ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ಸಾರವಾಗಿದೆ. ಕನ್ನಡದಲ್ಲಿ ಅನೇಕ ಗಾದೆಗಳಿವೆ .ಅದರಲ್ಲಿ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬುವುದು ಒಂದು ಪ್ರಸಿದ್ಧವಾದ ಗಾದೆ ಮಾತಾಗಿದೆ.
ದೂರದಿಂದ ನೋಡಿದಾಗ ಯಾವುದೇ ವಸ್ತುವಿನ ಅಥವ ವ್ಯಕ್ತಿಯ ಗುಣದೋಷಗಳು ಅರ್ಥವಾಗುವುದಿಲ್ಲ. ದೂರದಿಂದ ನೋಡಿದರೆ ಒಂದು ಬೆಟ್ಟ ನುಣ್ಣಗೆ , ಸಮತಟ್ಟಾಗಿರುವಂತೆ ಕಾಣುತ್ತದೆ. ದೂರದಿಂದ ಅದನ್ನು ಹತ್ತುವುದು ಕೂಡ ಬಹಳ ಸುಲಭ ಎನ್ನುವ ಭಾವನೆಯನ್ನು ನೀಡುತ್ತದೆ. ನಿಜದ ಅರಿವು ಆಗಬೇಕೆಂದರೆ ಅದರ ಹತ್ತಿರ ಹೋಗಬೇಕು. ಹತ್ತಿರ ಹೋಗಿ ನೋಡಿದಾಗಲೆ ಅದರಲ್ಲಿರುವ ಗುಡ್ಡಗಳು, ಮರಗಿಡಗಳು, ಮುಳ್ಳುಗಳು ಎಲ್ಲ ಕಣ್ಣಿಗೆ ಕಾಣುವುದು ಕಲ್ಲುಮುಳ್ಳುಗಳಿಂದ ಕೂಡಿದ ದುರ್ಗಮ ರಸ್ತೆ ಕಾಣಸಿಗುತ್ತದೆ. ದೂರದಿಂದ ಅಂದುಕೊಂಡಷ್ಟು ಸುಲಭವಾಗಿ ಅದನ್ನ ಹತ್ತಲು ಸಾಧ್ಯವಿಲ್ಲ ಎನ್ನುವ ಅರಿವಾಗುತ್ತದೆ. ಅಂದರೆ ದೂರದಿಂದ ಬಹಳ ಸುಂದರವಾಗಿ ಮತ್ತು ಸುಲಭವಾಗಿ ಕಂಡ ಬೆಟ್ಟವನ್ನು ಹತ್ತುವುದು ಕಂಡಷ್ಟು ಸುಲಭವಲ್ಲ ಎನ್ನುವುದು ಹತ್ತಿರ ಹೋಗಿ ನೋಡಿದ ಗೊತ್ತಾಗುತ್ತದೆ .
ವಿದೇಶಗಳು ಬಹಳ ಸುಂದರ, ಆಕರ್ಷಕ ಎಂದುಕೊಳ್ಳುವವರೂ ಇದ್ದಾರೆ.ಅದೇ ರೀತಿ ಹಳ್ಳಿಯಲ್ಲಿ ಇರುವವರು ಪಟ್ಟಣವನ್ನು, ಪಟ್ಟಣದಲ್ಲಿ ನೆಲೆಸಿರುವವರು ಹಳ್ಳಿಯನ್ನುಇಷ್ಟಪಡುತ್ತಾರೆ.ವಿದ್ಯಾರ್ಥಿಗಳು ವಿದ್ಯಾರ್ಜನೆಗಾಗಿ ಒಳ್ಳೆಯ ಕಾಲೇಜುಗಳನ್ನು ಅರಸುತ್ತ ದೂರದ ಊರುಗಳಿಗೆ ಹೋಗುತ್ತಾರೆ .ಆದರೆ ಅಲ್ಲಿ ಬಂದು ನೆಲೆಸಿ ಬದುಕಿದಾಗಲಷ್ಟೇ ಸ್ಥಳೀಯ ಸವಾಲುಗಳ ಅರಿವಾಗುತ್ತದೆ.
ದೂರದಿಂದ ನೋಡಿದಾಗ ಎಲ್ಲಾ ಸಂಬಂಧಗಳು ,ವಸ್ತುಗಳು , ಸೇವಾ ಸಂಸ್ಥೆಗಳು ,ನಗರ -ಪಟ್ಟಣ ಇತ್ಯಾದಿಗಳು ಸುಂದರವಾಗಿಯೇ ಕಾಣಿಸುತ್ತದೆ.ಆದರೆ ಹತ್ತಿರ ಹೋಗಿ ನೋಡಿದಾಗ ನಿಜವಾದ ತಿಳಿವಳಿಕೆ ಬಂದಾಗ ಮಾತ್ರ, ಎಲ್ಲವೂ ಕಾಣುವ ಹಾಗೆ ಇರುವುದಿಲ್ಲ ಎಂಬ ಸತ್ಯ ಅರಿವಾಗುತ್ತದೆ ಎಂಬುದು ಈ ಗಾದೆ ಮಾತಿನ ಸಾರಾಂಶವಾಗಿದೆ.
.