ಪೀಠಿಕೆ:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕರ್ನಾಟಕದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಇವರು ಕಿತ್ತೂರು ರಾಣಿ ಚೆನ್ನಮ್ಮನ ಬಲಗೈ ಬಂಟರಾಗಿದ್ದರು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಅವರು, ತಮ್ಮ ಕೊನೆಯ ಉಸಿರಿರುವವರೆಗೂ ಹೋರಾಡಿದರು.ಸಂಗೊಳ್ಳಿ ರಾಯಣ್ಣ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ, ಆಗಸ್ಟ್ 15, 1796(1798 ಎಂಬುದೂ ಚರ್ಚೆಯಲ್ಲಿದೆ)ರಲ್ಲಿ ಕುರುಬ ಗೌಡ ಸಮುದಾಯದಲ್ಲಿ ಜನಿಸಿದರು. ಅವರ ತಂದೆ ದಾಸಪ್ಪ ಹಾಗೂ ತಾಯಿ ಕೆಂಚಮ್ಮ.ರಾಯಣ್ಣನಿಗೆ ವೀರ ರಾಯಣ್ಣ,ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ, ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.
ವಿಷಯ ವಿವರಣೆ:
1824ರಲ್ಲಿ ಕಿತ್ತೂರಿನ ದೊರೆ ಮಲ್ಲಸರ್ಜ ದೇಸಾಯಿ ಉತ್ತರಾಧಿಕಾರಿ ಇಲ್ಲದೆ ಮರಣ ಹೊಂದಿದಾಗ ಬ್ರಿಟೀಷರು ಈ ಸಂಸ್ಥಾನವನ್ನು ವಶಪಡಿಸಲು ಪ್ರಯತ್ನಿಸಿದರು. .ಬ್ರಿಟಿಷರ' ದತ್ತು ಪುತ್ರನಿಗೆ ಹಕ್ಕಿಲ್ಲ ' ಕಾಯಿದೆಯಿಂದ ದತ್ತು ಪುತ್ರನನ್ನು ಸಂಸ್ಥಾನದ ಕಾನೂನು ಬದ್ಧ ಉತ್ತರಾಧಿಕಾರಿ ಎಂದು ಗುರುತಿಸಲು ತೊಂದರೆಯಾಯಿತು. ಆದ್ದರಿಂದ ಕಿತ್ತೂರನ್ನು ಬ್ರಿಟೀಷರು ಸ್ವಾಧೀನ ಪಡಿಸಿಕೊಳ್ಳಲು ಪ್ರಯತ್ನಿಸಿದರು. ರಾಣಿ ಚೆನ್ನಮ್ಮ ಇದನ್ನು ವಿರೋಧಿಸಿ, ಬ್ರಿಟಿಷರ ಆದೇಶಗಳನ್ನು ಪಾಲಿಸಲು ನಿರಾಕರಿಸಿದರು. ಇದು 1824ರಲ್ಲಿ ಕಿತ್ತೂರಿನ ಮೊದಲ ಕದನಕ್ಕೆ ಕಾರಣವಾಯಿತು.1829ರಲ್ಲಿ ಚೆನ್ನಮ್ಮನನ್ನು ಸೆರೆಹಿಡಿಯಲಾಯಿತು. ಅವರು ಜೈಲಿನಲ್ಲಿ ನಿಧನರಾಗುವ ಕೊನೆಯವರೆಗೂ ಬ್ರಿಟಿಷರ ವಿರುದ್ಧ ವಿರಾವೇಶದ ಹೋರಾಟವನ್ನು ನಡೆಸಿದರು.
ಕಿತ್ತೂರು ಪಡೆಗಳ ಔಪಚಾರಿಕ ಸೋಲು ಮತ್ತು ಬೈಲಹೊಂಗಲ ಜೈಲಿನಲ್ಲಿ ರಾಣಿ ಚೆನ್ನಮ್ಮನ ಬಂಧನದ ನಂತರ ರಾಯಣ್ಣ ಬ್ರಿಟಿಷರ ವಿರುದ್ಧ ತನ್ನ ಹೋರಾಟವನ್ನು ಮುಂದುವರಿಸಿದನು. ಅವನು ರಾಣಿಯ ಹೆಸರಿನಲ್ಲಿ ಬೆಂಬಲವನ್ನು ಸಂಗ್ರಹಿಸಲು ಪ್ರಾರಂಭಿಸಿದನು ಮತ್ತು ಅವಳನ್ನು ಸೆರೆಮನೆಯಿಂದ ಬಿಡುಗಡೆ ಮಾಡಲು ಮತ್ತು ಅವಳ ದತ್ತು ಪುತ್ರನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಆಡಳಿತಗಾರನನ್ನಾಗಿ ಮಾಡುವ ವಾಗ್ದಾನ ಮಾಡಿದನು. ರಾಯಣ್ಣ ಕಿತ್ತೂರ ಸುತ್ತಮುತ್ತದ ಪ್ರದೇಶಗಳಲ್ಲಿ ನಿರಂತರ ದಾಳಿಗಳನ್ನು ಮಾಡುತ್ತಾ, ಕಿರುಕುಳ ನೀಡುತ್ತಾ ಬ್ರಿಟಿಷರಿಗೆ ಕಂಠಕವಾಗಿ ಪರಿಣಮಿಸಿದನು.ಇದಕ್ಕೆ ಪ್ರತಿಯಾಗಿ ಬ್ರಿಟಿಷರು ರಾಯಣ್ಣನ ಹಿಡಿತದಲ್ಲಿದ್ದ ಪ್ರದೇಶಗಳ ಮೇಲೆ ಭಾರಿ ತೆರಿಗೆಯನ್ನು ವಿಧಿಸುವ ಮೂಲಕ ಪ್ರತಿಕಾರ ತೀರಿಸಿಕೊಂಡರು.ರಾಯಣ್ಣ ಕಿತ್ತೂರಿನ ಜನರ ಅಗಾಧ ಬೆಂಬಲವನ್ನು ಪಡೆದನು. ಬ್ರಿಟಿಷರು ಅವರ ಮೇಲೆ ಹೇರಿದ ಅತಿರೇಕದ ತೆರಿಗೆಗಳು ಸಾಮಾನ್ಯ ಜನಸಾಮಾನ್ಯರ ಅದರಲ್ಲೂ ವಿಶೇಷವಾಗಿ ರೈತರ ಜೀವನವನ್ನು ಹಾಳು ಮಾಡಿತು ಮತ್ತು ಇದು ರಾಯಣ್ಣನ ಹೋರಾಟಕ್ಕೆ ಗಣನೀಯವಾಗಿ ಸಹಾಯ ಮಾಡಿತು.ಗೆರಿಲ್ಲಾ ತಂತ್ರಗಳನ್ನು ಬಳಸಿದ ಆರಂಭಿಕ ಕ್ರಾಂತಿಕಾರಿಗಳಲ್ಲಿ ರಾಯಣ್ಣ ಒಬ್ಬರಾಗಿದ್ದರು.ಸ್ಥಳೀಯ ಪರಿಣತಿ ಹೊಂದಿದ ಯುವಕರು ಮತ್ತು ಸ್ಥಳೀಯ ನಿವಾಸಿಗಳನ್ನು ಅವರು ಸೈನ್ಯದಲ್ಲಿ ನೇಮಕ ಮಾಡಿಕೊಂಡರು. ರಾಯಣ್ಣ ಬ್ರಿಟಿಷರ ವಿರುದ್ಧ ತನ್ನ ಅಕ್ರಮಣವನ್ನು ಮುಂದುವರಿಸಿದರು. ಅವರು ಸರ್ಕಾರಿ ಕಚೇರಿಗಳನ್ನು ದ್ವಂಸ ಮಾಡಿದರು ಮತ್ತು ಖಜಾನೆಗಳನ್ನು ಲೂಟಿ ಮಾಡಿದರು. ಸ್ಥಳೀಯ ಭೂ ಮಾಲೀಕರು ಮತ್ತು ಶ್ರೀಮಂತ ಭಾರತೀಯರನ್ನು ಗುರಿಯಾಗಿಸಿಕೊಂಡರು. ಏಕೆಂದರೆ ಅವರು ಬಡವರನ್ನು ಶೋಷಿಸಲು ಬ್ರಿಟಿಷರನ್ನು ಬೆಂಬಲಿಸುತ್ತಿದ್ದರು. ರಾಯಣ್ಣ ಮತ್ತು ಸಹಚರರು ಭೂಮಿ ಮತ್ತು ಕಂದಾಯ ದಾಖಲೆಗಳನ್ನು ನಾಶಪಡಿಸಿದರು, ಇದರಿಂದ ಬ್ರಿಟಿಷರು ಭಾರಿ ಆದಾಯ ನಷ್ಟವನ್ನು ಅನುಭವಿಸುವಂತೆ ಮಾಡಿದರು. ಈ ಎಲ್ಲಾ ಸಾಹಸಗಳು ರಾಯಣ್ಣನಿಗೆ ಸಾಮಾನ್ಯ ಜನರ ಪ್ರೀತಿ ಮತ್ತು ಬೆಂಬಲವನ್ನು ಪಡೆಯಲು ಸಹಾಯಕವಾದವು.
ರಾಯಣ್ಣನನ್ನು ಸೆರೆಹಿಡಿಯಲು ಹೊಂಚು ಹಾಕಿದ ಬ್ರಿಟಿಷರು ಮತ್ತು ಅವರನ್ನು ಬೆಂಬಲಿಸುತ್ತಿದ್ದ ಸ್ಥಳೀಯ ಜಮೀನುದಾರರು ಕುತಂತ್ರ ಮತ್ತು ದ್ರೋಹದ ಮೂಲಕ ರಾಯಣ್ಣನನ್ನು ಹಿಡಿಯಲು, ಕುತಂತ್ರದ ಯೋಜನೆಯನ್ನು ರೂಪಿಸಿದರು. ರಾಯಣ್ಣ ಮತ್ತು ಅವನ ಬೆಂಬಲಿಗರನ್ನು ಹಿಡಿಯಲು ಸಹಾಯ ಮಾಡುವಂತೆ ಅವರ ಚಿಕ್ಕಪ್ಪ ಲಕ್ಷ್ಮಣನನ್ನು ಮನವೊಲಿಸಿದರು. ದೋರಿ ಬೆಣಚಿ ಸಮೀಪದ ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ರಾಯಣ್ಣನನ್ನು ಮೋಸದಿಂದ ಸೆರೆ ಹಿಡಿದರು . ಹೊಳೆಗೆ ಸ್ನಾನಕ್ಕೆ ಹೋಗುವ ಮೊದಲು ರಾಯಣ್ಣ ತನ್ನ ಚಿಕ್ಕಪ್ಪನ ಬಳಿ ತನ್ನ ಖಡ್ಗವನ್ನು ಬಿಟ್ಟನು ಮತ್ತು ಅವನು ಸ್ಥಾನದ ನಂತರ ಅದನ್ನು ತನ್ನ ಕೈಗೆ ಕೊಡಲು ತನ್ನ ಚಿಕ್ಕಪ್ಪನನ್ನು ಕೇಳಿದಾಗ ಕುಂತಂತ್ರಿ ಲಕ್ಷ್ಮಣ ಅದನ್ನು ಹತ್ತಿರದಲ್ಲಿ ಇದಕ್ಕಾಗಿ ಹೊಂಚು ಹಾಕುತ್ತಿದ್ದ ಬ್ರಿಟಿಷ್ ಸೈನಿಕರಿಗೆ ಒಪ್ಪಿಸಿದನು. ನಿರಾಯುಧನಾದ ರಾಯಣ್ಣನನ್ನು ಕೂಡಲೇ ಸೋಲಿಸಿ ಬಂಧಿಸಲಾಯಿತು. ಬಳಿಕ ನಂದಗಡ ಗ್ರಾಮದ ಹೊರವಲಯದಲ್ಲಿರುವ ಆಲದ ಮರಕ್ಕೆ ನೇಣು ಹಾಕಲಾಯಿತು. ನಿರ್ಭಿತ ಮತ್ತು ಪರಾಕ್ರಮಿ ಯೋಧನು ನಡೆಸುತ್ತಿದ್ದ ಅಭಿಯಾನವು 1831ರ ಜನವರಿ 26 ರಲ್ಲಿ ಕೊನೆಗೊಂಡಿತು.
ಉಪಸಂಹಾರ:
ಇಂಗ್ಲಿಷರ ವಿರುದ್ಧದ ಹೋರಾಟದಲ್ಲಿ ಅವರು ತೋರಿಸಿದ ಸಮರ್ಥತೆ, ಸಾಮಾನ್ಯ ಪ್ರಜೆಗಳಲ್ಲಿ ಹುಟ್ಟಿಸಿದ ಜಾಗೃತಿ, ಮತ್ತು ಕಿತ್ತೂರಿನ ಸ್ವಾತಂತ್ರ್ಯಕ್ಕಾಗಿ ಮಾಡಿದ ತ್ಯಾಗಗಳು ಎಲ್ಲರಿಗೂ ಮಾದರಿಯಾಗಿದೆ.ಅವರು ದೇಶದ ಹಕ್ಕುಗಳಿಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಅವರ ಧೈರ್ಯ, ನಿಷ್ಠೆ ಮತ್ತು ತ್ಯಾಗವನ್ನು ನಾವು ಸದಾ ಸ್ಮರಿಸಬೇಕಾಗಿದೆ.