ಪೀಠಿಕೆ:
ವಿದ್ಯಾರ್ಥಿ ಜೀವನವು ಪ್ರತಿ ವ್ಯಕ್ತಿಯ ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು, ಇದು ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಅವಧಿಯಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೃದ್ಧಿ ಪಡಿಸಿಕೊಳ್ಳಲು, ತಮ್ಮ ವ್ಯಕ್ತಿತ್ವವನ್ನು ಬೆಳಸಲು ಹಾಗೂ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಲು ಶ್ರಮಿಸುತ್ತಾರೆ.
ವಿಷಯ ವಿವರಣೆ:
ಹೆತ್ತವರ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಸ್ತು, ಪರಿಶ್ರಮ, ಮತ್ತು ಆತ್ಮವಿಶ್ವಾಸದಿಂದ ಓದುವಿಕೆ, ಆಳವಾದ ಕಲಿಕೆ, ಮತ್ತು ಸಂಸ್ಕಾರಗಳನ್ನು ಬೆಳೆಸುವುದು ವಿದ್ಯಾರ್ಥಿ ಜೀವನದ ನಿಜವಾದ ಉದ್ದೇಶ.
ವಿದ್ಯಾರ್ಥಿ ಜೀವನವು ಉತ್ತಮ ಸಂಸ್ಕಾರಗಳು ಮತ್ತು ಮೌಲ್ಯಗಳಿಗೆ ಪೂರಕವಾಗಿರಬೇಕು. ಆತ್ಮವಿಶ್ವಾಸ, ಪ್ರಾಮಾಣಿಕತೆ, ಗೌರವ ಮತ್ತು ಸಹಕಾರವೇ ಜೀವನದ ತತ್ವಗಳಾಗಿವೆ. ಗುರುಗಳಿಗೆ ಮತ್ತು ಹಿರಿಯರಿಗೆ ಗೌರವ, ಸ್ನೇಹಿತರಿಗೆ ಸಹಕಾರ, ಮತ್ತು ಸಮಾಜಕ್ಕಾಗಿ ಸೇವಾ ಮನೋಭಾವನೆಯನ್ನು ಬೆಳಸುವುದು ವಿದ್ಯಾರ್ಥಿಯ ಮುಖ್ಯ ಕರ್ತವ್ಯವಾಗಿದೆ.ಮಾನವೀಯ ಮೌಲ್ಯಗಳು, ಗೌರವ, ಪ್ರಾಮಾಣಿಕತೆ, ಮತ್ತು ಸ್ನೇಹ ಇವು ವಿದ್ಯಾರ್ಥಿ ಜೀವನದ ಆಧಾರಸ್ತಂಭಗಳಾಗಿವೆ.
ಶಿಸ್ತು ಇಲ್ಲದೆ ಯಾವುದೇ ಸಾಧನೆ ಅಸಾಧ್ಯ.ಶಿಸ್ತು ಇಲ್ಲದ ವಿದ್ಯಾರ್ಥಿ ಜೀವನವು ಗುರಿಯಿಲ್ಲದ ಹಡಗಿನಂತೆ.ಸಮಯದ ಮೌಲ್ಯವನ್ನು ಅರಿತು, ಪ್ರತಿ ಕಾರ್ಯವನ್ನು ಶಿಸ್ತಿನಿಂದ ಮಾಡುವುದು ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಅವಲೋಕನೆ, ಸಮಯಪಾಲನೆ, ನಿರಂತರ ಅಭ್ಯಾಸ ಇವು ಶಿಸ್ತಿನ ಗುಣಗಳನ್ನು ಬೆಳೆಸುತ್ತವೆ.ಇದರಿಂದ ಗುರಿಯನ್ನು ಸಾಧಿಸುವ ದೃಢ ಮನೋಬಲ ಸಿದ್ಧಿಸುತ್ತದೆ. ಗುರಿಯನ್ನು ಸಾಧಿಸಲು ಕಠಿಣ ಪರಿಶ್ರಮ ಅತ್ಯಗತ್ಯ.ಅನಗತ್ಯ ಯೋಚನೆ ಅಥವಾ ಆತಂಕಗಳಿಂದ ದೂರವಿರಬೇಕು. ಏನಾದರೂ ಹಿಡಿದ ಕಾರ್ಯ ವಿಫಲವಾದರೆ ಅದನ್ನು ಗುರಿಯಾಗಿಸಿ, ಮತ್ತೆ ಪ್ರಯತ್ನಿಸಬೇಕು.
ವಿದ್ಯಾರ್ಥಿ ಜೀವನದ ಮುಖ್ಯ ಉದ್ದೇಶವೇ ಜ್ಞಾನವನ್ನು ಸಂಪಾದಿಸುವುದು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಗಮನಹರಿಸಿ, ವಿವಿಧ ವಿಷಯಗಳನ್ನು ತಿಳಿದುಕೊಳ್ಳಲು ಸತತವಾಗಿ ಶ್ರಮಿಸಬೇಕು. ಈ ಹಂತವು ಕೇವಲ ಪುಸ್ತಕದ ಪಾಠಗಳನ್ನು ಮಾತ್ರವಲ್ಲ, ಜೀವನದ ಪಾಠಗಳನ್ನು ಕಲಿಯುವ ಅವಕಾಶಗಳನ್ನು ಒದಗಿಸುತ್ತದೆ. ವಿಭಿನ್ನ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಕಲೆ, ಕ್ರೀಡೆ, ಹಾಗೂ ಸೃಜನಾತ್ಮಕ ಪ್ರಪಂಚದಲ್ಲಿ ತೊಡಗಿಕೊಳ್ಳುವುದು ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಗೆ ಸಹಾಯಕವಾಗುತ್ತದೆ.
ವಿದ್ಯಾರ್ಥಿ ಜೀವನ ಮೋಜು-ಮಸ್ತಿಗಾಗಿ ಅಲ್ಲ, ಅದು ಜೀವನದ ಶ್ರೇಷ್ಠತೆಯನ್ನು ಸಾಧಿಸಲು, ಜ್ಞಾನವನ್ನು ಸಂಪಾದಿಸಲು, ಮತ್ತು ಉತ್ತಮ ವ್ಯಕ್ತಿತ್ವವನ್ನು ರೂಪಿಸಲು ಇರುವ ಮಾರ್ಗವಾಗಿದೆ. ಈ ಹಂತದಲ್ಲಿ ವಿದ್ಯಾರ್ಥಿಯು ಸರಿ ತಪ್ಪುಗಳನ್ನು ಅರ್ಥೈಸಿಕೊಳ್ಳಬೇಕು .ಒಳಿತು ಕೆಡುಕುಗಳ ಬಗ್ಗೆ ತಿಳುವಳಿಕೆ ಇರಬೇಕು .ಒಳ್ಳೆಯ ಅಭ್ಯಾಸಗಳನ್ನು ಹಾಗು ಹವ್ಯಾಸಗಳನ್ನು ಬೆಳೆಸಿಕೊಂಡು, ಉತ್ತಮ ಗುಣ ನಡತೆ ಹೊಂದಬೇಕು. ಒಳ್ಳೆಯವರ ಸಂಗವನ್ನು ಮಾಡಬೇಕು. ತಪ್ಪು ಹೆಜ್ಜೆ ಇಡದಂತೆ ಎಚ್ಚರಿಕೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ನಡೆಯಬೇಕು. ಹೀಗೆ ವಿದ್ಯಾರ್ಜನೆಯೊಂದಿಗೆ ಜ್ಞಾನ ಸಂಪಾದನೆಯನ್ನು ಮಾಡುತ್ತಾ ಬದುಕಿನ ದಾರಿಯನ್ನು ಕಂಡುಕೊಳ್ಳಬೇಕು.
ಜೀವನದಲ್ಲಿ ಪ್ರತಿಯೊಂದು ಮೆಟ್ಟಲಲ್ಲೂ ಸವಾಲುಗಳು ಇರುತ್ತವೆ. ವಿದ್ಯಾರ್ಥಿಗಳು ಧೈರ್ಯದಿಂದ ಈ ಇವೆಲ್ಲವನ್ನೂ ಎದುರಿಸಿ, ತಮ್ಮ ದಾರಿ ಹುಡುಕಬೇಕು. ಸೋಲುಗಳನ್ನು ಸಹ ಸಮಾನವಾಗಿ ಸ್ವೀಕರಿಸಿ, ಅವುಗಳಿಂದ ಪಾಠಗಳನ್ನು ಕಲಿಯುವುದು ಬಹಳ ಮುಖ್ಯ.
ಉಪಸಂಹಾರ:
ವಿದ್ಯಾರ್ಥಿ ಜೀವನದಲ್ಲಿ ಶ್ರದ್ಧೆ, ಶಿಸ್ತಿನ ಜೀವನಶೈಲಿ, ಆರೋಗ್ಯದ ಮೇಲೆ ಗಮನ, ಮತ್ತು ಸಕಾರಾತ್ಮಕ ಮನೋಭಾವನೆ ಇವುಗಳನ್ನು ಹೊಂದಿರುವುದು ಅಗತ್ಯ. ಇದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ, ವ್ಯಕ್ತಿ ಉತ್ತಮ ವ್ಯಕ್ತಿತ್ವವನ್ನು ನಿರ್ಮಿಸಿ, ಯಶಸ್ವಿ ಭವಿಷ್ಯವನ್ನು ಕಟ್ಟಿಕೊಳ್ಳಬಹುದು.ವಿದ್ಯಾಭ್ಯಾಸವು ಕೇವಲ ಒಂದು ಗುರಿ ಮಾತ್ರವಲ್ಲ , ಅದು ಸಾರ್ಥಕವಾದ ಮತ್ತು ಸಂತೋಷಕರ ಜೀವನವನ್ನು ಕಟ್ಟಲು ಅವಶ್ಯವಿರುವ ಮಾರ್ಗ.