ಸ್ವಚ್ಛ ಭಾರತದ ಪ್ರಗತಿಯಲ್ಲಿ ವಿದ್ಯಾರ್ಥಿಗಳ ಪಾತ್ರ

https://youtu.be/8CUW90PeQRM?si=B32OA-obXbgOU5QS
 
ಪೀಠಿಕೆ: ನಮ್ಮ ದೇಶವು ಇಂದು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಿದೆ ಹಾಗೂ ಸಾಧಿಸುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಸಾಲಿನಲ್ಲಿ ಭಾರತವೂ ನಿಂತಿದೆ. ನಮ್ಮ ದೇಶದ ಸೊಬಗನ್ನು ವಿದೇಶಿಯರು ಕೂಡ ಹೊಗಳಿ ಬರೆದಿರುವುದನ್ನು ನಾವು ಇತಿಹಾಸದಲ್ಲಿ ಕೇಳಿರುತ್ತೇವೆ. ಆದರೆ ಇಂದು ಪರಿಸರ ಮಾಲಿನ್ಯದ ಸುಳಿಯಲ್ಲಿ ಸಿಲುಕಿದ್ದೇವೆ. ಆದ್ದರಿಂದ ಶಿಕ್ಷಣದೊಂದಿಗೆ  ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕಾಗಿದೆ.
ವಿಷಯ ವಿವರಣೆ :ದೇಶದಲ್ಲಿ ಜನಸಂಖ್ಯೆ ಜಾಸ್ತಿಯಾದಂತೆ ಸ್ವಚ್ಛತೆ ಕಡಿಮೆಯಾಗತೊಡಗಿತು. ಜೀವನವು ಯಾಂತ್ರಿಕ ವಾಯಿತು. ವಾಯುಮಾಲಿನ್ಯ, ಜಲಮಾಲಿನ್ಯ, ಶಬ್ದಮಾಲಿನ್ಯ ದಿಂದ ಪರಿಸರ ನಾಶವಾಗಲು ಪ್ರಾರಂಭವಾಯಿತು.  ನೆಮ್ಮದಿಯಿಂದ ಬದುಕುತ್ತಿದ್ದ ಜನರು ರೋಗರುಜಿನಗಳಿಂದ ನರಳುವಂತಾಯ್ತು. ಎಲ್ಲೆಂದರಲ್ಲಿ ಕಸ ಎಸೆಯುವುದು, ನೀರನ್ನು ಹರಿಯಬಿಡುವುದು, ತ್ಯಾಜ್ಯಗಳನ್ನು ಎಸೆಯುವುದು, ಮಲ ಮೂತ್ರ ವಿಸರ್ಜಿಸುವುದು ಕೂಡ ಪರಿಸರದ ಸ್ವಚ್ಛತೆಗೆ ಮಾರಕವಾಗಿದೆ. ನೆಮ್ಮದಿಯಿಂದ ಬದುಕುತ್ತಿದ್ದ ಜನರು ಸ್ವಚ್ಛತೆಯ ಕೊರತೆಯಿಂದಾಗಿ ಕೋರೋನದಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಿದ್ಯಾರ್ಥಿಗಳು ಮೊದಲಾಗಿ ತಮ್ಮತಮ್ಮ ಸ್ವಚ್ಛತೆಗೆ ಒತ್ತು ಕೊಡಬೇಕು. ಕೈಕಾಲುಗಳನ್ನು ಆಗಾಗ ಸಾಬೂನಿನಿಂದ ತೊಳೆದುಕೊಳ್ಳಬೇಕು. ಬಟ್ಟೆಬರೆಗಳನ್ನು ತೊಳೆದು ಬಿಸಿಲಲ್ಲಿ ಒಣಗಿಸಿ ಹಾಕಿಕೊಳ್ಳಬೇಕು. ತಮ್ಮ ಕೊಠಡಿಯನ್ನು ತಾವೇ ಗುಡಿಸಿ ಒರೆಸಿ ಸ್ವಚ್ಛಗೊಳಿಸಬೇಕು. ತಮ್ಮೆಲ್ಲಾ ವಸ್ತುಗಳನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳಬೇಕು. ಸ್ವಚ್ಛ ಪರಿಸರ ,ಸ್ವಚ್ಛ  ಆಹಾರ, ಸ್ವಚ್ಛ ಶೌಚಾಲಯದ ಅರಿವು ವಿದ್ಯಾರ್ಥಿಗಳಲ್ಲಿ ಮೂಡಬೇಕು. ವಿದ್ಯಾರ್ಥಿಗಳು ದೇಶದ ಬೆನ್ನೆಲುಬು ಎಂದರೆ ಅತಿಶಯೋಕ್ತಿಯಲ್ಲ. ಇಂದಿನ ಮಕ್ಕಳೇ ಮುಂದಿನ ಜನಾಂಗ ಎಂಬ ನಾಣ್ಣುಡಿಯಂತೆ ಮಕ್ಕಳೆಲ್ಲರೂ ಒಟ್ಟಾಗಿ ನರೇಂದ್ರ ಮೋದಿಯವರ 'ಸ್ವಚ್ಛ ಭಾರತ ಆಂದೋಲನ 'ದಲ್ಲಿ  ತೊಡಗಬೇಕು. ವಿದ್ಯಾರ್ಥಿಗಳು ಸಂಘಟಿತರಾಗಬೇಕು. ಸ್ವಯಂಸೇವಕರಾಗಿ ಸ್ವಚ್ಛತಾ ಕಾರ್ಯಗಳಲ್ಲಿ ಭಾಗಿಯಾಗಬೇಕು. ಸ್ವಚ್ಛತೆಯ ಬಗ್ಗೆ ಜನರಲ್ಲಿ ವಿದ್ಯಾರ್ಥಿಗಳು ಆಂದೋಲನದ ಮೂಲಕ, ನಾಟಕ, ಯಕ್ಷಗಾನ, ಭಾಷಣದ ಮೂಲಕ ಜಾಗೃತಿ ಮೂಡಿಸಬೇಕು. ಗಿಡಗಳನ್ನು ನೆಟ್ಟು ಮರಗಳನ್ನು ಬೆಳೆಸಿ ಕೈತೋಟಗಳನ್ನು ನಿರ್ಮಿಸಿ ಸುಂದರ ಪರಿಸರದ ನಿರ್ಮಾಣವನ್ನು ಮಾಡಬೇಕು. ಸುತ್ತಮುತ್ತಲಿನ ಸ್ವಚ್ಛ ಪರಿಸರವನ್ನು ಕಾಪಾಡಬೇಕು.

ಉಪಸಂಹಾರ : ಸ್ವಚ್ಛ  ಭಾರತ ಅಭಿಯಾನದಲ್ಲಿ  ವಿದ್ಯಾರ್ಥಿಗಳ ಪಾತ್ರ ಬಹಳ ದೊಡ್ಡದು. ನಾವು ಸ್ವಚ್ಛತೆಗೆ ಆದ್ಯತೆ ನೀಡಿ ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಒಳ್ಳೆಯ ಆರೋಗ್ಯಭಾಗ್ಯವನ್ನು ಪಡೆಯಬಹುದು.

   - ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

        🙏ಧನ್ಯವಾದಗಳು🙏 

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು