ಮಕ್ಕಳ ದಿನಾಚರಣೆ


 
ಟಿಪ್ಪಣಿ :

ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಕ್ರಿ.ಶ 1889 ನವೆಂಬರ್ 14 ರಂದು ಅಲಹಾಬಾದ್ ನಲ್ಲಿ  ಜನಿಸಿದರು.  ಮಕ್ಕಳನ್ನು ದೇಶದ ಭವಿಷ್ಯ ಎಂದು ಪರಿಗಣಿಸಿದ ಚಾಚಾ ನೆಹರು ಅವರು ಮಕ್ಕಳ ಬಗ್ಗೆ ವಿಶೇಷ ಪ್ರೀತಿಯನ್ನು ಕಾಳಜೆಯನ್ನೂ ಹೊಂದಿದ್ದರು. ಅವರ ನೆನಪಿಗಾಗಿ ಮಕ್ಕಳ  ದಿನವನ್ನು ನವೆಂಬರ್ 14 ರಂದು ಪ್ರತಿ ವರ್ಷವೂ ಆಚರಿಸಲಾಗುತ್ತದೆ.

ವಿಷಯ ವಿವರಣೆ :

 ಮಕ್ಕಳೇ ದೇಶದ ನಿಜವಾದ ಶಕ್ತಿ ಮತ್ತು ಸಮಾಜದ ಅಡಿಪಾಯ , ಇಂದಿನ ಮಕ್ಕಳು ಭವಿಷ್ಯದ ಭಾರತವನ್ನು ಕಟ್ಟುತ್ತಾರೆ ಎಂದು ತಿಳಿದ ನೆಹರು ಅವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು.. ನಾವು ಅವರನ್ನು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ದೇಶದ ಭವಿಷ್ಯ ನಿಂತಿದೆ ಎಂದು ನಂಬಿದ್ದರು. ಆದ್ದರಿಂದಲೇ ಮಕ್ಕಳ ದಿನ ಕೇವಲ ಆಚರಣೆ ಮಾತ್ರವಾಗದೇ ಮಕ್ಕಳ ಹಕ್ಕುಗಳನ್ನು ರಕ್ಷಿಸುವ, ಗೌರವಿಸುವ ದಿನವೂ ಆಗಿದೆ .ಮಕ್ಕಳಿಗೆ ದೊರೆಯುವ ಉತ್ತಮ ಶಿಕ್ಷಣವೇ ದೇಶದ ಅಭಿವೃದ್ಧಿಗೆ ಪೂರಕವಾದ ಕಾರಣ ಈ ದಿನ ಶಿಕ್ಷಣದ ಮಹತ್ವವನ್ನು ಬೋಧಿಸುವ  ಕೆಲಸವನ್ನೂ ಮಾಡಲಾಗುತ್ತದೆ . ಅಲ್ಲದೆ ಮಕ್ಕಳ ಆರೋಗ್ಯ ಮತ್ತು ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಲಾಗುತ್ತದೆ .ಮಕ್ಕಳ ಹಕ್ಕುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಲಕ್ಷಾಂತರ ಮಕ್ಕಳು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಆರ್ಥಿಕ ಹಿಂಸೆಯನ್ನು ಶೋಷಣೆಯನ್ನು ಹಾಗೂ ಶಿಕ್ಷಣದ ಅಭಾವವನ್ನು ಎದುರಿಸುತ್ತಿದ್ದಾರೆ. ಇದರ ಬಗ್ಗೆಯೂ ಈ ದಿನ ಗಂಭೀರ ಚಿಂತನೆ ಹಾಗು ಜಾಗೃತಿ ಮೂಡಿಸುವ ಪ್ರಯತ್ನವನ್ನು ಮಾಡುತ್ತಾರೆ . ಮಕ್ಕಳ ದಿನವನ್ನು ಕ್ರಿಶ. 1959 ರಿಂದ ವಿಶ್ವದಾದ್ಯಂತ ನವೆಂಬರ್ 20 ರಂದು ಆಚರಿಸಲಾಗುತ್ತದೆ. ಆದರೆ ಕ್ರಿ.ಶ.1964ರಲ್ಲಿ ನೆಹರೂ ಅವರ ನಿಧನದ ನಂತರ ಅವರ ಜನ್ಮದಿನವಾದ ನವೆಂಬರ್ 14ರಂದು ಭಾರತದಲ್ಲಿ ಆಚರಿಸುವಂತೆ ಘೋಷಿಸಲಾಯಿತು.

ಮಕ್ಕಳ ದಿನದಂದು, ಭಾರತದ ಹಲವು ಶೈಕ್ಷಣಿಕ ಸಂಸ್ಥೆಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಮಾಜಿಕ ಸಂದೇಶಗಳನ್ನು ನೀಡುವುದರೊಂದಿಗೆ ಮಕ್ಕಳಿಗೆ ಆನಂದ ಹಾಗೂ ಮನರಂಜನೆಯನ್ನು ಒದಗಿಸುತ್ತದೆ. ಅವರ ಪ್ರತಿಭೆಗೆ ಪ್ರೋತ್ಸಾಹವನ್ನು ನೀಡಿ ಪ್ರಶಂಸಿಸಲಾಗುತ್ತದೆ.ಮಕ್ಕಳ ದಿನಾಚರಣೆಯಂದು ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸುತ್ತಾರೆ. ಚಿತ್ರಕಲೆ, ಬರಹ ವಿಜ್ಞಾನ ಹಾಗು ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಿ ಮಕ್ಕಳ ಕಲ್ಪನೆ ಮತ್ತು ಸೃಜನಶೀಲತೆಯನ್ನು ಉತ್ತೇಜಿಸಲಾಗುತ್ತದೆ. ಸಿಹಿತಿಂಡಿಗಳನ್ನು ಹಂಚಲಾಗುತ್ತದೆ, ಪುಸ್ತಕಗಳು ಹಾಗು ಬಹುಮಾನಗಳನ್ನು ಮಕ್ಕಳಿಗೆ ವಿತರಿಸಲಾಗುತ್ತದೆ.  

ಉಪಸಂಹಾರ:ಮಕ್ಕಳು ರಾಷ್ಟ್ರದ ಭವಿಷ್ಯದ ನಾಯಕರು ಮತ್ತು ಈ ದೇಶದ ಆಸ್ತಿ ಹಾಗು ಶಕ್ತಿ ಎರಡೂ ಆಗಿದ್ದಾರೆ. ನಾಳೆಯ ಭಾರತ ಇಂದಿನ ಮಕ್ಕಳ ಕೈಯಲ್ಲೇ ಇದೆ. ಇದು ಮಕ್ಕಳ ಭವಿಷ್ಯದ ಕನಸುಗಳನ್ನು ಬೆಳೆಸಲು ಪ್ರೇರಣೆಯ ದಿನವಾಗಿದೆ.

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು