ಸಮಾಸಗಳು



ಸಮಾಸ : ಅಥ೯ಕ್ಕನುಸಾರವಾಗಿ ಎರಡು ಅಥವಾ ಅನೇಕ ಪದಗಳು ತಮ್ಮ ನಡುವಿನ ವಿಭಕ್ತಿ ಪ್ರತ್ಯಯ ಅಥವಾ ವಿವರಣೆಯನ್ನು ಕಳೆದುಕೊಂಡು ಒಂದಾಗುವ ಕ್ರಿಯೆಯನ್ನು ಸಮಾಸ ಎನ್ನುತ್ತಾರೆ.

ಸಮಾಸ ಪದ / ಸಮಸ್ತಪದ : ಎರಡು ಅಥವಾ ಎರಡಕ್ಕಿಂತ ಹೆಚ್ಚು ಪದಗಳು ಅಥ೯ಕ್ಕೆ ಲೋಪ ಬಾರದ ರೀತಿಯಲ್ಲಿ ಒಟ್ಟು ಸೇರಿದಾಗ ಆಗುವ ಹೊಸ ಪದವನೇ ಸಮಾಸ ಪದ/ ಸಮಸ್ತಪದ ಎನ್ನುವರು.

ವಿಗ್ರಹವಾಕ್ಯ: ಸಮಾಸ ಪದವನ್ನು ಬಿಡಿಸಿ ಬರೆಯುವುದನ್ನು ವಿಗ್ರಹವಾಕ್ಯವೆಂದು ಕರೆಯುತ್ತಾರೆ.

ಪೂವ೯ಪದ : ಸಮಾಸ ರಚನೆಯಲ್ಲಿ ಬರುವ ಮೊದಲ ಪದವನ್ನು ಪೂವ೯ಪದ ಎನ್ನುವರು.

ಉತ್ತರ ಪದ : ಸಮಾಸ ರಚನೆಯಲ್ಲಿ ಬರುವ ಎರಡನೆಯ ಪದವನ್ನು ಉತ್ತರಪದ ಎನ್ನುವರು.

ಸಮಾಸದಲ್ಲಿ ಪೂರ್ವಪದ ಮತ್ತು ಉತ್ತರ ಪದಗಳೆರಡೂ ಕನ್ನಡ ಪದಗಳಾಗಿರಬೇಕು ಅಥವಾ ಎರಡೂ ಸಂಸ್ಕೃತ ಪದಗಳಾಗಿರಬೇಕು.

ಒಂದು ಕನ್ನಡ ಪದ ಇನ್ನೊಂದು ಸಂಸ್ಕೃತ ಪದ ಸಮಾಸವಾದಾಗ ಅದು ಅರಿಸಮಾಸ ಎನಿಸುತ್ತದೆ.ಇದು ನಿಷಿದ್ಧ.ಆದರೆ ಪೂರ್ವಕವಿ ಪ್ರಯೋಗಗಳಿಗೆ ಮತ್ತು ಬಿರುದುಗಳಿಗೆ ಇದು ಅನ್ವಯಿಸುವುದಿಲ್ಲ.

ಸಮಾಸದಲ್ಲಿರುವ ವಿಧಗಳು :

೧. ತತ್ಪುರುಷ ಸಮಾಸ

೨. ಕರ್ಮಧಾರಯ ಸಮಾಸ

೩. ದ್ವಿಗು ಸಮಾಸ

೪. ಅಂಶಿ ಸಮಾಸ

೫. ದ್ವಂದ್ವ ಸಮಾಸ

೬. ಕ್ರಿಯಾ ಸಮಾಸ

೭. ಬಹುರ್ವೀಹಿ ಸಮಾಸ

೮. ಗಮಕ ಸಮಾಸ

೧. ತತ್ಪುರುಷ ಸಮಾಸ : 

ಬೆಟ್ಟದ + ತಾವರೆ = ಬೆಟ್ಟದಾವರೆ

ಅರಸನ+ ಮನೆ = ಅರಮನೆ

ದೇವರ + ಮಂದಿರ = ದೇವಮಂದಿರ

ಮಳೆಯ + ಕಾಲ = ಮಳೆಗಾಲ

ಕಾವ್ಯದ + ವಾಚನ = ಕಾವ್ಯವಾಚನ

ಚಕ್ರದ + ಆಕಾರ = ಚಕ್ರಾಕಾರ

ತತ್ತ್ವದ +ಪದ =ತತ್ತ್ವಪದ

ತಲೆಯಲ್ಲಿ + ನೋವು = ತಲೆನೋವು

ತೇರಿಗೆ+ಮರ =ತೇರುಮರ 

ಈ ಪೂರ್ವ ಮತ್ತು ಉತ್ತರ ಪದಗಳು ನಾಮಪದಗಳಾವಗಿರುತ್ತದೆ.ಅವೆರಡರಲ್ಲಿ ಉತ್ತರ ಪದದ ಅರ್ಥ ಪ್ರಧಾನವಾಗಿರುತ್ತದೆ. ವಿಭಕ್ತಿ ಪ್ರತ್ಯಯಗಳು ಸಹಜವಾಗಿ ಲೋಪವಾಗಿದೆ.ಇಂತಹ ಉತ್ತರ ಪದದ ಅರ್ಥ ಪ್ರಧಾನವಾಗಿರುವ ಸಮಾಸವೇ ತತ್ಪುರುಷ ಸಮಾಸ.

೨.ಕರ್ಮಧಾರಯ ಸಮಾಸ :

ಹಿರಿದು +ಬಾಗಿಲು =ಹೆಬ್ಬಾಗಿಲು

ಹಿರಿದು+ ಮರ =ಹೆಮ್ಮರ

ಹಳೆಯದು +ಕನ್ನಡ = ಹಳೆಗನ್ನಡ

ಇನಿದು + ಸರ =ಇಂಚರ

ಹಿರಿದಾದ + ಗುರಿ =ಹೆಗ್ಗುರಿ

ಬೆಳಗುವ +ತಿಂಗಳು = ಬೆಳದಿಂಗಳು

ಈ ಸಮಾಸ ರಚನೆಯಲ್ಲಿ ಪೂವ೯ಪದ ಗುಣವಾಚಕವಾಗಿರುತ್ತದೆ, ಉತ್ತರ ಪದ ನಾಮಪದವಾಗಿರುತ್ತದೆ. ಪೂವ೯ ಹಾಗೂ ಉತ್ತರ ಪದ ರಚನೆಗಳ ನಡುವೆ ವಿಶೇಷಣ ವಿಶೇಷ್ಯ ಸಂಬಂಧವಿದ್ದು ಅದರಿಂದ ಉಂಟಾಗುವ ಸಮಾಸ ವೇ ಕಮ೯ಧಾರಯ ಸಮಾಸ.

೩. ದ್ವಿಗು ಸಮಾಸ.

ಮೂರು + ಮಡಿ = ಮುಮ್ಮಡಿ

ಮೂರು + ಕಣ್ಣು = ಮುಕ್ಕಣ್ಣು

ಎರಡು + ಮಡಿ = ಇಮ್ಮಡಿ

ಎರಡು + ಭಾಗ = ಇಭಾಗ

ಒಂದು+ ಕಟ್ಟು =ಒಗ್ಗಟ್ಟು

ಈ ಸಮಾಸ ರಚನೆಯಲ್ಲಿ ಪೂವ೯ಪದ ಸಂಖ್ಯಾ ವಾಚಕವಾಗಿದ್ದು, ಉತ್ತರ ಪದ ನಾಮವಾಚಕವಾಗಿದ್ದು ಅವುಗಳೆರಡು ಸೇರಿ ಆಗುವ ಸಮಾಸವೇ ದ್ವಿಗು ಸಮಾಸ.

೪. ಅಂಶೀ ಸಮಾಸ :

ಕೈಯ + ಮುಂದು=ಮುOಗೈ

ಕೈಯ + ಅಡಿ = ಅಂಗೈ

ತಲೆಯ +ಹಿಂದು =ಹಿಂದಲೆ

ತಲೆಯ + ಮುಂದು=ಮುಂದಲೆ

ಈ ಸಮಾಸ ರಚನೆಯಲ್ಲಿ ಪೂರ್ವ ಪದ ಅನೇಕ ಭಾಗಗಳನ್ನು ಹೊಂದಿರುತ್ತದೆ ಅಂದರೆ ಅನೇಕ ಅಂಶಗಳನ್ನು ಒಳಗೊಂಡಿರುತ್ತದೆ. ಉತ್ತರ ಪದವು ಕೇವಲ ಅಂಶಿಯ ಒಂದಂಶವನ್ನು ಮಾತ್ರ ಸೂಚಿಸುತ್ತದೆ. ಪೂರ್ವೋತ್ತರ ಪದಗಳು ಅಂಶ, ಅಂಶೀ ಸಂಬಂಧದಿಂದ ಕೂಡಿದ್ದು ಪೂರ್ವ ಪದದ ಅರ್ಥವು ಪ್ರಧಾನವಾಗಿರುತ್ತದೆ. ಇಂತಹ ಸಮಾಸವನ್ನು ಅಂಶೀಸಮಾಸ ಎನ್ನುತ್ತಾರೆ.

೫.ದ್ವಂದ್ವ ಸಮಾಸ :

 ಕೆರೆಯೂ, ಕಟ್ಟೆಯೂ, ಬಾವಿಯೂ = ಕೆರೆಕಟ್ಟೆಬಾವಿಗಳು

ಮರವೂ, ಗಿಡವೂ, ಬಳ್ಳಿಯೂ=ಮರಗಿಡಬಳ್ಳಿಗಳು

ಕಸವೂ, ಕಡ್ಡಿಯೂ=ಕಸಕಡ್ಡಿಗಳು/ಕಸಕಡ್ಡಿ

ಹುಲಿಗಳೂ, ಸಿಂಹಗಳೂ, ಚಿರತೆಗಳೂ=ಹುಲಿ ಸಿಂಹಚಿರತೆಗಳು

ಸೂರ್ಯನೂ, ಚಂದ್ರನೂ, ನಕ್ಷತ್ರವೂ=ಸೂರ್ಯಚಂದ್ರನಕ್ಷತ್ರಗಳು

ಈ ಸಮಾಸ ರಚನೆಯಲ್ಲಿ ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಒಂದಾಗಿ ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವ ಸಮಾಸ ರಚನೆಯೇ ದ್ವಂದ್ವ ಸಮಾಸ.

೬.ಕ್ರಿಯಾ ಸಮಾಸ :

ತಲೆಯನ್ನು +ಕೊಡವು =ತಲೆಗೊಡವು

ಕಣ್ಣಿನಿಂದ+ಕೆಡು=ಕಂಗೆಡು

ಕೈಯನ್ನು +ಮುಗಿ= ಕೈಮುಗಿ

ಆಟವನ್ನು+ಆಡಿ=ಆಟವಾಡಿ

ಮೈಯನ್ನು +ತಡವಿ =ಮೈದಡವಿ

ಕೈಯನ್ನು+ಹಿಡಿದು=ಕೈಹಿಡಿದು

ಈ ಸಮಾಸ ರಚನೆಯಲ್ಲಿ ಪೂರ್ವ ಪದ ನಾಮಪದವಾಗಿದೆ. ಪೂರ್ವ ಪದವು ದ್ವಿತೀಯ ವಿಭಕ್ತಿ 'ಅನ್ನು' ಅಂತ್ಯವಾಗಿದೆ. ಉತ್ತರಪದವು ಕ್ರಿಯಾಪದವಾಗಿದೆ ಅವೆರಡೂ ಸೇರಿ ಆಗುವ ಸಮಾಸವೇ ಕ್ರಿಯಾ ಸಮಾಸ.

೭.ಬಹುವ್ರೀ ಸಮಾಸ :

ಒಂದು+ ಕಣ್ಣುಳ್ಳವನು =ಒಕ್ಕಣ್ಣ

ಚಕ್ರವನ್ನು+ಧರಿಸಿರುವವನು=ಚಕ್ರಪಾಣಿ

ಮೂರು+ ಕಣ್ಣುಳ್ಳವನು= ಮುಕ್ಕಣ್ಣ [ಶಿವ]

ಹಣೆಯಲ್ಲಿ+ ಕಣ್ಣುಳ್ಳವನು= ಹಣೆಗಣ್ಣ [ಶಿವ]

ಈ ಸಮಾಸ ರಚನೆಯಲ್ಲಿ ಎರಡು ಅಥವಾ ಹಲವು ನಾಮ ಪದಗಳು ಸೇರಿ ಸಮಾಜವಾದದ ಅನ್ಯಪದ ಅಂದರೆ ಬೇರೊಂದು ಪದದ ಅರ್ಥವು ಪ್ರಧಾನವಾಗಿರುವ ಸಮಾಸವೇ ಬಹುರ್ವೀಹಿ ಸಮಾಸ.

೮.ಗಮಕ ಸಮಾಸ :

ಅರಳುವುದು+ ಮಲ್ಲಿಗೆ =ಅರಳುಮಲ್ಲಿಗೆ

ಅವರು+ಸಹೋದರಿಯರು= ಆ ಸಹೋದರಿಯರು

ಇವಳು +ಹುಡುಗಿ =ಈ ಹುಡುಗಿ

ಇವು+ಚಿತ್ರಗಳು=ಈ ಚಿತ್ರಗಳು

ಮಾಡಿದ್ದು+ ಅಡುಗೆ =ಮಾಡಿದಡಿಗೆ

ಅವನು+ಮನುಷ್ಯ=ಆ ಮನುಷ್ಯ

ಅದು+ಶಾಲೆ=ಆ ಶಾಲೆ

ಇದು+ಹಣ್ಣು=ಈ ಹಣ್ಣು

ಈ ಸಮಾಸ ರಚನೆಯಲ್ಲಿ ಪೂರ್ವ ಪದದಲ್ಲಿ ಕೃದಂತಗಳು ಅಥವಾ ಸರ್ವನಾಮಗಳಿದ್ದು ಉತ್ತರಪದ ನಾಮಪದದೊಂದಿಗೆ ಸೇರಿದಾಗ ಆಗುವ ಸಮಾಸವೇ ಗಮಕ ಸಮಾಸ.

ನಿಮ್ಮ ಅನಿಸಿಕೆಗಳನ್ನು ಕಮೆಂಟಿನ ಮೂಲಕ ತಿಳಿಸಿರಿ.

              🙏ಧನ್ಯವಾದಗಳು 🙏

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು