ಪೀಠಿಕೆ :
ರತನ್ ನವಲ್ ಟಾಟಾ ಅವರು ಒಬ್ಬ ಹೆಸರಾಂತ ಉದ್ಯಮಿ ಮತ್ತು ಸಮಾಜಮುಖಿ ನಾಯಕರಾಗಿದ್ದರು. ತಂತ್ರಜ್ಞಾನ ,ನಾವೀನ್ಯತೆ , ಮಾನವೀಯತೆ ಹೀಗೆ ಎಲ್ಲದರಲ್ಲೂ ಅವರದು ಎತ್ತಿದ ಕೈಯಾಗಿತ್ತು. ಅವರು ಟಾಟಾ ಸಂಸ್ಥೆಗಳ ಮುಖ್ಯಸ್ಥರಾಗಿ, ಉದ್ಯಮ ಕ್ಷೇತ್ರದಲ್ಲಿ ಅಮೋಘ ಯಶಸ್ಸನ್ನು ಸಾಧಿಸಿದವರು. ಅವರ ಪ್ರತಿಭೆ ಮತ್ತು ಸಾಧನೆ ಕೇವಲ ಹಣಕಾಸು ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರದೇ, ಸಮಾಜ ಸೇವೆಗಾಗಿ ತಮ್ಮ ಇಡೀ ಬದುಕನ್ನು ಮುಡಿಪಾಗಿಟ್ಟರು .
ವಿಷಯ ವಿವರಣೆ :
1937ರಲ್ಲಿ ಮುಂಬೈಯಲ್ಲಿ ಜನಿಸಿದ ರತನ್ ಟಾಟಾ, ಟಾಟಾ ಸಮೂಹದ ಸ್ಥಾಪಕರಾದ ಜಮ್ಷೆಟ್‌ಜಿ ಟಾಟಾ ಅವರ ಕುಟುಂಬದಲ್ಲಿ ಜನಿಸಿದರು. ಅವರು ಅಮೆರಿಕದ ಕಾರ್ಮೆಲ್ ವಿಶ್ವವಿದ್ಯಾನಿಲಯದಿಂದ ಆರ್ಕಿಟೆಕ್ಚರ್ ಪದವಿ ಪಡೆದರು , ನಂತರ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ ಅಡ್ವಾನ್ಸ್ಡ್ ಮ್ಯಾನೇಜ್ಮೆಂಟ್ ಪ್ರೋಗ್ರಾಮ್ ಪೂರೈಸಿದರು. ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ ಐಬಿಎಂ ಸಂಸ್ಥೆ ತಮ್ಮ ಮುಂದಿರಿಸಿದ ದೊಡ್ಡ ಸಂಬಳದ ನೌಕರಿಯನ್ನು ವಿನಯದಿಂದ ತಿರಸ್ಕರಿಸಿ,1961 ರಲ್ಲಿ ಜಮ್ಶೆಡ್ಪುರ್ ಟಾಟಾ ಸ್ಟೀಲಿನ ಮಳಿಗೆಯಲ್ಲಿ ಸಾಮಾನ್ಯ ಕೆಲಸಗಾರನಾಗಿ ಸೇರಿಕೊಂಡು ವ್ಯವಹಾರಗಳನ್ನು ಕಲಿತುಕೊಂಡರು.
ರತನ್ ಟಾಟಾ ಅವರು ಟಾಟಾ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ನಂತರ ಜಾಗ್ವಾರ್ ,ಲ್ಯಾಂಡ್, ರೋವರ್ , ಕೋರಸ್, ಟೆಟ್ಲಿ ಮುಂತಾದ ವಿದೇಶಿ ದಿಗ್ಗಜ ಸಂಸ್ಥೆಗಳ ಸ್ವಾಧೀನದಿಂದಾಗಿ ಟಾಟಾ ಸಮೂಹದ ಕೀರ್ತಿ ಜಾಗತಿಕ ಮಟ್ಟದಲ್ಲಿ ಉತ್ತುಂಗಕ್ಕೇರಿತು. ರತನ್ ಟಾಟಾ ಅವರು ಟಾಟಾ ಸಮೂಹವನ್ನು ಜಾಗತಿಕ ಮಟ್ಟದಲ್ಲಿ ಪ್ರಸಿದ್ಧಗೊಳಿಸಿದರು. ಅವರು ಟಾಟಾ ಸಂಸ್ಥೆಗಳನ್ನು ವಿಶ್ವದ ಶ್ರೇಷ್ಠ ಸಂಸ್ಥೆಗಳಾಗಿ ರೂಪಿಸಿದರು, ಹಾಗೂ ದೇಶವನ್ನು ಆರ್ಥಿಕ ಕ್ಷೇತ್ರದಲ್ಲಿ ಉತ್ತೇಜಿಸಿದರು.
ಮಧ್ಯಮ ವರ್ಗದವರ ಕನಸನ್ನು ನನಸು ಮಾಡಲು ಶ್ರೀಮಂತರಂತೆ ಸಾಮಾನ್ಯ ವರ್ಗದ ಜನರು ಕೂಡ ಕಾರಿನಲ್ಲಿ ಕುಟುಂಬ ಸಹಿತವಾಗಿ ಓಡಾಡಬೇಕು ಎಂಬ ರತನ್ ಟಾಟಾ ರ ಕನಸಿಗೆ ಒತ್ತಾಸೆಯಾಗಿ ನಿಲ್ಲಲೆಂದೇ ಟಾಟಾ ಮೋಟಾರ್ಸ್ 2008ರಲ್ಲಿ ನ್ಯಾನೋ ಕಾರನ್ನು ಪರಿಚಯಿಸಿತು.ಇದು ಜಗತ್ತಿನ ಹಗ್ಗದ ಕಾರು ಎಂಬ ಖ್ಯಾತಿಗೂ ಪಾತ್ರವಾಗಿದೆ . ಶ್ವಾನ ಪ್ರಿಯರಾಗಿದ್ದ ರತನ್ ಟಾಟಾ ಅವರು .2.2 ಎಕರೆ ಭೂಮಿಯಲ್ಲಿ ಪ್ರಾಣಿಗಳಿಗಾಗಿ ಆಸ್ಪತ್ರೆಯೊಂದನ್ನು ನಿರ್ಮಿಸಿದರು.ಮನುಷ್ಯರಿಗೆ ಎಲ್ಲಾ ಸಮಯದಲ್ಲೂ ವೈದ್ಯಕೀಯ ನೆರವು ಸಿಗುವಂತೆಯೇ ಪ್ರಾಣಿಗಳಿಗೂ ಸಿಗಬೇಕು ಎಂಬ ಉದ್ದೇಶದಿಂದ ದಿನದ 24 ಗಂಟೆಯೂ ಈ ಆಸ್ಪತ್ರೆಯು ಸೇವೆಗಳನ್ನು ಒದಗಿಸುತ್ತದೆ.
ರತನ್ ತಾತ ಅವರು ಜನಸಾಮಾನ್ಯರ ಆರೋಗ್ಯದ ಬಗ್ಗೆ ಹೊಂದಿದ್ದ ಕಾಳಜಿಗೆ ಟಾಟಾ ಟ್ರಸ್ಟ್ ಹಾಗೂ ಟಾಟಾ ಮೆಮೋರಿಯಲ್ ಆಸ್ಪತ್ರೆಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಸಿಗಬೇಕು ಎಂದು ಬಯಸಿದ ರತನ್ ಕ್ಯಾನ್ಸರ್ ರೋಗಿಗಳ ನೆರವಿಗಾಗಿ ಟಾಟಾ ಟ್ರಸ್ಟ್ ಮೂಲಕ ಸಾವಿರ ಕೋಟಿ ರೂಪಾಯಿ ನೀಡಿದ್ದರು. ಇನ್ನೊಂದೆಡೆ ಟಾಟಾ ಮೆಮೋರಿಯಲ್ ಆಸ್ಪತ್ರೆಗೆ ಹೋಗುವ ಬಡ ರೋಗಿಗಳಿಗೆ ಬಹುತೇಕ ಉಚಿತ ಇಲ್ಲವೇ ರಿಯಾಯಿತಿ ದರದಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು.
2001 ರ ಗುಜರಾತ್ ಭೂಕಂಪ, 2004ರ ಸುಂಟರಗಾಳಿ ಮತ್ತು ಇತರ ತುರ್ತು ಪರಿಸ್ಥಿತಿಗಳ ಸಂದರ್ಭದಲ್ಲಿ, ರತನ್ ಟಾಟಾ ಅವರು ತಮ್ಮ ಕಂಪನಿಯಿಂದ ತಕ್ಷಣದ ಪರಿಹಾರಗಳನ್ನು ಘೋಷಿಸಿದರು.ಸಮಾಜದ ಪ್ರತೀ ಸಂಕಷ್ಟಕ್ಕೂ ಸ್ಪಂದಿಸಿರುವ ಟಾಟಾ ಅವರು ಆರೋಗ್ಯ ,ಶಿಕ್ಷಣ ,ಪೌಷ್ಟಿಕ ಆಹಾರ ,ಬಡವರ ಜೀವನ ಮಟ್ಟ ಸುಧಾರಣೆ, ನೀರಿನ ಯೋಜನೆ , ಡಿಜಿಟಲೀಕರಣ ಪ್ರಾಕೃತಿಕ ವಿಕೋಪದ ವೇಳೆ ನೆರವಿನ ಹಸ್ತ ಚಾಚಿದ್ದಾರೆ. 2019-20 ರಲ್ಲಿ ದೇಶ ಕರೋನ ಸೋಂಕಿನಿಂದ ಸಂಕಷ್ಟಕ್ಕೆ ಸಿಲುಕಿದಾಗ ಟಾಟಾ ಸಮೂಹ ಸಾವಿರ ಕೋಟಿ ರೂಪಾಯಿ ದೇಣಿಗೆ ನೀಡಿದರೆ ,ರತನ್ ಟಾಟಾ ವೈಯಕ್ತಿಕವಾಗಿ 500 ಕೋಟಿ ನೀಡಿದ್ದು ಅವರ ಉದಾರತನಕ್ಕೆ ಹಾಗೂ ಮಾನವೀಯತೆಗೆ ಸಾಕ್ಷಿಯಾಗಿದೆ.
ಟಾಟಾ ಕಂಪನಿಗಳು ಮಹಿಳೆಯರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶಗಳನ್ನು ನೀಡುತ್ತವೆ.ಮಹಿಳೆಯರಿಗೆ ಸುರಕ್ಷಿತ, ಸಮಾನ ಮತ್ತು ಗೌರವಯುತ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.ಟಾಟಾ ಫೌಂಡೇಶನ್, ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಪ್ರೋತ್ಸಾಹಿಸುವ ಹಲವಾರು ಚಟುವಟಿಕೆಗಳನ್ನು ನಡೆಸಿದೆ.ಸ್ವಾವಲಂಬನೆಗೆ ಉತ್ತೇಜನ ನೀಡಲು ಮತ್ತು ಸಣ್ಣ ಉದ್ಯಮ ಆರಂಭಿಸಲು ಬೇಕಾದ ಸಂಪನ್ಮೂಲ, ತರಬೇತಿ, ಮತ್ತು ಪ್ರೋತ್ಸಾಹವನ್ನು ಮಹಿಳೆಯರಿಗೆ ನೀಡಲಾಗುತ್ತದೆ.
ಸಮಾಜ ಸೇವೆ ,ಕರುಣೆ ಮತ್ತು ಉದಾರತೆ ಇವು ರತನ್ ಟಾಟಾ ಅವರಲ್ಲಿದ್ದ ಮೂರು ಮಹಾನ್ ಆದರ್ಶ ಗುಣಗಳು . ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಎಂದು ತಮ್ಮ ಹೆಸರನ್ನು ದಾಖಲಿಸಬಹುದಿತ್ತು. ಆದರೆ ತಾನೊಬ್ಬ ಅಗರ್ಭ ಶ್ರೀಮಂತನಾಗಿ ಹೊರಹೊಮ್ಮುವುದು ಅವರಿಗೆ ಬೇಕಿರಲಿಲ್ಲ. ಬದಲಿಗೆ ತಮ್ಮ ದುಡಿಮೆಯ ಹೆಚ್ಚಿನ ಪಾಲನ್ನು ಸಮಾಜಕ್ಕಾಗಿ ನೀಡುವುದು ಅವರ ಮನದಾಸೆಯಾಗಿತ್ತು. ಇವರು ಟಾಟಾ ಸಮೂಹ ಸಂಸ್ಥೆಗಳಿಂದ ನಿವೃತ್ತಿಯಾದ ಬಳಿಕ ತಮ್ಮ ದುಡಿಮೆಯ ಶೇಕಡ 60ರಷ್ಟು ಹಣವನ್ನು ಸಮಾಜಕ್ಕಾಗಿ ನೀಡಿದ್ದಾರೆ.ಒಟ್ಟಿನಲ್ಲಿ ದೇಶದ ಪ್ರಗತಿಗೆ ಹಾಗೂ ಏಳಿಗೆಗೆ ಅವರು ತಮ್ಮ ಜೀವನವನ್ನು ಮೀಸಲಿಟ್ಟಿದ್ದರು. ಟಾಟಾ ಸಂಸ್ಥೆಗಳು ಭಾರತದಲ್ಲಿ ಹಲವಾರು ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರ ಮೂಲಕ ದೇಶದ ಆರ್ಥಿಕತೆಗಾಗಿ ಮಹತ್ವಪೂರ್ಣ ಪಾತ್ರ ವಹಿಸಿದ್ದವು.ದೇಶದ ಹೆಮ್ಮೆಯ ಪುತ್ರರಾದ ಇವರು 2024 ರ ಅಕ್ಟೋಬರ್ 9ರಂದು ತಮ್ಮ 86ನೇ ವಯಸ್ಸಿನಲ್ಲಿ ನಿಧನ ಹೊಂದಿದರು.
ಉಪಸಂಹಾರ:
ಪದ್ಮವಿಭೂಷಣ ಪುರಸ್ಕೃತರಾದ ರತನ್ ಟಾಟಾ, ಅವರು ಉದ್ಯಮ ಕ್ಷೇತ್ರದಲ್ಲಿ ಸಾಧನೆಗಾಗಿ ಪ್ರಸಿದ್ಧರಾಗಿದ್ದರೂ, ತಮ್ಮ ಸರಳತೆ ಮತ್ತು ಸಜ್ಜನಿಕತೆಯ ಜೀವನದ ಮೂಲಕ ಅತ್ಯಂತ ಗೌರವಾನ್ವಿತ ವ್ಯಕ್ತಿಯಾಗಿದ್ದಾರೆ.ಅವರಿಂದ ನಾವು ಹಲವು ಮಹತ್ವದ ಪಾಠಗಳನ್ನು ಕಲಿಯಬಹುದು. ಅವರು ತೋರಿಸಿದ ನೈತಿಕತೆ, ಉದ್ಯಮದ ನವೀನ ದೃಷ್ಟಿಕೋನ ಮತ್ತು ಸಮಾಜ ಸೇವೆಯ ಮಹತ್ವವನ್ನು ನಾವು ಎಲ್ಲಾ ಸಮಯದಲ್ಲೂ ಅವಲಂಬಿಸಬಹುದು.ಒಬ್ಬ ವ್ಯಕ್ತಿ ಎಷ್ಟು ಕಾಲ ಬದುಕಿದ್ದ ಎನ್ನುವುದಕ್ಕಿಂತಲೂ ಹೆಚ್ಚಾಗಿ ಆತ ಮಾಡಿದ ಉತ್ತಮ ಕೆಲಸಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳು ಆತನ ಹೆಸರನ್ನು ಅಜರಾಮರವಾಗಿಸುತ್ತವೆ. ಅಂತಹ ಅಜರಾಮರ ವ್ಯಕ್ತಿಯಾಗಿ ರತನ್ ಟಾಟಾ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.