ಆಹಾರದಲ್ಲಿ ರಾಸಾಯನಿಕಗಳ ಪರಿಣಾಮ

https://youtu.be/5yMLov1d0Ow?si=sJsER28RH45FXrgB
 
ಪೀಠಿಕೆ: ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ ಆರೋಗ್ಯವು ಎಲ್ಲಕ್ಕಿಂತ ಮುಖ್ಯವಾಗಿದೆ. ಆರೋಗ್ಯವಂತ ನಾಗಿದ್ದರೆ ಏನು ಬೇಕಾದರೂ ಸಾಧಿಸಬಹುದು. ಆದರೆ ಇಂದು ಅನೇಕ ಕಾರಣಗಳಿಂದ ಮಾನವನು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾನೆ.

ವಿಷಯ ವಿವರಣೆ: ಇಂದು ನಾವು ಬೆಳೆಸುವ ಎಲ್ಲಾ ಆಹಾರ ಪದಾರ್ಥಗಳು, ತರಕಾರಿಗಳು, ಬೇಳೆಕಾಳುಗಳು ರಾಸಾಯನಿಕ ಅಂಶಗಳನ್ನು ಒಳಗೊಂಡಿದೆ. ಭತ್ತ, ಗೋಧಿ, ರಾಗಿ, ಜೋಳ ಮುಂತಾದ ಆಹಾರ ಪದಾರ್ಥಗಳು ಹಾಗೂ ಅಲಸಂಡೆ, ಬೆಂಡೆಕಾಯಿ, ಬದನೆಕಾಯಿ, ತೊಂಡೆಕಾಯಿ, ಕ್ಯಾಬೇಜ್ ಮುಂತಾದ ತರಕಾರಿಗಳು ರಾಸಾಯನಿಕಗಳ ಪ್ರಭಾವಕ್ಕೆ ಒಳಗಾಗಿದೆ. ಅಧಿಕ ಇಳುವರಿಗಾಗಿ ಸಾವಯವ ಗೊಬ್ಬರ ಕಡಿಮೆ ಮಾಡಿ ರೈತರು ರಾಸಾಯನಿಕ ಗೊಬ್ಬರಗಳ ಮೊರೆ ಹೋಗುತ್ತಿದ್ದಾರೆ. ಅದೇ ರೀತಿ ಕೀಟಗಳ ಬಾಧೆ ಕಡಿಮೆ ಮಾಡಲು ರಾಸಾಯನಿಕ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇನ್ನು ಬೆಳೆಸಿದ ಆಹಾರವಸ್ತುಗಳನ್ನು ತಿಂಗಳುಗಟ್ಟಲೆ ವರ್ಷಗಟ್ಟಲೆ ದಾಸ್ತಾನು ಮಾಡಲು, ಹಾಳಾಗದಂತೆ ರಕ್ಷಿಸಲು ರಾಸಾಯನಿಕ ಪುಡಿಗಳನ್ನು ಬೆರೆಸುತ್ತಾರೆ. ಈ ರೀತಿಯಾಗಿ ನಾವು ತಿನ್ನುವ ಆಹಾರ ಪದಾರ್ಥಗಳು ರಾಸಾಯನಿಕಗಳ ಪ್ರಭಾವಕ್ಕೆ ಒಳಗಾಗುತ್ತದೆ. ಅಂಗಡಿಯಿಂದ ಮಾವಿನಹಣ್ಣು ಗಳನ್ನು ತಂದು ತಿನ್ನುತ್ತೇವೆ. ಆದರೆ ಆ ಹಣ್ಣುಗಳು ನಿಜವಾಗಿಯೂ ಕಾಯಿಗಳೇ ಆಗಿರುತ್ತದೆ. ರಾಸಾಯನಿಕ ವಸ್ತುಗಳನ್ನು ಬಳಸಿ ಮಾವಿನಕಾಯಿಗಳನ್ನು ಹಣ್ಣುಗಳಾಗಿ ಮಾಡಲಾಗುತ್ತದೆ. ಅದನ್ನು ತಿನ್ನುವ ನಮ್ಮ ಆರೋಗ್ಯದ ಮೇಲೆ ಈ ವಿಷಯುಕ್ತ ರಾಸಾಯನಿಕಗಳು ಕೆಟ್ಟ ಪರಿಣಾಮ ಬೀರುತ್ತದೆ. ಹೊಟ್ಟೆನೋವು, ಹೊಟ್ಟೆ ಉಬ್ಬರ, ಉಸಿರಾಟದ ಸಮಸ್ಯೆ, ಕ್ಯಾನ್ಸರ್, ಹೃದಯ ಸಂಬಂಧಿ ತೊಂದರೆಗಳು, ಕಿಡ್ನಿ ಸಮಸ್ಯೆ ಮುಂತಾದ ರೋಗಗಳು ನಮ್ಮನ್ನು ಜೀವಂತವಾಗಿ ಕೊಲ್ಲುತ್ತದೆ.ನಾವುಇಂದು ವಿಷ ತುಂಬಿದ ಮನುಷ್ಯ ರಾಗಿದ್ದೇವೆ. ನಾವು ತಿನ್ನುವ ಎಲ್ಲಾ ವಸ್ತುಗಳು ವಿಷವಸ್ತುಗಳೇ ಆಗಿವೆ .ನಮ್ಮ ದೇಹದ ರಕ್ತದ ಕಣಕಣಗಳಲ್ಲಿ ವಿಷವೇ ಹರಿಯುತ್ತಿದೆ.  ಮಾನವ ಜನಾಂಗವು ವಿಷಾಹಾರ ಸೇವನೆಯಿಂದ ಅವನತಿಯ ಕಡೆ ಸಾಗುತ್ತಿದೆ.

ಉಪಸಂಹಾರ: ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಸಂಪೂರ್ಣವಾಗಿ ನಿಷೇಧಿಸಿ ಆ ಜಾಗದಲ್ಲಿ ಸಾವಯವ ಗೊಬ್ಬರಗಳನ್ನು ಬಳಸಬೇಕು. ನಮಗೆ ಬೇಕಾದ ತರಕಾರಿಗಳನ್ನು ,ಆಹಾರ ಪದಾರ್ಥಗಳನ್ನು ಆದಷ್ಟು ಸಾವಯವ ಕೃಷಿಯಿಂದ ಬೆಳೆಸಬೇಕು.

-ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

    

   🙏ಧನ್ಯವಾದಗಳು 🙏


Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು