ಅತಿ ಆಸೆ ಗತಿಗೇಡು



 ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ನುಡಿಮುತ್ತುಗಳಾಗಿವೆ.

ಆಸೆ ಇಲ್ಲದೆ ಜೀವಿಸುವುದು ಕಷ್ಟಸಾಧ್ಯ. ಆಸೆಯೆನ್ನುವುದು ಮನುಷ್ಯನ ಸಹಜ ಪ್ರವೃತ್ತಿ. ಆಸೆಯು ನಮ್ಮಲ್ಲಿ ಇನ್ನೂ ಸಾಧಿಸಬೇಕೆಂಬ ಉತ್ಸಾಹವನ್ನು ತುಂಬುತ್ತದೆ. ಸುಖವಾಗಿ ಬದುಕಬೇಕೆಂಬ ಆಸೆಯು ನಮ್ಮಲ್ಲಿರುವ ಕಾರಣ ನಾವು ಸಂತೋಷದಿಂದ ಜೀವಿಸುತ್ತೇವೆ. ಆಸೆಯನ್ನುವುದು ಕೆಟ್ಟದ್ದಲ್ಲ. ಆದರೆ ಅತಿಯಾಸೆ ಎನ್ನುವುದು ಬುದ್ಧ ಹೇಳಿದಂತೆ ದುಃಖಕ್ಕೆ ಮೂಲವಾಗಿದೆ. ಇದಕ್ಕೆ ಹೇಳುವುದು ಅತಿಯಾದರೆ ಅಮೃತವೂ ವಿಷ ಎಂದು. ನಾವು ಅತಿ ಆಸೆಗೆ ಬಲಿಯಾದರೆ ನಮ್ಮ ನೆಮ್ಮದಿ ಹಾಳಾಗುತ್ತದೆ, ಬದುಕು ಬರಡಾಗುತ್ತದೆ ಹಾಗೂ ಜೀವನ ನಾಶವಾಗುತ್ತದೆ. ಯಾವತ್ತೂ ಹಾಸಿಗೆ ಇದ್ದಷ್ಟೇ ಕಾಲು ಚಾಚಬೇಕು. ತನ್ನ ಸಾಮರ್ಥ್ಯದ ಬಗ್ಗೆ ಅರಿವಿರಬೇಕು. ಅತಿಯಾಸೆಯಿಂದ ಕೆಡುಕು ಉಂಟಾಗುತ್ತದೆ. ಕೈಗೆಟುಕುವ ವಸ್ತುಗಳಿಗೆ ಮಾತ್ರ ಆಸೆಪಡಬೇಕು. ತನ್ನದಲ್ಲದ ಹಾಗು ತನಗೆ ಕೊಂಡುಕೊಳ್ಳಲು ಸಾಧ್ಯವಿಲ್ಲದೆ ವಸ್ತುಗಳಿಗೆ ಆಸೆ ಪಡಬಾರದು. ಸುಖ ಹಾಗೂ ದುಃಖ ನಾಣ್ಯದ ಎರಡು ಮುಖಗಳು. ಇವೆರಡಕ್ಕೂ ನಮ್ಮಲ್ಲಿ ತುಂಬಿರುವ ಆಸೆಗಳೇ ಕಾರಣವಾಗಿದೆ. ಅತಿ ಆಸೆಯಿಂದ ಅದೆಷ್ಟೋ ಜನರ ಜೀವನ ಹಾಳಾಗಿದೆ. ವಿವೇಚನೆಯಿಂದ ನಮ್ಮ ಆಸೆಗಳನ್ನು ಪೂರೈಸಿದರೆ ಮಾತ್ರ ಸುಖವಾಗಿರಬಹುದು. ಅತಿ ಆಸೆ ಪಟ್ಟರೆ ಜೀವನ ನರಕ ವಾಗುತ್ತದೆ ಎಂಬುವದು ಈ ಮೇಲಿನ ಗಾದೆ ಮಾತಿನ ತಾತ್ಪರ್ಯವಾಗಿದೆ.

- ಉಷಾ ಪ್ರಸಾದ್

ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸಿನಲ್ಲಿ ನಮಗೆ ತಿಳಿಸಿರಿ.

             🙏ಧನ್ಯವಾದಗಳು🙏 

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

4 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು