ಎರಡು ಅಕ್ಷರಗಳು ಕಾಲವಿಳಂಬವಲ್ಲದೆ ಸೇರುವುದಕ್ಕೆ ಸಂಧಿ ಎನ್ನುವರು.
1: ಸ್ವರಸಂಧಿ:ಸಂಧಿಯಾಗುವಾಗ ಸ್ವರದ ಮುಂದೆ ಸ್ವರ ಬಂದರೆ ಅದನ್ನು ಸ್ವರಸಂಧಿ ಎಂದು ಕರೆಯುತ್ತಾರೆ.. ಸ್ವರ ಸಂಧಿಯಲ್ಲಿ ಎರಡು ವಿಭಾಗಗಳಿವೆ,
1ಲೋಪ ಸಂಧಿ 2 ಆಗಮ ಸಂಧಿ
2. ವ್ಯಂಜನ ಸಂಧಿ
ಸಂಧಿಯಾಗುವಾಗ ಸ್ವರದ ಮುಂದೆ ವ್ಯಂಜನ ಅಥವಾ ವ್ಯಂಜನದ ಮುಂದೆ ಸ್ವರವು ಬಂದರೆ ವ್ಯಂಜನ ಸಂಧಿ ಎನ್ನುವರು.ಆದೇಶ ಸಂಧಿಯು ವ್ಯಂಜನ ಸಂಧಿಯಾಗಿದೆ.
ಹೀಗೆ ಕನ್ನಡ ಸಂಧಿಗಳಲ್ಲಿ ಲೋಪ ಸಂಧಿ, ಆಗಮ ಸಂಧಿ ಹಾಗೂ ಆದೇಶ ಸಂಧಿ ಎಂಬ 3 ಸಂಧಿಗಳಿವೆ.
ಈಗ ಅವುಗಳ ಬಗ್ಗೆ ತಿಳಿದುಕೊಳ್ಳೋಣ,
1. ಲೋಪ ಸಂಧಿ
ಸಂಧಿಕಾರ್ಯ ನಡೆಯುವಾಗ ಒಂದು ಅಕ್ಷರವೂ ಬಿಟ್ಟು ಹೋದರೆ ಅದನ್ನು ಲೋಪ ಸಂಧಿ ಎನ್ನುವರು ಅಥವಾ ಎರಡು ಪದಗಳು ಅರ್ಥಕ್ಕೆ ಅನುಗುಣವಾಗಿ ಸೇರಿಸಿಕೊಳ್ಳುವಾಗ ಮೊದಲ ಪದ ಅಂತ್ಯದ ಸ್ವರಾಕ್ಷರ ಒಂದು ಲೋಪವಾಗುವುದಕ್ಕೆ ಲೋಪ ಸಂಧಿ ಎನ್ನುವರು.
ಉದಾ: ಒಂದು+ಒಂದು
=ಒಂದೊಂದು
ಊರು+ ಅಲ್ಲಿ= ಊರಲ್ಲಿ
ನಾಡು+ ಎಲ್ಲಾ =ನಾಡೆಲ್ಲಾ
ಬೇರೆ +ಒಂದು= ಬೇರೊಂದು
ಅಲ್ಲಿ+ ಒಂದು =ಅಲ್ಲೊಂದು
2. ಆಗಮ ಸಂಧಿ
ಸಂಧಿಕಾರ್ಯ ಮಾಡಿದಾಗ ಒಂದು ಅಕ್ಷರವೂ ಹೊಸದಾಗಿ ಬಂದು ಸೇರಿಕೊಳ್ಳುವುದನ್ನು ಆಗಮ ಸಂಧಿ ಎನ್ನುವರು.
ಇದರಲ್ಲಿ ಎರಡು ವಿಭಾಗಗಳಿವೆ. ಅವುಗಳೆಂದರೆ,
i .'ಯ'ಕಾರಾಗಮ ಸಂಧಿ
ಸಂಧಿಕಾರ್ಯ ಮಾಡುವಾಗ ಯಕಾರವು ಆಗಮವಾದರೆ ಅದನ್ನು ಯಕಾರಾಗಮ ಸಂಧಿ ಎನ್ನುವರು
ಉದಾ:
ನದಿ+ ಅಲ್ಲಿ =ನದಿಯಲ್ಲಿ
ಇಳೆ+ ಇಂದ=ಇಳೆಯಿಂದ
ಚಳಿ+ ಅಲ್ಲಿ =ಚಳಿಯಲ್ಲಿ
ಶಾಲೆ+ಅಲ್ಲಿ =ಶಾಲೆಯಲ್ಲಿ
ಕೆರೆ +ಅನ್ನು= ಕೆರೆಯನ್ನು
ii.'ವ'ಕಾರಾಗಮ ಸಂಧಿ
ಸಂಧಿಕಾರ್ಯ ಮಾಡಿದಾಗ ವಕಾರವು ಆಗಮವಾದರೆ ಅದನ್ನು ವಕಾರಾಗಮ ಸಂಧಿ ಎನ್ನುವರು.
ಉದಾ:
ಮಗು +ಅನ್ನು= ಮಗುವನ್ನು
ಗುರು+ ಇಗೆ= ಗುರುವಿಗೆ
ಹೂ +ಇಂದ =ಹೂವಿಂದ
ಶುಭ+ಆಗಲಿ= ಶುಭವಾಗಲಿ
iii.ಆದೇಶ ಸಂಧಿ
ಎರಡು ಪದಗಳು ಅರ್ಥಕ್ಕನುಗುಣವಾಗಿ ಸಂಧಿಸಿದಾಗ ಎರಡನೇ ಪದದ ಆದಿಯ ವ್ಯಂಜನಾಕ್ಷರದ ಬದಲು ಬೇರೊಂದು ವ್ಯಂಜನಾಕರ ಬರುವುದಕ್ಕೆಆದೇಶ ಸಂಧಿ ಎನ್ನುವರು.
ಕ- ಗ
ತ- ದ
ಪ- ಬ
ಉದಾ:
ಬೆಟ್ಟ +ತಾವರೆ =ಬೆಟ್ಟದಾವರೆ
ಮೈ+ ತೋರು= ಮೈದೋರು
ಕೊನೆ+ ಕಾಲ= ಕೊನೆಗಾಲ
ಕಣ್ಣ್+ ಪನಿ =ಕಂಬನಿ
ಹೊಸ+ ಕನ್ನಡ= ಹೊಸಗನ್ನಡ
ಸಂಸ್ಕೃತ ಸಂಧಿಗಳು
i.ಸವರ್ಣದೀರ್ಘ ಸಂಧಿ: ಸ್ವರಕ್ಕೆ ಸ್ವರವು ಪರವಾದಾಗ ಅದೇ ಸ್ವರವು ದೀರ್ಘವಾದರೆ ಅದನ್ನು ಸವರ್ಣದೀರ್ಘ ಸಂಧಿ ಎನ್ನುವರು.
ಉದಾ:
ದೀಪ+ ಅಲಂಕಾರ= ದೀಪಾಲಂಕಾರ
ರವಿ+ ಇಂದ್ರ =ರವೀಂದ್ರ
ದೇವ+ಆಲಯ =ದೇವಾಲಯ
ದೇವ+ ಅಸುರ =ದೇವಾಸುರ.
ಗುರು+ ಉಪದೇಶ= ಗುರೂಪದೇಶ
ii.ಗುಣಸಂಧಿ: 'ಅ ಆ' ಕಾರಗಳ ಮುಂದೆ 'ಇ ಈ' ಕಾರವು ಬಂದಾಗ'ಏ'ಕಾರವು;'ಅ ಆ 'ಕಾರಗಳ ಮುಂದೆ 'ಉ ಊ' ಕಾರಗಳು ಬಂದಾಗ 'ಓ'ಕಾರವು; 'ಅ ಆ' ಕಾರದ ಮುಂದೆ 'ಋ' ಕಾರವು ಬಂದಾಗ 'ಆರ್' ಕಾರವು ಆದೇಶವಾಗಿ ಬಂದರೆ ಅದನ್ನು ಗುಣ ಸಂಧಿ ಎನ್ನುವರು.
ಉದಾ: ದೇವ+ ಈಶ =ದೇವೇಶ
ಮಹಾ +ಋಷಿ= ಮಹರ್ಷಿ
ಸುರ+ ಇಂದ್ರ =ಸುರೇಂದ್ರ
ಜೀವನ+ ಉತ್ಸಾಹ= ಜೀವನೋತ್ಸಾಹ
ಸೂರ್ಯ+ ಉದಯ= ಸೂರ್ಯೋದಯ
ಪೂರ್ವ+ ಉತ್ತರ= ಪೂರ್ವೋತ್ತರ
ರಾಜ್ಯ+ ಉತ್ಸವ= ರಾಜ್ಯೋತ್ಸವ
iii.ವೃದ್ಧಿ ಸಂಧಿ: 'ಅ ಆ' ಕಾರಗಳ ಮುಂದೆ 'ಏ ಐ' ಕಾರವು ಬಂದಾಗ 'ಏ'ಕಾರವು; 'ಅ ಆ'ಕಾರಗಳ ಮುಂದೆ 'ಓ ಔ' ಕಾರವು ಬಂದಾಗ 'ಔ' ಕಾರವೂ ಆದೇಶವಾಗಿ ಬಂದರೆ ಅದನ್ನು ವೃದ್ಧಿ ಸಂಧಿಯೆನ್ನುವರು.
ಉದಾ: ಏಕ+ ಏಕ= ಏಕೈಕ
ವನ+ಔಷಧ=ವನೌಷಧ
ಶಿವ+ ಐಕ್ಯ= ಶಿವೈಕ್ಯ
ಸಿದ್ದ+ ಔಷಧ= ಸಿದ್ಧೌಷಧ
ಸಕಲ+ ಐಶ್ವರ್ಯ =ಸಕಲೈಶ್ವಯ೯
iv.ಯಣ್ ಸಂಧಿ: ಸ್ವರದ ಮುಂದೆ ಸ್ವರ ಪರವಾದಾಗ 'ಯ ವ ರ' ಎಂಬ ಅಕ್ಷರಗಳು ಆದೇಶವಾದಲ್ಲಿ ಅದನ್ನು ಯಣ್ ಸಂಧಿ ಎನ್ನುವರು.
ಉದಾ:
ಇತಿ+ ಆದಿ =ಇತ್ಯಾದಿ
ಗತಿ +ಅಂತರ= ಗತ್ಯಂತರ
ಆದಿ+ ಆತ್ಮ= ಆಧ್ಯಾತ್ಮ
ಪಿತೃ+ ಆರ್ಜಿತ= ಪಿತ್ರಾರ್ಜಿತ
ಜಾತಿ +ಅತೀತ= ಜಾತ್ಯತೀತ
v.ಶ್ಚುತ್ವಸಂಧಿ: ಪೂರ್ವಪದದ ಕೊನೆಯಲ್ಲಿ ಸ ಕಾರ ವಾಗಲಿ ತ ವರ್ಗವಾಗಲಿ ಇದ್ದು ಉತ್ತರ ಪದದ ಮೊದಲಲ್ಲಿ ಶ ಕಾರ ವಾಗಲಿ ಚವರ್ಗವಾಗಲಿ ಬಂದರೆ ಶಕಾರ ಚಕಾರಗಳು ಆದೇಶವಾಗಿ ಬರುತ್ತದೆ ಅವುಗಳನ್ನು ಶ್ಚುತ್ವ ಸಂಧಿ ಎನ್ನುವರು
ಉದಾ:
ಮನಸ್ +ಶುದ್ದಿ =ಮನಶ್ಯುದ್ದಿ
ಯಶಸ್ಸ್ +ಚಂದ್ರ= ಯಶಶ್ಚಂದ್ರ
ಮನಸ್+ ಚಂಚಲ =ಮನಶ್ಚಂಚಲ
vi.ಜಶ್ತ್ವ ಸಂಧಿ :ಪೂರ್ವಪದದ ಕೊನೆಯಲ್ಲಿರುವ ವರ್ಗದ ಪ್ರಥಮಾಕ್ಷರಗಳಿಗೆ ಯಾವ ವರ್ಣ ಎದುರಾದರೂ ಅದೇ ವರ್ಗದ ಮೂರನೇ ಅಕ್ಷರ ಆದೇಶವಾಗಿ ಬರುವುದನ್ನು ಜಶ್ತ್ವ ಸಂಧಿ ಎನ್ನುವರು.
ಉದಾ:
ಸತ್+ ಆನಂದ= ಸದಾನಂದ
ಷಟ್+ಆನನ=ಷಡಾನನ
ಚಿತ್+ಆನಂದ=ಚಿದಾನಂದ
vii.ಅನುನಾಸಿಕ ಸಂಧಿ: ಪೂರ್ವಪದದ ಕೊನೆಯಲ್ಲಿ ಆಯಾ ವರ್ಗದ ಪ್ರಥಮಾಕ್ಷರಗಳು ಇದ್ದು ಅವುಗಳು ಅನುನಾಸಿಕ ಪರವಾದರೆ ಅವುಗಳನ್ನು ಅನುನಾಸಿಕ ಸಂಧಿ ಎನ್ನುವರು
ಉದಾ: ವಾಕ್+ ಮಯ= ವಾಙ್ಮಯ
ಸತ್+ಮಾನ=ಸನ್ಮಾನ
ತನ್+ಮಯ=ತನ್ಮಯ
ಚಿತ್+ಮಯ=ಚಿನ್ಮಯ