ಸರಿದೂಗಿಸಲು ಹೀರಿಕೊಳ್ಳಲು ಬೇಕಾದ ಅರಣ್ಯ ಪ್ರದೇಶಗಳು ಮಾನವನ ದುರಾಸೆಗೆ ಬಲಿಯಾಗಿದೆ. ಹೆಚ್ಚುತ್ತಿರುವ ಪಳೆಯುಳಿಕೆ ಇಂಧನಗಳ ಬಳಕೆ ಮತ್ತು ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಹಸಿರು ಮನೆ ಪರಿಣಾಮ ಉಂಟಾಗಿದೆ. ಸೂರ್ಯನ ಅತಿನೇರಳೆ ಕಿರಣಗಳನ್ನು ತಡೆಯಬಲ್ಲ ಓಜೋನ್ ಪದರವು ತೂತಾಗಿದೆ. ಈ ಕಾರಣದಿಂದ ಅತಿನೇರಳೆ ಕಿರಣಗಳು ಭೂಮಿಯ ಮೇಲೆ ಬಿದ್ದು ಮತ್ತಷ್ಟು ತಾಪಮಾನದ ಹೆಚ್ಚಳಕ್ಕೆ ಕಾರಣವಾಗಿದೆ.
ಉಪಸಂಹಾರ: ನಮ್ಮ ವಿಜ್ಞಾನಿಗಳು ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಹಗಲು ಇರುಳು ಶ್ರಮಿಸುತ್ತಿದ್ದಾರೆ. ಇನ್ನಾದರೂ ನಾವು ಎಚ್ಚೆತ್ತುಕೊಂಡು ಗಿಡಮರಗಳನ್ನು ನೆಟ್ಟು ಬೆಳೆಸಬೇಕು. ಅರಣ್ಯಗಳನ್ನು ಸಂರಕ್ಷಿಸಬೇಕು. ಜನರಿಗೆ ತಿಳುವಳಿಕೆ ನೀಡಬೇಕು. ಪರಿಸರ ಮಾಲಿನ್ಯವನ್ನು ತಡೆಗಟ್ಟಿದರೆ ಮಾತ್ರ ತಾಪಮಾನ ಹೆಚ್ಚಳವನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬಹುದು.
-ಉಷಾ ಪ್ರಸಾದ್
ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.
🙏ಧನ್ಯವಾದಗಳು 🙏