ಪೀಠಿಕೆ:
ಇತಿಹಾಸದ ಪ್ರಾರಂಭದಿಂದಲೂ ಜನರು ಕೌಟುಂಬಿಕ, ಸಾಮಾಜಿಕ ಸಂಬಂಧಗಳ ಮೂಲಕ ಒಟ್ಟಾಗಿ ಬದುಕುತ್ತಿದ್ದರು. ಒಟ್ಟುಗೂಡಿದ ಬೃಹತ್ ಕುಟುಂಬಗಳು ಪರಸ್ಪರ ಕಾಳಜಿ, ಪ್ರೀತಿ,ವಿಶ್ವಾಸ ಮತ್ತು ಸಹಕಾರದ ಮೂಲಕ ಬದುಕು ನಡೆಸುತ್ತಿದ್ದವು.ಆದರೆ ಕಾಲಕಾಲಕ್ಕೆ ತಂತ್ರಜ್ಞಾನ, ಆಧುನಿಕ ಜೀವನಶೈಲಿಗಳು ನಮ್ಮ ಜೀವನ ರೀತಿಯನ್ನೇ ಬದಲಾಯಿಸಿದವು. ಸಂಬಂಧಗಳ ಮೌಲ್ಯದಲ್ಲಿ ಬದಲಾವಣೆ ಕಾಣಿಸಿಕೊಂಡವು. ಅದರಲ್ಲೂ ಮುಖ್ಯವಾಗಿ ಆಧುನಿಕ ತಂತ್ರಜ್ಞಾನಗಳಾದ ಟೆಲಿವಿಜನ್ ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್ ಮುಂತಾದವುಗಳು ಮಾನವೀಯ ಸಂಬಂಧಗಳ ಶಿಥಿಲತೆಗೆ ಪ್ರಮುಖ ಕಾರಣವಾಗಿದೆ
ವಿಷಯ ವಿವರಣೆ :
ಹಿಂದಿನ ಕಾಲದಲ್ಲಿ, ಮಾನವ ಸಂಬಂಧಗಳು ಬಹಳ ಗಟ್ಟಿಯಾಗಿತ್ತು. ದೊಡ್ಡ ಕುಟುಂಬಗಳು ಒಟ್ಟಾಗಿ ಒಂದೇ ಮನೆಯಲ್ಲಿದ್ದುಕೊಂಡು ಜೀವನ ನಡೆಸುತ್ತಿದ್ದರು.ಅವಿಭಕ್ತ ಕುಟುಂಬದಲ್ಲಿ ಮುತ್ತಜ್ಜ, ತಾತ, ಅಜ್ಜಿ, ಅಮ್ಮ, ಅಪ್ಪ, ಮಕ್ಕಳೆಲ್ಲರೂ ಒಟ್ಟಿಗೇ ವಾಸಿಸುತ್ತಿದ್ದರು. ಪ್ರತಿಯೊಬ್ಬರೂ ಪರಸ್ಪರ ಕಾಳಜಿ ಹಾಗೂ ಪ್ರೀತಿಯಿಂದ ಜೀವನ ಸಾಗಿಸುತ್ತಿದ್ದರು, ಒಬ್ಬರಿಗೊಬ್ಬರು ಸಹಾಯ ಮಾಡುತ್ತಿದ್ದರು, ಮತ್ತು ಒಟ್ಟಾಗಿ ಸುಖ-ದುಃಖ ಹಂಚಿಕೊಳ್ಳುತ್ತಿದ್ದರು.
ಮದುವೆ, ಹಬ್ಬಗಳು ಮತ್ತು ಇತರ ಸಮಾರಂಭಗಳಲ್ಲಿ ಜನರೆಲ್ಲಾ ಒಂದಾಗಿ ಸೇರಿ ಸಂಭ್ರಮಾಚರಣೆ ನಡೆಸುತ್ತಿದ್ದರು.ಮಕ್ಕಳ ಸದ್ದು ಗದ್ದಲ ಹೆಂಗಳೆಯರ ಗುಸು ಗುಸು ಪಿಸು ಪಿಸು ಮಾತುಕತೆ ಗಂಡಸರ ವಿಮರ್ಶೆಗಳು ಚರ್ಚೆಗಳು ಸಮಾರಂಭದ ಭಾಗವಾಗಿದ್ದವು.ಕಾರ್ಯಕ್ರಮದ ಕೆಲವು ದಿನಗಳ ಮೊದಲೇ ಮನೆ ಮಂದಿಯೆಲ್ಲ ಒಟ್ಟು ಸೇರುತ್ತಿದ್ದರು .ನೆರೆಕರೆಯವರ ಸಹಕಾರ, ಪ್ರೀತಿ, ಮತ್ತು ಆತ್ಮೀಯತೆಯಿಂದ ಸಮಾರಂಭಗಳನ್ನು ನಡೆಸುತ್ತಿದ್ದರು. ಸ್ನೇಹಿತರು, ಕುಟುಂಬದವರು, ದೂರದ ಸಂಬಂಧಿಕರು ಎಲ್ಲರೂ ಈ ಸಮಯದಲ್ಲಿ ಒಂದೇ ಮನೆಯವರಂತೆ ಪಾಲ್ಗೊಳ್ಳುತ್ತಿದ್ದರು.ಮನೆಯಲ್ಲಿ ಸಂತೋಷ ಸಡಗರ ಸಂಭ್ರಮದ ವಾತಾವರಣವಿರುತ್ತಿತ್ತು .
ಹಳ್ಳಿಯಲ್ಲಿ ಸ್ನೇಹಿತರೊಂದಿಗೆ ಆಟವಾಡುವುದು,ಹರಟೆ ಹೊಡೆಯುವುದು ಇವುಗಳೆಲ್ಲ ಮಾನವೀಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತಿದ್ದವು. ಊರಿನ ಜನರ ಒಬ್ಬರ ಕಷ್ಟಕ್ಕೆ ಇನ್ನೊಬ್ಬರು ಸಹಾಯ ಮಾಡುತ್ತಿದ್ದರು, ಮತ್ತು ಒಟ್ಟಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದರು. ಎಲ್ಲರಿಗೂ ಸಮಯ ಕಳೆಯಲು, ಒಬ್ಬರನ್ನೊಬ್ಬರು ಭೇಟಿ ಮಾಡಲು, ಮಾತನಾಡಲು ಅವಕಾಶ ಹಾಗೂ ಸಮಯ ಸಿಗುತ್ತಿತ್ತು . ಈ ರೀತಿ ಉತ್ತಮ ಸಂಬಂಧಗಳನ್ನು ಹೊಂದಿದ್ದರು, ಸ್ನೇಹದ ಮತ್ತು ಬಾಂಧವ್ಯಗಳ ಬೆಸುಗೆ ತುಂಬಾ ಬಲವಾಗಿತ್ತು.
ಕಾಲಕಳೆದಂತೆ ಮಾನವೀಯ ಸಂಬಂಧಗಳ ಮೌಲ್ಯದಲ್ಲಿ ಕೆಲವೊಂದು ಬದಲಾವಣೆಗಳು ಕಂಡುಬಂದವು. ತಂತ್ರಜ್ಞಾನ, ಆಧುನಿಕ ಜೀವನಶೈಲಿ, ನಗರೀಕರಣ, ಮತ್ತು ಪಾಶ್ಚತ್ಯ ಜೀವನ ಶೈಲಿಯಿಂದ ಮಾನವೀಯ ಸಂಬಂಧಗಳು ಶಿಥಿಲವಾಗಲು ಆರಂಭವಾದವು.
ಅವಿಭಕ್ತ ಕುಟುಂಬಗಳು ನಶಿಸುತ್ತಾ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಯಿತು.ಸ್ಪರ್ಧಾತ್ಮಕ ಜಗತ್ತು ಸೃಷ್ಟಿಯಾಯಿತು.ಎಲ್ಲರಿಗೂ ದುಡ್ಡೇ ದೊಡ್ಡಪ್ಪನಾಗಿ ಕಾಣಿಸಿತು.ಜೀವನ ಯಾಂತ್ರಿಕವಾಯಿತು. ಸಾಂಸಾರಿಕ ಜೀವನದ ಒತ್ತಡ, ವೃತ್ತಿಜೀವನದ ತ್ವರಿತ ಬೆಳವಣಿಗೆ, ಮತ್ತು ವೈಯಕ್ತಿಕ ನಿರೀಕ್ಷೆಗಳ ಹೆಚ್ಚಳಗಳು ಮಾನವೀಯ ಸಂಬಂಧಗಳಿಗೆ ಹೊಸ ಸವಾಲುಗಳನ್ನು ಸೃಷ್ಟಿಸಿತು.
ಪ್ರಪಂಚದ ಪ್ರತಿಯೊಂದು ದೇಶಗಳು ಅಭಿವೃದ್ಧಿ ಹೊಂದಿದವು.ಹೊಸ ಹೊಸ ಸಂಶೋಧನೆಗಳು ಆವಿಷ್ಕಾರಗಳು ಪ್ರಾರಂಭವಾದವು ತಂತ್ರಜ್ಞಾನಗಳ ಬೆಳವಣಿಗೆಯಾಯಿತು ಟೆಲಿವಿಜನ್ ಮೊಬೈಲ್ ಕಂಪ್ಯೂಟರ್ ಇಂಟರ್ನೆಟ್ ಮುಂತಾದವುಗಳ ಬಳಕೆ ಪ್ರಾರಂಭವಾದವು .ಈಗ ಜಗತ್ತು ಕಿರಿದಾಯಿತು.ಇವುಗಳ ಬಳಕೆ ಹೆಚ್ಚಾದಂತೆ ಮಾನವೀಯ ಸಂಬಂಧಗಳು ದೂರವಾಗುತ್ತಾ ಬಂದವು.
ಮೊಬೈಲ್ ಫೋನ್, ಟ್ಯಾಬ್, ಕಮ್ಯೂಟರ್ ಗೇಮ್ಸ್, ಸಾಮಾಜಿಕ ಮಾಧ್ಯಮ, ಮತ್ತು ವೀಡಿಯೊ ಪ್ಲಾಟ್‌ಫಾರ್ಮ್‌ಗಳು ಮಕ್ಕಳ ದಿನಚರಿಯ ಪ್ರಮುಖ ಭಾಗವಾಗಿ ಹೋಯಿತು.ಮಕ್ಕಳೆಲ್ಲರೂ ಒಟ್ಟಾಗಿ ಬೆರೆತು ಅಂಗಳದಲ್ಲಿ ಎದ್ದು ಬಿದ್ದು ಆಟವಾಡಬೇಕಾಗಿದ್ದ ಪ್ರಾಯದಲ್ಲಿ ಈ ತಂತ್ರಜ್ಞಾನಗಳಿಗೆ ಅಂಟಿಕೊಳ್ಳುವಂತಹ ಪರಿಸ್ಥಿತಿಯನ್ನು ತಂದಿಟ್ಟಿದ್ದೇವೆ.ಹೆತ್ತವರು ತಮ್ಮ ಕೆಲಸಗಳ ಒತ್ತಡದಲ್ಲಿದ್ದರೆ ,ಮಗು ಒಂಟಿಯಾಗಿ ಇವುಗಳ ಜೊತೆ ಕಾಲ ಕಳೆಯುತ್ತದೆ. ಮನೆಯಲ್ಲಿ ಅಜ್ಜ- ಅಜ್ಜಿ ,ಅಪ್ಪ -ಅಮ್ಮ, ಅಕ್ಕಂದಿರು ಅಣ್ಣಂದಿರ ಜೊತೆ ಕಾಲ ಕಳೆಯಬೇಕಾದ ಮಗು ಕೈಯಲ್ಲಿ ಒಂದು ಮೊಬೈಲ್ ಹಿಡಿದುಕೊಂಡು ಏಕಾಂಗಿಯಾಗಿದೆ. ಆ ಮಗುವಿಗೆ ಮುಂದೆ ಸಮಾಜದೊಂದಿಗೆ ಬೆರೆಯುವುದು ತುಂಬಾ ಕಷ್ಟವಾಗುತ್ತದೆ. ಇದರಿಂದಾಗಿ ಮಗುವಿನ ಸರ್ವತೋಮುಖವಾದ ಬೆಳವಣಿಗೆ ಕುಂಠಿತವಾಗುತ್ತದೆ ಮತ್ತು ಇದು ಮಗುವಿನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ತೀವ್ರ ಹಾನಿ ಮಾಡುತ್ತಿದೆ.
ಇಂದು ನಾವು ಸಾಮಾಜಿಕ ಮಾಧ್ಯಮಗಳಾದ ವಾಟ್ಸಾಪ್, ಪೇಸ್‌ಬುಕ್, ಇನ್ಸ್ಟಾಗ್ರಾಮ್ ಜೊತೆಗೆ ಹೆಚ್ಚು ಸಮಯ ಕಳೆಯುತ್ತೇವೆ.ಇವುಗಳು ನಮ್ಮನ್ನು ಇಂಚಿಂಚಾಗಿ ನಮ್ಮವರಿಂದ ದೂರ ಮಾಡುತ್ತಿದೆ. ನಮ್ಮ ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಸಂಬಂಧಿಕರೊಂದಿಗೆ ನಾವು ನೇರವಾಗಿ ಮಾತನಾಡಲು, ಒಟ್ಟಾಗಿ ಸೇರಲು ಹರಟೆ ಹೊಡೆಯಲು ಭಾವನೆಗಳನ್ನು ಹಂಚಿಕೊಳ್ಳಲು ಒಟ್ಟಾಗಿ ಕೂತು ಊಟ ಮಾಡಲು ಸಮಯವಿರುವುದಿಲ್ಲ.ಇದರಿಂದ ಪರಸ್ಪರದ ನಡುವೆ ಇರಬೇಕಾಗಿದ್ದ ಆತ್ಮೀಯತೆ ಕಡಿಮೆಯಾಗುತ್ತಿದೆ.ಅವರ ವರ್ತನೆಗಳು ಅನುಮಾನಗಳಿಗೆ ಕಾರಣವಾಗಿ ನಂಬಿಕೆ ಹಾಳಾಗುತ್ತದೆ. ಅದೆಷ್ಟೋ ಅನ್ಯೋನ್ಯವಾಗಿದ್ದ ಸಂಬಂಧಗಳಲ್ಲಿ ವೈಮನಸು ಕಾಣಿಸಿಕೊಳ್ಳುತ್ತದೆ.ಸಂಸಾರಗಳಲ್ಲಿ ಬಿರುಕುಂಟಾಗುತ್ತದೆ.ಜಗಳ , ಮನಸ್ತಾಪ, ಅತ್ಯಚಾರ, ಕೊಲೆ , ಅತ್ಮಹತ್ಯೆಯಂತಹ ಕೃತ್ಯಗಳು ನಡೆಯುತ್ತದೆ. ಈ ತಂತ್ರಜ್ಞಾನಗಳ ಅತಿಯಾದ ಬಳಕೆಯಿಂದ ಇಂದಿನ ಯುವ ಜನಾಂಗ ತಪ್ಪು ದಾರಿ ಹಿಡಿಯುತ್ತಿದೆ. ನಾಪತ್ತೆ ಪ್ರಕರಣಗಳು ಜಾಸ್ತಿಯಾಗಿವೆ.ಕಣ್ಣ ಮುಂದೆ ಇರುವ ಸಂಬಂಧಕ್ಕಿಂತ ಪರದೆಯ ಹಿಂದೆ ಇರುವ ಆ ಕಾಣದ ಸ್ನೇಹ ಸಂಬಂಧಕ್ಕಾಗಿ ಹಾತೊರೆಯುತ್ತಾರೆ.ಇದು ಕೂಡ ಮಾನವೀಯ ಸಂಬಂಧಗಳ ಕುಸಿತಕ್ಕೆ ಕಾರಣವಾಗಿದೆ.
ಉಪಸಂಹಾರ :
ಹೀಗಾಗಿ, ನಾವು ಆಧುನಿಕ ತಂತ್ರಜ್ಞಾನಗಳನ್ನು ಸರಿಯಾಗಿ ಬಳಸಿದರೆ ಮಾತ್ರ ಅದು ನಮಗೆ ಉಪಯುಕ್ತವಾಗುತ್ತವೆ.ಜೀವನದಲ್ಲಿ ಮಾನವೀಯ ಸಂಬಂಧಗಳೇ ಇವೆಲ್ಲವುಗಳಿಗಿಂತ ಮುಖ್ಯ ಎಂಬುದನ್ನು ನಾವು ಅರಿತು ನಡೆಯಬೇಕು .ನಾವು ನಮ್ಮಜೀವನದಲ್ಲಿ ಚೆನ್ನಾಗಿರಬೇಕಾದರೆ ತಂದೆ-ತಾಯಿ,ಬಂಧು- ಬಾಂಧವರು , ಸ್ನೇಹಿತರು ಮತ್ತು ಇತರರೊಂದಿಗೆ ಉತ್ತಮ ಸಂಬಂಧವನ್ನು ಉಳಿಸಿಕೊಳ್ಳಲೇಬೇಕು.