ದೀಪಾವಳಿ

https://youtu.be/5sPO0sUOICY?si=Dg5VZaTLbMQnpt6k
If you like the content,
Please Like, Share, Comment and Subscribe my YouTube channel.

 
ಪೀಠಿಕೆ :

ದೀಪಾವಳಿಯು ದೇಶ ಮತ್ತು ಪ್ರಪಂಚದಾದ್ಯಂತ ಆಚರಿಸುವ ಹಿಂದೂ ಹಬ್ಬಗಳಲ್ಲಿ ಒಂದಾಗಿದೆ.ದೀಪಾವಳಿ ಎಂದರೆ ದೀಪಗಳ ಸಾಲು ಎಂದರ್ಥ.  ಬೆಳಕಿನ ಹಬ್ಬವಾಗಿ ನಾವು ಇದನ್ನು ಆಚರಿಸುತ್ತೇವೆ. ಬಾಂಧವ್ಯ ಮತ್ತು ಮಾನವನ ಸಾಮಾಜಿಕ  ಜೀವನವನ್ನು ಹಂಚಿಕೊಳ್ಳುವಂತಹ ಸಂಭ್ರಮಗಳಲ್ಲಿ ಹಬ್ಬಗಳು ಕೂಡ ಒಂದು.

ವಿಷಯ ವಿವರಣೆ :

 ಹಿಂದೂ ಕ್ಯಾಲೆಂಡರ್ ಪ್ರಕಾರ, ದೀಪಾವಳಿ ಕಾರ್ತಿಕ ಮಾಸದ ಅಮವಾಸ್ಯೆಯಂದು ಬರುತ್ತದೆ.ಶ್ರೀರಾಮನು ದುಷ್ಟ ಶಕ್ತಿಗಳನ್ನು ನಾಶಪಡಿಸಿದ ಮತ್ತು ತನ್ನ ಪ್ರಜೆಗಳಿಂದ ಭವ್ಯವಾದ ಸ್ವಾಗತ ಸ್ವೀಕರಿಸುವ ಮೂಲಕ ಮನೆಗೆ ತಲುಪಿದ ದಿನವಾಗಿ ಆಚರಿಸಲಾಗುತ್ತದೆ.ಅಲ್ಲದೆ, ದೀಪಾವಳಿಯ ಸಂದರ್ಭದಲ್ಲಿ ಸಂಪತ್ತು ಮತ್ತು ಸಮೃದ್ಧಿಗಾಗಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಆಧ್ಯಾತ್ಮಿಕ ಕತ್ತಲೆಯ ಮೇಲೆ ಆಂತರಿಕ ಬೆಳಕಿನ ವಿಜಯವನ್ನು ಆಚರಿಸುವ ಬೆಳಕಿನ ಹಬ್ಬ ಇದಾಗಿದೆ.ದೀಪಾವಳಿಯನ್ನು ನಾವು ಇಂದು ಮೂರು ದಿನಗಳಿಗೆ ಸೀಮಿತಗೊಳಿಸಿದರೂ ಮೂಲತಃ ಐದು ದಿನಗಳ ಹಬ್ಬವಾಗಿತ್ತು. 

 ಮೊದಲ ದಿನ - ನರಕ ಚತುರ್ದಶಿಯಾಗಿದೆ. ಶ್ರೀಕೃಷ್ಣ ಮತ್ತು ಅವನ ಪತ್ನಿ ಸತ್ಯಭಾಮೆಯ ಕೈಯಲ್ಲಿ ನರಕನ ಸೋಲನ್ನು ಸೂಚಿಸುತ್ತದೆ. ನರಕಾಸುರನ್ನು ತನ್ನ ದುರಾಡಳಿತದಿಂದ ಪ್ರಜೆಗಳಿಗೆ ತೊಂದರೆ ಕೊಡುತ್ತಿದ್ದನು. ಇದಕ್ಕೆ ಕೊನೆ ಹಾಡಿ ಅವನ ಬಂಧನದಲ್ಲಿದ್ದ ಹದಿನಾರು ಸಾವಿರ ಸ್ತ್ರೀಯರಿಗೆ ಮೋಕ್ಷ ಕರುಣಿಸಿದ ದಿನವೇ ನರಕ ಚತುರ್ದಶಿ.

ಎರಡನೇ ದಿನ - ಅಮವಾಸ್ಯೆ, ಭಕ್ತರೆಲ್ಲ ಲಕ್ಷ್ಮಿದೇವಿಯನ್ನುಪ್ರಾರ್ಥಿಸುತ್ತಾರೆ, ಇದು ಅತ್ಯಂತ ಮಹತ್ವದ ದಿನವಾಗಿದೆ. ಲಕ್ಷ್ಮೀ ಪೂಜೆ ಅಥವಾ ದೀಪಾವಳಿ ಪೂ ಜೆಯಾಗಿ ಆಚರಿಸುತ್ತೇವೆ. ಅಸುರನಾದ ಬಲಿಯನ್ನು ಮಹಾವಿಷ್ಣುವು ಕುಬ್ಜನಾದ ವಾಮನನ ಅವತಾರವನ್ನು ತಾಳಿ ಪಾತಾಳಕ್ಕೆ ತಳ್ಳಿದ ದಿನವಾಗಿಯೂ ನಾವು ಆಚರಿಸುತ್ತೇವೆ.

 ಮೂರನೇ ದಿನ - ಕಾರ್ತಿಕ ಶುದ್ಧ ಪಾಡ್ಯಮಿ, ಬಲಿ ನರಕದಿಂದ ಹೊರಬಂದು ಭಗವಾನ್ ವಿಷ್ಣುವು ನೀಡಿದ ವರಗಳ ಪ್ರಕಾರ ಭೂಮಿಯನ್ನು ಆಳುತ್ತಾನೆ. ಬಲಿ ಪಾಡ್ಯಮಿಯಂದು ಕರಾವಳಿಯಲ್ಲಿ ಬಲೀಂದ್ರ ಪೂಜೆಯನ್ನು ನೆರವೇರಿಸುತ್ತಾರೆ. ತುಳಸೀಕಟ್ಟೆಯ ಬಳಿಯಲ್ಲಿ ಬಲೀಂದ್ರ ಮರವನ್ನು ಹಾಕಲಾಗುತ್ತದೆ. ಬಾಳೆದಿಂಡಿನಿಂದ ಅಥವಾ ಪಾಲಸ ಮರದ ಕೊಂಬೆಗಳಿಂದ ವಿಶಿಷ್ಟವಾದ ಬಲೀಂದ್ರನ ಆಕೃತಿಯನ್ನು ತಯಾರಿಸಿ ಅದರ ಮೇಲ್ಭಾಗಕ್ಕೆ ಛತ್ರಿಯನ್ನು ಕಟ್ಟಿ, ನೆಲ್ಲಿ ಸೊಪ್ಪು ಹಾಗು ಕಾಡಿನಲ್ಲಿ ಸಿಗುವ ಹೂಗಳಿಂದ  ಅಲಂಕರಿಸಿ ಪೂಜೆಯನ್ನು ಮಾಡುತ್ತಾರೆ. ಅದೇ ರೀತಿ ಇದು ಗೋಮಾತೆಯನ್ನು ಪೂಜಿಸುವ ಗೋಪೂಜೆಯ ದಿನವೂ ಆಗಿದೆ. 

ಹಬ್ಬದ ಆಚರಣೆಗಾಗಿ ಜನರು ತಮ್ಮ ಮನೆಗಳನ್ನು ಸ್ವಚ್ಛಗೊಳಿಸುತ್ತಾರೆ. ಮನೆಯ ಮುಂದೆ  ರಂಗೋಲಿಯನ್ನು ಹಾಕುತ್ತಾರೆ. ಹಣತೆಗಳನ್ನು ದೀಪಗಳನ್ನು ಬೆಳಗುತ್ತಾರೆ. ಧಾರ್ಮಿಕ ಆಚರಣೆಯೊಂದಿಗೆ ಸಡಗರ ಸಂಭ್ರಮದ ವಾತಾವರಣ ಮನೆ- ಮನಗಳಲ್ಲಿ ತುಂಬಿರುತ್ತದೆ. 

ಉಪ ಸಂಹಾರ :

ದೀಪಾವಳಿಯು ಕತ್ತಲಿನ ಮೇಲೆ ಬೆಳಕಿನ ವಿಜಯವಾಗಿದೆ. ಅಜ್ಞಾನದ ಕತ್ತಲಿನಿಂದ ಸುಜ್ಞಾನದ ಬೆಳಕಿನೆಡೆಗೆ  ಜ್ಞಾನದ ದೀಪವನ್ನು ಬೆಳಗಿದ ದಿನವಿದು. ಎಲ್ಲರ ಬದುಕಿನಲ್ಲೂ ದುಃಖ ನೋವುಗಳು ಕರಗಿ ಸಂತೋಷ, ನೆಮ್ಮದಿ, ಶಾಂತಿಯ ದೀಪವು ಬೆಳಗಲಿ ಎಂಬ ಮಹಾಶಯದ ಪ್ರತೀಕವೇ ಈ ದೀಪಾವಳಿಯ ವೈಶಿಷ್ಟತೆಯಾಗಿದೆ.

Usha Prasad

ನನ್ನ ಈ ಕನ್ನಡ ಬರವಣಿಗೆಯು ಶಾಲಾ ಮಕ್ಕಳ ಕಲಿಕೆಗೆ ಅನುಕೂಲವಾಗಲೆಂದು ಬಯಸುತ್ತೇನೆ. ಮಕ್ಕಳಿಗಾಗಿ ಕೆಲವು ಗಾದೆ ಮಾತುಗಳ ವಿಸ್ತರಣೆ ಪ್ರಬಂಧಗಳು ಹಾಗೂ ಕನ್ನಡ ವ್ಯಾಕರಣಗಳ ಬಗ್ಗೆ ಒಂದಷ್ಟು ವಿಷಯಗಳನ್ನು 'ಕನ್ನಡ ಬರಹ ' ಗಳು ಎಂಬ ಶೀರ್ಷಿಕೆಯಡಿ ಬರೆಯುತ್ತಿದ್ದೇನೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು